ಬುಧವಾರ, ನವೆಂಬರ್ 20, 2019
21 °C

50 ಅಡಿ ಆಳದ ಕೊಳವೆಬಾವಿಗೆ ಬಿದ್ದ 5 ವರ್ಷದ ಬಾಲಕಿ: ಉಳಿಸಲು ಸರ್ವ ಪ್ರಯತ್ನ

Published:
Updated:

ಚಂಡಿಗಡ: ಹರಿಯಾಣದ ಕರ್ನಾಲ್ ಜಿಲ್ಲೆಯಲ್ಲಿ 50 ಅಡಿ ಆಳದ ಕೊಳವೆಬಾವಿಗೆ ಬಿದ್ದ 5 ವರ್ಷದ ಬಾಲಕಿಯನ್ನು ಜೀವಂತ ಮೇಲೆತ್ತಲು ಸರ್ವಪ್ರಯತ್ನ ನಡೆಸಲಾಗುತ್ತಿದೆ.

‘ಸಮೀಪದ ಹರಿಸಿಂಗ್‌ಪುರ ಹಳ್ಳಿಯಲ್ಲಿ ತಮ್ಮದೇ ಹೊಲದಲ್ಲಿ ಆಡುತ್ತಿದ್ದ ಮಗು ಕೊಳವೆಬಾವಿಗೆ ಬಿತ್ತು’ ಎಂದು ಪೊಲೀಸರು ಹೇಳಿದ್ದಾರೆ.

ಇದನ್ನೂ ಓದಿ: ಮೃತ್ಯುಕೂಪಗಳಾದ ಕೊಳವೆಬಾವಿಗಳು: ಯಾರು ಹೊಣೆ?

ಮಗು ನಾಪತ್ತೆಯಾಗಿರುವುದು ಅರಿವಾದ ನಂತರ ಪೋಷಕರು ಹುಡುಕಾಟ ಆರಂಭಿಸಿದರು. ಅನಂತರವಷ್ಟೇ ಅವರಿಗೆ ಮಗು ಕೊಳವೆಬಾವಿಗೆ ಬಿದ್ದಿರುವುದು ಗೊತ್ತಾಯಿತು. ಸ್ಥಳಕ್ಕೆ ಧಾವಿಸಿದ ಪೊಲೀಸರು ಜಿಲ್ಲಾಡಳಿತ ಮತ್ತು ಎನ್‌ಡಿಆರ್‌ಎಫ್‌ಗೆ ಮಾಹಿತಿ ನೀಡಿದರು.

ಕೊಳವೆಬಾವಿಯೊಳಗೆ ಆಮ್ಲಜನಕ ಪೂರೈಸಲಾಗುತ್ತಿದೆ. ಮಗುವಿನ ಪರಿಸ್ಥಿತಿ ತಿಳಿಯಲು ಕ್ಯಾಮೆರಾ ಕಳಿಸಲಾಗಿತ್ತು. ಅದರಲ್ಲಿ ಮಗುವಿನ ಕಾಲು ಮಾತ್ರ ಕಾಣಿಸಿತು. ಪೋಷಕರು ಮಾತನಾಡಿರುವ ಆಡಿಯೊ ರೆಕಾರ್ಡಿಂಗ್‌ ಕ್ಲಿಪ್‌ ಕೇಳಿಸುವ ಮೂಲಕ ಮಗುವಿಗೆ ಧೈರ್ಯ ತುಂಬಲು ಯತ್ನಿಸಲಾಗುತ್ತಿದೆ ಎಂದು ಪೊಲೀಸರು ಹೇಳಿದ್ದಾರೆ.

ಇದನ್ನೂ ಓದಿ: ಕ್ಷಮಿಸು ತಾಯಿ, ನಿನ್ನ ಮಗನ ಸಾವಿನಿಂದಲೂ ಪಾಠ ಕಲಿಯುವ ಪುರುಸೊತ್ತು ಇವರಿಗಿಲ್ಲ

ಕಳೆದ ಜುಲೈನಲ್ಲಿ ಪಂಜಾಬ್‌ನ ಸಂಗ್ರೂರ್ ಜಿಲ್ಲೆಯಲ್ಲಿ 150 ಅಡಿ ಆಳದ ಕೊಳವೆಬಾವಿಗೆ ಬಿದ್ದಿದ್ದ ಎರಡು ವರ್ಷದ ಫತೆವೀರ್‌ ಸಿಂಗ್‌ನನ್ನು ಜೀವಂತ ಹೊರತೆಗೆಯಲು ನಾಲ್ಕು ದಿನಗಳ ಕಾಲ ನಡೆಸಿದ ಕಾರ್ಯಾಚರಣೆ ವಿಫಲವಾಗಿತ್ತು.

ಹರಿಯಾಣದ ಹಿಸಾರ್ ಜಿಲ್ಲೆಯಲ್ಲಿ ಕಳೆದ ಮಾರ್ಚ್‌ನಲ್ಲಿ 18 ತಿಂಗಳ ಬಾಲಕನನ್ನು ಕೊಳವೆಬಾವಿಗೆ ಬಿದ್ದ ಎರಡು ದಿನಗಳ ನಂತರ ಹೊರತೆಗೆಯಲಾಯಿತು.

2006ರಲ್ಲಿ ಕುರುಕ್ಷೇತ್ರ ಗ್ರಾಮದಲ್ಲಿ ಐದು ವರ್ಷದ ಪ್ರಿನ್ಸ್‌ನನ್ನು ಕಾಪಾಡಲು ದೊಡ್ಡಮಟ್ಟ ಕಾರ್ಯಾಚರಣೆ ನಡೆಸಲಾಯಿತು. ಸತತ 48 ಗಂಟೆಗಳ ಪರಿಶ್ರಮದ ನಂತರ ಅವನನ್ನು ಸುರಕ್ಷಿತವಾಗಿ ಹೊರತರಲಾಯಿತು.

ಇದನ್ನೂ ಓದಿ: ವ್ಯರ್ಥವಾದ 109 ಗಂಟೆಗಳ ಕಾರ್ಯಾಚರಣೆ: ಕೊಳವೆ ಬಾವಿಗೆ ಬಿದ್ದಿದ್ದ ಬಾಲಕ ಸಾವು

ಪ್ರತಿಕ್ರಿಯಿಸಿ (+)