ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೊಬೈಲ್‌ಗೆ ಆಧಾರ್‌: ಕೇಂದ್ರಕ್ಕೆ ಸುಪ್ರೀಂಕೋರ್ಟ್ ನೋಟಿಸ್‌

Last Updated 22 ನವೆಂಬರ್ 2019, 20:00 IST
ಅಕ್ಷರ ಗಾತ್ರ

ನವದೆಹಲಿ: ಮೊಬೈಲ್‌ ಸಂಪರ್ಕ ಮತ್ತು ಬ್ಯಾಂಕ್‌ ಖಾತೆಗಳಿಗೆ ಆಧಾರ್‌ ಸಂಖ್ಯೆಯ ಜೋಡಣೆಗೆ ಅವಕಾಶ ಕೊಡುವ ಆಧಾರ್‌ ತಿದ್ದುಪಡಿ ಕಾಯ್ದೆ 2019ಕ್ಕೆ ಸಂಬಂಧಿಸಿ ಕೇಂದ್ರ ಸರ್ಕಾರ ಮತ್ತು ವಿಶಿಷ್ಟ ಗುರುತು ಚೀಟಿ ಪ್ರಾಧಿಕಾರಕ್ಕೆ (ಯುಐಡಿಎಐ) ಸುಪ್ರೀಂ ಕೋರ್ಟ್‌ ಶುಕ್ರವಾರ ನೋಟಿಸ್‌ ನೀಡಿದೆ.

ಸೇನೆಯ ನಿವೃತ್ತ ಅಧಿಕಾರಿ ಮೈಸೂರಿನ ಎಸ್‌.ಜಿ. ಒಂಬತ್ತುಕೆರೆ ಮತ್ತು ಸಫಾಯಿ ಕರ್ಮಚಾರಿ ಆಂದೋಲನದ ಬೆಜವಾಡ ವಿಲ್ಸನ್‌ ಅವರುತಿದ್ದುಪಡಿ ಕಾಯ್ದೆಯನ್ನು ಪ್ರಶ್ನಿಸಿ, ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆ. ಮುಖ್ಯ ನ್ಯಾಯಮೂರ್ತಿ ಎಸ್‌.ಎ. ಬೊಬಡೆ ನೇತೃತ್ವದ ಪೀಠವು ಯುಐಡಿಎಐ ಮತ್ತು ಕೇಂದ್ರಕ್ಕೆ ನೋಟಿಸ್‌ ನೀಡಿದೆ.

ಆಧಾರ್‌ಗೆ ಸಂಬಂಧಿಸಿದ ಸುಗ್ರೀವಾಜ್ಞೆಯ ಸಿಂಧುತ್ವವನ್ನು ಪ್ರಶ್ನಿಸಿ ಈ ಹಿಂದೆ ಸಲ್ಲಿಸಲಾಗಿದ್ದ ದೂರಿನ ಅಧಾರದಲ್ಲಿ ಜುಲೈ 5ರಂದು ಸುಪ್ರೀಂ ಕೋರ್ಟ್‌ ನೋಟಿಸ್‌ ನೀಡಿತ್ತು ಎಂದು ಹಿರಿಯ ವಕೀಲ ಶ್ಯಾಮ್‌ ದಿವಾನ್‌ ಅವರು ಪೀಠದ ಗಮನ ಸೆಳೆದರು. ಹಳೆಯ ದೂರನ್ನು ಜತೆ ಸೇರಿಸಿಕೊಂಡು ಈಗ ನೋಟಿಸ್‌ ನೀಡಲಾಗಿದೆ.

ಆಧಾರ್‌ ಮತ್ತು ಇತರ ಕಾನೂನುಗಳ ತಿದ್ದುಪಡಿ ಕಾಯ್ದೆ 2019 ಮತ್ತು ಆಧಾರ್‌ (ಆಧಾರ್‌ ದೃಢೀಕರಣ ಸೇವೆ) ನಿಯಂತ್ರಣಗಳು 2019 ಅನ್ನು ಜುಲೈಯಲ್ಲಿ ಅಂಗೀಕರಿಸಲಾಗಿದೆ. ಇದರ ಪ್ರಕಾರ, ಬ್ಯಾಂಕ್‌ ಖಾತೆ ತೆರೆಯಲು ಮತ್ತು ಮೊಬೈಲ್‌ ಸಂಪರ್ಕ ಪಡೆಯಲು ಆಧಾರ್‌ ಸಂಖ್ಯೆಯನ್ನು ಸ್ವಯಂಪ್ರೇರಣೆಯಿಂದ ನೀಡಲು ಅವಕಾಶ ಇದೆ.

ಖಾಸಗಿ ಸಂಸ್ಥೆಗಳಿಗೆ ಆಧಾರ್‌ ದತ್ತಾಂಶ ಕೋಶದ ಮೂಲಕ ದೃಢೀಕರಣಕ್ಕೆ ಅವಕಾಶ ನೀಡುವುದು ಜನರ ಖಾಸಗಿತದ ಹಕ್ಕೂ ಸೇರಿ ಮೂಲಭೂತ ಹಕ್ಕಗಳು ಉಲ್ಲಂಘನೆಯಾಗುತ್ತದೆ ಎಂದು ವಕೀಲ ವಿಪಿನ್‌ ನಾಯರ್‌ ಅವರು ಸುಪ್ರೀಂ ಕೋರ್ಟ್‌ಗೆ ದೂರು ಸಲ್ಲಿಸಿದ್ದರು.

ಆಧಾರ್‌ ತಿದ್ದುಪಡಿ ಕಾಯ್ದೆಯನ್ನು ಅಸಾಂವಿಧಾನಿಕ ಎಂದು ಘೋಷಿಸಿ, ರದ್ದುಪಡಿಸಬೇಕು ಎಂದು ಅವರು ಕೋರಿದ್ದರು.

ಆಧಾರ್‌ ದತ್ತಾಂಶ ಕೋಶದ ಮೂಲಕ ಪಡೆದುಕೊಳ್ಳುವ ಜನರ ಯಾವುದೇ ಮಾಹಿತಿಯನ್ನು ಖಾಸಗಿ ಸಂಸ್ಥೆಗಳು ಉಳಿಸಿಕೊಳ್ಳುವಂತಿಲ್ಲ ಎಂಬ ನಿರ್ದೇಶನ ನೀಡಬೇಕು ಎಂದು ಕೋರಿದ್ದರು.

ಇದಲ್ಲದೆ, ಖಾಸಗಿ ಸಂಸ್ಥೆಗಳು ಆಧಾರ್‌ ದೃಢೀಕರಣದ ಆಯ್ಕೆಯನ್ನು ಬಳಸಿಕೊಳ್ಳುವಂತಿಲ್ಲ. ವಾಣಿಜ್ಯ ಉದ್ದೇಶಕ್ಕೆ ಆಧಾರ್‌ ಸಂಖ್ಯೆ ಬಳಕೆ ಆಗಬಾರದು ಮತ್ತು ಕಾನೂನು ಆಧರಿತವಾದ, ಸರ್ಕಾರದ ನಿರ್ದಿಷ್ಟ ಅಗತ್ಯಗಳಿಗೆ ಮಾತ್ರ ಆಧಾರ್‌ ಸಂಖ್ಯೆಯನ್ನು ಬಳಸಬೇಕು ಎಂದು 2018ರ ಸೆಪ್ಟೆಂಬರ್‌ 26ರಂದು ಸುಪ್ರೀಂ ಕೋರ್ಟ್‌ನ ಸಂವಿಧಾನ ಪೀಠವು ಸ್ಪಷ್ಟ ತೀರ್ಪು ನೀಡಿದೆ. ಆದರೆ, ತಿದ್ದುಪಡಿ ಕಾಯ್ದೆಯು ಈ ತೀರ್ಪನ್ನು ಉಲ್ಲಂಘಿಸಿದೆ ಎಂದು ಅರ್ಜಿದಾರರು ಹೇಳಿದ್ದಾರೆ.

ದೂರು ಏನು?

* ಆಧಾರ್‌ ತಿದ್ದುಪಡಿ ಕಾಯ್ದೆಯು ಮೂಲಭೂತ ಹಕ್ಕನ್ನು ಉಲ್ಲಂಘಿಸುತ್ತದೆ

* ಖಾಸಗಿಯವರಿಗೆ ಮಾಹಿತಿ ಲಭ್ಯವಾಗುವ ಮೂಲಕ ವೈಯಕ್ತಿಕ ದತ್ತಾಂಶಗಳ ಭದ್ರತೆ ನಷ್ಟ

* ಆಧಾರ್‌ ದತ್ತಾಂಶ ಕೋಶವನ್ನು ಖಾಸಗಿ ಸಂಸ್ಥೆಗಳು ಲಾಭಕ್ಕೆ ಬಳಸಿಕೊಳ್ಳಬಹುದು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT