ಮಂಗಳವಾರ, ಮೇ 18, 2021
28 °C

ಕೇರಳ: ತಗ್ಗಿದ ಮಳೆ, ಪ್ರವಾಹ; ಪುನರ್ವಸತಿಯ ಮಹಾ ಸವಾಲು, ಸಾಂಕ್ರಾಮಿಕ ರೋಗದ ಭೀತಿ

ಪಿಟಿಐ Updated:

ಅಕ್ಷರ ಗಾತ್ರ : | |

ತಿರುವನಂತಪುರ/ಕೊಚ್ಚಿ: ಮಳೆಯ ಬಿರುಸು ತಗ್ಗಿದೆ, ಪ್ರವಾಹ ಇಳಿಮುಖವಾಗಿದೆ. ಈಗ, ಮನೆ ಕಳೆದುಕೊಂಡವರ ಪುನರ್ವಸತಿ ಮತ್ತು ಸಾಂಕ್ರಾಮಿಕ ರೋಗಗಳನ್ನು ತಡೆಯುವ ಮಹಾ ಸವಾಲು ಕೇರಳದ ಮುಂದೆ ಇದೆ. 

ರಕ್ಷಣಾ ಕಾರ್ಯಾಚರಣೆ ಈಗಲೂ ಮುಂದುವರಿದಿದೆ. ಸುಲಭಕ್ಕೆ ಹೋಗಲು ಸಾಧ್ಯವಿಲ್ಲದ ಸ್ಥಳಗಳಲ್ಲಿ ಸಿಕ್ಕಿಕೊಂಡಿರುವ ಜನರ ರಕ್ಷಣೆಗೆ ನೆರವಾಗಲು ಡ್ರೋನ್‌ಗಳನ್ನು ಬಳಸಲಾಗುತ್ತಿದೆ ಎಂದು ಸೇನೆಯ ದಕ್ಷಿಣ ಕಮಾಂಡ್‌ನ ಮುಖ್ಯಸ್ಥ ಲೆ. ಜ. ಡಿ.ಆರ್‌. ಸೋನಿ ತಿಳಿಸಿದ್ದಾರೆ. 

ಸೇನೆಯ 1,500 ಯೋಧರು ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಚಾವಣಿ ಮೇಲೆ ಮತ್ತು ದುರ್ಗಮ ಪ್ರದೇಶಗಳಲ್ಲಿ ಇರುವವರನ್ನು ರಕ್ಷಿಸಲು ಸೇನೆಯ ಹೆಲಿಕಾಪ್ಟರ್‌ಗಳನ್ನು ಬಳಸಲಾಗುತ್ತಿದೆ. 

ಮನೆಗಳನ್ನು ಸ್ವಚ್ಛಗೊಳಿಸಿ ಅವುಗಳನ್ನು ವಾಸಯೋಗ್ಯವಾಗುವಂತೆ ಮಾಡುವ ಕೆಲಸ ಆರಂಭವಾಗಿದೆ. ವಿವಿಧೆಡೆ ಹಲವು ದಿನಗಳಿಂದ ನೀರು ಪೂರೈಕೆ ಮತ್ತು ವಿದ್ಯುತ್‌ ಸಂಪರ್ಕ ಕಡಿತಗೊಂಡಿದೆ. ಅದನ್ನು ಸರಿಪಡಿಸಲು ಕೇರಳ ಜಲ ಪ್ರಾಧಿಕಾರ ಮತ್ತು ವಿದ್ಯುತ್‌ ಪೂರೈಕೆ ಮಂಡಳಿಗಳು ಕೆಲಸ ಆರಂಭಿಸಿವೆ. 

ದೇಶದ ವಿವಿಧ ಭಾಗಗಳಿಂದ ಕಳುಹಿಸಲಾಗಿರುವ ಪರಿಹಾರ ಸಾಮಗ್ರಿಗಳು ಇಲ್ಲಿನ ಬಂದರುಗಳಿಗೆ ತಲುಪಿವೆ. ವಿವಿಧ ಸಾಮಗ್ರಿಗಳನ್ನು ಹೊತ್ತು ಮುಂಬೈಯಿಂದ ಹೊರಟಿದ್ದ ನೌಕಾಪಡೆಯ ಹಡಗು ಐಎನ್‌ಎಸ್‌ ದೀಪಕ್‌ ಕೊಚ್ಚಿ ಬಂದರು ತಲುಪಿದೆ. ಇದರಲ್ಲಿ 800 ಟನ್‌ಗಳಷ್ಟು ಕುಡಿಯುವ ನೀರು ಮತ್ತು ಆಹಾರ ಪದಾರ್ಥಗಳು ಇವೆ. ಜಲಸಾರಿಗೆ ಸಚಿವಾಲಯದ ನೇತೃತ್ವದಲ್ಲಿ ಸಂಗ್ರಹಿಸಿ ಕಳುಹಿಸಲಾದ ಇನ್ನೊಂದು ಹಡಗು ವಲ್ಲಾರ್‌ಪಾಡಂ ಬಂದರಿಗೆ ತಲುಪಿದೆ. 50 ಸಾವಿರ ಟನ್‌ ಕಚ್ಚಾ ತೈಲ ಹೊತ್ತು ಹಡಗು ಕೂಡ ಕೊಚ್ಚಿ ತಲುಪಿದೆ. ಕೇರಳದ ತೈಲ ಬೇಡಿಕೆಯನ್ನು ಪೂರೈಸಲು ಇದು ನೆರವಾಗಲಿದೆ. 

ರಕ್ಷಣಾ ಕಾರ್ಯಾಚರಣೆ ನಡೆಸಲು ಬೇಕಿರುವ ಉಪಕರಣಗಳ ಕೊರತೆಯ ಬಗ್ಗೆ ಸೋನಿ ಬೆಳಕು ಚೆಲ್ಲಿದ್ದಾರೆ. ಈಗ ರಕ್ಷಣಾ ಕಾರ್ಯಾಚರಣೆಗೆ ಬಳಸಿದ ದೋಣಿಗಳಲ್ಲಿ 27 ಜೋಧ್‌ಪುರದಿಂದ ಬಂದಿವೆ. 15 ದೋಣಿಗಳನ್ನು ಭೋಪಾಲ್‌ನಿಂದ ತರಿಸಲಾಗಿದೆ. ರಕ್ಷಣಾ ತಂಡಗಳು ಬೆಂಗಳೂರಿನಿಂದ ಬಂದಿವೆ. ಜೀವರಕ್ಷಕ ಕವಚಗಳು ಮತ್ತು ಸಂವಹನ ಉಪಕರಣಗಳನ್ನು ಪುಣೆಯಿಂದ ತರಿಸಲಾಗಿದೆ. ಈ ಎಲ್ಲ ಉಪಕರಣಗಳನ್ನು ಹೊಂದಿಸಿಕೊಳ್ಳುವುದೇ ದೊಡ್ಡ ಸವಾಲಾಗಿತ್ತು ಎಂದು ಅವರು ಹೇಳಿದ್ದಾರೆ. 

ಪರಿಹಾರ ಕಾರ್ಯಾಚರಣೆಗಾಗಿ ಸಮಗ್ರ ಯೋಜನೆಯೊಂದನ್ನು ದಕ್ಷಿಣ ಕಮಾಂಡ್‌ ರೂಪಿಸಿದೆ. ಪ್ರಕೃತಿ ವಿಕೋಪದ ಸಂದರ್ಭದಲ್ಲಿ ರಕ್ಷಣೆಗೆ ಬೇಕಾದ ಪರಿಕರಗಳು ಒಂದೆಡೆ ಇರುವಂತೆ ನೋಡಿಕೊಳ್ಳುವ ಚಿಂತನೆ ಇದೆ. ಮುಂದಿನ ಮುಂಗಾರು ಹೊತ್ತಿಗೆ ಇವೆಲ್ಲವೂ ಒಂದೇ ಸ್ಥಳದಲ್ಲಿ ದೊರೆಯುವಂತಾಗಬೇಕು ಎಂದು ಅವರು ಹೇಳಿದ್ದಾರೆ.


ಕೊಚ್ಚಿ ವಾಯುನೆಲೆಗೆ ಸೋಮವಾರ ಬೆಳಿಗ್ಗೆ ಬಂದಿಳಿದ ಏರ್‌ ಇಂಡಿಯಾ (ಅಲಯನ್ಸ್ ಏರ್‌) –ವಿಮಾನ. –ಪಿಟಿಐ ಚಿತ್ರ

ನೌಕಾನೆಲೆಯಿಂದ ವಿಮಾನ

ಕೊಚ್ಚಿ ನೌಕಾನೆಲೆಯಲ್ಲಿ ನಾಗರಿಕ ವಿಮಾನಗಳ ಹಾರಾಟಕ್ಕೆ ವ್ಯವಸ್ಥೆ ಮಾಡಲಾಗಿದೆ. ಬೆಂಗಳೂರಿನಿಂದ ಬಂದ ಏರ್‌ ಇಂಡಿಯಾ ವಿಮಾನ ಸೋಮವಾರ ಬೆಳಿಗ್ಗೆ ಇಲ್ಲಿ ಇಳಿಯಿತು. ಕೊಚ್ಚಿ ವಿಮಾನ ನಿಲ್ದಾಣದ ರನ್‌ವೇ ಪ್ರವಾಹದಿಂದ ಮುಳುಗಿ ಹೋಗಿದೆ. ಹಾಗಾಗಿ 26ರವರೆಗೆ ಅಲ್ಲಿಂದ ವಿಮಾನ ಹಾರಾಟ ಸಾಧ್ಯವಿಲ್ಲ. 

ತಿರುವನಂತಪುರದಿಂದ ಎರ್ನಾಕುಲಂ ನಡುವೆ ರೈಲು ಸಂಚಾರ ಆರಂಭವಾಗಿದೆ. ಶೋರ್ನೂರು–ಎರ್ನಾಕುಲಂ ನಡುವೆ ಪ್ರಾಯೋಗಿಕ ನೆಲೆಯಲ್ಲಿ ರೈಲು ಓಡಿಸುವ ಬಗ್ಗೆ ರೈಲ್ವೆ ಇಲಾಖೆ ಯೋಚನೆ ನಡೆಸುತ್ತಿದೆ. ತಿರುವನಂತಪುರದಿಂದ ಬೆಂಗಳೂರು, ಚೆನ್ನೈ, ಮುಂಬೈ ಮತ್ತು ದೆಹಲಿ ನಡುವಣ ರೈಲು ಸಂಚಾರವೂ ಭಾಗಶಃ ಪುನರಾರಂಭಗೊಂಡಿದೆ. 

ಮುಖ್ಯಾಂಶಗಳು

* 7.24 ಲಕ್ಷ ಪರಿಹಾರ ಕೇಂದ್ರಗಳಲ್ಲಿ ಆಶ್ರಯ ಪಡೆದವರು

* 5,645 ಪರಿಹಾರ ಕೇಂದ್ರಗಳು
 

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು