ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆರ್‌.ಆರ್.ನಗರ: ಶೇ 53ಕ್ಕಿಂತ ಹೆಚ್ಚು ಮತದಾನ

ಮುಂದೂಡಿಕೆಯಾಗಿದ್ದ ಚುನಾವಣೆ, ಇದೇ 31ರಂದು ಮತಎಣಿಕೆ
Last Updated 28 ಮೇ 2018, 19:47 IST
ಅಕ್ಷರ ಗಾತ್ರ

ಬೆಂಗಳೂರು: ರಾಜರಾಜೇಶ್ವರಿ ನಗರ ವಿಧಾನಸಭಾ ಕ್ಷೇತ್ರದಲ್ಲಿ ಸೋಮವಾರ ನಡೆದ ಚುನಾವಣೆಯಲ್ಲಿ ಶೇ 53ಕ್ಕಿಂತ ಹೆಚ್ಚು ಪ್ರಮಾಣದಲ್ಲಿ ಮತದಾನವಾಗಿದೆ. ಇದೇ 31ರಂದು ಮತ ಎಣಿಕೆ ನಡೆಯಲಿದೆ.

ಜಾಲಹಳ್ಳಿಯ ಎಸ್‌ಎಲ್‌ವಿ ಅಪಾರ್ಟ್‌ಮೆಂಟ್‌ನಲ್ಲಿ ಸುಮಾರು 10,000 ಕ್ಕೂ ಹೆಚ್ಚು ಮತದಾರರ ಗುರುತಿನ ಚೀಟಿ ಹಾಗೂ ಟ್ರಕ್‌ನಲ್ಲಿ ₹95 ಲಕ್ಷ ಹಣ ಪತ್ತೆಯಾದ ಕಾರಣ ಮೇ 12ಕ್ಕೆ ನಡೆಯಬೇಕಿದ್ದ ಚುನಾವಣೆಯನ್ನು ಆಯೋಗ ಮುಂದೂಡಿತ್ತು.

ಬೆಳಿಗ್ಗೆ 7ಕ್ಕೆ ಮತದಾನ ಪ್ರಾರಂಭವಾಗಿದ್ದು, ಎರಡು ತಾಸಿನಲ್ಲಿಯೇ ಶೇ 10.13ರಷ್ಟು ಮತದಾನವಾಗಿತ್ತು. ಈ ಕ್ಷೇತ್ರದಲ್ಲಿ ಒಟ್ಟು 4,71,459 ಮತದಾರ ರಿದ್ದಾರೆ.

ಕಳೆದ ಬಾರಿ ಶೇ 56ರಷ್ಟು ಮತದಾನವಾಗಿತ್ತು. ಕಾಂಗ್ರೆಸ್‌ನಿಂದ ಮುನಿರತ್ನ ನಾಯ್ಡು, ಬಿಜೆಪಿಯಿಂದ ತುಳಸಿ ಮುನಿರಾಜು ಗೌಡ ಮತ್ತು ಜೆಡಿಎಸ್‌ನಿಂದ ಜಿ.ಎಚ್. ರಾಮಚಂದ್ರ ಕಣದಲ್ಲಿದ್ದಾರೆ. ನಟ ಹುಚ್ಚ ವೆಂಕಟ್ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದಾರೆ.

ನಟಿ ಅಮೂಲ್ಯ ಅವರು ಜೆಡಿಎಸ್‌ ಅಭ್ಯರ್ಥಿಯಾಗಿರುವ ತಮ್ಮ ಮಾವ ರಾಮಚಂದ್ರ ಪರ ಪ್ರಚಾರ ಮಾಡಿ, ನೀತಿ ಸಂಹಿತೆ ಉಲ್ಲಂಘಿಸಿದರು. ಇದಕ್ಕೆ ಜೆಡಿಎಸ್ ಕಾರ್ಪೊರೇಟರ್ ಮಂಜುಳಾ ನಾರಾಯಣಸ್ವಾಮಿ ಸಾಥ್‌ ನೀಡಿದರು. ಹೀಗಿದ್ದೂ ಸ್ಥಳದಲ್ಲಿದ್ದ ಚುನಾವಣಾ ಸಿಬ್ಬಂದಿ ಯಾವುದೇ ಕ್ರಮಕೈಗೊಳ್ಳಲಿಲ್ಲ ಎಂದು ಬಿಜೆಪಿ ಕಾರ್ಯಕರ್ತರು ದೂರಿದರು.

ತಮ್ಮ ಬೀಗರಾದ ಮುನಿರತ್ನ ಪರ ಲಗ್ಗೆರೆ ವಾರ್ಡ್‌ನಲ್ಲಿ ಸಿನಿಮಾ ನಿರ್ಮಾಪಕ ರಾಕ್‌ ಲೈನ್ ವೆಂಕಟೇಶ್ ಮತ ಯಾಚನೆ ಮಾಡಿದ್ದನ್ನು ವಿರೋಧಿಸಿ ಬಿಜೆಪಿ-ಜೆಡಿಎಸ್ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.

ಬಿಜೆಪಿ ಮತ್ತು ಜೆಡಿಎಸ್‌ನ ಕೆಲವು ಕಾರ್ಯಕರ್ತರು ಘೋಷಣೆಗಳನ್ನು ಕೂಗಿದ್ದರಿಂದ ಮತಗಟ್ಟೆಯೊಂದರಲ್ಲಿ ಗೊಂದಲ ಉಂಟಾಯಿತು. ಕೂಡಲೇ ಪೊಲೀಸರು ಅವರನ್ನು ಹೊರಹೋಗುವಂತೆ ಸೂಚಿಸಿದರು.

ರಾಜ್ಯದಲ್ಲಿ ಜೆಡಿಎಸ್-ಕಾಂಗ್ರೆಸ್ ಮೈತ್ರಿ ಸರ್ಕಾರ ಅಸ್ತಿತ್ವಕ್ಕೆ ಬಂದಿದ್ದರೂ, ಈ ಕ್ಷೇತ್ರದಲ್ಲಿ ಎರಡೂ ಪಕ್ಷಗಳು ಮೈತ್ರಿ ಮಾಡಿಕೊಳ್ಳದೆಯೇ ಪರಸ್ಪರ ಎದು ರಾಳಿಗಳಾಗಿದ್ದಾರೆ.

ಈ ಕ್ಷೇತ್ರವನ್ನು ತಮಗೆ ಬಿಟ್ಟುಕೊಡುವಂತೆ ಜೆಡಿಎಸ್‌ ನಾಯಕರು ಪಟ್ಟು ಹಿಡಿದಿದ್ದರು. ಆದರೆ, ಕಾಂಗ್ರೆಸ್ ಅಭ್ಯರ್ಥಿ ಮುನಿರತ್ನ ಪರ, ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಹಾಗೂ ಸಂಸದ ಡಿ.ಕೆ. ಸುರೇಶ್‌ ನಿಂತಿದ್ದಾರೆ.

ಎರಡು ಸುತ್ತಿನ ಸಂಧಾನ ಸಭೆ ನಡೆದರೂ ಒಮ್ಮತದ ತೀರ್ಮಾನಕ್ಕೆ ಬರಲು ಉಭಯ ಪಕ್ಷಗಳ ನಾಯಕರಿಗೆ ಸಾಧ್ಯವಾಗಲಿಲ್ಲ.

ದೋಸ್ತಿ ಸರ್ಕಾರದ ಭಾಗಿದಾರ ಪಕ್ಷದ ಅಭ್ಯರ್ಥಿಗಳಿಗೆ ಗೆಲುವಾಗಲಿದೆಯೇ ಅಥವಾ ವಿರೋಧ ಪಕ್ಷ ಬಿಜೆಪಿಗೆ ಮತದಾರರು ಮಣೆ ಹಾಕಲಿದ್ದಾರೆಯೇ ಎಂಬುದು ಕುತೂಹಲ ಮೂಡಿಸಿದೆ.

ಇವಿಎಂ ದೋಷ: ಮತದಾನ ನಿಧಾನ

ಲಗ್ಗೆರೆ ವಾರ್ಡ್‌ನ 154ನೇ ಮತಗಟ್ಟೆಯಲ್ಲಿ ಬೆಳಿಗ್ಗೆ 9 ಗಂಟೆಗೆ ಇವಿಎಂ ದೋಷ ಕಾಣಿಸಿಕೊಂಡಿದ್ದು, ಸುಮಾರು ಒಂದು ತಾಸಿನವರೆಗೂ ಮತ ಚಲಾಯಿಸಲು ಸಾಧ್ಯವಾಗಲಿಲ್ಲ.

ಇವಿಎಂನಲ್ಲಿ ತಾಂತ್ರಿಕ ಸಮಸ್ಯೆ ಎದುರಾಗಿತ್ತು. ಇದರಿಂದಾಗಿ ಮತದಾರರು ಸರದಿ ಸಾಲಿನಲ್ಲಿ ಕಾಯುವ ಸ್ಥಿತಿ ಎದುರಾಗಿತ್ತು. ಇದನ್ನು ಬಿಟ್ಟರೆ ಬೇರೆ ಯಾವುದೇ ಮತಗಟ್ಟೆಗಳಲ್ಲಿ ತಾಂತ್ರಿಕ ಸಮಸ್ಯೆ ಕಂಡುಬರಲಿಲ್ಲ.

ಮತ ಹಾಕದ ದರ್ಶನ್‌!

ಆರ್‌.ಆರ್‌.ನಗರದ ನಿವಾಸಿಯಾಗಿರುವ ನಟ ದರ್ಶನ್‌ ‘ಯಜಮಾನ’ ಸಿನಿಮಾ ಚಿತ್ರೀಕರಣದ ಪ್ರಯುಕ್ತ ಮುಂಬೈನಲ್ಲಿ ಇರುವುದರಿಂದ ಸೋಮವಾರ ಮತ ಚಲಾಯಿಸಿಲ್ಲ.

‘ಭಾನುವಾರ ಮಂಗಳೂರಿನಲ್ಲಿ ಖಾಸಗಿ ಕಾರ್ಯಕ್ರಮಕ್ಕೆ ಹೋಗಿದ್ದ ದರ್ಶನ್‌, ಅಲ್ಲಿಂದಲೇ ಮುಂಬೈಗೆ ತೆರಳಿದ್ದಾರೆ. ಆರ್‌.ಆರ್.ನಗರ ಕ್ಷೇತ್ರದ ಮರುಚುನಾವಣೆ ದಿನಾಂಕ ನಿಗದಿಯಾಗುವ ಮುನ್ನವೇ ಚಿತ್ರೀಕರಣದ ಯೋಜನೆ ಆಗಿದ್ದರಿಂದ ಮತದಾನ ಮಾಡಲು ಸಾಧ್ಯವಾಗಿಲ್ಲ’ ಎಂದು ಚಿತ್ರತಂಡ ತಿಳಿಸಿದೆ.

ಮುಖ್ಯಾಂಶಗಳು

* ನೀತಿ ಸಂಹಿತೆ ಉಲ್ಲಂಘಿಸಿದ ನಟಿ ಅಮೂಲ್ಯ

* ಮುನಿರತ್ನ ಪರ ಪ್ರಚಾರ ಮಾಡಿದ ರಾಕ್‌ ಲೈನ್ ವೆಂಕಟೇಶ್

* ‘ದೋಸ್ತಿ’ ಸರ್ಕಾರದ ಭಾಗಿದಾರರ ಪಕ್ಷಗಳೇ ಎದುರಾಳಿಗಳು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT