ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

3 ತಿಂಗಳಲ್ಲಿ 9 ರಾಜ್ಯಪಾಲರ ಅವಧಿ ಅಂತ್ಯ

ಸುಷ್ಮಾ ಸ್ವರಾಜ್, ಸುಮಿತ್ರಾ ಮಹಾಜನ್‌ ಸೇರಿ ಹಿರಿಯ ಮುಖಂಡರ ಹೆಸರು ಪರಿಗಣನೆ?
Last Updated 13 ಜೂನ್ 2019, 20:15 IST
ಅಕ್ಷರ ಗಾತ್ರ

ನವದೆಹಲಿ: ಕರ್ನಾಟಕ, ಪಶ್ಚಿಮ ಬಂಗಾಳ, ಉತ್ತರ ಪ್ರದೇಶ ಸೇರಿದಂತೆ ಒಂಬತ್ತು ರಾಜ್ಯಗಳಲ್ಲಿ ರಾಜ್ಯಪಾಲರ ಐದು ವರ್ಷಗಳ ಸೇವಾವಧಿ ಮುಂದಿನ ಮೂರು ತಿಂಗಳಲ್ಲಿ ಮುಕ್ತಾಯವಾಗಲಿದೆ.

ಈ ಹಿನ್ನೆಲೆಯಲ್ಲಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಸುಷ್ಮಾ ಸ್ವರಾಜ್‌, ಸುಮಿತ್ರಾ ಮಹಾಜನ್‌ ಸೇರಿದಂತೆ ಬಿಜೆಪಿಯ ಹಿರಿಯ ಮುಖಂಡರನ್ನು ತೆರವಾಗುವ ಈ ಸ್ಥಾನಗಳಿಗೆ ಪರಿಗಣಿಸಬಹುದು ಎಂದು ಹೇಳಲಾಗಿದೆ.

ಮೋದಿ ಸರ್ಕಾರ ಒಂದು ವೇಳೆ ಆಂಧ್ರಪ್ರದೇಶ, ತೆಲಂಗಾಣ ರಾಜ್ಯಗಳಿಗೆ ಪ್ರತ್ಯೇಕವಾಗಿ ಹಾಗೂ ಛತ್ತೀಸಗಡ, ಮಿಜೋರಾಂ ರಾಜ್ಯಗಳಿಗೂ ರಾಜ್ಯಪಾಲರನ್ನು ನೇಮಿಸಲು ನಿರ್ಧರಿಸಿದರೆ ಒಟ್ಟಾರೆ 12 ಮಂದಿಗೆರಾಜ್ಯಪಾಲರಾಗುವ ಅವಕಾಶ ಲಭಿಸಲಿದೆ.

ಆಗಸ್ಟ್‌ ತಿಂಗಳಿನಲ್ಲಿ ಅವಧಿಯನ್ನು ಪೂರೈಸಲಿರುವ, 70 ವರ್ಷ ವಯಸ್ಸಿನ ಕೇರಳದ ರಾಜ್ಯಪಾಲ ಪಿ.ಸದಾಶಿವಂ ಸೇರಿದಂತೆ ಕೆಲವರ ಸೇವೆಯನ್ನು ಸರ್ಕಾರ ಮುಂದುವರಿಸಲಿದೆಯೇ ಎಂಬುದು ಸದ್ಯಕ್ಕೆ ಸ್ಪಷ್ಟವಾಗಿಲ್ಲ.

ಪಶ್ಚಿಮ ಬಂಗಾಳದ ರಾಜ್ಯಪಾಲ 84 ವರ್ಷ ವಯಸ್ಸಿನ ಕೇಸರಿನಾಥ ತ್ರಿಪಾಠಿ ಅವರ ಅವಧಿಯು ಜುಲೈ ತಿಂಗಳಲ್ಲಿ, ಕರ್ನಾಟಕದ ರಾಜ್ಯಪಾಲ 80 ವರ್ಷ ವಯಸ್ಸಿನ ವಜುಭಾಯಿ ವಾಲಾ ಅವರ ಅವಧಿ ಆಗಸ್ಟ್‌ ತಿಂಗಳಲ್ಲಿಪೂರ್ಣಗೊಳ್ಳಲಿದೆ.

ಈ ಎರಡೂ ರಾಜ್ಯಗಳಲ್ಲಿ ಪ್ರಸ್ತುತ ರಾಜಕೀಯ ಪರಿಸ್ಥಿತಿಯ ಹಿನ್ನೆಲೆಯಲ್ಲಿ ನೂತನ ರಾಜ್ಯಪಾಲರ ನೇಮಕ ಪ್ರಕ್ರಿಯೆ ಗಮನಸೆಳೆದಿದೆ.

ನಾಲ್ಕು ರಾಜ್ಯಗಳಲ್ಲಿ ರಾಜ್ಯಪಾಲರ ಅವಧಿ ಜುಲೈ ಮತ್ತು ಆಗಸ್ಟ್‌ ತಿಂಗಳಲ್ಲಿ ಮುಗಿದರೆ, ಒಬ್ಬರ ಸೇವಾವಧಿ ಸೆಪ್ಟೆಂಬರ್‌ ತಿಂಗಳಲ್ಲಿ ಪೂರ್ಣಗೊಳ್ಳಲಿದೆ. 2020ರಲ್ಲಿ ಇತರ ನಾಲ್ವರು ರಾಜ್ಯಪಾಲರ ಅವಧಿ ಅಂತ್ಯಗೊಳ್ಳಲಿದೆ.

ಮಾಜಿ ಸಚಿವೆ ಸುಷ್ಮಾ ಸ್ವರಾಜ್‌, ಲೋಕಸಭೆ ಮಾಜಿ ಸ್ಪೀಕರ್ ಸುಮಿತ್ರಾ ಮಹಾಜನ್‌ ಅಲ್ಲದೆ ಮಾಜಿ ಸಚಿವೆ ಉಮಾ ಭಾರತಿ, ಕೇರಳದ ಬಿಜೆಪಿ ನಾಯಕ ಕೆ.ರಾಜಶೇಖರನ್‌ ಹೆಸರನ್ನು ಮೋದಿ ನೇತೃತ್ವದ ಸರ್ಕಾರ ಪರಿಗಣಿಸುತ್ತಿದೆ ಎನ್ನಲಾಗಿದೆ.

ರಾಜಶೇಖರನ್‌ ಅವರು ಲೋಕಸಭೆ ಚುನಾವಣೆಗೆ ಸ್ಪರ್ಧಿಸಲು ರಾಜ್ಯಪಾಲರ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಸುಷ್ಮಾ ಸ್ವರಾಜ್‌ ಆಂಧ್ರಪ್ರದೇಶ ರಾಜ್ಯಪಾಲರಾಗಿ ನೇಮಕವಾಗಿದ್ದಾರೆ ಎಂಬ ವದಂತಿ ಇತ್ತು. ಟ್ವೀಟ್ ಮೂಲಕ ಸ್ವತಃ ಸುಷ್ಮಾಇದನ್ನು ನಿರಾಕರಿಸಿದ್ದರು.

ಪ್ರಸ್ತುತ ಇರುವ ರಾಜ್ಯಪಾಲರ ಪೈಕಿ ರಾಜಸ್ಥಾನದ ರಾಜ್ಯಪಾಲ ಕಲ್ಯಾಣ್‌ ಸಿಂಗ್‌ ಹಿರಿಯರು. ಅವರಿಗೆ 87 ವರ್ಷ ವಯಸ್ಸು. ನಂತರದ ಸ್ಥಾನದಲ್ಲಿ ಉತ್ತರ ಪ್ರದೇಶದ ರಾಜ್ಯಪಾಲ, 85 ವರ್ಷ ವಯಸ್ಸಿನ ರಾಮ್‌ ನಾಯಕ್‌ ಇದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT