ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿಬಿಐ ತನಿಖೆ ರದ್ದು ಮಾಡಲು ನಿರಾಕರಣೆ

Last Updated 30 ಮೇ 2018, 19:59 IST
ಅಕ್ಷರ ಗಾತ್ರ

ಬೆಂಗಳೂರು: ಸುಳ್ಳು ದಾಖಲೆ ಸೃಷ್ಟಿಸಿ ಬ್ಯಾಂಕಿನಿಂದ ಸಾಲ ಪಡೆದು ಕೋಟ್ಯಂತರ ರೂಪಾಯಿ ವಂಚಿಸಿದ ಆರೋಪದಡಿ, ನಗರದ ಉದ್ಯಮಿ ವಿರುದ್ಧ ಸಿಬಿಐ ದಾಖಲಿಸಿರುವ ಪ್ರಕರಣ ರದ್ದುಗೊಳಿಸಲು ಹೈಕೋರ್ಟ್‌ ನಿರಾಕರಿಸಿದೆ.

‘ನನ್ನ ವಿರುದ್ಧ ಸಿಬಿಐ ದಾಖಲಿಸಿರುವ ಎಫ್‌ಐಆರ್‌ ರದ್ದುಗೊಳಿಸಬೇಕು’ ಎಂದು ಕೋರಿ ಮೆಸರ್ಸ್ ಕುಸುಮ್ ಅಲಾಯ್ಸ್‌ ಲಿಮಿಟೆಡ್‌ ಕಂಪನಿ ನಿರ್ದೇಶಕ ಹಾಗೂ ನಗರದ ಸ್ಯಾಂಕಿ ರೋಡ್‌ ಕ್ರಾಸ್‌ ನಿವಾಸಿ ಅಶೋಕ ಕೆ.ಕೇಜ್ರಿವಾಲ ಅವರು ಸಲ್ಲಿಸಿದ್ದ ಮನವಿಯನ್ನು ನ್ಯಾಯಮೂರ್ತಿ ಅರವಿಂದ ಕುಮಾರ್ ಅವರಿದ್ದ ಏಕಸದಸ್ಯ ನ್ಯಾಯಪೀಠ ತಿರಸ್ಕರಿಸಿದೆ.

‘ಬ್ಯಾಂಕ್‌ಗಳಿಗೆ ವಂಚಿಸಿದರೆ ಅಂತಿಮವಾಗಿ ಅದರಿಂದ ತೊಂದರೆಗೆ ಒಳಗಾಗುವವರು ಸಾರ್ವಜನಿಕರು. ಏಕೆಂದರೆ ಬ್ಯಾಂಕ್‌ನಲ್ಲಿ ಇರುವ ದುಡ್ಡು ಸಾರ್ವಜನಿಕರದ್ದು’ ಎಂದು ನ್ಯಾಯಮೂರ್ತಿಗಳು ತಮ್ಮ ತೀರ್ಪಿನಲ್ಲಿ ವಿವರಿಸಿದ್ದಾರೆ.

‘ಇಂತಹ ಅಪರಾಧಗಳು ರಾಷ್ಟ್ರದ ಆರ್ಥಿಕ ಬೆನ್ನೆಲುಬನ್ನೇ ಬಗ್ಗಿಸಿಬಿಡುತ್ತವೆ. ಕೋರ್ಟ್‌ ಇಂತಹವರ ಬಗ್ಗೆ ಉದಾರ ಭಾವನೆ ತೋರಿದರೆ ಸಮಾಜದ ಆರ್ಥಿಕ ಹಿತಾಸಕ್ತಿಗಳಿಗೆ ಕೇಡು ಬಗೆದಂತಾಗುತ್ತದೆ’ ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಏನಿದು ಪ್ರಕರಣ?: ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಮೆಸರ್ಸ್ ಇನೊವೇಟಿವ್‌ ವೆಂಚರ್ಸ್‌ ಪ್ರೈವೇಟ್‌ ಲಿಮಿಟೆಡ್ ಕಂಪನಿಯು, ಯೂನಿಯನ್ ಬ್ಯಾಂಕ್‌ ಆಫ್‌ ಇಂಡಿಯಾದ ಬೆಂಗಳೂರಿನ ಶಾಖೆಯಿಂದ ₹ 8 ಕೋಟಿಗೂ ಹೆಚ್ಚು ಸಾಲ ಪಡೆದು ‘ಸ್ಪಾಂಜ್‌ ಐರನ್‌ ಪ್ಲಾಂಟ್‌’ ಹೆಸರಿನಲ್ಲಿ ಕಬ್ಬಿಣ ಸಂಸ್ಕರಣಾ ಘಟಕ ಸ್ಥಾಪಿಸಿತ್ತು.

ಈ ಉದ್ದೇಶಕ್ಕಾಗಿ ಕಂಪನಿ ಒಂದೂವರೆ ಕೋಟಿ ರೂಪಾಯಿಯನ್ನು ದುಡಿಯುವ ಬಂಡವಾಳವಾಗಿ ತೊಡಗಿಸಿತ್ತು ಮತ್ತು ಹೆಚ್ಚುವರಿ ಮೊತ್ತಕ್ಕಾಗಿ ಇನೊವೇಟಿವ್‌ ವೆಂಚರ್ಸ್‌ ಕಂಪನಿಯ ನಿರ್ದೇಶಕರೂ ಆದ ಅಶೋಕ ಕೆ.ಕೇಜ್ರಿವಾಲ ಬ್ಯಾಂಕಿನಿಂದ ಸಾಲ ಪಡೆದಿದ್ದರು. ಆದರೆ, ಬ್ಯಾಂಕ್ ಸಾಲವನ್ನು ಸಕಾಲದಲ್ಲಿ ತೀರಿಸಿರಲಿಲ್ಲ.

ಸಾಲ ವಸೂಲಾತಿಗೆ ಬ್ಯಾಂಕ್‌ ಮುಂದಾದಾಗ ಕೇಜ್ರಿವಾಲ, ಘಟಕದ ಉಪಕರಣ ಮತ್ತು ಯಂತ್ರಗಳ ಪೂರೈಕೆಗೆ ಸಂಬಂಧಿಸಿದಂತೆ ಸುಳ್ಳು ದಾಖಲೆ ಪತ್ರ ಸೃಷ್ಟಿಸಿದ್ದು ಪತ್ತೆಯಾಗಿತ್ತು.

ಈ ವೇಳೆಗಾಗಲೇ ಸಾಲದ ಮೊತ್ತ ಅಸಲು ಮತ್ತು ಬಡ್ಡಿ ಸೇರಿ ₹ 15 ಕೋಟಿ ಮೀರಿತ್ತು. ಆಗ ಕೇಜ್ರಿವಾಲ ಬ್ಯಾಂಕ್‌ ಅಧಿಕಾರಿಗಳ ಜೊತೆ ಒಂದು ಬಾರಿಯ ಇತ್ಯರ್ಥಕ್ಕೆ (ಒನ್‌ ಟೈಮ್‌ ಸೆಟಲ್‌ಮೆಂಟ್‌) ಮುಂದಾಗಿ ಸಾಲ ತೀರಿಸಿದ್ದರು.

‘ಅರ್ಜಿದಾರರು ಮತ್ತು ಅವರ ಸಹವರ್ತಿಗಳಿಂದ ಬ್ಯಾಂಕ್‌ಗೆ ಕೋಟ್ಯಂತರ ರೂಪಾಯಿ ನಷ್ಟವಾಗಿದೆ’ ಎಂದು ಆರೋಪಿಸಿ ಬ್ಯಾಂಕಿನ ವಿಚಕ್ಷಣಾ ದಳ ಸಿಬಿಐಗೆ ದೂರು ನೀಡಿತ್ತು. (₹ 3 ಕೋಟಿಗೂ ಹೆಚ್ಚಿನ ಮೊತ್ತದ ವಂಚನೆ ಪ್ರಕರಣಗಳು ಸಿಬಿಐ ತನಿಖೆಯ ವ್ಯಾಪ್ತಿಗೆ ಒಳಪಡುತ್ತವೆ).

ಇದರ ಅನ್ವಯ ಸಿಬಿಐನ ‘ಬ್ಯಾಂಕ್‌ ಸೆಕ್ಯುರಿಟಿ ಅಂಡ್‌ ಫ್ರಾಡ್ ಸೆಲ್‌’ ಘಟಕವು ಕೇಜ್ರಿವಾಲ ಸೇರಿದಂತೆ 15 ಜನರ ವಿರುದ್ಧ ಎಫ್‌ಐಆರ್ ದಾಖಲಿಸಿತ್ತು. ಪ್ರಕರಣವನ್ನು ಸಿಬಿಐ ವಿಶೇಷ ನ್ಯಾಯಾಲಯ ವಿಚಾರಣೆ ನಡೆಸುತ್ತಿದೆ. ಪ್ರಕರಣ ರದ್ದುಗೊಳಿಸುವಂತೆ ಕೋರಿ ಕೇಜ್ರಿವಾಲ ಹೈಕೋರ್ಟ್‌ ಮೆಟ್ಟಿಲೇರಿದ್ದರು.

ಪ್ರಮುಖರಿಗೆ ಇದೇ ಚಾಳಿ: ಸಿಬಿಐ

‘ಇಂತಹ ಪ್ರಕರಣಗಳು ಬೆಂಗಳೂರು ನಗರ ವ್ಯಾಪ್ತಿಯಲ್ಲಿ ಇತ್ತೀಚೆಗೆ ಸಾಕಷ್ಟು ಹೆಚ್ಚುತ್ತಿವೆ’ ಎಂದು ಸಿಬಿಐ ಪರ ಹೈಕೋರ್ಟ್‌ ವಕೀಲ ಪಿ.ಪ್ರಸನ್ನ ಕುಮಾರ್ ವಿಚಾರಣೆ ವೇಳೆ ನ್ಯಾಯಪೀಠದ ಗಮನಕ್ಕೆ ತಂದಿದ್ದರು.

‘ಈಗಾಗಲೇ ಈ ರೀತಿಯ ಅನೇಕ ಪ್ರಕರಣ ಸಿಬಿಐ ಮುಂದಿವೆ. ಇವುಗಳಲ್ಲಿ ಪ್ರಮುಖ ರಾಜಕಾರಣಿಗಳು, ಪ್ರಭಾವಿ ಉದ್ಯಮಿಗಳು ಆರೋಪಿಗಳಾಗಿದ್ದಾರೆ. ಸಾಲ ಪಡೆಯುವುದು ಮತ್ತು ನಾಲ್ಕೈದು ವರ್ಷಗಳ ನಂತರ ಒಂದಾವರ್ತಿ ಇತ್ಯರ್ಥಕ್ಕೆ ಮುಂದಾಗುವುದು ಇವರ ಚಾಳಿಯಾಗಿದೆ’ ಎಂದು ಹೇಳಿದ್ದರು.

‘ಇದರಿಂದ ಬ್ಯಾಂಕಿಂಗ್ ವ್ಯವಸ್ಥೆಗೆ ಸಾಕಷ್ಟು ಧಕ್ಕೆ ಉಂಟಾಗುತ್ತದೆ. ಇಂತಹವರನ್ನೆಲ್ಲಾ ಬಿಟ್ಟರೆ ಸಾರ್ವಜನಿಕರು, ಬ್ಯಾಂಕ್‌ಗಳಲ್ಲಿ ಹೂಡಿದ ಹಣಕ್ಕೆ ಮೋಸ ಮಾಡಿದಂತಾಗುತ್ತದೆ’ ಎಂದು ವಾದ ಮಂಡಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT