ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಐದು ದಶಕದಲ್ಲಿ ರಾಜ್ಯಸಭೆಯಲ್ಲಿ ಮಾತನಾಡಲು ಒಂದು ಗಂಟೆಯೂ ಸಿಕ್ಕಿಲ್ಲ’

ನಾಗಾಲ್ಯಾಂಡ್‌ ಸಂಸದ ಕೆ.ಜಿ. ಕೆನ್‌ಯೆ ಅಸಮಾಧಾನ
Last Updated 26 ಜೂನ್ 2019, 20:01 IST
ಅಕ್ಷರ ಗಾತ್ರ

ನವದೆಹಲಿ: ‘ಕಳೆದ 55 ವರ್ಷಗಳಲ್ಲಿ ನಾಗಾಲ್ಯಾಂಡ್‌ನ ಸಂಸದರಿಗೆ ರಾಜ್ಯಸಭೆಯಲ್ಲಿ ಮಾತನಾಡಲು ಒಟ್ಟಾರೆ ಒಂದು ಗಂಟೆಯ ಅವಧಿಯೂ ಸಿಕ್ಕಿಲ್ಲ. ನಮ್ಮ ಸಮಸ್ಯೆಗಳನ್ನು ಇಲ್ಲಿ ಹೇಳಿಕೊಳ್ಳಬೇಕಲ್ಲದೆ ಗಡಿ ದಾಟಿ ಹೋಗಿ ಹೇಳಲು ಸಾಧ್ಯವೇ...?’

ರಾಜ್ಯಸಭೆಯಲ್ಲಿ ಮಾತನಾಡಲು ತಮಗೆ ಇನ್ನೂ ಒಂದು ನಿಮಿಷ ಹೆಚ್ಚುವರಿ ಕಾಲಾವಕಾಶ ನೀಡಬೇಕು ಎಂದು ಅಧ್ಯಕ್ಷ ವೆಂಕಯ್ಯ ನಾಯ್ಡು ಅವರನ್ನು ವಿನಂತಿಸಲು ನಾಗಾಲ್ಯಾಂಡ್‌ ಸಂಸದ ಕೆ.ಜಿ. ಕೆನ್‌ಯೆ ಈ ಮಾತುಗಳನ್ನು ಬುಧವಾರ ಹೇಳಿದರು. ಸಂಸದರ ಈ ಮಾತುಗಳು ನಾಯ್ಡು ಅವರಲ್ಲೂ ಅಚ್ಚರಿ ಮೂಡಿಸಿದವು.

ನಾಗಾ ಪೀಪಲ್ಸ್‌ ಫ್ರೆಂಟ್‌ನ ಮಹಾ ಕಾರ್ಯದರ್ಶಿಯೂ ಆಗಿರುವ ಕೆನ್‌ಯೆ ಅವರಿಗೆ ಮಾತನಾಡಲು ಬುಧವಾರ ಮೂರು ನಿಮಿಷಗಳ ಕಾಲಾವಕಾಶ ನೀಡಲಾಗಿತ್ತು. ಅದು ಮುಗಿಯುತ್ತಿದ್ದಂತೆ ಮಾತು ಮುಗಿಸುವಂತೆ ನಾಯ್ಡು ಸೂಚಿಸಿದರು. ಆದರೂ ಅವರು ಮಾತು ಮುಂದುವರಿಸಿದರು. ಅರ್ಧ ನಿಮಿಷದ ಬಳಿಕ ಮಾತು ಮುಗಿಸಲು ಮತ್ತೆನಾಯ್ಡು ಸೂಚನೆ ನೀಡಿದರು. ಆ ಸಂದರ್ಭದಲ್ಲಿ ಕೆನ್‌ಯೆ ತಮ್ಮ ಅಳಲು ತೋಡಿಕೊಂಡರು.

‘ರಾಷ್ಟ್ರಪತಿ ಅವರು ತಮ್ಮ ಭಾಷಣದಲ್ಲಿ ಪ್ರಾದೇಶಿಕ ಅಸಮಾನತೆಯ ಬಗ್ಗೆ ಉಲ್ಲೇಖ ಮಾಡಿದ್ದಾರೆ. ಸದನದಲ್ಲಿ ಮಾತನಾಡಲು ಸಮಯ ನಿಗದಿ ಮಾಡುವ ವಿಚಾರಕ್ಕೂ ಅದು ಅನ್ವಯವಾಗುತ್ತಿದೆ. ಕಳೆದ 55 ವರ್ಷಗಳಲ್ಲಿ ನಮ್ಮ ರಾಜ್ಯವನ್ನು ಪ್ರತಿನಿಧಿಸಿದ ಸಂಸದರಿಗೆ ಒಟ್ಟಾಗಿ ಒಂದು ಗಂಟೆಗಿಂತ ಹೆಚ್ಚು ಕಾಲಾವಕಾಶ ಸಿಕ್ಕಿರಲಾರದು’ ಎಂದರು. ಈ ಮಾತಿನಿಂದ ಅಚ್ಚರಿಗೊಂಡ ನಾಯ್ಡು ಅವರು ಕೆನ್‌ಯೆ ಅವರಿಗೆ ಹೆಚ್ಚುವರಿಯಾಗಿ ಒಂದು ನಿಮಿಷ ನೀಡಿದರು.

‘ನಿಮಗೆ ಯಾಕೆ ಅವಕಾಶ ನೀಡಿಲ್ಲ ಎಂಬುದು ತಿಳಿದಿಲ್ಲ. ಆದರೆ ಈ ವಿಚಾರದಿಂದ ನಾನು ಅಚ್ಚರಿಗೊಂಡಿದ್ದೇನೆ. ನಿಮ್ಮ ಮಾತಿನ ಖಚಿತವೇ ಎಂಬುದನ್ನು ತಿಳಿಯಲು ನಾನು ಸದನದ ದಾಖಲೆಗಳನ್ನು ಪರಿಶೀಲಿಸುತ್ತೇನೆ’ ಎಂದು ಆ ಬಳಿಕ ನಾಯ್ಡು ಹೇಳಿದರು.

ಸದನದಲ್ಲಿ ಪಕ್ಷದ ಪ್ರತಿನಿಧಿಗಳ ಸಂಖ್ಯೆಗೆ ಅನುಗುಣವಾಗಿ ಮಾತನಾಡಲು ಸಮಯವನ್ನು ನಿಗದಿ ಮಾಡಲಾಗುತ್ತದೆ. ಇದರಿಂದ ಸಣ್ಣ ಪಕ್ಷಗಳವರು ಮತ್ತು ಪಕ್ಷೇತರ ಅಭ್ಯರ್ಥಿಗಳಿಗೆ ಮಾತನಾಡಲು ತುಂಬ ಕಡಿಮೆ ಸಮಯಾವಕಾಶ ಲಭಿಸುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT