ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋವಿಡ್ -19 | ಉತ್ತರ ಪ್ರದೇಶಕ್ಕೆ ಮರಳಿದ 414 ವಲಸೆ ಕಾರ್ಮಿಕರಲ್ಲಿ ಸೋಂಕಿನ ಲಕ್ಷಣ

Last Updated 18 ಮೇ 2020, 8:52 IST
ಅಕ್ಷರ ಗಾತ್ರ

ಲಖನೌ: ಕೊರೊನಾವೈರಸ್‌ ಸೋಂಕು ಭೀತಿಯಿಂದಾಗಿ ದೇಶದಾದ್ಯಂತ ಲಾಕ್‌ಡೌನ್‌ ಜಾರಿಯಲ್ಲಿರುವುದರಿಂದ, ಉತ್ತರ ಪ್ರದೇಶದಿಂದ ವಿವಿಧ ರಾಜ್ಯಗಳಿಗೆ ವಲಸೆ ಹೋಗಿದ್ದ ಕಾರ್ಮಿಕರು ವಾಪಸ್‌ ಆಗಿದ್ದಾರೆ. ಆದರೆ, ಮರಳಿ ಬಂದಿರುವ ಒಟ್ಟು 414 ಜನರಲ್ಲಿ ಕೋವಿಡ್‌–19 ಸೋಂಕಿನ ಲಕ್ಷಣಗಳು ಕಾಣಿಸಿಕೊಂಡಿರುವುದಾಗಿ ಮಾಧ್ಯಮಗಳಲ್ಲಿ ವರದಿಯಾಗಿದೆ.

ಈ ಬಗ್ಗೆ ಪ್ರತಿಕ್ರಿಯಿಸಿರುವ ಉತ್ತರ ಪ್ರದೇಶ ಆರೋಗ್ಯ ಇಲಾಖೆ, ಎಲ್ಲ ವಲಸೆ ಕಾರ್ಮಿಕರನ್ನೂ ಪರೀಕ್ಷಿಸಲಾಗುತ್ತಿದೆ. ಆಶಾ ಕಾರ್ಯಕರ್ತರ ನೆರವಿನೊಂದಿಗೆ ರಾಜ್ಯದಲ್ಲಿ ಈವರೆಗೆ 3.5 ಲಕ್ಷ ಕಾರ್ಮಿಕರನ್ನು ಪರೀಕ್ಷಿಸಲಾಗಿದೆ ಎಂದು ತಿಳಿಸಿದೆ.

ಸೋಂಕಿನ ಲಕ್ಷಣಗಳು ಕಾಣಿಸಿಕೊಂಡಿರುವ ಎಲ್ಲರನ್ನೂ ಥರ್ಮಲ್‌ ಸ್ಕ್ರೀನಿಂಗ್‌ಗೆ ಒಳಪಡಿಸುವ ಸಲುವಾಗಿ ಆಶ್ರಯ ಶಿಬಿರಗಳಿಗೆ ಕರೆದೊಯ್ಯಲಾಗುವುದು. ಬಳಿಕ ಎಲ್ಲರ ರ‍್ಯಾಪಿಡ್ ಟೆಸ್ಟಿಂಗ್‌ನಡೆಸಲಾಗುವುದು. ಒಂದೇಒಂದು ಪ್ರಕರಣ ದೃಢಪಟ್ಟರೂ ಎಲ್ಲರನ್ನು ಪ್ರತ್ಯೇಕವಾಗಿರಿಸಿ ಪರೀಕ್ಷೆಗೆ ಒಳಪಡಿಸಲಾಗುವುದು ಎಂದು ಉತ್ತರ ಪ್ರದೇಶ ಆರೋಗ್ಯ ಕಾರ್ಯದರ್ಶಿ ಅಮಿತ್‌ ಮೋಹನ್‌ ಪ್ರಸಾದ್‌ ಹೇಳಿದ್ದಾರೆ.

ಸೋಂಕಿನ ಗುಣಲಕ್ಷಣಗಳು ಕಾಣಿಸಿಕೊಳ್ಳದವರಿಗೆ 21 ದಿನಗಳ ಕಾಲ ಪ್ರತ್ಯೇಕವಾಸದಲ್ಲಿರುವಂತೆ ಸೂಚಿಸಲಾಗುವುದು. ಗ್ರಾಮ ಮತ್ತು ಮೊಹಲ್ಲಾ ಸಮಿತಿಯು ಪ್ರತ್ಯೇಕವಾಸದಲ್ಲಿರುವವರ ಮೇಲ್ವಿಚಾರಣೆ ನಡೆಸಲಿದೆ.

ಏತನ್ಮಧ್ಯೆ, ಉತ್ತರಪ್ರದೇಶದಲ್ಲಿ ಭಾನುವಾರ 206 ಹೊಸ ಪ್ರಕರಣಗಳು ವರದಿಯಾಗಿವೆ. ರಾಜ್ಯದಲ್ಲಿ ಇದುವರೆಗೆ ಒಟ್ಟು 4,464 ಜನರಲ್ಲಿ ಸೋಂಕು ದೃಢಪಟ್ಟಿವೆ ಎಂದು ರಾಜ್ಯದಲ್ಲಿ ಸಮಗ್ರ ರೋಗ ಕಣ್ಗಾವಲು ಕಾರ್ಯಕ್ರಮದ ಜಂಟಿ ನಿರ್ದೇಶಕ ಡಾ.ವಿಕಾಸೇಂದು ಅಗರವಾಲ್‌ ಮಾಹಿತಿ ನಿಡಿದ್ದಾರೆ. ಇದು (206) ರಾಜ್ಯದಲ್ಲಿ ಒಂದೇದಿನ ದಾಖಲಾದ ಅತಿಹೆಚ್ಚು ಪ್ರಕರಣಗಳಾಗಿವೆ. ಮಾತ್ರವಲ್ಲದೆ ಭಾನುವಾರ 8 ಸೋಂಕಿತರು ಮೃತಪಟ್ಟಿದ್ದಾರೆ. ಇದರೊಂದಿಗೆ ಉತ್ರರ ಪ್ರದೇಶದಲ್ಲಿ ಮೃತಪಟ್ಟವರ ಸಂಖ್ಯೆ 112ಕ್ಕೆ ಏರಿದೆ.

ಆಗ್ರಾ (27), ಮೀರತ್‌ (19), ಮೊರಾದಾಬಾದ್‌ (11), ಕಾನ್ಪುರ (8), ಅಲಿಗಢ (8), ಝಾನ್ಸಿ (4), ಮಥುರಾ (4), ಫಿರೋಜಾಬಾದ್‌ನಲ್ಲಿ (4) ಹೆಚ್ಚು ಸಾವು ಸಂಭವಿಸಿವೆ.ರಾಜ್ಯದಲ್ಲಿ ಒಟ್ಟು 2,636 ಸೋಂಕಿತರು ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಇನ್ನು 1716 ಪ್ರಕರಣಗಳು ಸಕ್ರಿಯವಾಗಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT