ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೇನೆ ಬತ್ತಳಿಕೆಯಲ್ಲಿ ಹಳೆ ಶಸ್ತ್ರಾಸ್ತ್ರ, ಯುದ್ಧ ನಡೆದರೆ ಹತ್ತೇ ದಿನಕ್ಕೆ ಖಾಲಿ?

ಅನುದಾನ ಕೊರತೆ, ನೀತಿಯಿಂದಲೂ ಸಮಸ್ಯೆ
Last Updated 9 ಮಾರ್ಚ್ 2019, 6:34 IST
ಅಕ್ಷರ ಗಾತ್ರ

ನವದೆಹಲಿ:ನಿರ್ದಿಷ್ಟ ದಾಳಿ–2ರ ಬಳಿಕ ಭಾರತ–ಪಾಕಿಸ್ತಾನ ನಡುವೆ ಸೃಷ್ಟಿಯಾಗಿದ್ದ ಯುದ್ಧದ ವಾತಾವರಣ ಸದ್ಯ ತಿಳಿಯಾಗಿದೆ. ಭಾರತದ ವಾಯುಗಡಿ ಪ್ರವೇಶಿಸಿ ದಾಳಿ ನಡೆಸಲು ಮುಂದಾದ ಪಾಕಿಸ್ತಾನದ ‘ಎಫ್–16’ ವಿಮಾನವನ್ನು ಹೊಡೆದುರುಳಿಸಿದ ‘ಮಿಗ್–21’ ವಿಮಾನ ಪತನವಾಗಿ ವಿಂಗ್ ಕಮಾಂಡರ್ ಅಭಿನಂದನ್ ವರ್ಧಮಾನ್ ಪಾರಾದರು.ಕಳೆದ ಕೆಲವು ವರ್ಷಗಳಲ್ಲಿ ಹಲವು ‘ಮಿಗ್–21’ ವಿಮಾನಗಳು ಪತನವಾಗಿರುವುದು ಭಾರತೀಯ ಸೇನೆಯ ಬಳಿ ಇರುವ ಯುದ್ಧವಿಮಾನಗಳ ಮತ್ತು ಶಸ್ತ್ರಾಸ್ತ್ರಗಳ ಬಗ್ಗೆ ಆತಂಕ ಸೃಷ್ಟಿಸಿವೆ.

ಸದ್ಯ ಯುದ್ಧ ನಡೆದರೆ 10 ದಿನಗಳ ಮಟ್ಟಿಗೆ ಮಾತ್ರ ಶಸ್ತ್ರಾಸ್ತ್ರ ಪೂರೈಸುವ ಸಾಮರ್ಥ್ಯ ಭಾರತಕ್ಕಿದೆ. ಸೇನೆಯಲ್ಲಿರುವ ಶೇ 68ರಷ್ಟು ಶಸ್ತ್ರಾಸ್ತ್ರಗಳು ಹಳೆಯವು ಎಂಬುದನ್ನು ಸರ್ಕಾರಿ ಮೂಲಗಳನ್ನು ಉಲ್ಲೇಖಿಸಿ ದಿ ನ್ಯೂಯಾರ್ಕ್‌ ಟೈಮ್ಸ್‌ವರದಿ ಮಾಡಿದೆ.

‘ನಮ್ಮ ಯೋಧರಿಗೆ ಅತ್ಯಾಧುನಿಕ ಸೇನಾ ಸಲಕರಣೆಗಳ ಕೊರತೆ ಇದೆ. ಆದರೂ ಅವರು 21ನೇ ಶತಮಾನದ ಸೇನಾ ಕಾರ್ಯಾಚರಣೆ ನಡೆಸಬಲ್ಲರು’ ಎಂಬ ಸಂಸದ, ರಕ್ಷಣಾ ಸ್ಥಾಯಿ ಸಂಸದೀಯ ಸಮಿತಿಯ ಸದಸ್ಯ ಗೌರವ್ ಗೊಗೊಯ್ ಅವರ ಹೇಳಿಕೆಯನ್ನೂ ವರದಿ ಉಲ್ಲೇಖಿಸಿದೆ.

ಅನುದಾನ ಕೊರತೆಯೂ ಕಾರಣ

ಅನುದಾನ ಕೊರತೆಯೂ ಶಸ್ತ್ರಾಸ್ತ್ರ ಕೊರತೆಗೆ ಕಾರಣವಾಗಿದೆ. ಸಮಸ್ಯೆಗಳೇನೇ ಇದ್ದರೂ ಸೇನಾ ವಹಿವಾಟಿಗೆ ಸಂಬಂಧಿಸಿ ಭಾರತವನ್ನು ಪ್ರಮುಖ ಮಿತ್ರ ರಾಷ್ಟ್ರವನ್ನಾಗಿ ಅಮೆರಿಕ ಪರಿಗಣಿಸಲಿದೆ. ಹೆಚ್ಚುತ್ತಿರುವ ಚೀನಾದ ಪ್ರಭಾವವೂ ಇದಕ್ಕೆ ಕಾರಣ ಎಂದು ವರದಿಯಲ್ಲಿ ಹೇಳಲಾಗಿದೆ.

ಅಮೆರಿಕದ ಸೇನೆ ಭಾರತ ಮತ್ತು ಪಾಕಿಸ್ತಾನದ ಜತೆ ಉತ್ತಮ ಬಾಂಧವ್ಯ ಹೊಂದಿದೆ. ಆದರೆ, ಭಯೋತ್ಪಾದನೆ ವಿರುದ್ಧ ಪಾಕಿಸ್ತಾನ ಕಠಿಣ ಕ್ರಮ ಕೈಗೊಳ್ಳದೇ ಇರುವುದು ಕಳವಳಕ್ಕೆ ಕಾರಣವಾಗಿದೆ. ಕಳೆದ ಒಂದು ದಶಕದಲ್ಲಿ ಅಮೆರಿಕದಿಂದ ಭಾರತಕ್ಕೆ ಶಸ್ತ್ರಾಸ್ತ್ರ ರಫ್ತು ವಹಿವಾಟು ಶೂನ್ಯದಿಂದ 15 ಶತಕೋಟಿ ಡಾಲರ್‌ ಮೊತ್ತಕ್ಕೆ ತಲುಪಿದೆ.

ಎಲ್ಲಿ ಹೋಗುತ್ತಿದೆ ಅನುದಾನ?

2018ರ ಬಜೆಟ್‌ನಲ್ಲಿ ಸೇನೆಗೆ ಭಾರತವು 45 ಶತಕೋಟಿ ಡಾಲರ್ ಅನುದಾನ (ಸುಮಾರು ₹3 ಲಕ್ಷ ಕೋಟಿ) ಘೋಷಿಸಿತ್ತು. ಅದೇ ವರ್ಷ ಚೀನಾವು ಸೇನೆಗೆ 175 ಶತಕೋಟಿ ಡಾಲರ್ (ಸುಮಾರು ₹12 ಲಕ್ಷ ಕೋಟಿ) ಅನುದಾನ ಘೋಷಿಸಿತ್ತು. ಕಳೆದ ತಿಂಗಳು ಭಾರತ ಸರ್ಕಾರ ಮತ್ತೆ 45 ಶತಕೋಟಿ ಡಾಲರ್(ಸುಮಾರು ₹3 ಲಕ್ಷ ಕೋಟಿ) ಘೋಷಿಸಿದೆ. ಸೇನೆಗೆಂದು ಭಾರತ ಎಷ್ಟು ಮೊತ್ತ ವ್ಯಯಿಸುತ್ತಿದೆ ಎಂಬುದು ವಿಷಯವಲ್ಲ. ಅದನ್ನು ಹೇಗೆ ವ್ಯಯಿಸುತ್ತಿದೇ ಎಂಬುದು ಮುಖ್ಯ. ಅನುದಾನದ ಬಹುಪಾಲು 12 ಲಕ್ಷದಷ್ಟಿರುವ ಸೇನಾ ಸಿಬ್ಬಂದಿಯ ವೇತನ ಮತ್ತು ಪಿಂಚಣಿಗೆ ವ್ಯಯವಾಗುತ್ತಿದೆ. ಕೇವಲ 14 ಶತಕೋಟಿ ಡಾಲರ್ (ಸುಮಾರು ₹97 ಸಾವಿರ ಕೋಟಿ) ಹೊಸ ಶಸ್ತ್ರಾಸ್ತ್ರ ಖರೀದಿಗೆ ಬಳಕೆಯಾಗುತ್ತಿದೆ ಎಂದುನ್ಯೂಯಾರ್ಕ್‌ ಟೈಮ್ಸ್‌ವರದಿ ವಿಶ್ಲೇಷಿಸಿದೆ.

‘ಆಧುನಿಕ ರಾಷ್ಟ್ರಗಳ ಸೇನೆಗಳು ಅವುಗಳ ಗುಪ್ತಚರ ಮತ್ತು ತಾಂತ್ರಿಕ ಸಾಮರ್ಥ್ಯ ವೃದ್ಧಿಗೆ ಹೆಚ್ಚು ಖರ್ಚು ಮಾಡುತ್ತಿರುವಾಗ ನಾವೂ ಅದನ್ನೇ ಮಾಡಬೇಕಾದ ಅಗತ್ಯವಿದೆ’ ಎಂದುಗೌರವ್ ಗೊಗೊಯ್ ಅಭಿಪ್ರಾಯಪಟ್ಟಿದ್ದಾರೆ.

ನೀತಿಯಿಂದಲೂ ಹಿನ್ನಡೆ

ಚೀನಾದಲ್ಲಿ ಸರ್ವಾಧಿಕಾರಿ ಸರ್ಕಾರವಿರುವುದರಿಂದ ಸೇನಾ ನೀತಿಗಳನ್ನು ಅದಕ್ಕೆ ಬೇಕಾದಂತೆ ರೂಪಿಸಬಲ್ಲದು. ಆದರೆ, ಭಾರತದಲ್ಲಿ ಪ್ರಜಾಪ್ರಭುತ್ವ ಸರ್ಕಾರವಿರುವುದರಿಂದ ಅಷ್ಟು ಸುಲಭವಲ್ಲ. ಸಿಬ್ಬಂದಿಯ ಸಂಖ್ಯೆ ಕಡಿತ ಮಾಡಿ ಶಸ್ತ್ರಾಸ್ತ್ರ ಖರೀದಿಗೆ ಹೆಚ್ಚು ಮೊತ್ತ ಮೀಸಲಿಡುವುದೂ ಸರಳವಲ್ಲ. ದೀರ್ಘ ಕಾಲದಿಂದ ನಿರುದ್ಯೋಗ ಸಮಸ್ಯೆ ಎದುರಿಸುತ್ತಿರುವ ಭಾರತದಲ್ಲಿ ಸೇನೆಯೇ ಉದ್ಯೋಗಕ್ಕೆ ಮೂಲ. ಇವೆಲ್ಲ ಅಂಶಗಳು ಶಸ್ತ್ರಾಸ್ತ್ರ ಖರೀದಿ ಮೇಲೆ ಪರಿಣಾಮ ಬೀರುತ್ತಿವೆ ಎಂದು ವರದಿ ಉಲ್ಲೇಖಿಸಿದೆ.

ಆರ್ಥಿಕ ಸುಧಾರಣೆ ಮತ್ತು ಉದ್ಯೋಗ ಸೃಷ್ಟಿಯ ಭರವಸೆ ನೀಡಿ 2014ರಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಅಧಿಕಾರಕ್ಕೇರಿದ್ದರು. ಹೀಗಾಗಿ ಚುನಾವಣೆ ಸಮೀಪಿಸುತ್ತಿರುವ ಈ ಸಂದರ್ಭದಲ್ಲಿ ಅಭಿವೃದ್ಧಿಯ ಕಡೆಗೆ ಗಮನ ಕೇಂದ್ರೀಕರಿಸಬೇಕಾದ ಅವಶ್ಯಕತೆ ಅವರಿಗಿದೆ.

‘ಸೇನಾ ಸಾಮರ್ಥ್ಯ ವೃದ್ಧಿಗಿಂತಲೂ ಆರ್ಥಿಕ ಅಭಿವೃದ್ಧಿ ಕಡೆಗೇ ಹೆಚ್ಚು ಗಮನಹರಿಸಬೇಕಾದ ಒತ್ತಡದಲ್ಲಿ ಈ ಸರ್ಕಾರವಿದೆ’ ಎಂದು ರಕ್ಷಣಾ ಸಚಿವಾಲಯದ ಮಾಜಿ ಹಣಕಾಸು ಸಲಹೆಗಾರ ಅಮಿತ್ ಕೌಶಿಷ್ ಅಭಿಪ್ರಾಯಪಟ್ಟಿದ್ದಾರೆ. ಚೀನಾವು ಮೊದಲು ಆರ್ಥಿಕ ಅಭಿವೃದ್ಧಿಯತ್ತ ಮತ್ತು ನಂತರ ಸೇನಾ ಸಾಮರ್ಥ್ಯ ವೃದ್ಧಿಗೆ ಗಮನಹರಿಸಿತ್ತು. ಚೀನಾಕ್ಕಿರುವ ವ್ಯತ್ಯಾಸವೆಂದರೆ 20 ಅಥವಾ 30 ವರ್ಷಗಳ ಹಿಂದೆಯೇ ಅದು ಈ ನಿಟ್ಟಿನಲ್ಲಿ ಗಮನಹರಿಸಿತ್ತು ಎಂದು ಅವರು ಹೇಳಿದ್ದಾರೆ.

ಭ್ರಷ್ಟಾಚಾರ ಆರೋಪದಿಂದಲೂ ಹಿನ್ನಡೆ

ರಕ್ಷಣಾ ಖರೀದಿಗೆ ಸಂಬಂಧಿಸಿ ಭ್ರಷ್ಟಾಚಾರದ ಆರೋಪ ಕೇಳಿಬಂದಿರುವುದೂ ಕಳವಳಕ್ಕೆ ಕಾರಣವಾಗಿದೆ. 36 ರಫೇಲ್ ಯುದ್ಧವಿಮಾನಗಳನ್ನು ಫ್ರಾನ್ಸ್‌ನಿಂದ ಖರೀದಿಸುವ ವಿಷಯದಲ್ಲಿ ಪ್ರಧಾನಿ ಮೋದಿ ವಿರುದ್ಧ ಪ್ರತಿಪಕ್ಷಗಳು ಭ್ರಷ್ಟಾಚಾರದ ಆರೋಪ ಮಾಡಿವೆ. ಹಳೆಯದಾಗುತ್ತಿರುವ ‘ಮಿಗ್‌–21’ ಯುದ್ಧವಿಮಾನಕ್ಕೆ ರಫೇಲ್ ಪರ್ಯಾಯವೆಂದೇ ಹೇಳಲಾಗುತ್ತಿದ್ದು, ಇದರ ಖರೀದಿಯು ಭಾರತೀಯ ವಾಯುಪಡೆಗೆ ನೆರವಾಗಲಿದೆ. ಹೀಗಾಗಿಯೇ ರಫೇಲ್ ಇದ್ದರೆ ಪಾಕಿಸ್ತಾನವನ್ನು ಇನ್ನಷ್ಟು ಸಮರ್ಥವಾಗಿ ಎದುರಿಸಲು ಸಾಧ್ಯವಾಗುತ್ತಿತ್ತು ಎಂದು‍ಪ್ರಧಾನಿ ಬಿಂಬಿಸಲು ಪ್ರಯತ್ನಿಸಿದ್ದಾರೆ ಎಂದೂನ್ಯೂಯಾರ್ಕ್‌ ಟೈಮ್ಸ್‌ ವಿಶ್ಲೇಷಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT