ದೆಹಲಿಗೆ ರಾಜ್ಯದ ಸ್ಥಾನಮಾನ: ಎಎಪಿ ಚುನಾವಣಾ ಅಸ್ತ್ರ

ಭಾನುವಾರ, ಮಾರ್ಚ್ 24, 2019
34 °C
ಬಿಜೆಪಿ ಕಚೇರಿಗೆ ಮುತ್ತಿಗೆ

ದೆಹಲಿಗೆ ರಾಜ್ಯದ ಸ್ಥಾನಮಾನ: ಎಎಪಿ ಚುನಾವಣಾ ಅಸ್ತ್ರ

Published:
Updated:
Prajavani

ನವದೆಹಲಿ : ಕೇಂದ್ರಾಡಳಿತ ಪ್ರದೇಶವಾಗಿರುವ ದೆಹಲಿಗೆ ರಾಜ್ಯ ಸ್ಥಾನಮಾನ ನೀಡುವ ಬೇಡಿಕೆ ಮುಂದಿಟ್ಟುಕೊಂಡು ಆಡಳಿತಾರೂಢ ಆಮ್‌ ಆದ್ಮಿ ಪಕ್ಷ (ಎಎಪಿ) ಲೋಕಸಭಾ ಚುನಾವಣೆ ಪ್ರಚಾರಕ್ಕೆ ಚಾಲನೆ ನೀಡಿದೆ.

ದೆಹಲಿಗೆ ರಾಜ್ಯದ ಸ್ಥಾನಮಾನ ನೀಡುವಂತೆ ಒತ್ತಾಯಿಸಿ ಎಎಪಿ ಕಾರ್ಯಕರ್ತರು ಭಾನುವಾರ ಬಿಜೆಪಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು. ಈ ಕುರಿತು ನಿಲುವು ಪ್ರಕಟಿಸುವಂತೆ ಪ್ರತಿಭಟನಕಾರರು ಒತ್ತಾಯಿಸಿದರು. ಕಾಂಗ್ರೆಸ್‌ ಕಚೇರಿಯ ಮುಂದೆಯೂ ಇದೇ ರೀತಿಯ ಪ್ರತಿಭಟನೆಯನ್ನು ಎಎಪಿ ಸೋಮವಾರ ನಡೆಸಲಿದೆ.
ಮೂರು ಹಂತದ ಪ್ರಚಾರ: ಲೋಕಸಭಾ ಚುನಾವಣೆಗೆ ಸಜ್ಜಾಗಿರುವ ಎಎಪಿ ಮೂರು ಹಂತದಲ್ಲಿ ಪ್ರಚಾರ ಕಾರ್ಯಕ್ರಮಗಳನ್ನು ರೂಪಿಸಿದೆ. ದೆಹಲಿಗೆ ಸ್ವತಂತ್ರ ರಾಜ್ಯದ ಸ್ಥಾನಮಾನ ಬೇಡಿಕೆಯನ್ನೇ ಪ್ರಮುಖ ಚುನಾವಣಾ ಅಸ್ತ್ರವನ್ನಾಗಿ ಬಳಸುವ ಮೂಲಕ  ಕಾಂಗ್ರೆಸ್‌ ಮತ್ತು ಬಿಜೆಪಿಯನ್ನು ಹಣಿಯುವ ತಂತ್ರ ಹೆಣದಿದೆ. 

ಮೊದಲ ಹಂತದಲ್ಲಿ ಸಾವಿರಕ್ಕೂ ಹೆಚ್ಚು ಕಾರ್ಯಕರ್ತರ ತಂಡಗಳು ಮನೆ, ಮನೆಗೆ ತೆರಳಿ ಪ್ರಚಾರ ನಡೆಸಲಿವೆ. ಪ್ರತ್ಯೇಕ ರಾಜ್ಯಕ್ಕೆ ಬೇಡಿಕೆ ಮಂಡಿಸುತ್ತಿರುವ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್‌ ಅವರ ಪತ್ರವನ್ನು ಮತದಾರರಿಗೆ ತಲುಪಿಸುವ ಯೋಜನೆ ರೂಪಿಸಲಾಗಿದೆ.

ಪ್ರತಿ ಕ್ಷೇತ್ರದಲ್ಲಿ 20 ಸಣ್ಣ ಪ್ರಚಾರ ರಥಗಳು ಎಲ್‌ಇಡಿ ಪರದೆಗಳಲ್ಲಿ ಕೇಜ್ರಿವಾಲ್‌  ಭಾಷಣ, ಸರ್ಕಾರದ ಯೋಜನೆ, ಸಾಧನೆ ಬಣ್ಣಿಸುವ ಹಾಡುಗಳನ್ನು ಪ್ರದರ್ಶಿಸಲಾಗುವುದು. ಈಶಾನ್ಯ ದೆಹಲಿ ಕ್ಷೇತ್ರದ ಅಭ್ಯರ್ಥಿ ದಿಲೀಪ್‌ ಪಾಂಡೆ ಅವರು ಈ ಎಲ್ಲ ಹಾಡುಗಳನ್ನು ಸ್ವತಃ ತಾವೇ ರಚಿಸಿ, ಧ್ವನಿಯನ್ನೂ ನೀಡಿದ್ದಾರೆ.

ಎರಡನೇ ಹಂತದಲ್ಲಿ ಎಎಪಿ ಶಾಸಕರು ತಮ್ಮ ಕ್ಷೇತ್ರಗಳಲ್ಲಿ ಪ್ರಚಾರ ಸಭೆ ನಡೆಸಲಿದ್ದಾರೆ. ಎಲ್ಲ ಶಾಸಕರು ಒಟ್ಟು 1,500ಕ್ಕೂ ಹೆಚ್ಚು ಸಭೆ, ಸಮಾರಂಭ ನಡೆಸಲಿದ್ದಾರೆ. ಇದರ ಜತೆಗೆ ಕೇಜ್ರಿವಾಲ್‌ ರ‍್ಯಾಲಿ ನಡೆಸಲಿದ್ದಾರೆ.

ಮೂರನೇ ಹಂತದಲ್ಲಿ ಪಕ್ಷದ ತಾರಾ ಪ್ರಚಾರಕರು ಕಣಕ್ಕಿಳಿಯಲಿದ್ದಾರೆ. ರ‍್ಯಾಲಿ ಮತ್ತು ಸಭೆ, ಸಮಾರಂಭಗಳ ಮೂಲಕ ಮತದಾರರನ್ನು ತಲುಪುವ ಯತ್ನ ಮಾಡಲಿದ್ದಾರೆ.

ದೆಹಲಿಗೆ ರಾಜ್ಯ ಸ್ಥಾನಮಾನ ಕುರಿತು ನಿಲುವು ಸ್ಪಷ್ಟಪಡಿಸುವಂತೆ ಎಎಪಿ ಕಾರ್ಯಕರ್ತರು ಬಿಜೆಪಿ ಮತ್ತು ಕಾಂಗ್ರೆಸ್‌ ನಾಯಕರ ನಿವಾಸ, ಕಚೇರಿಗಳಿಗೆ ಮುತ್ತಿಗೆ ಹಾಕಲಿದ್ದಾರೆ ಎಂದು ಎಎಪಿ ಸಂಚಾಲಕ  ಗೋಪಾಲ್‌ ರಾಯ್ ತಿಳಿಸಿದ್ದಾರೆ.

ದೆಹಲಿಯಲ್ಲಿ ಕಾಂಗ್ರೆಸ್‌ ಎದುರಾಳಿ, ಎಎಪಿ ಲೆಕ್ಕಕ್ಕಿಲ್ಲ: ಬಿಜೆಪಿ

ನವದೆಹಲಿ (ಪಿಟಿಐ): ದೆಹಲಿಯ ಏಳು ಲೋಕಸಭಾ ಕ್ಷೇತ್ರಗಳಲ್ಲಿ ಕಾಂಗ್ರೆಸ್‌ ಪಕ್ಷ ತನ್ನ ನೇರ ಎದುರಾಳಿಯೇ ಹೊರತು ಆಮ್‌ ಆದ್ಮಿ ಪಕ್ಷ (ಎಎಪಿ) ಅಲ್ಲ ಎಂದು ಬಿಜೆಪಿ ಹೇಳಿದೆ.

ಕೇಂದ್ರದಲ್ಲಿ ಸರ್ಕಾರ ರಚನೆ ದೃಷ್ಟಿಯಲ್ಲಿಟ್ಟುಕೊಂಡು ಜನರು ಮತ ಹಾಕುತ್ತಾರೆ. ಹೀಗಾಗಿ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್‌ ನೇತೃತ್ವದ ಎಎಪಿ ಮೂರನೇ ಸ್ಥಾನಕ್ಕೆ ಕುಸಿಯುತ್ತದೆ ಎಂದು ಕೇಂದ್ರ ಸಚಿವ ವಿಜಯ್‌ ಗೋಯಲ್‌ ಅಭಿಪ್ರಾಯಪಟ್ಟಿದ್ದಾರೆ.

ದೆಹಲಿಯಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್‌ ನಡುವೆ ನೇರ ಸ್ಪರ್ಧೆ ಇದ್ದು, ಎಎಪಿ ಲೆಕ್ಕಕ್ಕಿಲ್ಲ. ಎಲ್ಲ ಏಳು ಕ್ಷೇತ್ರಗಳಲ್ಲಿಯೂ ಬಿಜೆಪಿ ಜಯ ಸಾಧಿಸಲಿದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ದೆಹಲಿ ಜನರ ನಿರೀಕ್ಷೆಗಳಿಗೆ ಸ್ಪಂದಿಸಲು ವಿಫಲವಾಗಿರುವ ಎಎಪಿ ದೆಹಲಿ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಹೀನಾಯವಾಗಿ ಸೋತಿದೆ. ಹೀಗಾಗಿ ಏಕಾಂಗಿಯಾಗಿ ಸ್ಪರ್ಧಿಸುವ ಆತ್ಮವಿಶ್ವಾಸ ಆ ಪಕ್ಷಕ್ಕೆ ಉಳಿದಿಲ್ಲ ಎಂದರು.

2014ರ ಲೋಕಸಭಾ ಚುನಾವಣೆಯಲ್ಲಿ ದೆಹಲಿಯ ಎಲ್ಲ ಏಳು ಕ್ಷೇತ್ರಗಳಲ್ಲಿ ಬಿಜೆಪಿ ಅಭ್ಯರ್ಥಿಗಳು ಜಯ ಸಾಧಿಸಿದ್ದರು.

 

ಪ್ರಧಾನಿ ನರೇಂದ್ರ ಮೋದಿ ಅವರ ಸರ್ವಾಧಿಕಾರದ ಕಪಿಮುಷ್ಠಿಯಿಂದ ಬಿಡುಗಡೆ ಪಡೆಯಲು ದೆಹಲಿ ಸ್ವತಂತ್ರ ರಾಜ್ಯವಾಗುವುದೊಂದೇ ದಾರಿ
ಗೋಪಾಲ್‌ ರಾಯ್‌, ಎಎಪಿ ಸಂಚಾಲಕ 

ಬರಹ ಇಷ್ಟವಾಯಿತೆ?

 • 3

  Happy
 • 1

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !