ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರವೇಶ ನಿಷೇಧ ತೆರವು: ಅಗಸ್ತ್ಯಮಲೆಯತ್ತ ಮಹಿಳೆಯರು

ಶಬರಿಮಲೆ ಬಳಿಕ ಕೇರಳದಲ್ಲಿ ಇನ್ನೊಂದು ಪ್ರಕರಣ
Last Updated 8 ಜನವರಿ 2019, 19:40 IST
ಅಕ್ಷರ ಗಾತ್ರ

ತಿರುವನಂತಪುರ: ಕೇರಳದ ಪ್ರಸಿದ್ಧ ತೀರ್ಥಕ್ಷೇತ್ರ ಶಬರಿಮಲೆಯ ರೀತಿಯಲ್ಲಿಯೇ ಇನ್ನೊಂದು ಧಾರ್ಮಿಕ ಕ್ಷೇತ್ರ ಅಗಸ್ತ್ಯಮಲೆ ವಿವಾದದ ಕೇಂದ್ರವಾಗುವ ಸಾಧ್ಯತೆ ದಟ್ಟವಾಗಿದೆ.

ಅಗಸ್ತ್ಯಮಲೆಯ ತುದಿಯಲ್ಲಿ ಅಗಸ್ತ್ಯ ಮುನಿಯ ಮೂರ್ತಿ ಇದೆ. ಶಬರಿಮಲೆಯ ಅಯ್ಯಪ್ಪ ಸ್ವಾಮಿಯ ಹಾಗೆಯೇ ಅಗಸ್ತ್ಯ ಮುನಿಯನ್ನು ಕೂಡ ಬ್ರಹ್ಮಚಾರಿ ಎಂದು ಪರಿಗಣಿಸಲಾಗುತ್ತದೆ. ಹಾಗಾಗಿ ಅಗಸ್ತ್ಯ ಮುನಿಯ ದರ್ಶನ ಪಡೆಯಲು ಮಹಿಳೆಯರಿಗೆ ಅವಕಾಶ ಇಲ್ಲ. ಆದರೆ, ಈ ಬಾರಿ ಈ ಮಲೆಯ ಶಿಖರಕ್ಕೆ ಹೋಗಲು ಹಲವು ಮಹಿಳೆಯರು ಸಜ್ಜಾಗಿದ್ದಾರೆ.

ಸ್ಥಳೀಯ ಕಣಿ ಬುಡಕಟ್ಟು ಜನರು ಅಗಸ್ತ್ಯ ಮುನಿಯನ್ನು ತಮ್ಮ ರಾಜ ಎಂದು ಪರಿಗಣಿಸುತ್ತಾರೆ. ಮಹಿಳೆಯರು ಬೆಟ್ಟದ ತುದಿಗೆ ಹೋಗುವುದನ್ನು ಈ ಸಮುದಾಯ ವಿರೋಧಿಸಿದೆ. ಅಯ್ಯಪ್ಪ ಭಕ್ತರ ರೀತಿಯಲ್ಲಿಯೇ ‘ನಾಮಜಪ’ ಪ್ರತಿಭಟನೆ ನಡೆಸಲು ಸಮುದಾಯದ ಜನರು ನಿರ್ಧರಿಸಿದ್ದಾರೆ.

ಅಗಸ್ತ್ಯಮಲೆ ಏರಲು ಮಹಿಳೆಯರಿಗೆ ಅವಕಾಶ ಕೊಡಬೇಕು ಎಂಬ ಬೇಡಿಕೆ ಹಿಂದಿನಿಂದಲೂ ಇತ್ತು. ಆದರೆ, ಅಗಸ್ತ್ಯ ಮುನಿ ಬ್ರಹ್ಮಚಾರಿ ಎಂಬ ಕಾರಣಕ್ಕೆ ಈ ಬೇಡಿಕೆಯನ್ನು ತಳ್ಳಿ ಹಾಕಲಾಗಿತ್ತು. ಜತೆಗೆ, ಮಹಿಳೆಯರ ಸುರಕ್ಷತೆಯನ್ನೂ ಇದಕ್ಕೆ ಕಾರಣವಾಗಿ ನೀಡಲಾಗಿತ್ತು. ಅಗಸ್ತ್ಯಮಲೆಯ ಶಿಖರ ತಲುಪಲು ಕನಿಷ್ಠ ಎರಡು ದಿನ ಕಾಡಿನ ನಡುವೆ ನಡೆದು ಹೋಗಬೇಕಾಗುತ್ತದೆ.

ಅಗಸ್ತ್ಯ ಮಲೆಗೆ ಮಹಿಳೆಯರು ಹೋಗುವುದಕ್ಕೆ ಇರುವ ನಿಷೇಧವನ್ನು 2018ರ ನವೆಂಬರ್‌ 30ರಂದು ಕೇರಳ ಹೈಕೋರ್ಟ್‌ ತೆರವುಗೊಳಿಸಿದೆ. ಈ ಮಲೆಗೆ ಜನರು ಹೋಗುವುದಕ್ಕೆ ಅವಕಾಶ ಇದ್ದರೆ ಮಹಿಳೆಯರಿಗೆ ನಿಷೇಧ ಸಾಧ್ಯವಿಲ್ಲ ಎಂದು ಹೈಕೋರ್ಟ್‌ ಹೇಳಿತ್ತು. ಎರಡು ಮಹಿಳಾ ಸಂಘಟನೆಗಳು ನಿಷೇಧ ಪ್ರಶ್ನಿಸಿ ಅರ್ಜಿ ಸಲ್ಲಿಸಿದ್ದವು.

ಬೆಟ್ಟ ಏರುವುದಕ್ಕೆ ಆನ್‌ಲೈನ್‌ ಹೆಸರು ನೋಂದಣಿಯನ್ನು ಕೇರಳದ ಅರಣ್ಯ ಇಲಾಖೆ ಇದೇ 5ರಿಂದ ಆರಂಭಿಸಿದೆ. 14 ವರ್ಷಕ್ಕಿಂತ ಕೆಳಗಿನ ಮಕ್ಕಳಿಗೆ ಅವಕಾಶ ಇಲ್ಲ ಎಂದು ಅರಣ್ಯ ಇಲಾಖೆ ಹೇಳಿದೆ. ಹೆಸರು ನೋಂದಣಿಗೆ ಮಹಿಳೆಯರಿಗೂ ಅವಕಾಶ ಕೊಡಲಾಗಿದೆ. ಆದರೆ, ದಿನಕ್ಕೆ ನೂರು ಜನರಿಗೆ ಮಾತ್ರ ಬೆಟ್ಟ ಏರಲು ಅವಕಾಶ ಕೊಡಲಾಗುತ್ತದೆ.

ಮಹಿಳಾ ಹಕ್ಕುಗಳ ಹೋರಾಟಗಾರ್ತಿ ರಜಿತಾ ಜಿ. ಅವರಿಗೆ ಬೆಟ್ಟ ಏರಲು ಅರಣ್ಯ ಇಲಾಖೆಯ ಅನುಮತಿ ಸಿಕ್ಕಿದೆ. ‘ಅಗಸ್ತ್ಯಮಲೆ ಏರಲು ಸಿಕ್ಕ ಅವಕಾಶದಿಂದ ಸಂಭ್ರಮಗೊಂಡಿದ್ದೇನೆ. ಇನ್ನೂ 20 ಮಹಿಳೆಯರಿಗೆ ಅನುಮತಿ ದೊರಕಿದೆ’ ಎಂದು ರಜಿತಾ ಅವರು ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ. ಬೆಟ್ಟ ಏರುವ‍ಪ್ರಕ್ರಿಯೆಯಲ್ಲಿ ಎದುರಾಗುವ ಅಪಾಯಗಳ ಬಗ್ಗೆ ತಮಗೆ ಅರಿವಿದೆ. ಬೆಟ್ಟ ಏರಲು ಬೇಕಾದ ದೈಹಿಕ ಮತ್ತು ಮಾನಸಿಕ ಸಿದ್ಧತೆಯಲ್ಲಿ ತೊಡಗಿದ್ದೇವೆ ಎಂದು ಅವರು ಹೇಳಿದ್ದಾರೆ.

ಮಹಿಳೆಯರು ಬೆಟ್ಟ ಏರಲು ಹೈಕೋರ್ಟ್‌ ಅವಕಾಶ ಕೊಟ್ಟಿದೆ. ಹಾಗಾಗಿ ಅವರನ್ನು ತಡೆಯುವುದಿಲ್ಲ ಎಂದು ಕಣಿ ಬುಡಕಟ್ಟು ನಾಯಕ ಮೋಹನನ್‌ ತ್ರಿವೇಣಿ ಕಣಿ ಹೇಳಿದ್ದಾರೆ. ಆದರೆ, ಬೆಟ್ಟ ಏರುವ ದಾರಿ ಆರಂಭವಾಗುವ ಬೋನಕ್ಕಾಡ್‌ ಎಂಬಲ್ಲಿ ಮಹಿಳೆಯರನ್ನು ತಡೆಯಲುಈ ಬುಡಕಟ್ಟು ಸಮುದಾಯದ ಒಂದು ವರ್ಗ ಯೋಜನೆ ಹಾಕಿಕೊಂಡಿದೆ ಎಂದು ವರದಿಯಾಗಿದೆ.

ಶಬರಿಮಲೆಯ ರೀತಿಯಲ್ಲಿಯೇ ಹಿಂದುತ್ವವಾದಿ ಸಂಘಟನೆಗಳು ಈ ವಿಚಾರವನ್ನು ಕೈಗೆತ್ತಿಕೊಂಡು ಹೋರಾಟ ತೀವ್ರಗೊಳಿಸಬಹುದು ಎಂಬ ಆತಂಕ ಮಹಿಳಾ ಹಕ್ಕುಗಳ ಕಾರ್ಯಕರ್ತರಲ್ಲಿ ಇದೆ. ಬೆಟ್ಟ ಏರುವ ಮಹಿಳೆಯರಿಗೆ ಸರ್ಕಾರ ಸೂಕ್ತ ರಕ್ಷಣೆ ನೀಡಬೇಕು ಎಂದು ಮಹಿಳಾ ಹಕ್ಕುಗಳ ಕಾರ್ಯಕರ್ತೆ ಕೆ. ಅಜಿತಾ ಹೇಳಿದ್ದಾರೆ.

ತಳ ಶಿಬಿರವಾದ ಅಧಿರಮಲೆಯವರೆಗೆ ಮಹಿಳೆಯರು ಹೋಗುವುದಕ್ಕೆ ಕಣಿ ಸಮುದಾಯದ ಆಕ್ಷೇಪ ಇಲ್ಲ. ಆದರೆ, ಬೆಟ್ಟದ ತುದಿಗೆ ಮಹಿಳೆಯರು ಹೋಗಬಾರದು ಎಂಬುದು ಈ ಸಮುದಾಯದ ನಂಬಿಕೆ. ಈವರೆಗೆ ಯಾವ ಮಹಿಳೆಯೂ ಅಗಸ್ತ್ಯ ಮುನಿಯ ಮೂರ್ತಿ ಇರುವ ಶಿಖರಕ್ಕೆ ಹೋಗಿಲ್ಲ ಎಂದು ಈ ಜನರು ನಂಬಿದ್ದಾರೆ.

ಆದರೆ, ಮಹಿಳಾ ಹಕ್ಕುಗಳ ಹೋರಾಟಗಾರರು ಇದನ್ನು ಒಪ್ಪುವುದಿಲ್ಲ. ಯುನೆಸ್ಕೋ ಅಂಗೀಕರಿಸಿದ ಕೇರಳದ ಎರಡು ಜೀವವೈವಿಧ್ಯ ತಾಣಗಳಲ್ಲಿ ಅಗಸ್ತ್ಯಮಲೆಯೂ ಒಂದು. ಹಾಗಾಗಿ, ಮಹಿಳೆಯರು ಸೇರಿದಂತೆ ಹಲವು ಸಂಶೋಧಕರು ಹತ್ತಾರು ಬಾರಿ ಈ ಮಲೆಗೆ ಹೋಗಿದ್ದಾರೆ ಎಂಬುದು ಹೋರಾಟಗಾರರ ಪ್ರತಿಪಾದನೆ.

**

ನಡೆದೇ ಹೋಗಬೇಕು

* ಅಗಸ್ತ್ಯಮಲೆಯು 1,868 ಮೀಟರ್‌ ಎತ್ತರವಿದೆ

* ತಿರುವನಂತಪುರದಿಂದ 40 ಕಿ.ಮೀ. ದೂರದಲ್ಲಿದೆ

* ವರ್ಷದಲ್ಲಿ 45 ದಿನ ಮಾತ್ರ ಅಗಸ್ತ್ಯಮಲೆ ಶಿಖರಕ್ಕೆ ಹೋಗಲು ಅವಕಾಶ‌

* ಈ ಬಾರಿ ಜನವರಿ 14ರಿಂದ ಮಾರ್ಚ್‌ 1ರವರೆಗೆ ಈ ಅವಕಾಶ

* ಬೆಟ್ಟ ಏರಲು ಒಬ್ಬರಿಗೆ ₹1,000 ಶುಲ್ಕ

* 10 ಮಂದಿಯ ಗುಂಪಿನಲ್ಲಿ ಕರೆದೊಯ್ಯಲಾಗುತ್ತದೆ. ಅರಣ್ಯ ಇಲಾಖೆಯ ಮಾರ್ಗದರ್ಶಕರು ಪ್ರತಿ ಗುಂಪಿನಲ್ಲಿ ಇರುತ್ತಾರೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT