ಭಾನುವಾರ, ಸೆಪ್ಟೆಂಬರ್ 22, 2019
22 °C
ಚುನಾವಣೆ ನಡೆದ 38ರಲ್ಲಿ 36 ಸ್ಥಾನಗಳನ್ನು ಡಿಎಂಕೆ ಗೆದ್ದುಕೊಂಡಿದೆ

ತಮಿಳುನಾಡಿನಲ್ಲಿ ಸ್ಟಾಲಿನ್‌ ಬಲ ಎಐಎಡಿಎಂಕೆ ದೂಳೀಪಟ

Published:
Updated:

ಚೆನ್ನೈ: ತಮಿಳುನಾಡಿನಲ್ಲಿ ಇತಿಹಾಸ ಮರುಕಳಿಸಿದೆ. 2014 ರ ಲೋಕಸಭಾ ಚುನಾವಣೆಯಲ್ಲಿ ಎಐಎಡಿಎಂಕೆ ಮಾಡಿದ್ದ ಸಾಧನೆಯನ್ನು ಈ ಬಾರಿ(2019) ಡಿಎಂಕೆ ಪುನರಾವರ್ತನೆ ಮಾಡಿದೆ.

2014ರಲ್ಲಿ ಎಐಎಡಿಎಂಕೆ 39 ಲೋಕಸಭಾ ಕ್ಷೇತ್ರಗಳಲ್ಲಿ 37 ರಲ್ಲಿ ಗೆದ್ದಿತ್ತು. ಈ ಬಾರಿ ಡಿಎಂಕೆ (ಯುಪಿಎ) 39 ರಲ್ಲಿ 37 ಸ್ಥಾನಗಳನ್ನು ಗೆದ್ದುಕೊಂಡಿದೆ.

ಉಳಿದ ಒಂದು ಸ್ಥಾನ ಎಐಎಡಿಎಂಕೆ  (ಎನ್‌ಡಿಎ) ಗೆದ್ದಿದೆ. ಅಲ್ಲದೆ, 22 ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಯಲ್ಲಿ ಡಿಎಂಕೆ 12 ರಲ್ಲಿ ಮುನ್ನಡೆ ಸಾಧಿಸಿರುವುದರಿಂದ ತಮಿಳುನಾಡಿನ ಆಡಳಿತಾರೂಢ ಎಐಎಡಿಎಂಕೆ ಸರ್ಕಾರ ಅಪಾಯದಂಚಿಗೆ ಬಂದು ನಿಂತಿದೆ. ವೆಲ್ಲೂರು ಲೋಕಸಭಾ ಕ್ಷೇತ್ರದ ಚುನಾವಣೆಯನ್ನು ಮುಂದೂಡಲಾಗಿದೆ.

ಮೇಲ್ನೋಟಕ್ಕೆ ಎರಡೂ ದ್ರಾವಿಡ ಪಕ್ಷಗಳ ಜಿದ್ದಾಜಿದ್ದಿನ ಹೋರಾಟವೆಂಬಂತೆ ಕಂಡು ಬಂದರೂ, ನಡೆದದ್ದು ಎನ್‌ಡಿಎ ಮತ್ತು ಯುಪಿಯ ನಡುವಿನ ಹೋರಾಟ. ಎನ್‌ಡಿಎ ಅನ್ನು ತಮಿಳುನಾಡಿನ ಜನತೆ ತಿರಸ್ಕರಿಸಿದ್ದಾರೆ ಎಂಬುದು ನಿಚ್ಚಳ.

ಚುನಾವಣಾ ಪ್ರಚಾರ ಸಂದರ್ಭದಲ್ಲಿ ಡಿಎಂಕೆ ಅಧ್ಯಕ್ಷ ಎಂ.ಕೆ.ಸ್ಟಾಲಿನ್, ಪ್ರಧಾನಿ ಮೋದಿ ಅವರನ್ನೇ ಗುರಿಯಾಗಿಸಿ ಟೀಕಾ ಪ್ರಹಾರ ನಡೆಸಿದ್ದರು. 

ಇವೆರಡೂ ಪಕ್ಷಗಳ ಮಹಾನ್‌ ನಾಯಕರಾಗಿದ್ದ ಜಯಲಲಿತಾ ಮತ್ತು ಕರುಣಾನಿಧಿ ಅವರ ನಿಧನದ ಬಳಿಕ ನಡೆದ ಮೊದಲ ಮಹಾಚುನಾವಣೆ ಇದು. ಕರುಣಾನಿಧಿ ನಿಧನದ ಬಳಿಕ ಅವರ ಪುತ್ರ ಸ್ಟಾಲಿನ್‌ ಪಕ್ಷದ ಚುಕ್ಕಾಣಿ ಹಿಡಿದರು. ಇನ್ನೊಂದೆಡೆ ಜಯಲಲಿತಾ ನಿಧನದ ಬಳಿಕ ಎಐಎಡಿಎಂಕೆಯಲ್ಲಿ ನಾಯಕತ್ವಕ್ಕೆ ಅಂತರ್ಯುದ್ಧ ನಡೆದು ಮುಖ್ಯಮಂತ್ರಿ ಪಳನಿಸ್ವಾಮಿ ಮತ್ತು ಉಪಮುಖ್ಯಮಂತ್ರಿ ಪನ್ನೀರ್ ಸೆಲ್ವಂ ಅವರು ಜಂಟಿ ನಾಯಕತ್ವ ವಹಿಸಿಕೊಂಡಿದ್ದಾರೆ. ಸ್ಟಾಲಿನ್‌ ಗಟ್ಟಿ ನಾಯಕತ್ವ ಅವರ ಪಕ್ಷಕ್ಕೆ ಭಾರೀ ಗೆಲುವು ತಂದುಕೊಟ್ಟಿದೆ. 

ಸದ್ಯಕ್ಕೆ ಅಲ್ಲಿನ ವಿಧಾನಸಭೆಯ 235 ಸದಸ್ಯರಲ್ಲಿ ಎಐಎಡಿಎಂಕೆ 113 ಸ್ಥಾನಗಳನ್ನು ಹೊಂದಿದೆ. ಅಧಿಕಾರವನ್ನು ಉಳಿಸಿಕೊಳ್ಳಲು ವಿಧಾನಸಭೆ ಉಪಚುನಾವಣೆಯಲ್ಲಿ ಕನಿಷ್ಠ ಐದು ಸ್ಥಾನಗಳನ್ನು ಗೆಲ್ಲಬೇಕಿತ್ತು. ಕೆಲವು ಶಾಸಕರು ಟಿಟಿವಿ ದಿನಕರನ್‌ ಬಣಕ್ಕೆ(ಅಮ್ಮ ಮಕ್ಕಳ್ ಮುನ್ನೇತ್ರ ಕಳಗಂ) ಜಿಗಿಯುವ ಸಾಧ್ಯತೆ ಇರುವುದರಿಂದ ಇನ್ನೂ ಹೆಚ್ಚಿನ ಸ್ಥಾನಗಳನ್ನು ಗೆಲ್ಲುವ ಅನಿವಾರ್ಯತೆ ಇತ್ತು. ಅದು ಸಾಧ್ಯವಾಗಿಲ್ಲ.

ಎಐಎಡಿಎಂಕೆ ಅಧಿಕಾರದಲ್ಲಿ ಮುಂದುವರೆಯಬೇಕಾದರೆ ಬಿಜೆಪಿಯ ಮಧ್ಯಪ್ರವೇಶ ಅಗತ್ಯವಿದೆ. ಕೇಂದ್ರದಲ್ಲಿ ಭಾರೀ ಬಹುಮತ ಪಡೆದಿರುವ ಬಿಜೆಪಿ ನೆರವಿಗೆ ಬರುವ ನಿರೀಕ್ಷೆ ಇದೆ. ಡಿಎಂಕೆ 88 ಸದಸ್ಯ ಬಲವನ್ನು ಹೊಂದಿದೆ. ಟಿಟಿವಿ ದಿನಕರನ್‌ ಸಹಾಯ ಇಲ್ಲದೆ ಎಐಎಡಿಎಂಕೆ ಸರ್ಕಾರ ಉಳಿಸಿಕೊಳ್ಳುವುದು ಕಷ್ಟ.  ಎಐಎಡಿಎಂಕೆ ಹೀನಾಯ ಸೋಲಿಗೆ ಜಯಲಲಿತಾ ನಿಧನದ ಬಳಿಕ ಆಡಳಿತ ವಿರೋಧಿ ಅಲೆ ಮತ್ತು ಪಕ್ಷದಲ್ಲಿ ಆಂತರಿಕ ಕಚ್ಚಾಟವೇ ಮುಖ್ಯ ಕಾರಣ. ಜಯಲಲಿತಾ ನಿಧನದ ಬಳಿಕ ವಿ.ಕೆ.ಶಶಿಕಲಾ ಅವರು ಪಕ್ಷದ ಚುಕ್ಕಾಣಿ ಹಿಡಿಯಲು ಬಯಸಿದ್ದರು. ಆದರೆ, ಅಕ್ರಮ ಸಂಪತ್ತಿನ ಪ್ರಕರಣದಲ್ಲಿ ಜೈಲು ಶಿಕ್ಷೆ ಆಗಿದ್ದರಿಂದ ಅವರ ಆಸೆ ಹುಸಿಯಾಯಿತು. 

Post Comments (+)