ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೂವರ ಹಿಡಿತದಲ್ಲಿ ದೇಶ: ರಾಹುಲ್‌ ವಾಗ್ದಾಳಿ

ಕಾಂಗ್ರೆಸ್‌ನ ಮೊದಲ ಒಬಿಸಿ ಸಮಾವೇಶ: ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶ
Last Updated 11 ಜೂನ್ 2018, 19:43 IST
ಅಕ್ಷರ ಗಾತ್ರ

ನವದೆಹಲಿ: ದೇಶವು ಆರ್‌ಎಸ್‌ಎಸ್‌–ಬಿಜೆಪಿಯ ಮೂವರು ನಾಯಕರ ಹಿಡಿತದಲ್ಲಿದೆ. ಮುಂದಿನ ಆರು ತಿಂಗಳಿನಿಂದ ಒಂದು ವರ್ಷದಲ್ಲಿ ವಿರೋಧ ಪಕ್ಷಗಳು ಒಟ್ಟಾಗಲಿವೆ. ಭಾರತದ ಜನರೇ ದೇಶವನ್ನು ಮುನ್ನಡೆಸಲಿದ್ದಾರೆ ಎಂಬುದನ್ನು ಈ ಒಗ್ಗಟ್ಟು ಮೂವರು ನಾಯಕರಿಗೆ ಮನವರಿಕೆ ಮಾಡಿಕೊಡಲಿದೆ ಎಂದು ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ಹೇಳಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ, ಬಿಜೆಪಿ ಅಧ್ಯಕ್ಷ ಅಮಿತ್‌ ಶಾ ಮತ್ತು ಆರ್‌ಎಸ್‌ಎಸ್‌ ಮುಖ್ಯಸ್ಥ ಮೋಹನ ಭಾಗವತ್‌ ಅವರು ಶೀಘ್ರದಲ್ಲಿಯೇ ಜನರ ಶಕ್ತಿಯನ್ನು ನೋಡಲಿದ್ದಾರೆ ಎಂದರು.

ಪಕ್ಷದ ಮೊದಲ ಇತರ ಹಿಂದುಳಿದ ವರ್ಗಗಳ (ಒಬಿಸಿ) ಸಮಾವೇಶದಲ್ಲಿ ಮಾತನಾಡಿದ ಅವರು, ರಾಜಕಾರಣದಲ್ಲಿ ಒಬಿಸಿಗೆ ಸಲ್ಲಬೇಕಾದ ಸ್ಥಾನವನ್ನು ನೀಡಲಾಗುವುದು ಎಂದು ಹೇಳುವ ಮೂಲಕ ಈ ವರ್ಗಗಳ ಮನಗೆಲ್ಲುವ ಪ್ರಯತ್ನವನ್ನು ಮಾಡಿದ್ದಾರೆ.

ಆರ್‌ಎಸ್‌ಎಸ್‌– ಬಿಜೆಪಿಯ ವಿಭಜನಕಾರಿ ನೀತಿಯ ಬಗ್ಗೆ ಎಚ್ಚರಿಕೆಯಿಂದ ಇರಬೇಕು ಎಂದು ಹೇಳಿದರು.

ಇತರ ಹಿಂದುಳಿದ ವರ್ಗಗಳ ಜನರು ತಮ್ಮ ನ್ಯಾಯಯುತ ಬೇಡಿಕೆಗಳನ್ನು ಮುಂದಿಡುವುದನ್ನು ಆರ್‌ಎಸ್‌ಎಸ್‌–ಬಿಜೆಪಿ ಸಹಿಸುವುದಿಲ್ಲ. ಹಾಗಾಗಿ ಈ ವರ್ಗಗಳು ಒಟ್ಟಾಗುವುದನ್ನು ತಡೆಯುತ್ತಿವೆ ಎಂದರು.

ದೇಶದ ಜನಸಂಖ್ಯೆಯ ಶೇ 50ರಿಂದ 60ರಷ್ಟಿರುವ ಸಮುದಾಯಗಳ ಹಿತಾಸಕ್ತಿಯನ್ನು ನಿರ್ಲಕ್ಷಿಸಲು ಸಾಧ್ಯವಿಲ್ಲ ಎಂದು ತಾಲ್‌ಕಟೋರ್‌ ಸ್ಟೇಡಿಯಂನಲ್ಲಿ ನಡೆದ ಕಾರ್ಯಕ್ರಮದಲ್ಲಿ ಅವರು ಹೇಳಿದರು.

ಕೇಂದ್ರ ಸರ್ಕಾರವು ರೈತರ ಹಿತಾಸಕ್ತಿಗಳನ್ನು ಕಡೆಗಣಿಸಿದೆ. ಕೆಲವೇ ಉದ್ಯಮಿಗಳ ಪರವಾಗಿ ಕೆಲಸ ಮಾಡುತ್ತಿದೆ. ಈ ಉದ್ಯಮಿಗಳ ಸುಮಾರು ₹2.5 ಲಕ್ಷ ಕೋಟಿ ಸಾಲವನ್ನು ಮನ್ನಾ ಮಾಡಲಾಗಿದೆ ಎಂದು ಆರೋಪಿಸಿದ್ದಾರೆ.

ತೆರೆಮರೆಯಲ್ಲಿ ಕೆಲಸ ಮಾಡುವ ಜನರಿಗೆ ಯಾವ ಪ್ರಯೋಜನವೂ ದೊರೆಯುವುದಿಲ್ಲ. ಕಠಿಣ ದುಡಿಮೆಯ ಫಲವನ್ನು ಕೆಲವರಷ್ಟೇ ಅನುಭವಿಸುತ್ತಿದ್ದಾರೆ ಎಂದರು.

‘₹2.5 ಲಕ್ಷ ಕೋಟಿಯನ್ನು 15 ಉದ್ಯಮಿಗಳಿಗೆ ನೀಡಲಾಗಿದೆ. ರೈತರಿಗೆ ಏನೂ ಸಿಕ್ಕಿಲ್ಲ. ಅವರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಆದರೆ ಉದ್ಯಮಿಗಳ ಸಾಲ ಮನ್ನಾ ಮಾಡಲಾಗಿದೆ’ ಎಂದು ರಾಹುಲ್‌ ಹೇಳಿದರು.

ದೇಶದಲ್ಲಿ ಕೌಶಲದ ಕೊರತೆ ಇದೆ ಎಂಬ ಸರ್ಕಾರದ ನಿಲುವನ್ನು ರಾಹುಲ್‌ ಪ್ರಶ್ನಿಸಿದರು. ಕೌಶಲವನ್ನು ಗುರುತಿಸುವಲ್ಲಿ ಸರ್ಕಾರ ವಿಫಲವಾಗಿದೆ ಎಂದು ಅವರು ಹೇಳಿದರು.

**

ನಿದರ್ಶನಗಳಿಗೆ ಟ್ವಿಟರ್‌ನಲ್ಲಿ ಲೇವಡಿ

ಅಮೆರಿಕದ ಯಶಸ್ವಿ ಉದ್ಯಮಿಗಳ ನಿದರ್ಶನಗಳನ್ನು ನೀಡುವ ಮೂಲಕ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ರಾಹುಲ್‌ ವಾಗ್ದಾಳಿ ನಡೆಸಿದರು. ಈ ಸಂದರ್ಭದಲ್ಲಿ ಅವರು, ಕೋಕಾ ಕೋಲಾ ಕಂಪನಿಯ ಸ್ಥಾಪಕ ಮೊದಲು ನಿಂಬೆ ಷರಬತ್ತು ಮಾರಾಟ ಮಾಡುತ್ತಿದ್ದರು, ಮೆಕ್‌ಡೊನಾಲ್ಡ್‌ನ ಸ್ಥಾಪಕ ದಾಬಾ ನಡೆಸುತ್ತಿದ್ದರು ಎಂದು ಹೇಳಿದರು.

ಫೋರ್ಡ್‌, ಹೋಂಡಾ ಮತ್ತು ಮರ್ಸಿಡಿಸ್‌ ಕಾರು ಕಂಪನಿಗಳ ಸ್ಥಾಪಕರು ಮೆಕ್ಯಾನಿಕ್‌ಗಳಾಗಿದ್ದರು. ಅವರ ದೇಶದಲ್ಲಿ ಪ್ರತಿಭೆಗೆ ಮನ್ನಣೆ ನೀಡುವ ವ್ಯವಸ್ಥೆ ಇತ್ತು. ಅವರು ಬೆಳೆಯಲು ದೇಶ ಸಹಕರಿಸಿತು ಎಂದರು.

ಆದರೆ, ರಾಹುಲ್‌ ನೀಡಿದ ಈ ಉದಾಹರಣೆಗಳು ಟ್ವಿಟರ್‌ನಲ್ಲಿ ಟೀಕೆ ಮತ್ತು ವ್ಯಂಗ್ಯಕ್ಕೆ ಗುರಿಯಾಗಿವೆ. ‘ಅಕಾರ್ಡಿಂಗ್‌ ಟು ರಾಹುಲ್‌ ಗಾಂಧಿ’ ಎಂಬ ಹ್ಯಾಷ್‌ಟ್ಯಾಗ್‌ನಲ್ಲಿ ರಾಹುಲ್‌ ಅವರ ಹೇಳಿಕೆಗಳನ್ನು ಲೇವಡಿ ಮಾಡುವ ನೂರಾರು ಪ್ರತಿಕ್ರಿಯೆಗಳು ಮತ್ತು ಚಿತ್ರಗಳನ್ನು ಪೋಸ್ಟ್‌ ಮಾಡಲಾಗಿದೆ.

ಕೋಕಾ ಕೋಲಾ ಕಂಪನಿ ಸ್ಥಾಪಕ ಜಾನ್‌ ಪೆಂಬರ್ಟನ್‌ ಬಗೆಗಿನ ಲೇಖನ ಇರುವ ವಿಕಿಪೀಡಿಯಾ ಪುಟವನ್ನು ಒಬ್ಬರು ‘ತಿರುಚಿದ್ದು’ ‘ಪೆಂಬರ್ಟನ್‌ ಅವರು ಮೊದಲು ಗಾಂಧಿ ಕುಟುಂಬದ ಜತೆಗೆ ನಿಂಬೆ ಷರಬತ್ತು ಮಾರುತ್ತಿದ್ದರು’ ಎಂದು ಬರೆದಿದ್ದಾರೆ. ತಕ್ಷಣವೇ ಇದನ್ನು ಅಳಿಸಿ ಹಾಕಲಾಗಿದೆ. ಪೆಂಬರ್ಟನ್‌ ಔಷಧಶಾಸ್ತ್ರಜ್ಞರಾಗಿದ್ದರು.

**

ಕೌಶಲವಿರುವ ಜನರಿಗೆ ಭಾರತದಲ್ಲಿ ಪ್ರತಿಫಲ ದೊರೆಯುತ್ತಿಲ್ಲ. ಮೋದಿ ಕಚೇರಿಯಲ್ಲಿ ಕಠಿಣ ದುಡಿಮೆಯ ರೈತರು ಕಾಣಿಸುವುದೇ ಇಲ್ಲ

-ರಾಹುಲ್‌ ಗಾಂಧಿ, ಕಾಂಗ್ರೆಸ್‌ ಅಧ್ಯಕ್ಷ

**

ಕೆಲವು ಟ್ವೀಟ್‌ಗಳು

ರಾಹುಲ್‌ ಗಾಂಧಿಯ ಭಾಷಣ ಬರೆಯುವವರು ಯಾರೇ ಆಗಿದ್ದರೂ ಅವರು ಬಿಜೆಪಿ–ಆರ್‌ಎಸ್‌ಎಸ್ ಏಜೆಂಟರು

@MajorPoonia

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT