ಗುರುವಾರ , ನವೆಂಬರ್ 14, 2019
19 °C
ಉಗ್ರರ ಮೂರು ಶಿಬಿರಗಳ ಮೇಲೆ ಸೇನೆ ದಾಳಿ * 20 ಭಯೋತ್ಪಾದಕರು ಸತ್ತಿರುವ ಶಂಕೆ

ಅಪ್ರಚೋದಿತ ಗುಂಡಿನ ದಾಳಿಗೆ ಪ್ರತ್ಯುತ್ತರ: 6ಕ್ಕೂ ಹೆಚ್ಚು ಪಾಕ್‌ ಸೈನಿಕರ ಹತ್ಯೆ

Published:
Updated:

ಶ್ರೀನಗರ: ಗಡಿಯಲ್ಲಿ ಪಾಕಿಸ್ತಾನ ಸೈನಿಕರು ನಡೆಸಿದ ಅಪ್ರಚೋದಿತ ಗುಂಡಿನ ದಾಳಿಗೆ ಭಾರತವು ಭಾನುವಾರ ಫಿರಂಗಿ ದಾಳಿಯ ಪ್ರತ್ಯುತ್ತರ ನೀಡಿದ್ದು, 6 ರಿಂದ 10 ಮಂದಿ ಪಾಕಿಸ್ತಾನಿ ಸೈನಿಕರು ಹಾಗೂ 20ಕ್ಕೂ ಹೆಚ್ಚು ಉಗ್ರರು ಮೃತಪಟ್ಟಿದ್ದಾರೆ ಎಂದು ಸೇನೆಯ ಮೂಲ ತಿಳಿಸಿದೆ.

‘ಜಮ್ಮು ಕಾಶ್ಮೀರದ ವಿಶೇಷಾಧಿಕಾರ ರದ್ದುಗೊಳಿಸಿದ ನಂತರ, ಗಡಿ ನಿಯಂತ್ರಣ ರೇಖೆಯಲ್ಲಿ ಎರಡು ರಾಷ್ಟ್ರಗಳ ನಡುವೆ ನಡೆದ ಈ ಅತಿ ದೊಡ್ಡ ಚಕಮಕಿಯಲ್ಲಿ ಉಗ್ರರ ಮೂರು ಶಿಬಿರಗಳನ್ನು ಧ್ವಂಸ ಮಾಡಲಾಗಿದೆ. ಇನ್ನೊಂದು ಶಿಬಿರಕ್ಕೆ ಭಾರಿ ಹಾನಿ ಉಂಟಾಗಿದೆ’ ಎಂದು ಸೇನಾ ಮುಖ್ಯಸ್ಥ ಬಿಪಿನ್‌ ರಾವತ್‌ ಹೇಳಿದ್ದಾರೆ.

‘ಪಾಕ್‌ ಆಕ್ರಮಿತ ಕಾಶ್ಮೀರದ ತಂಗಧಾರ್‌ ಸೆಕ್ಟರ್‌ನಲ್ಲಿ ಶನಿವಾರ ಮಧ್ಯರಾತ್ರಿ ಪಾಕಿಸ್ತಾನ ನಡೆಸಿದ್ದ ಅಪ್ರಚೋದಿತ ದಾಳಿಯಿಂದಾಗಿ ಭಾರತದ ಇಬ್ಬರು ಸೈನಿಕರು ಹಾಗೂ ಒಬ್ಬ ನಾಗರಿಕ ಮೃತರಾಗಿ, ಮೂವರು ಗಾಯಗೊಂಡಿದ್ದರು. ಇದಕ್ಕೆ ಪ್ರತ್ಯುತ್ತರ ನೀಡಲು ನಿರ್ಧರಿಸಿದ ಭಾರತವು ಭಾನುವಾರ ಬೆಳಿಗ್ಗೆ ನೀಲಂ ಕಣಿವೆಯಲ್ಲಿದ್ದ ಉಗ್ರರ ಶಿಬಿರಗಳ ಮೇಲೆ ದಾಳಿ ನಡೆಸಿತು. ಉಗ್ರರ ಮೂರು ಶಿಬಿರಗಳು ಸಂಪೂರ್ಣವಾಗಿ ಧ್ವಂಸಗೊಂಡಿವೆ. ದಾಳಿಯ ಸಂದರ್ಭದಲ್ಲಿ ಪ್ರತಿ ಶಿಬಿರದಲ್ಲೂ 10 ರಿಂದ 15 ಉಗ್ರರು ಇದ್ದಿರಬಹುದು ಎಂದು ಅಂದಾಜಿಸಲಾಗಿದ್ದು, ಕನಿಷ್ಠ 20 ಉಗ್ರರು ಹತರಾಗಿರುವ ಸಾಧ್ಯತೆ ಇದೆ ಎಂದು ಸೇನೆಯ ಮೂಲ ಗಳು ಹೇಳಿವೆ. ಬಾಲಾಕೋಟ್‌ ದಾಳಿಯ ನಂತರದ ಅತ್ಯಂತ ಪ್ರಮುಖ ದಾಳಿ ಇದು ಎಂದು ಬಣ್ಣಿಸಲಾಗಿದೆ.

‘ಜಮ್ಮು ಕಾಶ್ಮೀರದ ವಿಶೇಷಾಧಿಕಾರವನ್ನು ರದ್ದುಪಡಿಸಿರುವ ಭಾರತದ ಕ್ರಮಕ್ಕೆ ಪ್ರತ್ಯುತ್ತರವಾಗಿ ಭಯೋತ್ಪಾದಕರನ್ನು ಕಾಶ್ಮೀರದೊಳಗೆ ಕಳುಹಿಸಿ ಅಶಾಂತಿ ಸೃಷ್ಟಿಸಲು ಪಾಕಿಸ್ತಾನ ಪ್ರಯತ್ನಿ
ಸುತ್ತಿತ್ತು. ಇದಕ್ಕೆ ಭಾರತ ಪ್ರತಿಕ್ರಿಯೆ ನೀಡಿದೆ’ ಎಂದು ಮೂಲಗಳು ತಿಳಿಸಿವೆ.

ಸೇನಾ ಮುಖ್ಯಸ್ಥ ಬಿಪಿನ್‌ ರಾವತ್‌ ಅವರು ರಕ್ಷಣಾ ಸಚಿವ ರಾಜನಾಥ್ ಸಿಂಗ್‌ ಅವರನ್ನು ಭೇಟಿ ಮಾಡಿ ಘಟನೆಯ ವಿವರಗಳನ್ನು ನೀಡಿದ್ದಾರೆ.

ನಾಗರಿಕರ ಹತ್ಯೆ: ಘಟನೆಯ ಬಗ್ಗೆ ಸರಣಿ ಟ್ವೀಟ್‌ ಮಾಡಿರುವ ಪಾಕಿಸ್ತಾನ ಸೇನೆಯ ವಕ್ತಾರ ಆಸಿಫ್‌ ಗಫೂರ್‌, ‘ಭಾರತ ನಡೆಸಿದ ಗುಂಡಿನ ದಾಳಿಗೆ ಐವರು ನಾಗರಿಕರು ಹತರಾಗಿದ್ದಾರೆ. ಮುಗ್ಧ ನಾಗರಿಕರ ಹತ್ಯೆ ನಡೆಸಿದ್ದನ್ನೇ ಭಾರತವು ಉಗ್ರರ ಹತ್ಯೆ ಎಂದು ಬಿಂಬಿಸುತ್ತಿದೆ’ ಎಂದು ದೂರಿದ್ದಾರೆ.

ಪಾಕಿಸ್ತಾನ ನಿರಾಕರಣೆ

ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿರುವ ಉಗ್ರರ ಶಿಬಿರಗಳ ಮೇಲೆ ಭಾರತವು ದಾಳಿ ನಡೆಸಿದೆ ಎಂಬ ವರದಿಯನ್ನು ಪಾಕಿಸ್ತಾನ ನಿರಾಕರಿಸಿದೆ. ‘ಇದರ ಸತ್ಯಾಸತ್ಯತೆ ತಿಳಿಯಲು ಪಿ–5 ರಾಷ್ಟ್ರಗಳ (ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ಕಾಯಂ ಸದಸ್ಯ ರಾಷ್ಟ್ರಗಳು) ರಾಜತಾಂತ್ರಿಕರು ಬರುವುದಾದರೆ, ಅವರ ಪ್ರಯಾಣಕ್ಕೆ ವ್ಯವಸ್ಥೆ ಮಾಡಿಕೊಡಲು ಸಿದ್ಧ’ ಎಂದಿದೆ.

‘ಭಾರತೀಯ ಮಾಧ್ಯಮಗಳು ಮಾಡಿರುವ ವರದಿಯನ್ನು ಪಾಕಿಸ್ತಾನ ಸಾರಾಸಗಟಾಗಿ ತಳ್ಳಿ ಹಾಕುತ್ತದೆ. ಉಗ್ರರ ಶಿಬಿರಗಳ ಮಾಹಿತಿ ನೀಡುವಂತೆ ಭಾರತವನ್ನು ಒತ್ತಾಯಿಸಬೇಕು ಎಂದು ನಾವು ಈಗಾಗಲೇ ಪಿ–5 ರಾಷ್ಟ್ರ
ಗಳಲ್ಲಿ ಮನವಿ ಮಾಡಿದ್ದೇವೆ. ಭಾರತದ ಸುಳ್ಳುಕತೆಯನ್ನು ಬಹಿರಂಗಪಡಿಸಲು ನಾವು ಈ ರಾಷ್ಟ್ರಗಳ ಪ್ರತಿನಿಧಿಗಳನ್ನು ಸ್ಥಳಕ್ಕೆ ಕರೆದೊಯ್ಯಲು ಸಿದ್ಧ’ ಎಂದು ಪಾಕಿಸ್ತಾನದ ವಿದೇಶಾಂಗ ಸಚಿವಾಲಯದ ವಕ್ತಾರ ಮೊಹಮ್ಮದ್‌ ಫೈಜಲ್‌ ಪ್ರತಿಕ್ರಿಯಿಸಿದ್ದಾರೆ. ‘ಭಾರತ ನಡೆಸಿದ ಗುಂಡಿನ ದಾಳಿಯಿಂದಾಗಿ ಪಾಕಿಸ್ತಾನದ ಐವರು ನಾಗರಿಕರು ಸತ್ತಿದ್ದಾರೆ’ ಎಂದು ಆರೋಪಿಸಿರುವ ಪಾಕಿಸ್ತಾನವು, ಭಾರತದ ರಾಯಭಾರಿ ಗೌರವ್‌ ಅಹ್ಲುವಾಲಿಯಾ ಅವರನ್ನು ಕರೆಯಿಸಿಕೊಂಡು ತನ್ನ ಪ್ರತಿಭಟನೆ ವ್ಯಕ್ತಪಡಿಸಿದೆ.

***

ಗಡಿಯಲ್ಲಿ ನಡೆದ ಗುಂಡಿನ ಚಕಮಕಿಯಲ್ಲಿ ಭಾರತದ ಎರಡು ಬಂಕರ್‌ಗಳು ಧ್ವಂಸವಾಗಿದ್ದು, ಕನಿಷ್ಠ ಒಂಬತ್ತು ಸೈನಿಕರು ಹತರಾಗಿದ್ದಾರೆ

- ಆಸಿಫ್‌ ಗಫೂರ್‌, ಪಾಕ್‌ ಸೇನೆಯ ವಕ್ತಾರ

ಪಾಕಿಸ್ತಾನವು ಉಗ್ರರಿಗೆ ಬೆಂಬಲ ನೀಡುವುದನ್ನು ಮುಂದುವರಿಸಿದರೆ ತಕ್ಕ ಸ್ಥಳ ಮತ್ತು ಸಮಯದಲ್ಲಿ ಪ್ರತ್ಯುತ್ತರ ನೀಡಲು ಭಾರತ ಹಿಂಜರಿಯದು

- ಬಿಪಿನ್‌ ರಾವತ್‌, ಭಾರತೀಯ ಸೇನೆಯ ಮುಖ್ಯಸ್ಥ

ಪ್ರತಿಕ್ರಿಯಿಸಿ (+)