ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಟ್ವಿಟರ್‌ನಲ್ಲಿ ಟ್ರೋಲ್‌ ಆದ ಬಿಜೆಪಿ ಅಧ್ಯಕ್ಷ ನಡ್ಡಾ: ‘43,000 ಕಿ.ಮೀ’ ಟ್ರೆಂಡ್‌

ಅಕ್ಷರ ಗಾತ್ರ

ಬೆಂಗಳೂರು: ಮಾಜಿ ಪ್ರಧಾನ ಮಂತ್ರಿ ಮನಮೋಹನಸಿಂಗ್‌ ಅವರ ಕುರಿತು ಬಿಜೆಪಿ ರಾಷ್ಟ್ರ ಘಟಕದ ಅಧ್ಯಕ್ಷ ಜೆ,ಪಿ ನಡ್ಡಾ ಮಾಡಿರುವ ಟ್ವೀಟ್‌ ಟ್ವಿಟರ್‌ನಲ್ಲಿ ಭಾರಿ ಚರ್ಚೆಗೆ ಕಾರಣವಾಗಿದೆ. ಈ ಟ್ವೀಟ್‌ನ ಕಾರಣಕ್ಕೇ ‘43,000 ಕಿ.ಮೀ’ ಎಂಬುದು ಟ್ವಿಟರ್‌ನಲ್ಲಿ ಟ್ರೆಂಡ್‌ ಆಗಿದೆ. ಅಲ್ಲದೆ, ನಡ್ಡಾ ಅವರು ಟ್ರೋಲ್‌ ಆಗಿ ವ್ಯಂಗ್ಯಕ್ಕೆ ಗುರಿಯಾಗಿದ್ದಾರೆ.

ನಡ್ಡಾ ಏನೆಂದು ಟ್ವೀಟ್‌ ಮಾಡಿದ್ದರು?

‘ಡಾ. ಮನಮೋಹನ್ ಸಿಂಗ್ ಅದೇ ಪಕ್ಷಕ್ಕೆ ಸೇರಿದವರು. ಭಾರತದ 43,000 ಕಿ.ಮೀ.ಗಿಂತಲೂ ಹೆಚ್ಚು ಭೂ ಪ್ರದೇಶವನ್ನು ಅಸಹಾಯಕವಾಗಿ ಚೀನಿಯರಿಗೆ ಒಪ್ಪಿಸಿದವರು. ಯುಪಿಎ ಅವಧಿಯಲ್ಲಿ ದುರ್ಬಲ ಕಾರ್ಯತಂತ್ರದ ಮೂಲಕ, ಯಾವುದೇ ಪ್ರತಿರೋಧವಿಲ್ಲದೇ ಭೂ ಭಾಗವನ್ನು ಒಪ್ಪಿಸಲಾಗಿದೆ. ಸಮಯ ಮತ್ತೆ ನಮ್ಮ ಪಡೆಗಳನ್ನು ಕುಗ್ಗಿಸುತ್ತಿದೆ,’ ಎಂದು ಟ್ವೀಟ್‌ ಮಾಡಿದ್ದರು.

ನಡ್ಡಾ ಅವರು ಮಾಡಿದ ಈ ಟ್ವೀಟ್‌ ಕಾರಣಕ್ಕೆ 43,000 ಕಿ.ಮೀ ಎಂಬುದು ಟ್ವಿಟರ್‌ನಲ್ಲಿ ಟ್ರೆಂಡ್‌ ಆಗಿದೆ.

‘ಭೂ ಮಂಡಲದ ಇಡೀ ಸುತ್ತಳತೆಯೇ 40,075 ಕಿ.ಮೀ ಆಗಿರುವಾಗ 43,000 ಕಿ.ಮೀ ಭೂ ಭಾಗವನ್ನು ಚೀನಾಕ್ಕೆ ಒಪ್ಪಿಸಲು ಹೇಗೆ ಸಾಧ್ಯ? ಭಾರತವು ಭೂ ಮಂಡಲಕ್ಕಿಂತಲೂ ದೊಡ್ಡದಾಗಿದೆಯೇ?’ ಎಂದು ಬಹುತೇಕರು ಟ್ವಿಟರ್‌ನಲ್ಲಿ ಪ್ರಶ್ನೆ ಮಾಡಿದ್ದಾರೆ.

‘ನಡ್ಡಾ ಅವರಿಗೆ ಯಾರಾದರೂ ಭೂಗೋಳ ಶಾಸ್ತ್ರವನ್ನು ಹೇಳಿಕೊಡಬೇಕಾದ ಅಗತ್ಯವಿದೆ.’ ಎಂದು ಹಲವರು ವ್ಯಂಗ್ಯವಾಡಿದ್ದಾರೆ.

‘ಚೀನಾಕ್ಕೆ ಒಪ್ಪಿಸಲು ನಡ್ಡಾ ಅವರು ಹೊಸ ಭೂಮಿಯನ್ನೇ ಅನ್ವೇಷಿಸಿರುವಂತಿದೆ,’ ಎಂದು ಕೆಲವರು ಕುಹಕವಾಡಿದ್ದಾರೆ.

ಇನ್ನೂ ಕೆಲವರು, ಗೂಗಲ್‌ ಮ್ಯಾಪ್‌ನಲ್ಲಿ ಭಾರತದಿಂದ ಚೀನಾಕ್ಕೆ ಇರಬಹುದಾದ ದೂರವನ್ನು ಲೆಕ್ಕಾ ಹಾಕಿ, ಅದರ ಸ್ಕ್ರೀನ್‌ ಶಾಟ್‌ ಅನ್ನು ಹಂಚಿಕೊಳ್ಳುವ ಮೂಲಕವೂ ವ್ಯಂಗ್ಯವಾಡಿದ್ದಾರೆ.

ನಡ್ಡಾ ಟ್ವೀಟ್‌ಗೆ ಸಮರ್ಥನೆ

ನಡ್ಡಾ ಅವರ ಈ ಟ್ವೀಟ್‌ಗೆ ಬರೀ ವ್ಯಂಗ್ಯವಷ್ಟೇ ವ್ಯಕ್ತವಾಗಿಲ್ಲ. ಸಮರ್ಥನೆಗಳೂ ಬಂದಿವೆ. ಟ್ರೋಲ್‌ ಮಾಡುತ್ತಿರುವವರು ಭೂಗೋಳ ಶಾಸ್ತ್ರವನ್ನು ಸರಿಯಾಗಿ ತಿಳಿದುಕೊಳ್ಳಬೇಕು. ನಡ್ಡಾ ಅವರು ಮಾಡಿರುವ ಟ್ವೀಟ್‌ನಲ್ಲಿ ತಪ್ಪಿಲ್ಲ. ಕಾಂಗ್ರೆಸ್‌ ಅವಧಿಯಲ್ಲಿ ಭಾರತದ ‘43,000 ಚದರ ಕಿ.ಮೀ’ ಭೂ ಭಾಗವನ್ನು ಚೀನಾಕ್ಕೆ ಒಪ್ಪಿಸಲಾಗಿದೆ ಎಂದು ಹಲವರು ನಡ್ಡಾ ಅವರ ಬೆಂಬಲಕ್ಕೆ ಬಂದಿದ್ದಾರೆ.

ನಡ್ಡಾ ಅವರ ಸಣ್ಣ ತಪ್ಪನ್ನು ಕಮ್ಯುನಿಸ್ಟ್‌ ಮನಸ್ಥಿತಿಯ ನೆಟ್ಟಿಗರು ಟ್ರೋಲ್‌ ಮಾಡಿದ್ದಾರೆ ಎಂಬ ಅಸಮಾಧಾನವನ್ನೂ ನಡ್ಡಾ ಬೆಂಬಲಿಗರು ಹೊರ ಹಾಕಿದ್ದಾರೆ.

ನಡ್ಡಾ ಟ್ವೀಟ್‌ನಲ್ಲಿ ತಪ್ಪಿದೆಯೇ?

ನಡ್ಡಾ ಟ್ವೀಟ್‌ ಮಾಡುವ ವೇಳೆ ನೇರವಾಗಿ ‘43,000 ಕಿ.ಮೀ’ ಭೂ ಭಾಗ ಎಂದು ಉಲ್ಲೇಖಿಸಿದ್ದಾರೆ. ಆದರೆ, ಅದು ಚದರ ಕಿ.ಮೀ ಆಗಬೇಕಾಗಿತ್ತು. ಅಲ್ಲದೆ, ಸದ್ಯ ಚೀನಾ ವಶದಲ್ಲಿರುವ ಭಾರತದ ಅಕ್ಸಾಯಿ ಚಿನ್‌ಭೂ ಭಾಗದ ಒಟ್ಟಾರೆ ವಿಸ್ತೀರ್ಣವು ಅಂದಾಜು 38,000 ಚದರ ಕಿ.ಮೀಗಳು ಎನ್ನಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT