ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬ್ಯಾಂಕುಗಳ ಬಿಕ್ಕಟ್ಟು: ಅಭಿಜಿತ್‌ ಬ್ಯಾನರ್ಜಿ ಕಳವಳ

Last Updated 22 ಅಕ್ಟೋಬರ್ 2019, 18:04 IST
ಅಕ್ಷರ ಗಾತ್ರ

ನವದೆಹಲಿ: ಅರ್ಥಶಾಸ್ತ್ರದಲ್ಲಿ ಈ ಬಾರಿಯ ನೊಬೆಲ್‌ ಪುರಸ್ಕಾರಕ್ಕೆ ಪಾತ್ರರಾದ ಭಾರತ ಸಂಜಾತ ಅಮೆರಿಕನ್‌ ಪ್ರಜೆ ಅಭಿಜಿತ್‌ ಬ್ಯಾನರ್ಜಿ ಅವರು ಭಾರತದ ಬ್ಯಾಂಕಿಂಗ್‌ ಕ್ಷೇತ್ರದ ಬಿಕ್ಕಟ್ಟಿನ ಬಗ್ಗೆ ಭಾರಿ ಕಳವಳ ವ್ಯಕ್ತಪಡಿಸಿದ್ದಾರೆ. ಈ ಕ್ಷೇತ್ರದಲ್ಲಿ ಕ್ರಾಂತಿಕಾರಕ ಬದಲಾವಣೆ ಬೇಕಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

‘ತನಿಖೆಯ ಭೀತಿಯಿಂದಾಗಿಬ್ಯಾಂಕಿಂಗ್ ವ್ಯವಸ್ಥೆಗೆ ಲಕ್ವ ಹೊಡೆದಂತಾಗಿದೆ. ಇದರ ಪರಿಣಾಮವಾಗಿ ವಸೂಲಾಗದ ಸಾಲವನ್ನು ಅಡಗಿಸಿಡುವ ಪರಿಪಾಟ ಉಂಟಾಗುತ್ತದೆ. ಅದು ಇನ್ನೂ ಹೆಚ್ಚಿನ ಸಮಸ್ಯೆಗೆ ಕಾರಣವಾಗುತ್ತದೆ. ಬ್ಯಾಂಕುಗಳಲ್ಲಿ ಸರ್ಕಾರದ ಪಾಲುಶೇ 50ಕ್ಕಿಂತ ಕೆಳಗೆ ಬರಬೇಕು. ಅದರಿಂದಾಗಿ ಬ್ಯಾಂಕುಗಳ ಮೇಲೆ ಕೇಂದ್ರ ಜಾಗೃತಿ ಆಯೋಗದ (ಸಿ.ವಿ.ಸಿ) ನಿಯಂತ್ರಣ ತಪ್ಪುತ್ತದೆ. ಸಿ.ವಿ.ಸಿಯ ನಿಯಂತ್ರಣವೇ ಬ್ಯಾಂಕುಗಳಿಗೆ ಲಕ್ವ ಹೊಡೆಯಲು ಕಾರಣ’ ಎಂದು ಅವರು ಹೇಳಿದ್ದಾರೆ.

‘ಆಯುಷ್ಮಾನ್‌’ಗೆ ಮೆಚ್ಚುಗೆ: ‘ಆಯುಷ್ಮಾನ್‌ ಭಾರತ ಯೋಜನೆ’ ಬಗ್ಗೆ ಅವರು ಮೆಚ್ಚುಗೆ ಸೂಚಿಸಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರನ್ನು ಮಂಗಳವಾರ ಭೇಟಿಯಾದ ಬಳಿಕ ಅವರು ಈ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

‘ಆಸ್ಪತ್ರೆ ವೆಚ್ಚಗಳಿಂದಾಗಿ ಇಡೀ ಕುಟುಂಬವೇ ಕುಸಿಯುವುದನ್ನು ತಡೆ
ಯುವಂತಹ ಮಹತ್ವದ ಕೆಲಸವನ್ನು ಈ ಯೋಜನೆ ಮಾಡುತ್ತದೆ. ಕುಟುಂಬದ ಯಾರೋ ಒಬ್ಬರಿಗೆ ಅನಾರೋಗ್ಯ ಉಂಟಾದ ಕಾರಣಕ್ಕೆ ಆ ಕುಟುಂಬವು ಎಲ್ಲವನ್ನೂ ಕಳೆದುಕೊಳ್ಳುವ ಸ್ಥಿತಿಗೆ ಬರುವುದನ್ನು ತಪ್ಪಿಸಲು ದಾರಿ ಹುಡುಕಿಕೊಳ್ಳಲೇಬೇಕು’ ಎಂದು ಅಭಿಜಿತ್‌ ಹೇಳಿದ್ದಾರೆ.

ಬಡ ಮತ್ತು ಕಡಿಮೆ ಆದಾಯದ ಸುಮಾರು 10 ಕೋಟಿ ಕುಟುಂಬಗಳಿಗೆ ₹5 ಲಕ್ಷವರೆಗೆ ಆರೋಗ್ಯ ವಿಮೆ ಒದಗಿಸುವುದು ಯೋಜನೆ ಉದ್ದೇಶ.

‘ಮೋದಿ ವಿರೋಧಿ ಹೇಳಿಕೆಗೆ ಯತ್ನ’

ಮೋದಿ ಜತೆಗಿನ ಸಂವಹನ ‘ವಿಶಿಷ್ಟ ಅನುಭವ’ ಎಂದು ಅಭಿಜಿತ್‌ ಬಣ್ಣಿಸಿದ್ದಾರೆ. ‘ಮೋದಿ ವಿರೋಧಿ ಹೇಳಿಕೆ ನೀಡುವಂತೆ ಮಾಧ್ಯಮದವರು ಹೇಗೆ ನನ್ನನ್ನು ಬಲೆಗೆ ಬೀಳಿಸಬಹುದು ಎಂದು ಅವರು ಜೋಕ್‌ ಮಾಡಿದರು. ಅವರು ಟಿ.ವಿ. ನೋಡುತ್ತಿದ್ದರು. ಅವರು ನಿಮ್ಮನ್ನೆಲ್ಲ ನೋಡುತ್ತಿದ್ದಾರೆ. ನೀವು ಏನು ಮಾಡಲು ಯತ್ನಿಸುತ್ತಿದ್ದೀರಿ ಎಂಬುದೂ ಅವರಿಗೆ ಗೊತ್ತಿದೆ’ ಎಂದು ಮೋದಿ ಜತೆಗಿನ ಮಾತುಕತೆಯ ಬಗ್ಗೆ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದರು.

‘ಅಭಿಜಿತ್‌ ಜತೆಗಿನ ಮಾತುಕತೆ ಅತ್ಯುತ್ತಮವಾಗಿತ್ತು. ಮನುಷ್ಯನನ್ನು ಸಶಕ್ತಗೊಳಿಸುವ ಬಗ್ಗೆ ಅವರ ಕಾಳಜಿ ಸ್ಪಷ್ಟವಾಗಿ ಕಾಣಿಸುವಂತಿದೆ’ ಎಂದು ಮಾತುಕತೆಯ ಬಳಿಕ ಮೋದಿ ಅವರು ಟ್ವೀಟ್‌ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT