ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭೂ ಸ್ವಾಧೀನಕ್ಕೆ ಪರಿಹಾರ ನೀಡಲು ಆಗ್ರಹ

ಹುಡಾ ಕಚೇರಿ ಎದುರು ರೈತರಿಂದ ರಾಗಿ ಮುದ್ದೆ ಊಟ
Last Updated 27 ಮಾರ್ಚ್ 2018, 7:47 IST
ಅಕ್ಷರ ಗಾತ್ರ

ಹಾಸನ: ಡೇರಿ ವೃತ್ತದಿಂದ ಬೇಲೂರು ರಸ್ತೆಗೆ ಸಂಪರ್ಕ ಕಲ್ಪಿಸುವ ವರ್ತುಲ ರಸ್ತೆಗೆ ಭೂಮಿ ನೀಡಿದವರಿಗೆ ಪರಿಹಾರ ನೀಡಬೇಕು ಎಂದು ಆಗ್ರಹಿಸಿ ಬಿಜೆಪಿ ನೇತೃತ್ವದಲ್ಲಿ ಉದ್ದೂರು ಗ್ರಾಮದ ರೈತರು ಹುಡಾ ಕಚೇರಿ ಎದುರು ಧರಣಿ ನಡೆಸಿದರು.

ರಸ್ತೆಗಾಗಿ ಹಾಸನ ನಗರಾಭಿವೃದ್ಧಿ ಪ್ರಾಧಿಕಾರವು ರೈತರಿಂದ ಭೂಮಿ ಸ್ವಾಧೀನ ಪಡಿಸಿಕೊಂಡು 25 ವರ್ಷ ಆಗಿದೆ. ಆರಂಭದಲ್ಲಿ ಅದು ಸರ್ಕಾರಿ ಗೋಮಾಳ, ರೈತರ ಜಮೀನಿಗೆ ಯಾವುದೇ ದಾಖಲಾತಿ ಇಲ್ಲ ಎಂದು ಪರಿಹಾರ ನೀಡಿರಲಿಲ್ಲ. 8 ತಿಂಗಳ ಹಿಂದೆ ದಾಖಲಾತಿಯೊಂದಿಗೆ ಪ್ರತಿಭಟನೆ ನಡೆಸಿದಾಗ ಹುಡಾ ಅಧ್ಯಕ್ಷ ಹಾಗೂ ಉಪವಿಭಾಗಾಧಿಕಾರಿ ಪರಿಹಾರ ನೀಡುವುದಾಗಿ ಭರವಸೆ ನೀಡಿದ್ದರು. ಆದರೆ ಅದು ಈಡೇರಿಲ್ಲ ಎಂದು ಪ್ರತಿಭಟನಾಕಾರರು ಆರೋಪಿಸಿದರು.

ನಗರಾಭಿವೃದ್ಧಿ ಪ್ರಾಧಿಕಾರವು ಒಂದು ಗುಂಟೆಗೆ ₹ 3.51 ಲಕ್ಷ ಪರಿಹಾರ ನಿಗದಿ ಮಾಡಿತ್ತು. ಒಟ್ಟು 12 ಎಕರೆ 38 ಗುಂಟೆ ಜಾಗವನ್ನು ಕಳೆದುಕೊಂಡಿದ್ದು, ಅಂದಾಜು ₹ 18 ಕೋಟಿ ಪರಿಹಾರ ನೀಡುವುದು ಬಾಕಿ ಇದೆ. ಆದರೆ ಆಧಿಕಾರಿಗಳು ಈ ಬಗ್ಗೆ ಸರಿಯಾಗಿ ಮಾಹಿತಿ ನೀಡುತ್ತಿಲ್ಲ. ಪ್ರತಿಭಟನೆ ಮಾಡುವ ವಿಚಾರ ತಿಳಿದು ಅಧಿಕಾರಿಗಳು ರಜೆ ಹಾಕಿ ಹೋಗಿದ್ದಾರೆ. ಪರಿಹಾರದ ಹಣ ನೀಡುವ ವರೆಗೂ ಇಲ್ಲಿಂದ ತೆರಳುವುದಿಲ್ಲ ಎಂದು ರೈತರು ಪಟ್ಟು ಹಿಡಿದರು.

ಹುಡಾ ಕಚೇರಿ ಎದುರು ತಾವು ತಂದಿದ್ದ ರಾಗಿ ಮುದ್ದೆ, ಅನ್ನ, ತರಕಾರಿ ಸಾಂಬರ್ ಊಟ ಮಾಡಿದರು.

‘ಉದ್ದೂರು ರೈತರ ಜತೆ ನಾಲ್ಕು ಬಾರಿ ಮಾತುಕತೆ ನಡೆಸಲಾಗಿದೆ. ಆದರೆ ಅವರು ಒಪ್ಪಿಕೊಂಡಿಲ್ಲ. ಮಾರುಕಟ್ಟೆಗೆ ತಕ್ಕಂತೆ ದರ ನಿಗದಿ ಪಡಿಸಲಾಗಿದೆ. ₹ 19 ಕೋಟಿ ಹಣ ಪರಿಹಾರ ನೀಡುವ ಪ್ರಸ್ತಾವ ಇದೆ. ಪ್ರತಿಭಟನೆ ಹಿಂದೆ ರಾಜಕೀಯ ಉದ್ದೇಶ ಇದೆ’ ಸಚಿವ ಎ.ಮಂಜು ತಿಳಿಸಿದರು.

ಬಿಜೆಪಿ ಗ್ರಾಮಾಂತರ ಮಂಡಲದ ಅಧ್ಯಕ್ಷ ಅಗಿಲೆ ಯೋಗೇಶ್, ಮುಖಂಡರಾದ ಪ್ರಭು ದಾಸರಕೊಪ್ಪಲು, ಮಂಜುನಾಥ ಶರ್ಮ, ಮಂಜುನಾಥ್‌ ಮೋರೆ, ಉದ್ದೂರು ರೈತರಾದ ರಾಜೇಗೌಡ, ನರಸೇಗೌಡ, ರೇವಣ್ಣ, ರಂಗಮ್ಮ, ಪುಟ್ಟಮ್ಮ, ಶೇಖರ್‌, ಪದ್ಮಮ್ಮ, ರಾಮಕಷ್ಣ, ನಾರಾಯಣ, ಪಾಪೇಗೌಡ, ಬೋರಮ್ಮ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT