ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಡಿಯೊ ಸ್ಟೋರಿ: ಶಿವಸೇನೆಯ ‘ರೈಸಿಂಗ್‌ ಸ್ಟಾರ್’ ಆದಿತ್ಯ ಠಾಕ್ರೆ

ಕಣದಲ್ಲಿ ಕುಡಿಗಳು
Last Updated 4 ಜೂನ್ 2019, 9:07 IST
ಅಕ್ಷರ ಗಾತ್ರ

ಎಂದಿನಂತೆ ಅಂದೂ (ಏಪ್ರಿಲ್‌ 7) ದಿನಪೂರ್ತಿ ಬೆಳಕು ಸುರಿದು ಸಾಕಾಗಿದ್ದ ಆದಿತ್ಯ, ವಿಶ್ರಾಂತಿ ಬಯಸಿ ನಾಸಿಕ್‌ ನಗರದ ಮಗ್ಗುಲಲ್ಲೇ ಎಂಬಂತೆ ಜೊಂಪಿಗೆ ಜಾರಿದ್ದ. ಕತ್ತಲು ಆಕಳಿಸಿಮೇಲೇಳುತ್ತಿದ್ದಾಗಲೇ ಅಲ್ಲಿ ಇನ್ನೊಬ್ಬ ಆದಿತ್ಯನ ಆಗಮನದ ನಿರೀಕ್ಷೆ ಗರಿಗೆದರಿತ್ತು. ನಾಸಿಕ್‌ ಜಿಲ್ಲೆಯೆಲ್ಲೆಡೆ ಇಂದ ಬಂದಿದ್ದ ಸುಮಾರು ಐದು ಸಾವಿರ ಯುವಕರು, ಕಾರ್ಯಕರ್ತರಮೊಗದಲ್ಲಿ ರಣೋತ್ಸಾಹವಿತ್ತು. ಅವನಿಗಾಗಿಯೇ ಸಿಂಗಾರಗೊಂಡಿದ್ದ ವೇದಿಕೆ ಸುತ್ತಲೂ ನಿರೀಕ್ಷೆಯ ಕಾವು. ಆದಿತ್ಯ ಆಗಮಿಸುವುದು ತಡವಾದಷ್ಟೂ ಅದು ಏರುತ್ತಲೇ ಇತ್ತು. ಎದೆಗಪ್ಪಳಿಸುವಂತೆ ಬಜಾಯಿಸುತ್ತಲೇ ಇದ್ದ ಬ್ಯಾಂಡು ಬೇರೆ;ಕಾತರದ ಬತ್ತಿಗೆ ಎಣ್ಣೆ ಸುರಿದು ಅಮಲೇರುವಂತೆ ಮಾಡುತ್ತಿತ್ತು. ಅಷ್ಟರಲ್ಲಿ ‘ಶಿವಸೇನಾದ ಯುವ ನಾಯಕ ಆದಿತ್ಯ ಠಾಕ್ರೆ ಆಗಮಿಸಿದರು’ ಎಂದು ಮೈಕ್‌ನಲ್ಲಿ ಸಾರಲಾಯಿತು.

ಅಷ್ಟು ಸಾಕಿತ್ತು. ಅಭಿಮಾನದ ಕಟ್ಟೆ ಒಡೆಯಲು.

ವೇದಿಕೆಯ ಒಂದು ದಿಕ್ಕಿನಿಂದ ‘ಬರ್ತಾ ಇರೋದು ಯಾರು?’ ಎಂದರೆ, ಇನ್ನೊಂದು ಕಡೆಯವರು ‘ಶಿವಸೇನಾದ ಹುಲಿ’ ಎಂಬ ಕೂಗು ಮೊಳಗುತ್ತಿತ್ತು. ಶಿವಸೇನೆಯ ಮುಖ್ಯಸ್ಥ ಉದ್ಧವ್‌ ಠಾಕ್ರೆ ಪುತ್ರ ಆದಿತ್ಯ ವೇದಿಕೆಗೆ ಬರುವವರೆಗೂ ಆ ಕೂಗು ನಿಲ್ಲಲಿಲ್ಲ. ರಾಕ್‌ಸ್ಟಾರ್‌ನಂತೆ ಬಂದ ಆದಿತ್ಯ ‘ಎಲ್ರೂ ಹೇಗಿದ್ದೀರೀ’ ಎನ್ನುತ್ತಾ ಆದಿತ್ಯ ಸಂವಾದಕ್ಕೆ ಚಾಲನೆ ನೀಡಿದರು.

ವೇದಿಕೆಯನ್ನು ಪ್ಲಸ್‌ (+) ಆಕಾರದಲ್ಲಿ ವಿಶೇಷವಾಗಿ ಸಜ್ಜುಗೊಳಿಸಲಾಗಿತ್ತು. ವೇದಿಕೆಯ ಹಿಂಬದಿಯನ್ನು ಹೊರತುಪಡಿಸಿ ಉಳಿದ ಮೂರು ಕಡೆಗಳಲ್ಲಿ ಸುತ್ತಲೂ ಸಭಿಕರು ಕೂರಲು ಹಾಗೂ ಆದಿತ್ಯ ಎಲ್ಲ ದಿಕ್ಕಿಗೂ ಚಲಿಸಿ ಮಾತನಾಡಲುವ್ಯವಸ್ಥೆ ಮಾಡಲಾಗಿತ್ತು. ಅಲ್ಲಿ ಉದ್ದುದ್ದ ಭಾಷಣಗಳಿಗೆ ಅವಕಾಶವಿರಲಿಲ್ಲ. ಪ್ರಶ್ನೋತ್ತರ ವಿನಿಮಯ ಅಷ್ಟೆ. ಅದನ್ನೂ ವಿಭಿನ್ನವಾಗಿ ಆಯೋಜಿಸಲಾಗಿತ್ತು. ಕಾರ್ಯಕ್ರಮಕ್ಕೆ ಆಗಮಿಸುವವರ ಹೆಸರುಗಳನ್ನು ನೋಂದಣಿ ಮಾಡಿಕೊಂಡು, ಪ್ರಶ್ನೋತ್ತರ ಕೇಳುವವರ ಹೆಸರು ಹಾಗೂ ಮೊಬೈಲ್‌ ಸಂಖ್ಯೆಯನ್ನು ಚೀಟಿಗಳಲ್ಲಿ ಬರೆದುಕೊಳ್ಳಲಾಗಿತ್ತು. ಅವುಗಳನ್ನು ಆದಿತ್ಯ ನಿಲ್ಲುವ ಸ್ಥಳದಿಂದ ಸ್ವಲ‌್ಪ ಹಿಂದೆ ಒಂದು ಗಾಜಿನ ಬಟ್ಟಲಿನಲ್ಲಿ ಇಡಲಾಗಿತ್ತು. ಆದಿತ್ಯ ಯಾರ ಹೆಸರಿರುವ ಚೀಟಿ ತೆಗೆಯುತ್ತಾರೋ ಅವರಿಗೆ ಪ್ರಶ್ನೆಗಳನ್ನು ಕೇಳುವ ಅವಕಾಶ.

ಮೊದಲ ಚೀಟಿ ತೆಗೆಯುತ್ತಿದ್ದಂತೆ ‘ಓಹ್‌ ಮೈ ಗಾಡ್‌’ ಎಂದು ಹುಬ್ಬೇರಿಸಿದರು ಆದಿತ್ಯ. ಇಡೀ ವೇದಿಕೆ ಗಪ್‌ಚುಪ್‌. ಅದರಲ್ಲಿದ್ದದ್ದು ಮಾಜಿ ಸಂಸದ ನಿಲೇಶ್‌ ರಾಣೆ ಹೆಸರು. ಅವರು 2009ರ ಲೋಕಸಭೆ ಚುನಾವಣೆ ವೇಳೆ ಕಾಂಗ್ರೆಸ್‌ ಪಕ್ಷದ ಅಭ್ಯರ್ಥಿಯಾಗಿರತ್ನಗಿರಿ–ಸಿಂಧೂದುರ್ಗ ಕ್ಷೇತ್ರದಿಂದಸ್ಪರ್ಧಿಸಿ ಸಂಸದರಾಗಿ ಆಯ್ಕೆಯಾಗಿದ್ದವರು. ಬಳಿಕ 2014ರಲ್ಲಿ ಶಿವಸೇನಾ ಪಕ್ಷದ ಅಭ್ಯರ್ಥಿ ವಿನಾಯಕ್‌ ರಾವ್‌ ಎದುರು ಪರಾಭವಗೊಂಡಿದ್ದರು. ಇಷ್ಟು ಮಾತ್ರವಲ್ಲ ಅವರು ಕಾಂಗ್ರೆಸ್‌ ಸೇರುವ ಮುನ್ನ ಶಿವಸೇನಾ ಜೊತೆಯಲ್ಲಿಯೇ ಇದ್ದವರು. ಇದೀಗ ಮಹಾರಾಷ್ಟ್ರ ಸ್ವಾಭಿಮಾನ ಪಕ್ಷ ಕಟ್ಟಿದ್ದಾರೆ. ಹಾಗಾಗಿಯೇ ನಿಲೇಶ್‌ ಹೆಸರು ಕೇಳಿದೊಡನೆ ಇಡೀ ಸಭೆ ಒಮ್ಮೆಲೆ ಬಿಟ್ಟ ಕಣ್ಣು ಬಿಟ್ಟಂತೆ ‘ಓ’ ಎಂಬ ಉದ್ಘರಿಸಿತು.

ನಿಲೇಶ್ ಅವರುಗ್ರಾಮೀಣ ಪ್ರದೇಶಗಳಲ್ಲಿ ಕ್ರೀಡಾ ಸೌಕರ್ಯಗಳ ಅಭಿವೃದ್ಧಿಗೆ ಸಂಬಂಧಿಸಿದಂತೆ ಪ್ರಶ್ನೆ ಕೇಳಿದರು. ಆದಿತ್ಯ ಭವಿಷ್ಯದಲ್ಲಿ ತಾವು ಕೈಗೊಳ್ಳಲಿರುವ ಕಾರ್ಯಕ್ರಮಗಳ ಕುರಿತು ಹಾಗೂ ಯೋಜನೆಗಳ ಬಗ್ಗೆ ಸುದೀರ್ಘ ಉತ್ತರ ನೀಡಿದರು. ಸಂವಾದ ಮುಂದುವರಿಯಿತು.

ಸಂವಾದ ಮುಗಿಯುತ್ತಿದ್ದಂತೆ ಸೆಲ್ಫಿ ಕ್ಲಿಕ್ಕಿಸಿಕೊಳ್ಳಲು ಯುವಕರು ಮುಗಿಬಿದ್ದರು. ಮೃದುವಾಗಿ ಮಾತನಾಡಿದರೂ, ವಿಷಯವನ್ನು ಹೃದಯಕ್ಕೆ ಮುಟ್ಟಿಸುವ ಛಾತಿ ಹೊಂದಿರುವ ಆದಿತ್ಯನ ವಯಸ್ಸು ಈಗ 29. ಇತಿಹಾಸ,ಕಾವ್ಯಗಳನ್ನು ಹೆಚ್ಚಾಗಿ ಓದುವ ಅವರು, ಕ್ರಿಕೆಟ್‌ ಮತ್ತು ಫುಟ್‌ಬಾಲ್‌ ಅನ್ನು ಇಷ್ಟಪಡುತ್ತಾರೆ.

ಅಸಲಿಗೆ ಆದಿತ್ಯನ ಹೆಸರು ಮುನ್ನಲೆಗೆ ಬಂದದ್ದು 2010ರಲ್ಲಿ.

ಲೇಖಕ ರೋಹಿನ್‌ಟನ್‌ ಮಿಸ್ಟ್ರಿ ಅವರ‘ಸಚ್‌ ಎ ಲಾಂಗ್‌ ಜರ್ನಿ’ಕೃತಿಯನ್ನು ತನ್ನಇಂಗ್ಲಿಷ್‌ ಪಠ್ಯಕ್ರಮದಲ್ಲಿ ಸೇರಿಸಲುಮುಂಬೈ ವಿಶ್ವವಿದ್ಯಾಲಯವು 2010ರಲ್ಲಿನಿರ್ಧರಿಸಿತ್ತು.ಮಿಸ್ಟ್ರಿ ತಮ್ಮ ಕೃತಿಯಲ್ಲಿ ಮಹಾರಾಷ್ಟ್ರ ಹಾಗೂ ಶಿವಸೇನೆಗೆ ಸಂಬಂಧಿಸಿದಂತೆ ಉಲ್ಲೇಖಿಸಿದ್ದಾರೆ. ಶಿವಸೇನೆಯ ಸಿದ್ಧಾಂತ ಹಾಗೂ ಅದರ ಸ್ಥಾಪಕ ಬಾಳಾ ಠಾಕ್ರೆಯವರನ್ನು ಟೀಕಿಸಿ, ‘ಮಹಾರಾಷ್ಟ್ರ ಮಹಾರಾಷ್ಟ್ರದವರಿಗೆ ಮಾತ್ರಎಂಬುದು ಮತಿಗೇಡಿತನ. ಮಹಾರಾಷ್ಟ್ರವನ್ನು ಮರಾಠ ರಾಜ್‌ಆಗಿ ಬದಲಿಸುವವರೆಗೆ ಅವರು ತಮ್ಮ ನಿಲುವನ್ನು ಬದಲಿಸುವುದಿಲ್ಲ’ ಎಂದೆಲ್ಲಾ ಬರೆದಿದ್ದಾರೆ. ಹೀಗಾಗಿ ಆ ಸಮಯದಲ್ಲಿಸೇಂಟ್‌ ಕ್ಸೇವಿಯರ್‌ ಕಾಲೇಜಿನಲ್ಲಿ ಇತಿಹಾಸ ವಿಭಾಗದಲ್ಲಿ ಪದವಿ ವ್ಯಾಸಂಗ ಮಾಡುತ್ತಿದ್ದ ಆದಿತ್ಯ ವಿವಿ ನಿಲುವನ್ನು ತೀವ್ರವಾಗಿ ಖಂಡಿಸಿ ಪ್ರತಿಭಟನೆಗಳನ್ನು ಸಂಘಟಿಸಿದ್ದರು. ಅಲ್ಲಿಂದಾಚೆಗೆ ಅವರಿಗೆ ರಾಜಕೀಯ ರಂಗದ ವೇದಿಕೆಗಳು ತೆರೆದುಕೊಳ್ಳಲಾರಂಭಿಸಿದವು.

ಕಳೆದ ಮಾರ್ಚ್‌ ತಿಂಗಳಲ್ಲಿ ಮಹಾರಾಷ್ಟ್ರದ ಛತ್ರಪತಿ ಶಿವಾಜಿ ಟರ್ಮಿನಲ್‌ ಬಳಿ ಪಾದಚಾರಿ ಮೇಲ್ಸೇತುವೆ ಕುಸಿದು, ಆರು ಜನ ಮೃತಪಟ್ಟು 30ಕ್ಕೂ ಹೆಚ್ಚು ಜನರು ಗಂಭೀರವಾಗಿ ಗಾಯಗೊಂಡಿದ್ದರು. ಆಗಲೂ ದನಿ ಏರಿಸಿದ್ದ ಆದಿತ್ಯ, ಸ್ಥಳೀಯ ಸಂಸದ ಅರವಿಂದ ಸಾವಂತ್‌ ಹಾಗೂ ಮುಂಬೈ ಮೇಯರ್‌ ವಿಶ್ವನಾಥ್‌ ಮಹದೇಶ್ವರ್‌ ಅವರಿಗೆ ಖುದ್ದಾಗಿ ನಿಂತು ರಕ್ಷಣಾ ಕಾರ್ಯಾಚರಣೆ ಪರಿಶೀಲಿಸುವಂತೆ ಮನವಿ ಮಾಡಿದ್ದರು. ಈ ವೇಳೆ ಮೇಯರ್‌ ವಿಶ್ವನಾಥ್, ಮೇಲ್ಸೇತುವೆಯು ರೈಲ್ವೆ ಇಲಾಖೆ ವ್ಯಾಪ್ತಿಗೆ ಬರುತ್ತದೆ ಎಂದು ಹೇಳಿದ್ದರು. ಇದರಿಂದ ಕೆರಳಿದ್ದ ಆದಿತ್ಯ, ಇದು ಅವರಿವರನ್ನು ದೂರುತ್ತಾ ಕೂರುವ ಸಮಯವಲ್ಲ. ಕೂಡಲೇ ಪರಿಹಾರಕ್ಕೆ ಮುಂದಾಗಬೇಕು ಎಂದು ಗುಡುಗಿದ್ದರು.

ಪ್ರವಾಹ ಹಾಗೂ ಬರಪೀಡಿತ ಪ್ರದೇಶವಾದ ಮರಾಠವಾಡಕ್ಕೆ ಕಳೆದ ಫೆಬ್ರವರಿಯಲ್ಲಿ ಭೇಟಿ ನೀಡಿದ್ದ ವೇಳೆ ಆದಿತ್ಯ,ಅಲ್ಲಿನ ಜನರಿಗೆ ಕುಡಿಯುವ ನೀರು ಹಾಗೂ ಆಹಾರವನ್ನು ವಿತರಿಸಿದ್ದರು. ಅಲ್ಲಿನ ಹಳ್ಳಿಗಳ ಜನರೊಂದಿಗೆ ಬೆರೆತು ಅವರ ಸಮಸ್ಯೆಗಳನ್ನು ಆಲಿಸಿದ್ದರು. ಯಾವೊಂದು ಕಾರ್ಯಕ್ರಮದಲ್ಲಿಯೂ ಅವರು ನೀರು ಹಾಗೂ ಆಹಾರವನ್ನು ವೇದಿಕೆ ಮೇಲೆ ನಿಂತು ಹಂಚಲಿಲ್ಲ. ಎಲ್ಲರೊಂದಿಗೆ ಬೆರೆಯುತ್ತಾರೆ. ಅವರು ತಮ್ಮನ್ನು ತಾವು ನಾಯಕ ಎಂದು ಬಿಂಬಿಸಿಕೊಳ್ಳುವುದನ್ನು ಇಷ್ಟಪಡುವುದಿಲ್ಲ. ಮಾತ್ರವಲ್ಲದೆ ಜನರು ತಮ್ಮನ್ನು ‘ದಾದಾ’ ‘ಅಣ್ಣಾ’ ಎನ್ನುವ ಬದಲು‘ಆದಿತ್ಯ’ ಎಂದು ಕರೆಯುವುದನ್ನೇ ಇಷ್ಟಪಡುತ್ತಾರೆ.

2017ರಲ್ಲಿ ಸ್ಥಳೀಯ ಸಂಸ್ಥೆಗಳ ಚುನಾವಣೆ ವೇಳೆ ಬಿಜೆಪಿ ಹಾಗೂ ಶಿವಸೇನೆ ಪರಸ್ಪರ ಕಿತ್ತಾಡುತ್ತಿದ್ದಸಂದರ್ಭದಲ್ಲಿ, ‘ಯುವಸೇನೆಯ ಯಾರೊಬ್ಬರೂ ಟಿಕೆಟ್‌ಗೆ ಬೇಡಿಕೆ ಇಡಬಾರದು. ಬದಲಾಗಿ ಶಿವಸೇನೆ ಅಭ್ಯರ್ಥಿಗಳ ಜಯಕ್ಕಾಗಿ ಶ್ರಮಿಸಬೇಕು’ ಎಂದುಆದಿತ್ಯ ಸೂಚಿಸಿದ್ದರು. ಆಲ್ ಇಂಡಿಯಾ ಮಜ್ಲಿಸ್-ಎ-ಇತ್ತೇಹಾದುಲ್ ಮುಸ್ಲಿಮೀನ್ (ಎಐಎಂಐಎಂ) ಪಕ್ಷದ ಶಾಸಕ ಇಮ್ತಿಯಾಜ್‌ ಜಲೀಲ್‌ ಎಂಬುವವರು ಇತ್ತೀಚೆಗೆ ಔರಂಗಾಬಾದ್‌ನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಆದಿತ್ಯ ಜೊತೆ ವೇದಿಕೆ ಹಂಚಿಕೊಂಡಿದ್ದರು. ಈ ವೇಳೆ ನಡೆದ ಪ್ರಸಂಗವನ್ನು ನೆನಪು ಮಾಡಿಕೊಂಡ ಜಲೀಲ್‌, ಆದಿತ್ಯರ ನಡೆಯನ್ನು ಶ್ಲಾಘಿಸಿದ್ದರು. ಆದಿತ್ಯ ಭಾಷಣ ಮಾಡುತ್ತಿದ್ದ ವೇಳೆ ಹತ್ತಿರದಲ್ಲೇ ಇದ್ದ ಮಸೀದಿ ಬಳಿ ಆಜಾನ್‌ ಕೂಗುವುದು ಕೇಳಿಸಿದೆ. ತಕ್ಷಣ ಭಾಷಣ ನಿಲ್ಲಿಸಿದಆದಿತ್ಯ, ಆಜಾನ್‌ ಕೂಗುವುದು ನಿಂತ ಬಳಿಕ ಭಾಷಣ ಮುಂದುವರಿಸಿದ್ದರು. ಈ ಬಗ್ಗೆ ಪ್ರಶ್ನಿಸಿದಾಗ ಬೇರೆ ಧರ್ಮಿಯರ ಭಾವನೆಗಳಿಗೂ ಗೌರವ ಕೊಡುವುದಿನ್ನು ನಾನು ನನ್ನ ತಾತನಿಂದ ಕಲಿತುಕೊಂಡಿದ್ದೇನೆ ಎಂದು ಹೇಳಿದ್ದರು ಎಂದು ಜಲೀಲ್‌ ನೆನಪಿಸಿಕೊಂಡಿದ್ದಾರೆ. ಹಿಂದೂ ಧರ್ಮ ಸಿದ್ಧಾಂತಗಳ ಹಿನ್ನಲೆಯ ಬಾಳ ಠಾಕ್ರೆ ಮೊಮ್ಮಗ ಓದಿದ್ದು, ಕ್ರೈಸ್ತ ಮಿಷನರಿ ಶಾಲೆ, ಕಾನ್ವೆಂಟ್‌ಗಳಲ್ಲಿ. ಅವರು ಕಾನೂನು ಪದವೀಧರ.

ಲೋಕಸಭೆ ಚುನಾವಣೆ ದಿನಾಂಕ ಪ್ರಕಟಗೊಳ್ಳುತ್ತಿದ್ದಂತೆ ಎಲ್ಲ ರಾಜ್ಯಗಳಂತೆ ಮಹಾರಾಷ್ಟ್ರದಲ್ಲೂ ರಾಜಕೀಯ ಚಟುವಟಿಕೆಗಳು ಗರಿಗೆದರಿದ್ದವು. ಶಿವಸೇನೆಯ ರಣತಂತ್ರ ಕಾರ್ಯರೂಪಕ್ಕೆ ತರಲು ಆದಿತ್ಯ ಸಕ್ರಿಯವಾಗಿದ್ದರು. ಹಾಗಾಗಿ ಅವರು ಈ ಬಾರಿ ಲೋಕಸಭೆ ಚುನಾವಣೆಯಲ್ಲಿ ಕಣಕ್ಕಿಳಿಯಲಿದ್ದಾರೆ ಎಂಬ ವದಂತಿ ಹಬ್ಬಿತ್ತು. ಆದರೆ ಈ ಬಾರಿ ಆದಿತ್ಯ ಕಣಕ್ಕಿಳಿಯಲಿಲ್ಲ. ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಅವರು ಕಣಕ್ಕಿಳಿಯುವ ಸಾಧ್ಯತೆ ಇವೆ ಎನ್ನಲಾಗುತ್ತಿದೆ.

ಬಾಳ ಠಾಕ್ರೆ ಮೊಮ್ಮಗ ಚಿಕ್ಕ ವಯಸ್ಸಿಗೇ ಅಪಾರ ಅಭಿಮಾನಿ ಬಳಗ ಸಂಪಾದಿಸಿದ್ದಾರೆ. ಸದ್ಯಮಹಾರಾಷ್ಟ್ರ ರಾಜಕೀಯದ ರೈಸಿಂಗ್‌ ಸ್ಟಾರ್‌ನಂತೆ ಕಂಗೊಳಿಸುತ್ತಿರುವ ಅವರುರಾಜಕೀಯದಲ್ಲಿ ಉತ್ತುಂಗಕ್ಕೇರುವ ಸೂಚನೆಯನ್ನೂ ನೀಡಿದ್ದಾರೆ.‌

(ವಿಡಿಯೊ ಮತ್ತು ಮಾಹಿತಿ– ಅಭಿಲಾಷ್‌ ಎಸ್‌.ಡಿ.)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT