ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಐವತ್ತು ವರ್ಷದೊಳಗಿನ 51 ಮಹಿಳೆಯರಿಂದ ಶಬರಿಮಲೆ ದೇವಸ್ಥಾನ ಪ್ರವೇಶ

Last Updated 18 ಜನವರಿ 2019, 11:21 IST
ಅಕ್ಷರ ಗಾತ್ರ

ನವದೆಹಲಿ:ಶಬರಿಮಲೆ ದೇಗುಲಕ್ಕೆ ಎಲ್ಲ ವಯೋಮಾನದ ಮಹಿಳೆಯರಿಗೆ ಪ್ರವೇಶ ಅವಕಾಶ ಕೊಡಬೇಕು ಎಂದು ಸುಪ್ರೀಂ ಕೋರ್ಟ್‌ನ ಸಂವಿಧಾನ ಪೀಠದ ತೀರ್ಪಿನ ಬಳಿಕ 10–50ರ ವಯಸ್ಸಿನ 51 ಮಹಿಳೆಯರಿಗೆ ದೇಗುಲ ಪ್ರವೇಶಿಸಿದ್ದಾರೆ ಎಂದು ಕೇರಳ ಸರ್ಕಾರಸುಪ್ರೀಂ ಕೋರ್ಟ್‌ಗೆ ಹೇಳಿಕೆ ನೀಡಿದೆ.

‘ತಮಗೆ ಸಾಕಷ್ಟು ಬೆದರಿಕೆ ಕರೆಗಳು ಬರುತ್ತಿದ್ದು, ದಿನದ 24 ತಾಸೂ ಭದ್ರತೆ ಕೊಡಬೇಕು’ ಎಂದುಕೋರಿ ಕನಕದುರ್ಗಾ ಮತ್ತು ಬಿಂದು ಸುಪ್ರೀಂಕೋರ್ಟ್‌ ಮೆಟ್ಟಿಲೇರಿದ್ದರು. ಈ ಅರ್ಜಿಯ ವಿಚಾರಣೆ ವೇಳೆ ಸರ್ಕಾರ ಈ ಹೇಳಿಕೆ ನೀಡಿದೆ. ಆದರೆ, ಸರ್ಕಾರದ ಈ ಹೇಳಿಕೆ ಈಗ ವಿವಾದಕ್ಕೆ ಕಾರಣವಾಗಿದೆ.

ಕೇರಳ ಸರ್ಕಾರವು ನ್ಯಾಯಾಲಯವನ್ನು ತಪ್ಪುದಾರಿಗೆಳೆಯಲು ಯತ್ನಿಸುತ್ತಿದೆ ಎಂದು ಋತುಸ್ರಾವ ವಯಸ್ಸಿನ ಮಹಿಳೆಯರು ಅಯ್ಯಪ್ಪ ದೇವಾಲಯ ಪ್ರವೇಶಿಸುವುದನ್ನು ವಿರೋಧಿಸುತ್ತಿರುವ ಅಯ್ಯಪ್ಪ ಧರ್ಮ ಸೇನಾ ಆರೋಪಿಸಿದೆ. ಸರ್ಕಾರವು ನೀಡಿದ ಪಟ್ಟಿಯಲ್ಲಿರುವ 51 ಮಹಿಳೆಯರಲ್ಲಿ ಹೆಚ್ಚಿನವರು 50 ವರ್ಷ ದಾಟಿದವರು ಎಂದು ಸಮಿತಿ ಸೇನಾ ಹೇಳಿದೆ.

ಪಟ್ಟಿಯಲ್ಲಿರುವ ಐವರು ಮಹಿಳೆಯರನ್ನು ಅಯ್ಯಪ್ಪ ಧರ್ಮ ಸೇನಾ ಸಂಪರ್ಕಿಸಿದೆ. ಅವರೆಲ್ಲರೂ 50 ವರ್ಷ ದಾಟಿದವರು. ಗುರುತು ಚೀಟಿಗಳಲ್ಲಿ ಈ ಮಹಿಳೆಯರ ವಯಸ್ಸನ್ನು ತಪ್ಪಾಗಿ ನಮೂದಿಸಲಾಗಿದೆ. ಸುಪ್ರೀಂ ಕೋರ್ಟ್‌ನಲ್ಲಿ ಇಂತಹ ನಿರ್ಣಾಯಕ ಹೇಳಿಕೆ ನೀಡುವಾಗ ಸರ್ಕಾರವು ವಾಸ್ತವಾಂಶಗಳನ್ನು ಪ‍ರಿಶೀಲಿಸಬೇಕಿತ್ತು ಎಂದು ಧರ್ಮ ಸೇನಾ ನಾಯಕ ರಾಹುಲ್ ಈಶ್ವರ್‌ ಹೇಳಿದ್ದಾರೆ.

ವಾಸ್ತವ ಏನು ಎಂಬುದನ್ನು ಸುಪ್ರೀಂ ಕೋರ್ಟ್‌ಗೆ ತಿಳಿಸಲಾಗುವುದು ಎಂದೂ ಅವರು ಹೇಳಿದ್ದಾರೆ.

ಪಂದಳಂ ಅರಮನೆಯ ಪ್ರತಿನಿಧಿಗಳು ಕೂಡ ಸರ್ಕಾರ ನೀಡಿರುವ ಹೇಳಿಕೆ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದಾರೆ. ‘10–50 ಒಳಗಿನ ವಯೋಮಾನದ 51 ಮಹಿಳೆಯರು ದೇಗುಲ ಪ್ರವೇಶಿಸಿದ್ದಾರೆ ಎಂಬುದನ್ನು ನಂಬುವುದು ಕಷ್ಟ. ಪ್ರಕರಣದ ದಾರಿ ತಪ್ಪಿಸುವ ಉದ್ದೇಶದಿಂದಲೇ ಈ ಹೇಳಿಕೆ ನೀಡಲಾಗಿದೆ ಎಂಬ ಅನುಮಾನ ಮೂಡಿದೆ’ ಎಂದು ಅರಮನೆ ಕಾರ್ಯದರ್ಶಿ ನಾರಾಯಣ ವರ್ಮಾ ಹೇಳಿದ್ದಾರೆ.

ಈ ತೀರ್ಥಯಾತ್ರೆ ಋತುವಿನಲ್ಲಿ ಅಯ್ಯಪ್ಪ ದರ್ಶನಕ್ಕಾಗಿ 10–50ರ ವಯಸ್ಸಿನ 7,564 ಮಹಿಳೆಯರು ಕೇರಳ ಪೊಲೀಸರಲ್ಲಿ ನೋಂದಣಿ ಮಾಡಿಸಿಕೊಂಡಿದ್ದರು. ಇವರಲ್ಲಿ 51 ಮಹಿಳೆಯರು ದರ್ಶನ ಪಡೆದಿರುವುದಾಗಿ ದಾಖಲೆಗಳಲ್ಲಿ ಇದೆ. ಉಳಿದವರು ದರ್ಶನ ಪಡೆದಿರಬಹುದು ಅಥವಾ ಈ ಬಾರಿ ಶಬರಿಮಲೆಯಲ್ಲಿ ಸೃಷ್ಟಿಯಾಗಿರುವ ಸಂಘರ್ಷಾತ್ಮಕ ಸ್ಥಿತಿಯ ಕಾರಣಕ್ಕೆ ತಮ್ಮ ಯೋಜನೆ ಕೈಬಿಟ್ಟಿರಬಹುದು ಎಂದು ಕೇರಳದ ಮುಜರಾಯಿ ಸಚಿವ ಕಡಕಂಪಳ್ಳಿ ಸುರೇಂದ್ರನ್‌ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT