ಲೋಕಸಭೆ ಚುನಾವಣೆ: ಠೇವಣಿಯೇ ದಕ್ಕದವರು 64 ಸಾವಿರ ಮಂದಿ

ಬುಧವಾರ, ಏಪ್ರಿಲ್ 24, 2019
27 °C
ಇಲ್ಲಿಯವರೆಗೆ 64,157 ಮಂದಿ ಇಡುಗಂಟು ಕಳೆದುಕೊಂಡಿದ್ದಾರೆ: ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಲೇ ಇದೆ

ಲೋಕಸಭೆ ಚುನಾವಣೆ: ಠೇವಣಿಯೇ ದಕ್ಕದವರು 64 ಸಾವಿರ ಮಂದಿ

Published:
Updated:

ನವದೆಹಲಿ: 1951ರಿಂದ 2014ರ ವರೆಗಿನ ಅವಧಿಯಲ್ಲಿ ನಡೆದ ಲೋಕಸಭಾ ಚುನಾವಣೆಗಳಲ್ಲಿ ಸ್ಪರ್ಧಿಸಿದ್ದ 64 ಸಾವಿರ (ಶೇ 76.88ರಷ್ಟು) ಅಭ್ಯರ್ಥಿಗಳು ಚಲಾವಣೆಯಾದ ಒಟ್ಟು ಮತಗಳಲ್ಲಿ ಆರನೇ ಒಂದರಷ್ಟು ಮತಗಳನ್ನು ಪಡೆಯಲಾಗದೆ ಠೇವಣಿ ಕಳೆದುಕೊಂಡಿದ್ದಾರೆ.

1951ನೇ ಸಾಲಿನಲ್ಲಿ ನಡೆದ ದೇಶದ ಮೊದಲ ಲೋಕಸಭಾ ಚುನಾ ವಣೆಯಲ್ಲಿ 748 ಅಭ್ಯರ್ಥಿಗಳು ಠೇವಣಿ ಕಳೆದುಕೊಂಡಿದ್ದರು.

ಆಗ ಚುನಾವಣೆಗೆ ಸ್ಪರ್ಧಿಸುವ ಸಾಮಾನ್ಯ ವರ್ಗದ ಅಭ್ಯರ್ಥಿಯು ₹500 ಹಾಗೂ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ಅಭ್ಯರ್ಥಿಯು ₹250 ಠೇವಣಿ ಇರಿಸಬೇಕಿತ್ತು.

2014ನೇ ಸಾಲಿನಲ್ಲಿ ಠೇವಣಿಯ ಮೊತ್ತ ವನ್ನು ಸಾಮಾನ್ಯ ಅಭ್ಯರ್ಥಿಗೆ ₹25ಸಾವಿರ ಹಾಗೂ ಎಸ್‌ಸಿ– ಎಸ್‌ಟಿ ಅಭ್ಯರ್ಥಿಗಳಿಗೆ ₹12,500ಕ್ಕೆ ಏರಿಸಲಾಗಿತ್ತು. ಮೊದಲ ಚುನಾವಣೆಯಲ್ಲಿ ಅಭ್ಯರ್ಥಿಗಳು ಕಳೆದುಕೊಂಡ ಠೇವಣಿ ಒಟ್ಟು ಮೊತ್ತ ₹ 4.02 ಲಕ್ಷ ಆಗಿದ್ದರೆ, 2014ರ ಚುನಾವಣೆಯಲ್ಲಿ  ಅಭ್ಯರ್ಥಿ ಗಳು ಕಳೆದುಕೊಂಡ ಠೇವಣಿಯ ರೂಪ ದಲ್ಲಿ ₹14.57 ಕೋಟಿ ಸರ್ಕಾರದ ಖಜಾನೆ ಸೇರಿದೆ.

ಈವರೆಗಿನ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಿದ್ದ 83,446 ಅಭ್ಯರ್ಥಿಗಳಲ್ಲಿ 64,157 ಮಂದಿ ಠೇವಣಿ ಕಳೆದುಕೊಂಡಿದ್ದರು. ಕೆಲವರು ಎರಡೆರಡು ಕ್ಷೇತ್ರಗಳಿಂದ ಸ್ಪರ್ಧಿಸಿ, ಎರಡೂ ಕಡೆ ಸೋತು ಎರಡು ಕ್ಷೇತ್ರಗಳಲ್ಲಿ ಕಟ್ಟಿದ್ದ ಠೇವಣಿಯನ್ನೂ ಕಳೆದುಕೊಂಡಿದ್ದಾರೆ.

ದೇಶದಲ್ಲಿ ನಡೆದ ಮೊದಲ ಮೂರು ಲೋಕಸಭಾ ಚುನಾವಣೆಗಳಲ್ಲಿ ಠೇವಣಿ ಕಳೆದುಕೊಂಡವರ ಪ್ರಮಾಣ ಶೇ 50ರೊಳಗೇ ಇತ್ತು. 1996ರಲ್ಲಿ ಗರಿಷ್ಠ (12,688 ಅಭ್ಯರ್ಥಿಗಳು, ಶೇ 90.94) ಹಾಗೂ 1957ರಲ್ಲಿ ಕನಿಷ್ಠ (496 ಮಂದಿ, ಶೇ 23.09) ಪ್ರಮಾಣದ ಅಭ್ಯರ್ಥಿಗಳು ಠೇವಣಿ ಕಳೆದುಕೊಂಡಿದ್ದರು. 2014ರಲ್ಲಿ ಶೇ 84.83ರಷ್ಟು ಅಭ್ಯರ್ಥಿಗಳು ಆರನೇ ಒಂದರಷ್ಟು ಮತಗಳನ್ನು ಪಡೆಯುವಲ್ಲಿ ವಿಫಲರಾಗಿದ್ದರು.

ಪ್ರತಿ ಚುನಾವಣೆಯಲ್ಲೂ ಠೇವಣಿ ಕಳೆದುಕೊಳ್ಳುತ್ತಿರುವವರ ಸಂಖ್ಯೆ ಏರುತ್ತಲೇ ಸಾಗುತ್ತಿರುವುದು ‘ನಿಜವಾಗಿಯೂ ಜನರು ನಮ್ಮ ಚುನಾವಣೆಗಳನ್ನು ಗಂಭೀರವಾಗಿ ಸ್ವೀಕರಿಸಿದ್ದಾರೆಯೇ’ ಎಂಬ ಚರ್ಚೆಯನ್ನು ಹುಟ್ಟುಹಾಕಿದೆ.

‘ಚುನಾವಣೆಗೆ ಸ್ಪರ್ಧಿಸುವವರಲ್ಲಿ ಅನೇಕರು  ಅವುಗಳನ್ನು ಗಂಭೀರವಾಗಿ ಸ್ವೀಕರಿಸುತ್ತಿಲ್ಲ. ಕೆಲವರು ಇತರ ಪಕ್ಷದವರೊಡನೆ ‘ವ್ಯವಹಾರ’ ನಡೆಸುವ ಉದ್ದೇಶದಿಂದ ಕಣಕ್ಕೆ ಇಳಿಯುತ್ತಾರೆ. ಇನ್ನೂ ಕೆಲವರು ‘ನಾನೂ ಸ್ಪರ್ಧಿಸಿದ್ದೆ’ ಎಂದು ಹೇಳಿಕೊಳ್ಳಲು ಸ್ಪರ್ಧಿಸುತ್ತಾರೆ’ ಎಂದು ಚುನಾವಣಾ ಆಯುಕ್ತರು ಹೇಳುತ್ತಾರೆ.

‘1951 ಹಾಗೂ 1957ರ ಲೋಕಸಭಾ ಚುನಾವಣೆಯಲ್ಲಿ ಭಾರಿ ಪ್ರಮಾಣದಲ್ಲಿ ಪಕ್ಷೇತರ ಅಭ್ಯರ್ಥಿಗಳು ಕಣಕ್ಕೆ ಇಳಿದಿದ್ದರು. ಇಂಥವರಲ್ಲಿ ಹೆಚ್ಚಿನವರಿಗೆ ಗೆದ್ದು ಸಂಸದನಾಗಬೇಕೆಂಬ ಇಚ್ಛೆಯಾಗಲಿ, ಜನರ ಮತಗಳನ್ನು ಗಳಿಸಬಲ್ಲಂಥ ವ್ಯಕ್ತಿತ್ವವಾಗಲಿ ಇರಲಿಲ್ಲ’ ಎಂದು ದೇಶದ ಮೊದಲ ಮುಖ್ಯ ಚುನಾವಣಾ ಆಯುಕ್ತ ಸುಕುಮಾರ ಸೆನ್‌ ಬರೆದಿದ್ದಾರೆ.

‘1957ರ ನಂತರದ ಚುನಾವಣೆಗಳಲ್ಲೂ ಇದು ಮುಂದುವರಿದಿದೆ. ಇಂಥವರು ಮತದಾರರಲ್ಲಿ ಗೊಂದಲ ಸೃಷ್ಟಿಸಿ ಗಂಭೀರ ಅಭ್ಯರ್ಥಿಗಳಿಗೆ ತೊಂದರೆ ಉಂಟುಮಾಡಿದ್ದಿದೆ. ಜೊತೆಗೆ ಚುನಾವಣೆ ನಡೆಸುವಲ್ಲಿ ಆಡಳಿತಕ್ಕೆ ಇನ್ನಿಲ್ಲದ ಸಂಕಷ್ಟ ಉಂಟುಮಾಡುತ್ತಾರೆ’ ಎಂದು 1965ರಲ್ಲಿ ಮುಖ್ಯ ಚುನಾವಣಾ ಆಯುಕ್ತರಾಗಿದ್ದ ಕೆ.ವಿ.ಕೆ. ಸುಂದರಂ ಹೇಳುತ್ತಾರೆ.

‘1971ರ ಚುನಾವಣೆಯಲ್ಲಿ ಪಕ್ಷೇತರರಾಗಿ ಸ್ಪರ್ಧಿಸಿದ್ದ ಅಭ್ಯರ್ಥಿಗಳಲ್ಲಿ ಹೆಚ್ಚಿನವರು ಸೋಲು ಕಂಡಿದ್ದರು. ಮತದಾರರು ಪಕ್ಷೇತರ ಅಭ್ಯರ್ಥಿಗಳನ್ನು ಇಷ್ಟಪಡುವುದಿಲ್ಲ ಎಂಬುದು ಇದರಿಂದ ಸ್ಪಷ್ಟವಾಗುತ್ತದೆ’ ಎಂದು ಆ ಕಾಲದಲ್ಲಿ ಮುಖ್ಯ ಚುನಾವಣಾಧಿಕಾರಿಯಾಗಿದ್ದ ಎಸ್‌.ಪಿ. ಸೆನ್‌ ಹೇಳಿದ್ದರು.

ಪಕ್ಷೇತರರು ಮಾತ್ರವಲ್ಲ ಪಕ್ಷಗಳ ಅಧಿಕೃತ ಅಭ್ಯರ್ಥಿಗಳಾಗಿ ಕಣಕ್ಕಿಳಿದು, ಠೇವಣಿ ಕಳೆದುಕೊಳ್ಳುತ್ತಿರುವವರ ಸಂಖ್ಯೆಯೂ ದೊಡ್ಡದಾಗಿಯೇ ಇದೆ. ಪಕ್ಷಗಳು ಅಭ್ಯರ್ಥಿ ಆಯ್ಕೆಯ ವಿಚಾರದಲ್ಲಿ ಎಚ್ಚರಿಕೆ ವಹಿಸದಿದ್ದರೆ ಅಂಥ ಪಕ್ಷ ಮತ್ತು ಅಭ್ಯರ್ಥಿಗೆ ಪಾಠ ಕಲಿಸಲು ಮತದಾರರು ಹಿಂಜರಿಯುವುದಿಲ್ಲ ಎಂಬುದು ಇದರಿಂದ ಸ್ಪಷ್ಟವಾಗುತ್ತದೆ’ ಎಂದೂ ಸೆನ್‌ ಹೇಳಿದ್ದರು.

ಬರಹ ಇಷ್ಟವಾಯಿತೆ?

 • 6

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !