ಬುಧವಾರ, ಅಕ್ಟೋಬರ್ 23, 2019
24 °C
ಠಾಕ್ರೆ ಕುಟುಂಬದ ಮೊದಲ ಕುಡಿ ಚುನಾವಣಾ ರಾಜಕಾರಣಕ್ಕೆ: ನಾಮಪತ್ರ ಸಲ್ಲಿಸಿದ ಆದಿತ್ಯ

ಸೇನಾ ಸಜ್ಜು, ಸೇನಾಪತಿಯೂ ಸಿದ್ಧ: ಶಿವಸೇನಾ

Published:
Updated:
Prajavani

ಮುಂಬೈ: ತಮ್ಮ ಪ್ರಭಾವಿ ಅಜ್ಜ, ದಿ. ಬಾಳಾ ಠಾಕ್ರೆ ಅವರ ಆಶೀರ್ವಾದ ಕೋರುತ್ತಾ, ಶಿವಸೇನಾದ ಯುವ ನಾಯಕ ಆದಿತ್ಯ ಠಾಕ್ರೆ ಅವರು ಚುನಾ ವಣಾ ರಾಜಕಾರಣದಲ್ಲಿ ತಮ್ಮ ಮೊದಲ ಹೆಜ್ಜೆಗಳನ್ನು ಗುರುವಾರ ಇರಿಸಿದ್ದಾರೆ. 

ಸೇನಾದ ಅಧ್ಯಕ್ಷ ಉದ್ಧವ್‌ ಠಾಕ್ರೆ ಮಗ ಆದಿತ್ಯ (29) ವರ್ಲಿ ವಿಧಾನಸಭಾ ಕ್ಷೇತ್ರದಿಂದ ನಾಮಪತ್ರ ಸಲ್ಲಿಸಿದರು. 

ಮಹಾರಾಷ್ಟ್ರದ ಮುಂದಿನ ಮುಖ್ಯಮಂತ್ರಿ ಎಂದೇ ಆದಿತ್ಯ ಅವರನ್ನು ಸೇನಾ ಬಿಂಬಿಸುತ್ತಿದೆ. ಆದರೆ, ಇದು ಮಿತ್ರ ಪಕ್ಷ ಬಿಜೆಪಿಗೆ ಪಥ್ಯವಾಗಿಲ್ಲ. ದೇವೇಂದ್ರ ಫಡಣವೀಸ್‌ ಅವರೇ ಮುಂದಿನ ಅವಧಿಗೂ ಮುಖ್ಯಮಂತ್ರಿಯಾಗಿ ಮುಂದುವರಿಯಲಿದ್ದಾರೆ ಎಂದು ಬಿಜೆಪಿ ಹೇಳುತ್ತಿದೆ. 

ಶಿವಸೇನಾದ ಯುವಘಟಕವಾದ ‘ಯುವಸೇನಾ’ದ ಅಧ್ಯಕ್ಷರಾಗಿರುವ ಆದಿತ್ಯ ಅವರಿಗೆ ಕೆಲ ವರ್ಷಗಳ ಹಿಂದೆ ಶಿವಸೇನಾದ ‘ನಾಯಕ’ ಎಂಬ ಪಟ್ಟ ಕಟ್ಟಲಾಗಿತ್ತು. 

ಮರಾಠಿ ಜನರ ಹಕ್ಕುಗಳ ರಕ್ಷಣೆಯ ಉದ್ದೇಶದೊಂದಿಗೆ ಶಿವಸೇನಾ ಸ್ಥಾಪನೆಯಾಗಿ 53 ವರ್ಷ ಬಳಿಕ ಸ್ಥಾಪಕರ ಕುಟುಂಬದ ಸದಸ್ಯರೊಬ್ಬರು ಚುನಾವಣಾ ರಾಜಕಾರಣಕ್ಕೆ ಬಂದಿದ್ದಾರೆ. ಇದು ಸೇನಾ ಬೆಂಬಲಿಗರಲ್ಲಿ ಭಾರಿ ಸಂಭ್ರಮಕ್ಕೆ ಕಾರಣವಾಗಿದೆ. 

ಆದಿತ್ಯ ಅವರ ಮುತ್ತಜ್ಜ ಪ್ರಬೋಧನಕರ್‌ ಠಾಕ್ರೆ ಅವರು ಸಮಾಜಸುಧಾರಕ ಮತ್ತು ಬರಹಗಾರ. ಸಂಯುಕ್ತ ಮಹಾರಾಷ್ಟ್ರ ಸಮಿತಿಯ ಸದಸ್ಯರೂ ಆಗಿದ್ದರು. ಆದಿತ್ಯ ಅವರ ಮಾವ ರಾಜ್‌ ಠಾಕ್ರೆ ಅವರು ಮಹಾರಾಷ್ಟ್ರ ನವನಿರ್ಮಾಣ ಸೇನಾದ (ಎಂಎನ್‌ಎಸ್‌) ಅಧ್ಯಕ್ಷ. ಆದಿತ್ಯ ವಿರುದ್ಧ ಎಂಎನ್‌ಎಸ್‌ ಅಭ್ಯರ್ಥಿಯನ್ನು ಕಣಕ್ಕೆ ಇಳಿಸಿಲ್ಲ. 

ಠಾಕ್ರೆ ಕುಟುಂಬದ ನಿವಾಸ ‘ಮಾತೋಶ್ರೀ’ಯಿಂದ ಹೊರಬರುವ ಮೊದಲು, ಬಾಳಾ ಠಾಕ್ರೆ ಅವರ ಫೋಟೊದ ಮುಂದೆ ನಮಿಸುವ ಚಿತ್ರವನ್ನು ಸಾಮಾಜಿಕ ಜಾಲತಾಣದಲ್ಲಿ ಆದಿತ್ಯ ಪ್ರಕಟಿಸಿದ್ದರು. ನಾಮಪತ್ರ ಸಲ್ಲಿಕೆಗೂ ಮೊದಲು ಭಾರಿ ಮೆರವಣಿಗೆ ನಡೆಯಿತು. ತಂದೆ ಉದ್ಧವ್‌, ತಾಯಿ ರಶ್ಮಿ ಮತ್ತು ಸಹೋದರ ತೇಜಸ್‌ ಅವರು ಜತೆಗಿದ್ದರು. ವರ್ಲಿಯ ಬೀದಿಗಳಲ್ಲಿ ಸಾಗಿದ ರೋಡ್‌ಶೋದಲ್ಲಿ ಬಾಳಾ ಠಾಕ್ರೆ ಚಿತ್ರಗಳಿದ್ದ ಫಲಕಗಳು ರಾರಾಜಿಸುತ್ತಿದ್ದವು. ‘ಸೇನಾ ಸಜ್ಜು, ಸೇನಾಪತಿಯೂ ಸಿದ್ಧ’ ಎಂಬ ಘೋಷಣೆಗಳೂ ಮೊಳಗಿದವು.

ಸುರಕ್ಷಿತ ಕ್ಷೇತ್ರ

ಶಿವಸೇನಾದ ‘ಯುವರಾಜ’ನ ಸ್ಪರ್ಧೆಗೆ ಮುಂಬೈನ ವರ್ಲಿ ಅತ್ಯಂತ ಸುರಕ್ಷಿತ ಕ್ಷೇತ್ರ.

‘ಮರಾಠಿ ಅಸ್ಮಿತೆಯ ಕೇಂದ್ರ ಸ್ಥಾನವೇ ವರ್ಲಿ’ ಎಂದು ಲೇಖಕ ಹಾಗೂ ಪತ್ರಕರ್ತ ಜತಿನ್‌ ದೇಸಾಯಿ ಹೇಳುತ್ತಾರೆ.

ಆರು ತಿಂಗಳಿನಿಂದಲೇ ವರ್ಲಿಯಲ್ಲಿ ಸೇನಾದ ಕ್ಷೇತ್ರಕಾರ್ಯ ಆರಂಭವಾಗಿದೆ. ಆದಿತ್ಯ ಅವರ ಸ್ಪರ್ಧೆಗಾಗಿ ವರ್ಲಿ ಮತ್ತು ಮಾಹಿಮ್‌ ಕ್ಷೇತ್ರಗಳನ್ನು ಆಯ್ದುಕೊಳ್ಳಲಾಗಿತ್ತು. ಅಂತಿಮವಾಗಿ, ವರ್ಲಿಯನ್ನು ಆಯ್ಕೆ ಮಾಡಲಾಯಿತು.

ಠಾಕ್ರೆ ಕುಟುಂಬದ ನಿಕಟವರ್ತಿ ಅನಿಲ್‌ ಪರಬ್‌ ಅವರು ವರ್ಲಿಯಲ್ಲಿ ಹಲವು ಸಭೆಗಳನ್ನು ನಡೆಸಿದ್ದರು. ವರ್ಲಿಯ ಹಾಲಿ ಶಾಸಕ ಸುನಿಲ್ ಶಿಂಧೆ ಮತ್ತು ಎನ್‌ಸಿಪಿ ತೊರೆದು ಇತ್ತೀಚೆಗಷ್ಟೇ ಸೇನಾ ಸೇರಿರುವ ಸಚಿನ್‌ ಅಹಿರ್‌ ಅವರೂ ಈ ಸಭೆಗಳಲ್ಲಿ ಭಾಗವಹಿಸಿದ್ದರು. ಹಿಂದಿನ ಚುನಾವಣೆಗಳಲ್ಲಿ ಶಿಂಧೆ ಎದುರು ಅಹಿರ್‌ ಸೋತಿದ್ದರು. ‘ಆದಿತ್ಯ ವಿರುದ್ಧ ಸ್ಪರ್ಧಿಸುವ ಯಾರಿಗೂ ಠೇವಣಿ ದೊರೆಯದಂತೆ ಮಾಡಬೇಕು ಎಂಬುದು ನಮ್ಮ ಕಾರ್ಯತಂತ್ರ’ ಎಂದು ಸೇನಾ ಮುಖಂಡರೊಬ್ಬರು ಹೇಳಿದ್ದಾರೆ.

‘ಕೈ’ಗೆ ಬಂಡಾಯದ ಬಿಸಿ

ಚಂಡೀಗಡ: ಇದೇ 21ರಂದು ವಿಧಾನಸಭೆಗೆ ಚುನಾವಣೆ ನಡೆಯಲಿರುವ ಮಹಾರಾಷ್ಟ್ರ ಮತ್ತು ಹರಿಯಾಣದಲ್ಲಿ ಕಾಂಗ್ರೆಸ್‌ ಪಕ್ಷಕ್ಕೆ ಬಂಡಾಯದ ಬಿಸಿ ತಟ್ಟಿದೆ. ಹರಿಯಾಣ ಕಾಂಗ್ರೆಸ್‌ ಘಟಕದ ಅಧ್ಯಕ್ಷ ಅಶೋಕ್‌ ತನ್ವರ್‌ ಅವರು ಚುನಾವಣೆಗೆ ಸಂಬಂಧಿಸಿ ತಮಗೆ ವಹಿಸಿದ ಎಲ್ಲ ಹುದ್ದೆಗಳಿಗೆ ಗುರುವಾರ ರಾಜೀನಾಮೆ ನೀಡಿದ್ದಾರೆ. ವಿಧಾನಸಭೆ ಚುನಾವಣಾ ಪ್ರಚಾರದಲ್ಲಿ ಭಾಗವಹಿಸುವುದಿಲ್ಲ ಎಂದು ಮಹಾರಾಷ್ಟ್ರದ ಮುಖಂಡ ಸಂಜಯ್‌ ನಿರುಪಮ್‌ ಹೇಳಿದ್ದಾರೆ.

ಟಿಕೆಟ್‌ ಹಂಚಿಕೆಯಲ್ಲಿ ಭಾರಿ ಭ್ರಷ್ಟಾಚಾರ ನಡೆದಿದೆ. ಟಿಕೆಟ್‌ ಮಾರಾಟವಾಗಿದೆ ಎಂದು ಆರೋಪಿಸಿ ತನ್ವರ್‌ ಅವರು ಪಕ್ಷದ ಅಧ್ಯಕ್ಷೆ ಸೋನಿಯಾ ಗಾಂಧಿ ನಿವಾಸದ ಮುಂದೆ ಬುಧವಾರ ಧರಣಿ ನಡೆಸಿದ್ದರು. ಮಾಜಿ ಮುಖ್ಯಮಂತ್ರಿ ಭೂಪಿಂದರ್ ಸಿಂಗ್‌ ಹೂಡಾ ಅವರ ಬೆಂಬಲಿಗರಿಗೆ ಮಾತ್ರ ಟಿಕೆಟ್‌ ನೀಡಲಾಗಿದೆ ಎಂಬುದು ತನ್ವರ್‌ ಆರೋಪ. ಹರಿಯಾಣದ ಕಾಂಗ್ರೆಸ್‌ ಘಟಕವು ‘ಹೂಡಾ ಕಾಂಗ್ರೆಸ್‌’ ಆಗುವುದನ್ನು ಕಾಂಗ್ರೆಸ್‌ ಹೈಕಮಾಂಡ್‌ ತಡೆಯತ್ತಿಲ್ಲ ಎಂದು ಅವರು ಹೇಳಿದ್ದಾರೆ. ಆದರೆ, ಪಕ್ಷದ ಸದಸ್ಯನಾಗಿ ಮುಂದುವರಿಯುವುದಾಗಿ ತನ್ವರ್‌ ಹೇಳಿದ್ದಾರೆ.

ಒಬ್ಬ ಅಭ್ಯರ್ಥಿಯ ಹೆಸರನ್ನಷ್ಟೇ ತಾವು ಶಿಫಾರಸು ಮಾಡಿದ್ದರೂ ಅವರಿಗೆ ಟಿಕೆಟ್‌ ಸಿಕ್ಕಿಲ್ಲ ಎಂಬುದು ನಿರುಪಮ್‌ ಅವರ ಅತೃಪ್ತಿಗೆ ಕಾರಣ. ಕಾಂಗ್ರೆಸ್‌ಗೆ ತಮ್ಮ ಅಗತ್ಯ ಇಲ್ಲ ಎಂದು ಅವರು ಹರಿಹಾಯ್ದಿದ್ದಾರೆ. ಪಕ್ಷವು ತಮ್ಮನ್ನು ಇದೇ ರೀತಿ ನಡೆಸಿಕೊಳ್ಳುವುದು ಮುಂದುವರಿದರೆ ಕಾಂಗ್ರೆಸ್‌ ಬಿಡುವ ದಿನ ದೂರವಿಲ್ಲ ಎಂದೂ ಅವರು ಹೇಳಿದ್ದಾರೆ. ಮಹಾರಾಷ್ಟ್ರ ಕಾಂಗ್ರೆಸ್‌ನ ಹಲವು ಮುಖಂಡರು ಪಕ್ಷ ತೊರೆದಿರುವ ಈ ಸಂದರ್ಭದಲ್ಲಿ ನಿರುಪಮ್‌ ಅವರ ಬಂಡಾಯವನ್ನು ಅರಗಿಸಿಕೊಳ್ಳುವುದು ಕಾಂಗ್ರೆಸ್‌ಗೆ ಕಷ್ಟ ಎನ್ನಲಾಗಿದೆ.

**

₹16 ಕೋಟಿ ಒಡೆಯ

₹16.05 ಕೋಟಿ - ಆದಿತ್ಯ ಆಸ್ತಿಯ ಒಟ್ಟು ಮೌಲ್ಯ

₹4.67 ಕೋಟಿ - ಸ್ಥಿರಾಸ್ತಿ

₹10.36 ಕೋಟಿ- ಬ್ಯಾಂಕ್‌ ಠೇವಣಿ

₹64.65 ಲಕ್ಷ - ಆಭರಣ

ಚುನಾವಣಾ ಫಲಿತಾಂಶ 2019 | ಹರಿಯಾಣ ಮತ್ತು ಮಹಾರಾಷ್ಟ್ರ ವಿಧಾನಸಭೆ 2019 ಚುನಾವಣೆಗೆ ಸಂಬಂಧಿಸಿದ ಸಮಗ್ರ ಸುದ್ದಿ, ಮಾಹಿತಿ, ವಿಶ್ಲೇಷಣೆ ಇಲ್ಲಿ ಲಭ್ಯ.

ಮಹಾರಾಷ್ಟ್ರ ವಿಧಾನಸಭೆಯ ಫಲಿತಾಂಶಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ

ಹರಿಯಾಣ ವಿಧಾನಸಭೆಯ ಫಲಿತಾಂಶಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ

ಪ್ರತಿಕ್ರಿಯಿಸಿ (+)