ಶುಕ್ರವಾರ, ಫೆಬ್ರವರಿ 21, 2020
25 °C

'ನಿಜಕ್ಕೂ ಆಘಾತಕಾರಿ': ಚುನಾವಣಾ ಆಯೋಗದ ವಿರುದ್ಧ ಕಿಡಿಕಾರಿದ ಅರವಿಂದ ಕೇಜ್ರಿವಾಲ್

ಏಜೆನ್ಸೀಸ್ Updated:

ಅಕ್ಷರ ಗಾತ್ರ : | |

prajavani

ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ನಿನ್ನೆಯಷ್ಟೇ ನಡೆದ ವಿಧಾನಸಭೆ ಚುನಾವಣೆಯ ಮತದಾನದ ಅಂತಿಮ ಶೇಕಡಾವಾರು ಪ್ರಮಾಣವನ್ನು ಚುನಾವಣಾ ಆಯೋಗ ಬಿಡುಗಡೆ ಮಾಡಿಲ್ಲದಿರುವುದು ನಿಜಕ್ಕೂ ಆಘಾತಕಾರಿ ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಚುನಾವಣೆ ಆಯೋಗದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈ ಕುರಿತು ಟ್ವೀಟ್ ಮಾಡಿರುವ ಕೇಜ್ರಿವಾಲ್, 'ಈ ವಿಚಾರ ನಿಜಕ್ಕೂ ಆಘಾತಕಾರಿ. ಚುನಾವಣಾ ಆಯೋಗ ಏನು ಮಾಡುತ್ತಿದೆ? ಮತದಾನ ಮುಗಿದು ಇಷ್ಟು ಗಂಟೆಗಳು ಕಳೆದರೂ ಕೂಡ ಈವರೆಗೆ ಅವರೇಕೆ ಮತದಾನದ ಶೇಕಡವಾರು ಪ್ರಮಾಣವನ್ನು ಬಿಡುಗಡೆ ಮಾಡಿಲ್ಲ?' ಎಂದು ಕಿಡಿಕಾರಿದ್ದಾರೆ.

ದೆಹಲಿ ವಿಧಾನಸಭೆಗೆ ನಡೆದ ಚುನಾವಣೆಯು ಶನಿವಾರ ಸಂಜೆ 6ಗಂಟೆಗೆ ಮುಕ್ತಾಯವಾಯಿತು. ಸುಮಾರು 22ಗಂಟೆ ಕಳೆದರೂ ಕೂಡ ದೆಹಲಿಯಲ್ಲಿರುವ 1.47 ಕೋಟಿ ಮತದಾರರಲ್ಲಿ ಎಷ್ಟು ಮಂದಿ ಮತ ಚಲಾಯಿಸಿದ್ದಾರೆ ಎನ್ನುವ ಕುರಿತು ಮಾಹಿತಿ ಬಿಡುಗಡೆ ಮಾಡಿಲ್ಲ. ಸಾಮಾನ್ಯವಾಗಿ ಚುನಾವಣೆ ಮುಗಿದ ಒಂದು ಗಂಟೆ ಒಳಗಾಗಿ ಚುನಾವಣಾ ಆಯೋಗ ಚಲಾವಣೆಯಾಗಿರುವ ಶೇಕಡವಾರು ಮತದಾನದ ಪ್ರಮಾಣವನ್ನು ತನ್ನ ಅಧಿಕೃತ ವೆಬ್​ಸೈಟ್‌ನಲ್ಲಿ ಬಿಡುಗಡೆ ಮಾಡುತ್ತದೆ.

ಶನಿವಾರದಂದು ಕಡಿಮೆ ಮತದಾನವಾಗಿದೆ ಎಂದು ವರದಿಯಾದ ನಂತರ ತಾತ್ಕಾಲಿಕ ಅಂಕಿ ಅಂಶಗಳನ್ನು ಬಿಡುಗಡೆ ಮಾಡಿದ ಚುನಾವಣಾ ಆಯೋಗ, ಶೇ 57.06ರಷ್ಟು ಮತದಾನವಾಗಿದೆ ಎಂದು ಹೇಳಿದೆ. 2015ರಲ್ಲಿ ಶೇ 67.5 ರಷ್ಟಿದ್ದ ಮತದಾನದ ಪ್ರಮಾಣವು ಈ ಬಾರಿ ಗಮನಾರ್ಹವಾಗಿ ಕಡಿಮೆಯಾಗಿದೆ. ಆದರೆ ಅಂತಿಮವಾಗಿ ಬಿಡುಗಡೆ ಮಾಡುವ ಶೇಕಡವಾರು ಪ್ರಮಾಣದಲ್ಲಿ ಹೆಚ್ಚಳವಾಗುವ ಸಾಧ್ಯತೆಯಿದೆ ಎಂದು ಚುನಾವಣಾ ಅಧಿಕಾರಿಗಳು ತಿಳಿಸಿದ್ದಾರೆ

ಇವಿಎಂ ಸುರಕ್ಷತೆಯ ಬಗ್ಗೆ ಈಗಾಗಲೇ ಆಮ್ ಆದ್ಮಿ ಪಕ್ಷವು (ಎಎಪಿ) ಕಳವಳ ವ್ಯಕ್ತಪಡಿಸಿದೆ. ಇವಿಎಂ ಯಂತ್ರಗಳ ಮೇಲೆ ಪ್ರಭಾವ ಬೀರಲು ಯತ್ನಿಸಲಾಗುತ್ತಿದೆ ಎನ್ನುವ ಕುರಿತಾದ ವಿಡಿಯೊಗಳನ್ನು ಬಿಡುಗಡೆ ಮಾಡಿದೆ. ಆದರೆ ಚುನಾವಣಾ ಆಯೋಗದ ಅಧಿಕಾರಿಗಳು ಈ ಆರೋಪಗಳನ್ನು ಅಲ್ಲಗಳೆದಿದ್ದಾರೆ.

70 ವಿಧಾನಸಭಾ ಕ್ಷೇತ್ರಗಳಿಗೆ ಶನಿವಾರ ಮುಂಜಾನೆ 8ಗಂಟೆಯಿಂದ ಮತದಾನ ನಡೆದಿದೆ. ಫಲಿತಾಂಶ ಇದೇ ತಿಂಗಳ 11ಕ್ಕೆ ಪ್ರಕಟವಾಗಲಿದ್ದು, ಈಗಾಗಲೇ ಚುನಾವಣೋತ್ತರ ಸಮೀಕ್ಷೆಗಳು ಆಮ್ ಆದ್ಮಿ ಪಕ್ಷವೇ ಅಧಿಕ ಬಹುಮತ ಪಡೆಯಲಿದೆ ಎಂದು ಹೇಳಿವೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು