ಮಂಗಳವಾರ, ಫೆಬ್ರವರಿ 25, 2020
19 °C
ಸಾಮುದಾಯಿಕ ಭೋಜನಾಲಯ ಕುರಿತ ಪಿಐಎಲ್

‘ಅರ್ಜಿ ಸಲ್ಲಿಕೆಗೆ ವಿಫಲವಾದರೆರಾಜ್ಯಗಳಿಗೆ ₹5 ಲಕ್ಷ ದಂಡ’

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ದೇಶದೆಲ್ಲೆಡೆ ಸಮುದಾಯ ಭೋಜನಾಲಯಗಳನ್ನು ಸ್ಥಾಪಿಸುವ ಕುರಿತು ಸಲ್ಲಿಕೆಯಾಗಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಕುರಿತು ಅಫಿಡವಿಟ್‌ ಸಲ್ಲಿಸದೆ ಇರುವ ರಾಜ್ಯಗಳನ್ನು ಸುಪ್ರೀಂ ಕೋರ್ಟ್ ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದೆ.

‘ಇನ್ನೊಂದು ದಿನದಲ್ಲಿ ಅಫಿಡವಿಟ್ ಸಲ್ಲಿಸದೆ ಇದ್ದರೆ, ಆ ರಾಜ್ಯಗಳಿಗೆ ₹1 ಲಕ್ಷ ದಂಡ ಹಾಗೂ ಬಳಿಕವೂ ಅಫಿಡವಿಟ್ ಸಲ್ಲಿಕೆಗೆ ವಿಫಲವಾಗುವ ರಾಜ್ಯಗಳಿಗೆ ₹5 ಲಕ್ಷ ದಂಡ ವಿಧಿಸಲಾಗುವುದು’ ಎಂದು ನ್ಯಾಯಮೂರ್ತಿ ಎನ್‌.ವಿ. ರಮಣ ನೇತೃತ್ವದ ಪೀಠ ಸೋಮವಾರ ಹೇಳಿದೆ.

ಕರ್ನಾಟಕ, ಪಂಜಾಬ್, ನಾಗಾಲ್ಯಾಂಡ್, ಉತ್ತರಾಖಂಡ ಹಾಗೂ ಜಾರ್ಖಂಡ್‌ ರಾಜ್ಯಗಳು, ಕೇಂದ್ರಾಡಳಿತ ಪ್ರದೇಶಗಳಾದ ಅಂಡಮಾನ್ ಮತ್ತು ನಿಕೋಬಾರ್, ಜಮ್ಮು ಮತ್ತು ಕಾಶ್ಮೀರ ಪಿಐಎಲ್‌ಗೆ ಪ್ರತಿಕ್ರಿಯೆ ಸಲ್ಲಿಸಿವೆ.

ಹಸಿವು ನೀಗಲು ಅವಶ್ಯ: ಹಸಿವಿನ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವ ಸಲುವಾಗಿ ದೇಶದಲ್ಲಿ ಸಮುದಾಯ ಭೋಜನಾಲಯಗಳ ಅವಶ್ಯಕತೆ ಇದೆ ಎಂದು ಅ.18ರಂದು ಅಭಿಪ್ರಾಯಪಟ್ಟಿದ್ದ ಸುಪ್ರೀಂ ಕೋರ್ಟ್, ಪಿಐಎಲ್‌ಗೆ ಪ್ರತಿಕ್ರಿಯಿಸುವಂತೆ ಕೇಂದ್ರ ಹಾಗೂ ರಾಜ್ಯಗಳಿಗೆ ನೋಟಿಸ್ ನೀಡಿತ್ತು.

‘ಹಸಿವು ಹಾಗೂ ಅಪೌಷ್ಟಿಕತೆಯಿಂದಾಗಿ ದೇಶದಲ್ಲಿ ದಿನವೂ ಐದು ವರ್ಷದೊಳಗಿನ ಹಲವು ಮಕ್ಕಳು ಮೃತಪಡುತ್ತಿದ್ದಾರೆ. ಇದು ಆಹಾರ ಹಕ್ಕು ಸೇರಿದಂತೆ ಮೂಲಸೌಕರ್ಯ ಹಕ್ಕುಗಳ ಉಲ್ಲಂಘನೆ. ಈ ನಿಟ್ಟಿನಲ್ಲಿ ಸಮುದಾಯ ಭೋಜನಾಲಯಗಳನ್ನು ಸ್ಥಾಪಿಸಲು ಎಲ್ಲಾ ರಾಜ್ಯ ಹಾಗೂ ಕೇಂದ್ರಾಡಳಿತ ಪ್ರದೇಶಗಳು ಯೋಜನೆ ರೂಪಿಸಲು ನಿರ್ದೇಶನ ನೀಡಬೇಕು’ ಎಂದು ಅರ್ಜಿಯಲ್ಲಿ ಕೋರಲಾಗಿತ್ತು.

ತಮಿಳುನಾಡು, ಆಂಧ್ರಪ್ರದೇಶ, ಉತ್ತರಾಖಂಡ, ಒಡಿಶಾ, ಜಾರ್ಖಂಡ್ ಹಾಗೂ ದೆಹಲಿಯಲ್ಲಿ ಕಡಿಮೆ ದರದಲ್ಲಿ ಆಹಾರ ಒದಗಿಸುತ್ತಿರುವ ರಾಜ್ಯ ಸರ್ಕಾರಗಳ ಸಮುದಾಯ ಭೋಜನಾಲಯಗಳ ಬಗ್ಗೆ ಅರ್ಜಿಯಲ್ಲಿ ಉಲ್ಲೇಖಿಸಲಾಗಿದೆ.

ಸಾಮಾಜಿಕ ಕಾರ್ಯಕರ್ತರಾದ ಅನುನ್ ಧವನ್, ಇಶಾನ್ ಧವನ್ ಹಾಗೂ ಕುಂಜನ ಸಿಂಗ್ ಸಲ್ಲಿಸಿದ್ದ ಈ ಪಿಐಎಲ್‌ನಲ್ಲಿ, ‘ಸಾರ್ವಜನಿಕ ಪಡಿತರ ಹಂಚಿಕೆ ವ್ಯವಸ್ಥೆಯಿಂದ ಹೊರಗಿರುವ ಜನರಿಗೆ ರಾಷ್ಟ್ರೀಯ ಆಹಾರ ಕೇಂದ್ರ ಸ್ಥಾಪಿಸಲು ಕೇಂದ್ರಕ್ಕೆ ಸೂಚಿಸಬೇಕು’ ಎಂದು ಮನವಿ ಮಾಡಲಾಗಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು