ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋಲ್ಕತ್ತದಲ್ಲಿ ಮಮತಾ ಮಹಾ ರ‍್ಯಾಲಿ ಇಂದು

ಬಿಜೆಪಿ ವಿರೋಧಿ ಪಕ್ಷಗಳ ಸಮಾವೇಶ: ಹಲವು ಮುಖಂಡರು ಭಾಗವಹಿಸುವ ನಿರೀಕ್ಷೆ
Last Updated 18 ಜನವರಿ 2019, 20:11 IST
ಅಕ್ಷರ ಗಾತ್ರ

ಕೋಲ್ಕತ್ತ: ನೂರಾರು ಕಿ.ಮೀ. ದೂರದ ಕೋಲ್ಕತ್ತದಲ್ಲಿಉತ್ತರ ಪ್ರದೇಶದ ಎಸ್‌ಪಿ–ಬಿಎಸ್‌ಪಿ ಮೈತ್ರಿಯು ಪ್ರತಿಫಲನಗೊಳ್ಳಲಿದೆ.

ಬಿಜೆಪಿ ವಿರೋಧಿ ಪಕ್ಷಗಳ ಸಮಾವೇಶವು ತೃಣಮೂಲ ಕಾಂಗ್ರೆಸ್‌ (ಟಿಎಂಸಿ) ಮುಖ್ಯಸ್ಥೆ ಮಮತಾ ಬ್ಯಾನರ್ಜಿ ಅವರ ನೇತೃತ್ವದಲ್ಲಿ ಶನಿವಾರ ಕೋಲ್ಕತ್ತದಲ್ಲಿ ನಡೆಯಲಿದೆ. ಕೆಲವೇ ದಿನಗಳ ಹಿಂದೆ ಉತ್ತರ ಪ್ರದೇಶದಲ್ಲಿ ಮಹಾಮೈತ್ರಿ ಘೋಷಿಸಿದ ಎಸ್‌ಪಿ ಮತ್ತು ಬಿಎಸ್‌ಪಿಯ ಮುಖಂಡರು ಈ ರ‍್ಯಾಲಿಯಲ್ಲಿ ಒಟ್ಟಾಗಿ ಭಾಗಿಯಾಗಲಿದ್ದಾರೆ.

ಎಸ್‌ಪಿ ಮುಖ್ಯಸ್ಥ ಅಖಿಲೇಶ್‌ ಯಾದವ್‌ ಸಭೆಯಲ್ಲಿ ಭಾಗವಹಿಸಲಿದ್ದಾರೆ. ಹಿರಿಯ ಮುಖಂಡ ಸತೀಶ್‌ ಚಂದ್ರ ಅವರು ಬಿಎಸ್‌ಪಿಯನ್ನು ಪ್ರತಿನಿಧಿಸಲಿದ್ದಾರೆ.

ಮೈತ್ರಿಕೂಟದ ಭಾಗವಾಗಿರುವ ರಾಷ್ಟ್ರೀಯ ಲೋಕದಳದ ಅಜಿತ್‌ ಸಿಂಗ್‌ ಮತ್ತು ಜಯಂತ್‌ ಚೌಧರಿ ಅವರೂ ಸಮಾವೇಶದಲ್ಲಿ ಭಾಗವಹಿಸಲಿದ್ದಾರೆ. ಹಿರಿಯ ಮುಖಂಡ ಮಲ್ಲಿಕಾರ್ಜುನ ಖರ್ಗೆ ಅವರು ಕಾಂಗ್ರೆಸ್‌ ಪಕ್ಷವನ್ನು ಪ್ರತಿನಿಧಿಸಲಿದ್ದಾರೆ.

ಉತ್ತರ ಪ್ರದೇಶದಲ್ಲಿ ಗಣನೀಯ ಪ್ರಭಾವ ಇರುವ ಹೆಚ್ಚಿನ ಪಕ್ಷಗಳು ಭಾಗವಹಿಸುತ್ತಿರುವುದೇ ಈ ಸಮಾವೇಶದ ವಿಶೇಷಗಳಲ್ಲಿ ಒಂದು ಎಂದು ಬಣ್ಣಿಸಲಾಗುತ್ತಿದೆ.

ಆದರೆ, ಬಿಜೆಪಿ ವಿರೋಧಿ ಪಕ್ಷಗಳು ಸಮಾವೇಶವನ್ನು ಈ ರೀತಿಯಲ್ಲಿ ನೋಡಲು ಬಯಸುತ್ತಿಲ್ಲ.

‘ಇದು ಬಿಜೆಪಿ ವಿರೋಧಿ ರ‍್ಯಾಲಿ. ಬಿಜೆಪಿಯ ವಿರುದ್ಧ ಇರುವ ಹಲವು ಪಕ್ಷಗಳು ಇದರಲ್ಲಿ ಭಾಗವಹಿಸುತ್ತಿವೆ. ನಾವೂ ಅದರ ಭಾಗವಾಗಿದ್ದೇವೆ. ಉತ್ತರ ಪ್ರದೇಶದ ರಾಜಕಾರಣಕ್ಕೆ ಈ ಸಮಾವೇಶದ ಜತೆಗೆ ವಿಶೇಷವಾದ ಯಾವುದೇ ನಂಟು ಇಲ್ಲ’ ಎಂದು ಎಸ್‌ಪಿ ಉಪಾಧ್ಯಕ್ಷ ಕಿರಣ್ಮಯಿ ನಂದಾ ಹೇಳಿದ್ದಾರೆ.

ವಿರೋಧ ಪಕ್ಷಗಳ ಭಾರಿ ಸಮಾವೇಶವನ್ನು ಉತ್ತರ ಪ್ರದೇಶದ ರಾಜಕೀಯ ಸಮೀಕರಣಕ್ಕೆ ಹೋಲಿಸುವ ಕೆಲಸ ಮಾಡಬಾರದು ಎಂದು ಕಾಂಗ್ರೆಸ್‌ ಕೂಡ ಹೇಳಿದೆ.

ಪ್ರಾದೇಶಿಕ ರಾಜಕೀಯ ಸನ್ನಿವೇಶಗಳನ್ನು ಈ ರ‍್ಯಾಲಿಯ ಜತೆಗೆ ತಳಕು ಹಾಕುವ ಕೆಲಸ ಮಾಡಬಾರದು ಎಂದು ತೃಣಮೂಲ ಕಾಂಗ್ರೆಸ್ ಕೂಡ ಹೇಳಿದೆ.

ಕರ್ನಾಟಕ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ, ಜೆಡಿಎಸ್‌ ಮುಖ್ಯಸ್ಥ ಎಚ್‌.ಡಿ. ದೇವೇಗೌಡ, ನ್ಯಾಷನಲ್‌ ಕಾನ್ಫರೆನ್ಸ್‌ ಮುಖಂಡರಾದ ಫಾರೂಕ್‌ ಅಬ್ದುಲ್ಲಾ ಮತ್ತು ಒಮರ್‌ ಅಬ್ದುಲ್ಲಾ, ಆರ್‌ಜೆಡಿಯ ತೇಜಸ್ವಿ ಯಾದವ್‌, ಡಿಎಂಕೆಯ ಎಂ.ಕೆ. ಸ್ಟಾಲಿನ್‌, ಬಿಜೆಪಿಯ ಬಂಡಾಯ ಮುಖಂಡ ಶತ್ರುಘ್ನ ಸಿನ್ಹಾ, ಎನ್‌ಸಿಪಿಯ ಶರದ್‌ ಯಾದವ್‌, ಕೇಂದ್ರದ ಮಾಜಿ ಸಚಿವರಾದ ಯಶವಂತ್‌ ಸಿನ್ಹಾ, ಅರುಣ್‌ ಶೌರಿ ಮತ್ತಿತರರು ಭಾಗವಹಿಸುವ ನಿರೀಕ್ಷೆ ಇದೆ.

ಬಿಜೆಪಿ ವಿರೋಧಿ ಪಕ್ಷಗಳಲ್ಲಿ ಒಗ್ಗಟ್ಟು ಮೂಡಿಸುವ ಮಮತಾ ಬ್ಯಾನರ್ಜಿ ಪ್ರಯತ್ನಕ್ಕೆ ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ಬೆಂಬಲ ವ್ಯಕ್ತಪಡಿಸಿದ್ದಾರೆ. ತೃಣಮೂಲ ಕಾಂಗ್ರೆಸ್‌ ರ‍್ಯಾಲಿಯ ಬಗ್ಗೆ ರಾಹುಲ್‌ ಮೌನವಾಗಿದ್ದದ್ದು ಊಹಾಪೋಹಗಳಿಗೆ ಕಾರಣವಾಗಿತ್ತು. ಆದರೆ, ರಾಹುಲ್‌ ಅವರು ಮಮತಾ ಅವರಿಗೆ ಶುಕ್ರವಾರ ಪತ್ರ ಬರೆದು ಬೆಂಬಲ ಸೂಚಿಸಿದ್ದಾರೆ.

*ಹೊಸ ಪ್ರಧಾನಿಗಾಗಿ ರಾಷ್ಟ್ರ ಕಾಯುತ್ತಿದೆ. ಟಿಎಂಸಿ ಆಯೋಜಿಸಿರುವ ವಿರೋಧ ಪಕ್ಷಗಳ ಸಮಾವೇಶದಲ್ಲಿ ಈ ಕುರಿತು ಸ್ಪಷ್ಟ ಸಂದೇಶ ರವಾನೆಯಾಗಲಿದೆ

ಅಖಿಲೇಶ್‌ ಯಾದವ್‌,ಅಧ್ಯಕ್ಷ, .ಸಮಾಜವಾದಿ ಪಾರ್ಟಿ

* ಬಿಜೆಪಿ ಸೋಲಿಸಲು ದೇಶವೇ ಒಂದಾಗಿದೆ. ಕೇಂದ್ರದಲ್ಲಿ ಜಾತ್ಯತೀತ ಸರ್ಕಾರ ರಚನೆಗಾಗಿ ಆಯೋಜಿಸಿರುವ ಈ ರ‍್ಯಾಲಿ ಒಂದು ಐತಿಹಾಸಿಕ ಬೆಳವಣಿಗೆ

–ಎಚ್‌.ಡಿ.ದೇವೇಗೌಡ, ರಾಷ್ಟ್ರೀಯ ಅಧ್ಯಕ್ಷ, ಜಾತ್ಯತೀತ ಜನತಾ ದಳ

* ಬಿಜೆಪಿಯು ದೇಶಾದ್ಯಂತ ಸುಳ್ಳು ಸುದ್ದಿಗಳನ್ನು ಹರಡುತ್ತಿದ್ದು, ಇದನ್ನು ಕೊನೆಗಾಣಿಸಬೇಕಿದೆ. ಈ ರ‍್ಯಾಲಿಯಿಂದ ಅದು ಸಾಧ್ಯವಾಗಲಿದೆ

ಶರದ್‌ ಪವಾರ್‌, ಅಧ್ಯಕ್ಷ, ನ್ಯಾಶನಲಿಸ್ಟ್‌ ಕಾಂಗ್ರೆಸ್‌ ಪಕ್ಷ

* ಪ್ರಧಾನಿ ನರೇಂದ್ರ ಮೋದಿ ಸರ್ಕಾರವನ್ನು ಕಿತ್ತೆಸೆಯುವಲ್ಲಿ ಮಮತಾ ಬ್ಯಾನರ್ಜಿ ಅವರ ಈ ಹೆಜ್ಜೆ ಯಶಸ್ವಿಯಾಗಲಿದೆ

ಗೆಗಾಂಗ್‌ ಅಪಾಂಗ್‌, ಮಾಜಿ ಮುಖ್ಯಮಂತ್ರಿ, ಅರುಣಾಚಲ ಪ್ರದೇಶ

* ಇವನ್ನೂ ಓದಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT