ಸೋನಿಯಾಗಾಂಧಿ ಕ್ಷೇತ್ರ ರಾಯಬರೇಲಿ ಮೇಲೆ ಬಿಜೆಪಿ ಕಣ್ಣು

7
ಅಮೇಥಿಯ ನಂತರ ರಾಯ್‌ಬರೇಲಿಗೆ ದಾರಿ ಹುಡುಕುತ್ತಿದೆ ಬಿಜೆಪಿ

ಸೋನಿಯಾಗಾಂಧಿ ಕ್ಷೇತ್ರ ರಾಯಬರೇಲಿ ಮೇಲೆ ಬಿಜೆಪಿ ಕಣ್ಣು

Published:
Updated:

ನವದೆಹಲಿ: ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾಗಾಂಧಿ ಲೋಕಸಭೆಯಲ್ಲಿ ಪ್ರತಿನಿಧಿಸುವ ಉತ್ತರಪ್ರದೇಶದ ರಾಯಬರೇಲಿ ಕ್ಷೇತ್ರವನ್ನು ತನ್ನತ್ತ ಒಲಿಸಿಕೊಳ್ಳಲು ಬಿಜೆಪಿ ಶ್ರಮಹಾಕುತ್ತಿದೆ. 2019ರ ಲೋಕಸಭೆ ಚುನಾವಣೆಗೆ ತಯಾರಿ ಆರಂಭಿಸಿರುವ ಪಕ್ಷವು ರಾಯಬರೇಲಿಯಲ್ಲಿ ಮತದಾರರನ್ನು ಓಲೈಸಲು ಹಲವು ತಂತ್ರಗಳನ್ನು ಹೆಣೆದಿದೆ.

ರಾಯಬರೇಲಿಯಲ್ಲಿ ಕಳೆದ ಏಪ್ರಿಲ್‌ ತಿಂಗಳಲ್ಲಿ ನಡೆದಿದ್ದ ರ‍್ಯಾಲಿಯಲ್ಲಿ ಬಿಜೆಪಿ ಅಧ್ಯಕ್ಷ ಅಮಿತ್‌ ಶಾ, ‘ಪರಿವಾರವಾದ’ (ವಂಶಪಾರಂಪರ್ಯ ಆಡಳಿತ) ಕೊನೆಗೊಳಿಸುವ ಕಾಲ ಈಗ ಬಂದಿದೆ. ನಾವೆಲ್ಲರೂ ಸೇರಿ ‘ವಿಕಾಸವಾದ’ (ಅಭಿವೃದ್ಧಿ) ಆರಂಭಿಸೋಣ ಬನ್ನಿ’ ಎಂದು ಕರೆ ನೀಡಿದ್ದರು. ಇದೀಗ ಹಣಕಾಸು ಸಚಿವ ಅರುಣ್‌ ಜೇಟ್ಲಿ ತಮ್ಮ ಸಂಸತ್ ಸದಸ್ಯರ ಪ್ರದೇಶಾಭಿವೃದ್ಧಿ ನಿಧಿಯನ್ನು ರಾಯ್‌ಬರೇಲಿಯಲ್ಲಿಯೇ ಖರ್ಚು ಮಾಡಲು ನಿರ್ಧರಿಸಿದ್ದಾರೆ.

ಕಾಂಗ್ರೆಸ್ ಮುಖಂಡರೂ ಆಗಿದ್ದ ವಿಧಾನ ಪರಿಷತ್ ಸದಸ್ಯ ದಿನೇಶ್ ಪ್ರತಾಪ್ ಸಿಂಗ್ ಮತ್ತು ಇತರ ನಾಯಕರ ಬಿಜೆಪಿ ಸೇರ್ಪಡೆ ಹಿನ್ನೆಲೆಯಲ್ಲಿ ನಡೆದ ರ‍್ಯಾಲಿಯಲ್ಲಿ ಅಮಿತ್ ಶಾ ಮಾತನಾಡಿದ್ದರು. ಗಾಂಧಿ ಕುಟುಂಬದ ಶಕ್ತಿಕೇಂದ್ರ ಎನಿಸಿದ ರಾಯ್‌ಬರೇಲಿಯಲ್ಲಿ ತಳವೂರಲು ಇದು ಬಿಜೆಪಿ ಇಟ್ಟ ಮೊದಲ ಹೆಜ್ಜೆಯಾಗಿತ್ತು. ಇದೀಗ ಅರುಣ್‌ ಜೇಟ್ಲಿ ಪ್ರಕಟಿಸಿರುವ ನಿರ್ಧಾರವೂ ಈ ನಿಟ್ಟಿನಲ್ಲಿ ಪ್ರಾಮುಖ್ಯತೆ ಪಡೆದುಕೊಂಡಿದೆ.

‘ಅರುಣ್‌ಜೇಟ್ಲಿ ಉತ್ತರ ಪ್ರದೇಶದಿಂದ ರಾಜ್ಯಸಭೆಗೆ ಆಯ್ಕೆಯಾಗಿದ್ದಾರೆ. ರಾಯ್‌ಬರೇಲಿಯಲ್ಲಿ ಅಭಿವೃದ್ಧಿ ಕಾಮಗಾರಿಗಳನ್ನು ನಿರ್ವಹಿಸುವಲ್ಲಿ ಕಾಂಗ್ರೆಸ್ ವಿಫಲವಾಗಿದೆ. ರಾಜ್ಯದಿಂದ ಆಯ್ಕೆಯಾಗಿರುವ ಇತರ ಲೋಕಸಭಾ ಸದಸ್ಯರು ತಮ್ಮತಮ್ಮ ಕ್ಷೇತ್ರಗಳಲ್ಲಿ ಸಂಸದರ ನಿಧಿಗಳನ್ನು ಬಳಸುತ್ತಿದ್ದಾರೆ. ರಾಯಬರೇಲಿಯಲ್ಲಿ ಬಿಜೆಪಿ ಎಂಪಿ ಇಲ್ಲ. ಹೀಗಾಗಿ ಅರುಣ್ ಜೇಟ್ಲಿ ಅವರ ಸಂಸದರ ಪ್ರದೇಶಾಭಿವೃದ್ಧಿ ನಿಧಿಯನ್ನು ರಾಯ್‌ಬರೇಲಿಯಲ್ಲಿ ಬಳಸಲು ನಿರ್ಧಾರ ತೆಗೆದುಕೊಂಡೆವು. ಈ ನಿರ್ಧಾರದಿಂದ ರಾಯ್‌ಬರೇಲಿಯಲ್ಲಿ ಬಿಜೆಪಿಯ ಶಕ್ತಿ ಹೆಚ್ಚಾಗುವುದರಲ್ಲಿ ಅನುಮಾನವೇ ಇಲ್ಲ’ ಎನ್ನುತ್ತಾರೆ ಬಿಜೆಪಿಯ ಹಿರಿಯ ನಾಯಕ ಅಜಯ್‌ ಅಗರ್‌ವಾಲ್. ಇವರು 2014ರಲ್ಲಿ ಸೋನಿಯಾಗಾಂಧಿ ವಿರುದ್ಧ ರಾಯ್‌ಬರೇಲಿ ಕ್ಷೇತ್ರದಲ್ಲಿ ಸ್ಪರ್ಧಿಸಿದ್ದರು.

ಬಿಜೆಪಿಯ ತಂತ್ರಗಾರಿಕೆ ಬಗ್ಗೆ ಕಾಂಗ್ರೆಸ್ ಅಷ್ಟಾಗಿ ತಲೆಕೆಡಿಸಿಕೊಂಡಿಲ್ಲ. ಕ್ಷೇತ್ರದ ಜನರಿಗೆ ಗಾಂಧಿ ಕುಟುಂಬದ ಸೇವೆಯ ಬಗ್ಗೆ ಗೊತ್ತಿದೆ. ಕ್ಷೇತ್ರದಲ್ಲಿ ಅಭಿವೃದ್ಧಿ ಸ್ಥಗಿತಗೊಳ್ಳಲು ಬಿಜೆಪಿಯೇ ಕಾರಣ ಎಂಬುದರ ಅರಿವು ಇದೆ ಎಂದು ಕಾಂಗ್ರೆಸ್‌ ನಾಯಕರು ಹೇಳುತ್ತಾರೆ. ‘ಮನಮೋಹನ್‌ಸಿಂಗ್ ನೇತೃತ್ವದ ಯುಪಿಎ ಸರ್ಕಾರದ ಅವಧಿಯಲ್ಲಿ ಕ್ಷೇತ್ರದ ಅಭಿವೃದ್ಧಿಗೆ ಮಂಜೂರಾಗಿದ್ದ ಯೋಜನೆಗಳ ಅನುಷ್ಠಾನಕ್ಕೆ ಬಿಜೆಪಿ ಕಳೆದ ನಾಲ್ಕೂವರೆ ವರ್ಷಗಳಿಂದ ತಡೆಯೊಡ್ಡಿದೆ. ಕೇವಲ ಒಂದು ವರ್ಷದಲ್ಲಿ ₹5 ಕೋಟಿ ಅನುಮಾದ ಕೊಡುವುದರಿಂದ ಯಾವ ಪ್ರಯೋಜನವೂ ಆಗುವುದಿಲ್ಲ’ ಎಂದು ಕಾಂಗ್ರೆಸ್ ನಾಯಕ ಕೆ.ಎಲ್.ಶರ್ಮಾ ವಿಶ್ಲೇಷಿಸುತ್ತಾರೆ.

ರಾಯ್‌ಬರೇಲಿಯ ಕಾಂಗ್ರೆಸ್ ಶಾಸಕಿ ಆದಿತಿ ಸಿಂಗ್ ಸಹ ಈ ಅಭಿಪ್ರಾಯವನ್ನು ಪುಷ್ಟೀಕರಿಸಿದರು. ‘ಲೋಕಸಭೆ ಚುನಾವಣೆ ಹತ್ತಿರ ಬಂದಿರುವ ಹಿನ್ನೆಲೆಯಲ್ಲಿ ಬಿಜೆಪಿಗೆ ಇದೀಗ ಅಭಿವೃದ್ಧಿ ಎನ್ನುವ ಪದ ನೆನಪಾಗಿದೆ. ರಾಯ್‌ಬರೇಲಿ ಜನರನ್ನು ಮೂರ್ಖರನ್ನಾಗಿಸಲು ಬಿಜೆಪಿ ಯತ್ನಿಸುತ್ತಿದೆ. ಅವರಿಗೆ ನಿಜವಾಗಿಯೂ ಅಭಿವೃದ್ಧಿಯ ಬದ್ಧತೆ ಇದ್ದಿದ್ದರೆ ನಾಲ್ಕೂವರೆ ವರ್ಷಗಳಿಂದ ಕ್ಷೇತ್ರದ ಬೆಳವಣಿಗೆಗೆ ತಡೆಯೊಡ್ಡುತ್ತಿರಲಿಲ್ಲ. ಬಿಜೆಪಿ ನಾಯಕರು ಎಷ್ಟೇ ಸರ್ಕಸ್ ಮಾಡಿದರೂ ಪ್ರಯೋಜನವಿಲ್ಲ. ಈ ವರ್ಷವೂ ಇಲ್ಲಿ ಸೋನಿಯಾಗಾಂಧಿ ಜಯಗಳಿಸುತ್ತಾರೆ’ ಎಂದು ಅವರು ಅಭಿಪ್ರಾಯಪಟ್ಟರು.

ಕಾಂಗ್ರೆಸ್ ಎಂಎಲ್‌ಸಿ ದಿನೇಶ್ ಸಿಂಗ್ ಮತ್ತು ರಾಯ್‌ಬರೇಲಿ ಜಿಲ್ಲಾ ಪಂಚಾಯಿತಿ ಅಧ್ಯಕ್ಷರಾಗಿರುವ ಅವರ ಸೋದರ ಅವಧೇಶ್ ಸಿಂಗ್  ಈ ವರ್ಷದ ಆರಂಭದಲ್ಲಿ ಬಿಜೆಪಿ ಸೇರಿಕೊಂಡಿದ್ದರು. ರಾಯ್‌ಬರೇಲಿ ಮತ್ತು ಅಮೇಥಿಯನ್ನು ಗಾಂಧಿ ಕುಟುಂಬದ ಭದ್ರಕೋಟೆ ಎಂದೇ ಹೇಳಲಾಗುತ್ತಿದೆ. ಈ ಭದ್ರಕೋಟೆಯಲ್ಲಿ ಅಸ್ತಿತ್ವ ಕಂಡುಕೊಳ್ಳಲು ಬಿಜೆಪಿ ಬಹುಕಾಲದಿಂದ ಪ್ರಯತ್ನಿಸುತ್ತಲೇ ಇದೆ.

2014ರ ಲೋಕಸಭಾ ಚುನಾವಣೆಯಲ್ಲಿ ಅಮೇಥಿ ಕ್ಷೇತ್ರದಲ್ಲಿ ಸ್ಮೃತಿ ಇರಾನಿ ಅವರನ್ನು ಬಿಜೆಪಿಯು ಕಣಕ್ಕಿಳಿಸಿತ್ತು. ಸೋತರೂ ಅವರು ಕೇಂದ್ರದಲ್ಲಿ ಸಚಿವೆಯಾದರು. ಚುನಾವಣೆಯ ನಂತರ ಸ್ಮೃತಿ ಇರಾನಿ ಸೇರಿದಂತೆ ಬಿಜೆಪಿಯ ಹಲವು ಹಿರಿಯ ನಾಯಕರು ಅಮೇಥಿಗೆ ಭೇಟಿ ನೀಡುತ್ತಲೇ ಇದ್ದಾರೆ. ಆದರೆ ರಾಯ್‌ಬರೇಲಿ ಮೇಲೆ ಬಿಜೆಪಿಗೆ ಕಣ್ಣು ಬಿದ್ದಿರುವುದು ಮಾತ್ರ ಇತ್ತೀಚೆಗೆ.

‘ರಾಯ್‌ಬರೇಲಿ ಮತ್ತು ಅಮೇಥಿ ಲೋಕಸಭಾ ಕ್ಷೇತ್ರಗಳಲ್ಲಿ ಬಿಜೆಪಿ ದುರ್ಬಲವಾಗಿದೆ. ಕಳೆದ ನಾಲ್ಕೂವರೆ ವರ್ಷಗಳಿಂದ ಈ ಎರಡೂ ಕ್ಷೇತ್ರಗಳಲ್ಲಿ ಪಕ್ಷದ ಸಂಘಟನೆ ಗಟ್ಟಿಗೊಳಿಸಲು ಮತ್ತು ಕ್ಷೇತ್ರಗಳ ಅಭಿವೃದ್ಧಿಗೆ ಬಿಜೆಪಿ ಗಮನಕೊಡಬೇಕಿತ್ತು. ಈಗ ಕೊನೆಗಳಿಗೆಯಲ್ಲಿ ಸಂಸದರ ಪ್ರದೇಶಾಭಿವೃದ್ಧಿ ನಿಧಿಯ ಬಳಕೆ ಘೋಷಿಸುವುದರಿಂದ ಹೆಚ್ಚೇನೂ ಲಾಭವಾಗದು’ ಎನ್ನುತ್ತಾರೆ ಲಖನೌ ವಿಶ್ವವಿದ್ಯಾಲಯದಲ್ಲಿ ರಾಜ್ಯಶಾಸ್ತ್ರ ಪ್ರಾಧ್ಯಾಪಕರಾಗಿದ್ದ ಎಸ್.ಕೆ.ದ್ವಿವೇದಿ.

ಬರಹ ಇಷ್ಟವಾಯಿತೆ?

 • 12

  Happy
 • 1

  Amused
 • 1

  Sad
 • 1

  Frustrated
 • 1

  Angry

Comments:

0 comments

Write the first review for this !