ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೀದಿ–ಸಿಬಿಐ ಸಂಘರ್ಷಕ್ಕೆ ‘ಸುಪ್ರೀಂ’ ಅಲ್ಪವಿರಾಮ

ತನಿಖೆಗೆ ಸಹಕರಿಸಿ: ಪೊಲೀಸ್‌ ಕಮಿಷನರ್‌ಗೆ ಸೂಚನೆ
Last Updated 5 ಫೆಬ್ರುವರಿ 2019, 20:00 IST
ಅಕ್ಷರ ಗಾತ್ರ

ನವದೆಹಲಿ: ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಮತ್ತು ಸಿಬಿಐ ನಡುವೆ ಮೂರು ದಿನ ನಡೆದ ಭಾರಿ ಸಂಘರ್ಷಕ್ಕೆ ಸುಪ್ರೀಂ ಕೋರ್ಟ್‌ ಮಧ್ಯಪ್ರವೇಶದಿಂದಾಗಿ ಅಲ್ಪವಿರಾಮ ಬಿದ್ದಿದೆ.

ಶಾರದಾ ಚಿಟ್‌ಫಂಡ್‌ ಹಗರಣದ ತನಿಖೆ ನಡೆಸುತ್ತಿರುವ ಸಿಬಿಐ ಎದುರು ವಿಚಾರಣೆಗೆ ಹಾಜರಾಗಿ ಪ್ರಾಮಾಣಿಕವಾಗಿ ಸಹಕರಿಸುವಂತೆ ಕೋಲ್ಕತ್ತ ನಗರ ಪೊಲೀಸ್‌ ಕಮಿಷನರ್‌ ರಾಜೀವ್‌ ಕುಮಾರ್‌ ಅವರಿಗೆಸುಪ್ರೀಂ ಕೋರ್ಟ್‌ ಮಂಗಳವಾರ ಸೂಚಿಸಿದೆ.ಯಾವುದೇ ಕಾರಣಕ್ಕೂ ರಾಜೀವ್‌ ಕುಮಾರ್‌ ಅವರನ್ನು ಬಂಧಿಸದಂತೆ ಸಿಬಿಐಗೆ ಸ್ಪಷ್ಟ ನಿರ್ದೇಶನವನ್ನೂ ನೀಡಿದೆ.

ರಾಜೀವ್‌ ಕುಮಾರ್‌ ಅವರನ್ನು ಬಂಧಿಸಲು ಮುಂದಾಗಿದ್ದ ಸಿಬಿಐ ಕ್ರಮವನ್ನು ವಿರೋಧಿಸಿ ಮಮತಾ ನಡೆಸುತ್ತಿದ್ದ ಧರಣಿಯನ್ನು ಸುಪ್ರೀಂ ಕೋರ್ಟ್‌ ನಿರ್ದೇಶನದ ಬಳಿಕ ಹಿಂತೆಗೆದುಕೊಂಡಿದ್ದಾರೆ.ಶಾರದಾ ಚಿಟ್‌ಫಂಡ್‌ ಮತ್ತು ರೋಸ್‌ ವ್ಯಾಲಿ ಹಗರಣದ ತನಿಖೆ ನಡೆಸಿದ್ದ ರಾಜೀವ್‌ ಕುಮಾರ್‌ ಅವರು ಸಾಕ್ಷ್ಯಾಧಾರಗಳನ್ನು ನಾಶಪಡಿಸುವ ಸಾಧ್ಯತೆ ಇದೆ ಎಂದು ಆತಂಕ ವ್ಯಕ್ತಪಡಿಸಿದ್ದ ಸಿಬಿಐ, ಸುಪ್ರೀಂ ಕೋರ್ಟ್ ಮೊರೆ ಹೋಗಿತ್ತು.

ಸಿಬಿಐ ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ರಂಜನ್‌ ಗೊಗೊಯಿ ನೇತೃತ್ವದ ತ್ರಿಸದಸ್ಯ ಪೀಠ, ತನಿಖಾ ಸಂಸ್ಥೆಯ ಆರೋಪಗಳಿಗೆ ವಿವರಣೆ ನೀಡುವಂತೆ ರಾಜೀವ್‌ ಕುಮಾರ್‌ ಅವರಿಗೆ ನೋಟಿಸ್‌ ಜಾರಿ ಮಾಡಿದೆ.

ರಾಜೀವ್‌ ಕುಮಾರ್‌ ಅವರು ವಿಚಾರಣೆಗೆ ಸಿಬಿಐ ಕಚೇರಿಗೆ ಹೋಗುವ ಅಗತ್ಯವಿಲ್ಲ ಎಂದು ಹೇಳಿರುವ ಕೋರ್ಟ್‌, ಮೇಘಾಲಯದ ಶಿಲಾಂಗ್‌ನಲ್ಲಿ ತನಿಖೆ ನಡೆಸುವಂತೆ ಸಿಬಿಐಗೆ ಸೂಚಿಸಿದೆ. ಸಿಬಿಐ ಸೂಚಿಸಿದ ದಿನಗಳಂದು ವಿಚಾರಣೆಗೆ ಶಿಲಾಂಗ್‌ಗೆ ತೆರಳುವಂತೆ ಕುಮಾರ್‌ ಅವರಿಗೆ ಸೂಚಿಸಿದೆ.

ನೋಟಿಸ್‌ಗೆ ಉತ್ತರಿಸಲು ಫೆಬ್ರುವರಿ 20ರವರೆಗೆ ರಾಜೀವ್‌ ಅವರಿಗೆ ಪೀಠವು ಕಾಲಾವಕಾಶ ನೀಡಿದೆ. ಅರ್ಜಿಯ ವಿಚಾರಣೆಯನ್ನು ಫೆ.20ಕ್ಕೆ ಮುಂದೂಡಿದೆ.

ಗೆದ್ದಿದ್ದು ನಾವೇ...: ಸುಪ್ರೀಂ ಕೋರ್ಟ್ ಆದೇಶ ಹೊರ ಬೀಳುತ್ತಲೇ ‘ಗೆದ್ದಿದ್ದು ನಾವೇ’ ಎಂದು ಮಮತಾ ಹಾಗೂ ಬಿಜೆಪಿ ನಾಯಕರು ಹೇಳಿದ್ದಾರೆ.

‘ಕೋಲ್ಕತ್ತ ಪೊಲೀಸ್‌ ಕಮಿಷನರ್‌ ಅವರನ್ನು ಬಂಧಿಸದಂತೆ ಸುಪ್ರೀಂ ಕೋರ್ಟ್‌ ಹೇಳಿರುವುದು ನಮಗೆ ದೊರೆತ ನೈತಿಕ ಜಯ’ ಎಂದು ಮಮತಾ ಪ್ರತಿಕ್ರಿಯಿಸಿದ್ದಾರೆ. ಮಮತಾ ನೇತೃತ್ವದ ಪಶ್ಚಿಮ ಬಂಗಾಳ ಸರ್ಕಾರಕ್ಕೆ ಭಾರಿ ಮುಖಭಂಗವಾಗಿದೆ. ಸಿಬಿಐಗೆ ದೊರೆತ ನೈತಿಕ ಜಯ ಇದಾಗಿದೆ ಎಂದು ಬಿಜೆಪಿ ಪ್ರತಿಕ್ರಿಯಿಸಿದೆ.

ಸಂಘರ್ಷ ದೆಹಲಿಗೆ ಸ್ಥಳಾಂತರ

ಕೋಲ್ಕತ್ತ: ರಾಷ್ಟ್ರ ರಾಜಕಾರಣದ ಗಮನ ಕೇಂದ್ರವಾಗಿ ಪರಿವರ್ತಿತವಾಗಿದ್ದ ಧರಣಿಯನ್ನು ಮಮತಾ ಅವರು ಮಂಗಳವಾರ ಕೊನೆಗೊಳಿಸಿದರು. ಆದರೆ, ‘ನಮ್ಮ ಹೋರಾಟ ನಿಂತಿಲ್ಲ, ಹೋರಾಟವನ್ನು ದೆಹಲಿಗೆ ಸ್ಥಳಾಂತರಿಸುತ್ತಿದ್ದೇವೆ’ ಎಂದು ಹೇಳುವ ಮೂಲಕ ಸಂಘರ್ಷ ನಿಲ್ಲದು ಎಂಬ ಸಂದೇಶವನ್ನು ಮಮತಾ ಅವರು ಕೇಂದ್ರ ಸರ್ಕಾರಕ್ಕೆ ರವಾನಿಸಿದ್ದಾರೆ.

ಶಾರದಾ ಚಿಟ್‌ ಫಂಡ್‌ ಹಗರಣದಲ್ಲಿ ಕೋಲ್ಕತ್ತ ಪೊಲೀಸ್‌ ಕಮಿಷನರ್‌ ವಿಚಾರಣೆಗೆ ಮುಂದಾಗಿದ್ದ ಸಿಬಿಐ ವಿರುದ್ಧ ಭಾನುವಾರ ರಾತ್ರಿಯಿಂದ ಕೋಲ್ಕತ್ತದ ಮೆಟ್ರೊ ಸಿನಿಮಾ ಎದುರು ಅವರು ಆರಂಭಿಸಿದ್ದ ಧರಣಿ ಮೂರನೇ ದಿನಕ್ಕೆ ಕಾಲಿಟ್ಟಿತ್ತು.

ಸುಪ್ರೀಂ ಕೋರ್ಟ್ ಆದೇಶ ಹೊರ ಬೀಳುತ್ತಲೇ ಹೋರಾಟಕ್ಕೆ ಬೆಂಬಲ ನೀಡಿದ್ದ ವಿರೋಧ ಪಕ್ಷಗಳ ನಾಯಕರ ಜತೆ ಚರ್ಚಿ ನಡೆಸಿದ ಅವರು ಧರಣಿ ಅಂತ್ಯಗೊಳಿಸಿದರು.

ಟಿಡಿಪಿ ನಾಯಕ ಚಂದ್ರಬಾಬು ನಾಯ್ಡು, ಡಿಎಂಕೆ ರಾಜ್ಯಸಭಾ ಸದಸ್ಯೆ ಕನಿಮೊಳಿ, ಆರ್‌ಜೆಡಿ ನಾಯಕ ತೇಜಸ್ವಿ ಯಾದವ್‌ ಧರಣಿ ಸ್ಥಳಕ್ಕೆ ಭೇಟಿ ನೀಡಿದ್ದರು.

*ಸುಪ್ರೀಂ ಕೋರ್ಟ್ ಆದೇಶ ಸ್ವಾಗತಾರ್ಹ. ಇದು ಸರಿಯಾಗಿದೆ. ನಮ್ಮ ವಾದ ಸಮರ್ಥವಾಗಿದೆ. ತನಿಖೆಗೆ ಸಹಕರಿಸುವುದಿಲ್ಲ ಎಂದು ನಾವು ಹೇಳಿಯೇ ಇಲ್ಲ.

-ಮಮತಾ ಬ್ಯಾನರ್ಜಿ, ಪಶ್ಚಿಮ ಬಂಗಾಳದ ಮುಖ್ಯಮಂತ್ರಿ

* ಪೊಲಿಸ್‌ ಕಮಿಷನರ್‌ ಸೇರಿದಂತೆ ಕಾನೂನಿಗಿಂತ ದೊಡ್ಡವರು ಯಾರೂ ಇಲ್ಲ ಎಂಬ ಸತ್ಯವನ್ನು ಸುಪ್ರೀಂ ಕೋರ್ಟ್ ಆದೇಶ ಮತ್ತೊಮ್ಮೆ ಸಾಬೀತುಪಡಿಸಿದೆ.

–ರವಿಶಂಕರ್‌ ಪ್ರಸಾದ್‌, ಕೇಂದ್ರ ಸಚಿವ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT