ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸುವರ್ಣ ಸಂಭ್ರಮದಲ್ಲಿ ಸೆಂಟ್ ಜೋಸೆಫ್ ಕಾನ್ವೆಂಟ್

Last Updated 20 ಮೇ 2018, 14:07 IST
ಅಕ್ಷರ ಗಾತ್ರ

ನರಸಿಂಹರಾಜಪುರ ತಾಲ್ಲೂಕು ಧಾರ್ಮಿಕವಾಗಿ ಐತಿಹಾಸಿಕ ಸಾಕಷ್ಟು ಪ್ರಾಮುಖ್ಯತೆ ಪಡೆದಿದ್ದು, ಭಾವೈಕ್ಯತೆ ಕೇಂದ್ರ ಎಂದು ಪ್ರಸಿದ್ಧಿ ಪಡೆದಿದೆ. ಈ ಹಿಂದೆ ಕೇರಳದಿಂದ ತಾಲ್ಲೂಕು ಕೇಂದ್ರಕ್ಕೆ ವಲಸೆ ಬಂದ ಕ್ರಿಶ್ಚಿಯನ್ ಸಮುದಾಯದವರು ಇಲ್ಲಿಯೇ ತಮ್ಮ ನೆಲೆ ಕಂಡು ಬೇರೆ, ಬೇರೆ ಕ್ಷೇತ್ರಕ್ಕೆ ತಮ್ಮದೇ ಆದ ಕೊಡುಗೆ ನೀಡಿದ್ದಾರೆ.

ಸಮಾಜಮುಖಿ ಕಾರ್ಯಗಳಲ್ಲಿ ತೊಡಗಿಕೊಂಡಿರುವ ಸೆಂಟ್ ಜೋಸೆಫ್ ಕಾನ್ವೆಂಟ್ ಪ್ರಾರಂಭವಾಗಿ ಸ್ವರ್ಣಮಹೋತ್ಸವನ್ನು ಆಚರಿಸಿಕೊಂಡಿತು.

ಸೇಂಟ್ ಜೋಸೆಫ್ ಕಾನ್ವೆಂಟ್ ನ ಸ್ಥಾಪನೆಯ ಹಿನ್ನೆಲೆ: ಫೆಬ್ರುವರಿ 13,1866 ರಲ್ಲಿ ಸಂತಕುರಿಯಾಕೋಸ್ ಏಲಿ
ಯಾಸ್ ಚಾವರ ಹಾಗೂ ಪೂಜ್ಯ ಗುರು ಲೆಯೋಪೋಳ್ದ್ ಬೊಕ್ಕಾರೊ ಎಂಬ ಇಟಲಿಯ ಕಾರ್ಮಲೈಟ್ ಮಿಷನರಿ ಅವರ ದೇವರ ಮತ್ತು ಧರ್ಮ ಸಭೆ ಪ್ರೀತಿಯ ಫಲವಾಗಿ ಕಾಂಗ್‌ ರಿಗೇಶನ್ ಮದರ್‌ ಆಫ್ ಕಾರ್ಮೆಲ್ ಸ್ಥಾಪಿತವಾಯಿತು.

ಕೇರಳದಲ್ಲಿ ಮಹಿಳೆಯರಿಗಾಗಿಯೇ ಸ್ಥಾಪನೆಯಾದ ಕಾನ್ವೆಂಟ್ ಸಿ.ಎಂ.ಸಿ. ಕೇವಲ ₹18 ವೆಚ್ಚದಲ್ಲಿ ಕೇರಳದ ಕೂನಮ್ಮಾಮ್ ಎಂಬ ಸ್ಥಳದಲ್ಲಿ ತಾಳೆಗರಿಗಳಿಂದ ನಿರ್ಮಿಸಿದ ಸಣ್ಣ ಕಾನ್ವೆಂಟ್‌ನಲ್ಲಿ ಕ್ರೈಸ್ತ ಸನ್ಯಾಸಿನಿಯರ ಸೇವೆ ಆರಂಭ ಆಯಿತು. ಪ್ರಸ್ತುತ ದಿನಗಳಲ್ಲಿ ಸಿಎಂಸಿ ಶಾಖೆಗಳು ಸಾಕಷ್ಟು ಬೆಳೆದಿವೆ. ಇದರ ಒಂದು ಶಾಖೆ ಕೇರಳದ ತಲಿಚೇರಿಯಲ್ಲಿ ಸ್ಥಾಪಿತವಾಯಿತು. ಅಲ್ಲಿ ಧರ್ಮಾಧ್ಯಕ್ಷರಾಗಿದ್ದ ಸೆಬಾಸ್ಟ್ಯನ್ ವಳ್ಳೂಪ್ಪಿಳ್ಳಿಯವರ ಅಪೇಕ್ಷೆಯಂತೆ 27 ಡಿಸೆಂಬರ್, 1964 ರಲ್ಲಿ ಸಂತ ಜೋಸೆಫರ ಹೆಸರಿನಲ್ಲಿ ನರಸಿಂಹರಾಜಪುರ ತಾಲ್ಲೂಕಿನ ಮೆಣಸೂರು ಗ್ರಾಮದಲ್ಲಿ ಕಾನ್ವೆಂಟ್ ಸ್ಥಾಪನೆಯಾಯಿತು.

ಇಲ್ಲಿನ ಕಾನ್ವೆಂಟ್ ಗೆ ಮೊದಲಿಗೆ ಕ್ರೈಸ್ತ ಸನ್ಯಾಸಿನಿಯರಾಗಿ ಸುಪೀರಿಯರ್ ಸಿಸ್ಟರ್ ಜೂಲಿಯಾ, ಸಿಸ್ಟರ್ ಜೋಸೆಫ, ಸಿಸ್ಟರ್ ಸಿಸಿಲಿ, ಸಿಸ್ಟರ್ ಜೋಬಿಟ್ಟ ಆಗಮಿಸಿದರು. ಬಹುದೂರದ ರಾಜ್ಯದಿಂದ ಈ ಭಾಗಕ್ಕೆ ಬಂದಿದ್ದ ಸನ್ಯಾಸಿನಿಯರು ಪ್ರಾರಂಭದಲ್ಲಿ ಸಾಕಷ್ಟು ಸಮಸ್ಯೆ ಎದುರಿಸಿದರು. ನಂತರದ ದಿನಗಳಲ್ಲಿ ನಾಡಿನ ನಡೆ,ನುಡಿ ಆಚಾರ ವಿಚಾರಗಳನ್ನು ತಿಳಿದು ಕೊಂಡು ಕಾಲು ನಡಿಗೆ ಮುಖಾಂತರ ಹಳ್ಳಿಹಳ್ಳಿಗೂ ಹೋಗಿ ಸಮಾಜ ಸೇವಾ ಕಾರ್ಯಗಳಲ್ಲಿ ತಮ್ಮನ್ನು ತೊಡಗಿ
ಸಿಕೊಂಡರು. ಸಮಾಜದಲ್ಲಿ ಶಿಕ್ಷಣದ ಸೌಲಭ್ಯ ಇಲ್ಲದಿರುವುದನ್ನು ಅರಿತು ಸಿಎಂಸಿಯ ಸ್ಥಾಪಕರಾದ ಸಂತ ಕುರಿಯಾಕೋಸ್ ಏಲಿಯಾಸ್ ಚಾವರ ಅವರ ಧ್ಯೇಯದಂತೆ ಶಿಕ್ಷಣಕ್ಕೆ ಹೆಚ್ಚು ಆದ್ಯತೆ ನೀಡಿದರು.

ಆರೋಗ್ಯ ಕ್ಷೇತ್ರದ ಕೊಡುಗೆ : ನರಸಿಂಹರಾಜಪುರದಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರ ಮಾತ್ರವಿದ್ದು ಖಾಸಗಿ ಆಸ್ಪತ್ರೆಗಳು ಇಲ್ಲದ ಸಂದರ್ಭದಲ್ಲಿ ಉತ್ತಮ ಆರೋಗ್ಯ ಸೇವೆಯನ್ನು ಒದಗಿಸುವ ಸಲುವಾಗಿ 1974ರಲ್ಲಿ ದಿ ಪುಷ್ಪ ಮಿಷನ್ ಆಸ್ಪತ್ರೆಯನ್ನು ಸ್ಥಾಪಿಸಲಾಯಿತು.ಇದು ಪ್ರಸ್ತುತ ಸುಸಜ್ಜಿತ ಆಸ್ಪತ್ರೆಯಾಗಿ ಬೆಳವಣಿಗೆ ಹೊಂದಿದೆ.

ಶೈಕ್ಷಣಿಕ ಕ್ಷೇತ್ರಕ್ಕೆ ಕೊಡುಗೆ: ತಾಲ್ಲೂಕಿನ ಭಾಗದಲ್ಲಿ ಸರ್ಕಾರಿ ಶಾಲೆಗಳನ್ನು ಹೊರತು ಪಡಿಸಿ ಖಾಸಗಿ ಕನ್ನಡ ಮಾಧ್ಯಮ ಶಾಲೆಗಳು ವೀರಳವಾಗಿದ್ದ ಸಂದರ್ಭದಲ್ಲಿ 1987ರಲ್ಲಿ ಬಡಜನರಿಗೆ ರಿಯಾಯಿತಿ ದರದಲ್ಲಿ ಶಿಕ್ಷಣವನ್ನು ಒದಗಿಸುವ ಸಲುವಾಗಿ ಕಾರ್ಮೆಲ್ ಹಿರಿಯ ಪ್ರಾಥಮಿಕ ಶಾಲೆಯನ್ನು ಆರಂಭಿಸಲಾಯಿತು. 2005ರಲ್ಲಿ ಮೌಂಟ್ ಕಾರ್ಮೆಲ್
ಪದವಿ ಪೂರ್ವ ಕಾಲೇಜು ಸಹ ಆರಂಭಿಸಲಾಯಿತು. ಖಾಸಗಿ ಶಿಕ್ಷಣ ಸಂಸ್ಥೆಗಳಲ್ಲಿ ಜನರ ಆರ್ಥಿಕ ಪರಿಸ್ಥಿತಿ ಅರಿತು ಕೊಂಡು ಕಡಿಮೆ ವೆಚ್ಚದ ಉತ್ತಮ ಶಿಕ್ಷಣ ನೀಡುವ ಕೆಲಸ ಮಾಡಲಾಗುತ್ತಿದೆ.

ಅನಾಥಾಶ್ರಮ ಸ್ಥಾಪನೆ : 1968ರಲ್ಲಿ ಸಂತ ಜೋಸೆಫ್ ಕಾನ್ವೆಂಟ್ ನಲ್ಲಿ ಜ್ಯೋತಿಭವನ ಎಂಬ ಅನಾಥಾಶ್ರಮವನ್ನು ಆರಂಭಿಸಲಾಯಿತು. ಜಾತಿ,ಧರ್ಮ, ಮತ ಎಂಬ ಬೇಧವಿಲ್ಲದೆ ಅನೇಕ ಅನಾಥಮಕ್ಕಳಿಗೆ ಈ ಆಶ್ರಮ ಆಶ್ರಯವನ್ನು ನೀಡಿತು.

ಇಲ್ಲಿ ಸಾಕಷ್ಟು ಮಕ್ಕಳು ಶಿಕ್ಷಣವನ್ನು ಪಡೆದು ಉತ್ತಮ ಭವಿಷ್ಯ ರೂಪಿಸಿ ಕೊಂಡಿದ್ದಾರೆ. ಸಾವಿರಾರೂ ಹೆಣ್ಣು ಮಕ್ಕಳು ಇಲ್ಲಿನ ಸೌಲಭ್ಯ ಪಡೆದಿದ್ದಾರೆ, ಪ್ರಸ್ತುತವು ಸಹ ಹೆಣ್ಣುಮಕ್ಕಳಿಗೆ ಈ ಭವನ ಆಶ್ರಯ ತಾಣವಾಗಿದೆ.

ಸಮಾಜಮುಖಿ ಕಾರ್ಯಗಳನ್ನು ಕೈಗೊಳ್ಳುವ ಉದ್ದೇಶದಿಂದ ಸ್ಥಾಪಿತ ಸೇಂಟ್ ಜೋಸೆಫ್ ಕಾನ್ವೆಂಟ್ ಕಳೆದ ಬುಧವಾರ ಸುವರ್ಣ ಮಹೋತ್ಸವ ಆಚರಿಸಿಕೊಂಡಿತು. ಇದರ ಅಂಗವಾಗಿ ಭದ್ರಾವತಿ ಧರ್ಮ ಪ್ರಾಂತ್ಯದ ಧರ್ಮಾಧ್ಯಕ್ಷ ಜೋಸೆಫ್ ಅರುಮಚ್ಚಾಡತ್ ನೇತೃತ್ವದಲ್ಲಿ ವಿಶೇಷ ಪೂಜೆಯನ್ನು ಆಯೋಜಿಸಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT