ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಐಎಡಿಎಂಕೆಗೆ ಅಸ್ತಿತ್ವದ ಪ್ರಶ್ನೆ

Last Updated 23 ಮೇ 2019, 20:13 IST
ಅಕ್ಷರ ಗಾತ್ರ

ಚೆನ್ನೈ:ದ್ರಾವಿಡ ಪಕ್ಷಗಳ ಅಗ್ರ ನಾಯಕರು, ಮಾಜಿ ಮುಖ್ಯಮಂತ್ರಿಗಳೂ ಆದ ಜೆ.ಜಯಲಲಿತಾ ಹಾಗೂ ಕೆ.ಕರುಣಾನಿಧಿ ಅವರು ನಿಧನರಾದ ನಂತರ ನಡೆದ ಲೋಕಸಭಾ ಮತ್ತು ವಿಧಾನಸಭೆಯ 22 ಕ್ಷೇತ್ರಗಳ ಉಪಚುನಾವಣೆ ತಮಿಳುನಾಡಿನ ರಾಜಕಾರಣ ಇತಿಹಾಸದ ದೃಷ್ಟಿಯಿಂದ ಅವಲೋಕಿಸಿದಾಗ ಗಮನ ಸೆಳೆಯುವಂತಿದೆ.

38 ಲೋಕಸಭಾ ಕ್ಷೇತ್ರಗಳ ಪೈಕಿ ಡಿಎಂಕೆ ನೇತೃತ್ವದ ಮೈತ್ರಿಕೂಟ 36ರಲ್ಲಿ ಗೆಲ್ಲುವ ಮೂಲಕ ರಾಜ್ಯದಲ್ಲಿ ಮೋದಿ ವಿಜಯಯಾತ್ರೆಗೆ ಆರಂಭ ಸಿಗದಂತೆ ಮಾಡಿದೆ.

ಜಯಲಲಿತಾ ಅವರ ನಿಧನ ನಂತರ ತಮಿಳುನಾಡು ರಾಜಕೀಯದಲ್ಲಿ ಸಾಕಷ್ಟು ಮೇಲಾಟಗಳು ನಡೆದವು. ಒಂದು ಹಂತದಲ್ಲಿ ಪಕ್ಷವೇ ಇಬ್ಛಾಗವೂ ಆಯಿತು. ಎಐಎಡಿಎಂಕೆಯಿಂದ ಸಿಡಿದ ಟಿ.ಟಿ.ವಿ.ದಿನಕರನ್‌ ಎಎಂಎಂಕೆ ಪಕ್ಷ ಸ್ಥಾಪಿಸಿದರು. ಹೀಗಾಗಿ ಎಐಎಡಿಎಂಕೆ ಪಾಳೆಯದಲ್ಲಿ ಬಲಿಷ್ಠ ನಾಯಕತ್ವಕ್ಕೆ ಸಂಬಂಧಿಸಿದಂತೆ ನಿರ್ವಾತವೇ ಸೃಷ್ಟಿಯಾಯಿತು. ಇನ್ನೊಂದೆಡೆ, ಕೆ.ಕರುಣಾನಿಧಿ ಅವರ ನಿಧನದ ನಂತರ ಪುತ್ರ ಎಂ.ಕೆ.ಸ್ಟಾಲಿನ್‌ ಡಿಎಂಕೆ ಸಾರಥ್ಯ ವಹಿಸಿ, ಪಕ್ಷ ಸಂಘಟಿಸಿದರು.

22ರಲ್ಲಿ 14 ಕ್ಷೇತ್ರಗಳಲ್ಲಿ ಡಿಎಂಕೆ, 3ರಲ್ಲಿ ಎಐಎಡಿಎಂಕೆ ಮತ್ತು ಉಳಿದ 5ರಲ್ಲಿ ಟಿ.ಟಿ.ವಿ. ದಿನಕರನ್ ಜತೆಗಾರರು ಗೆಲುವು ಸಾಧಿಸಲಿದ್ದಾರೆ ಎಂದು ಮತಗಟ್ಟೆ ಸಮೀಕ್ಷೆಗಳು ಹೇಳಿದ್ದವು.

ತಮಿಳುನಾಡು ವಿಧಾನಸಭೆ 234 ಸದಸ್ಯಬಲ ಹೊಂದಿದೆ. ಸರ್ಕಾರ ರಚನೆಗೆ 117 ಸ್ಥಾನಗಳಲ್ಲಿ ಗೆಲ್ಲಬೇಕು. ತೆರವಾದ 22 ಸ್ಥಾನಗಳಿಗೆ ಈಗ ಉಪಚುನಾವಣೆ ನಡೆದಿದೆ. ಎಐಎಡಿಎಂಕೆ 114 ಸ್ಥಾನ ಹೊಂದಿದೆ. ಸರ್ಕಾರ ಉಳಿಸಿಕೊಳ್ಳಲು ಎಐಎಡಿಎಂಕೆ 8 ಸ್ಥಾನಗಳನ್ನಾದರೂ ಗೆಲ್ಲಬೇಕು. ಏಕೆಂದರೆ ಈಗಿನ 114 ಶಾಸಕರಲ್ಲಿ ಮೂವರು ಈಗಾಗಲೇ ಬಹಿರಂಗವಾಗಿ ಟಿ.ಟಿ.ವಿ. ದಿನಕರನ್ ಅವರಿಗೆ ಬೆಂಬಲ ಘೋಷಿಸಿದ್ದಾರೆ. ಇನ್ನೊಬ್ಬ ಶಾಸಕ ಪಕ್ಷವನ್ನು ತೊರೆದು ಡಿಎಂಕೆಗೆ ಹೋಗುವ ಸಾಧ್ಯತೆ ಇದೆ. ಹೀಗಾಗಿ ಐದು ಸ್ಥಾನಗಳನ್ನು ಗೆದ್ದರೂ ಸರ್ಕಾರ ಉಳಿಯುವ ಸಾಧ್ಯತೆ ಕಡಿಮೆ. ಹೀಗಾಗಿ ಎಂಟು ಸ್ಥಾನಗಳನ್ನು ಗೆಲ್ಲಲೇಬೇಕಾದ ಅನಿವಾರ್ಯತೆಯಲ್ಲಿ ಎಐಎಡಿಎಂಕೆ ಇದೆ.

ಇನ್ನು, 97 ಸ್ಥಾನಗಳನ್ನು ಹೊಂದಿರುವ ಡಿಎಂಕೆ ಸರ್ಕಾರ ರಚಿಸಲು 20 ಸ್ಥಾನಗಳನ್ನು ಗೆಲ್ಲಲೇಬೇಕಾಗಿತ್ತು. ಡಿಎಂಕೆ ಮಿತ್ರ ಪಕ್ಷ ಐಯುಎಂಎಲ್‌ ಒಂದು ಸ್ಥಾನ ಹೊಂದಿದೆ. ಟಿ.ಟಿ.ವಿ. ದಿನಕರನ್ ಜತೆಗಾರರು (ಅವರ ಪಕ್ಷ ಇನ್ನೂ ನೋಂದಣಿ ಆಗಿಲ್ಲ) ಹೆಚ್ಚಿನ ಸಂಖ್ಯೆಯಲ್ಲಿ ಗೆದ್ದರೆ, ಅವರನ್ನು ಸೆಳೆಯಲು ಎಐಎಡಿಎಂಕೆ ಪ್ರಯತ್ನಿಸುವ ಸಾಧ್ಯತೆ ಹೆಚ್ಚು. ಈಗ ಅವರು ನೋಂದಣಿ ಆಗಿರದ ಪಕ್ಷದವರಾಗಿರುವುದರಿಂದ ಅವರು ಯಾವುದೇ ಪಕ್ಷಕ್ಕೆ ಹೋಗಬಹುದು. ಅವರ ಮೇಲೆ ಪಕ್ಷಾಂತರ ನಿಷೇಧ ಕಾಯ್ದೆಯನ್ನು ಹೇರಲು ಸಾಧ್ಯವಿಲ್ಲ. ಈ ಶಾಸಕರನ್ನು ಸೆಳೆಯಲು ಎಐಎಡಿಎಂಕೆ ಯಶಸ್ವಿಯಾದರೆ, ಸರ್ಕಾರ ಉಳಿಯುವ ಸಾಧ್ಯತೆ ಇದೆ.

ಸಾಧನೆ ಮಾಡಿದ ಡಿಎಂಕೆ

ತಮಿಳುನಾಡಿನಲ್ಲಿ ಎಐಎಡಿಎಂಕೆ ಮತ್ತು ಡಿಎಂಕೆ ನಡುವೆ ತುರುಸಿನ ಸ್ಪರ್ಧೆ ಇದ್ದು, ಪತ್ರಿಕೆ ಮುದ್ರಣಕ್ಕೆ ಹೋಗುವವರೆಗಿನ ಮಾಹಿತಿಯಂತೆ ಎಐಎಡಿಎಂಕೆ 3 ಸ್ಥಾನದಲ್ಲಿ ಗೆದ್ದು, 6 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿತ್ತು. 3 ಸ್ಥಾನಗಳಲ್ಲಿ ಗೆದ್ದಿದ್ದ ಡಿಎಂಕೆ 10 ಸ್ಥಾನಗಳಲ್ಲಿ ಮುನ್ನಡೆ ದಾಖಲಿಸಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT