ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದ್ವಂದ್ವದಲ್ಲಿ ಎಐಎಡಿಎಂಕೆ, ದಿನಕರನ್‌

18 ಶಾಸಕರ ಅನರ್ಹತೆ ನಂತರ ಮುಂದಿನ ನಡೆ
Last Updated 28 ಅಕ್ಟೋಬರ್ 2018, 20:28 IST
ಅಕ್ಷರ ಗಾತ್ರ

ಚೆನ್ನೈ: ಆಡಳಿತಾರೂಢ ಪಕ್ಷದ ವಿರುದ್ಧವೇ ಬಂಡಾಯವೆದ್ದು, ಎಎಂಎಂಕೆ ಮುಖಂಡ ಟಿ.ಟಿ.ವಿ.ದಿನಕರನ್‌ಗೆ ನಿಷ್ಠೆ ತೋರಿದ್ದ ಎಐಎಡಿಎಂಕೆಯ 18 ಶಾಸಕರು ಅನರ್ಹಗೊಂಡ ನಂತರ ಮುಂದಿನ ರಾಜಕೀಯ ನಡೆ ಕುರಿತಂತೆ ಉಭಯ ಬಣಗಳಲ್ಲಿ ದ್ವಂದ್ವ ಮನೆ ಮಾಡಿದೆ.

‘ದಿನಕರನ್‌ಗೆ ಬೆಂಬಲ ವ್ಯಕ್ತಪಡಿಸಿದ ಕಾರಣ ಶಾಸಕ ಸ್ಥಾನದಿಂದ ನಿಮ್ಮನ್ನೂ ಏಕೆ ಅನರ್ಹಗೊಳಿಸಬಾರದು’ ಎಂದು ಇನ್ನೂ ಮೂವರು ಶಾಸಕರಿಗೆ ಕಾರಣ ಕೇಳಿ ನೋಟಿಸ್‌ ನೀಡಲು ಎಐಎಡಿಎಂಕೆ ಚಿಂತನೆ ನಡೆಸುತ್ತಿದೆ ಎಂದು ಪಕ್ಷದ ಮೂಲಗಳು ಹೇಳಿವೆ.

ಆದರೆ, ಇನ್ನೊಂದೆಡೆ, ಪಕ್ಷಕ್ಕೆ ಮರಳುವಂತೆ ಅನರ್ಹಗೊಂಡ ಶಾಸಕರಿಗೆ ಸಂದೇಶ ರವಾನಿಸುವ ಕಾರ್ಯವನ್ನೂ ಪಕ್ಷದ ಕೆಲವು ಮುಖಂಡರು ಮಾಡುತ್ತಿದ್ದಾರೆ ಎನ್ನಲಾಗಿದೆ.

ಇನ್ನು, ದಿನಕರನ್‌ ಬಣವೂ ಮುಂದಿನ ರಾಜಕೀಯ ನಡೆ ಬಗ್ಗೆ ಗೊಂದಲದಲ್ಲಿದೆ. 18 ಶಾಸಕರನ್ನು ಅನರ್ಹಗೊಳಿಸಿದ್ದನ್ನು ಎತ್ತಿ ಹಿಡಿದಿರುವ ಮದ್ರಾಸ್‌ ಹೈಕೋರ್ಟ್‌ ತೀರ್ಪಿನ ವಿರುದ್ಧ ಮೇಲ್ಮನವಿ ಸಲ್ಲಿಸುವ ಬಗ್ಗೆ ಇನ್ನೂ ಸ್ಪಷ್ಟ ನಿರ್ಧಾರಕ್ಕೆ ಬಂದಿಲ್ಲ.

ಹೈಕೋರ್ಟ್‌ ತೀರ್ಪನ್ನು ಪ್ರಶ್ನಿಸಿ ಮೇಲ್ಮನವಿ ಸಲ್ಲಿಸಲಾಗುವುದು ಎಂದು ಅನರ್ಹಗೊಂಡ ಶಾಸಕರು ಹೇಳಿದ್ದರೆ, ಈ ಬಗ್ಗೆ ಅ. 31ರಂದು ಅಂತಿಮ ನಿರ್ಧಾರ ಕೈಗೊಳ್ಳುವುದಾಗಿ ದಿನಕರನ್‌ ಭಾನುವಾರ ಹೇಳಿದ್ದಾರೆ.

‘ವಿಲೀನದ ನಿರೀಕ್ಷೆಯಲ್ಲಿ ಉಭಯ ಪಕ್ಷಗಳು’

‘‌ತಮ್ಮ ಸ್ವಂತ ಬಲದ ಮೇಲೆ ರಾಜಕೀಯವಾಗಿ ಭದ್ರ ನೆಲೆ ಕಂಡುಕೊಳ್ಳುವುದು ಕಷ್ಟ ಎಂಬುದು ಎಐಎಡಿಎಂಕೆ ಹಾಗೂ ಟಿ.ಟಿ.ವಿ.ದಿನಕರನ್‌ ಬಣಗಳಿಗೆ ಮನದಟ್ಟಾಗಿದೆ’ ಎಂಬುದು ಪ್ರಸಕ್ತ ಬೆಳವಣಿಗೆ ಕುರಿತಂತೆ ರಾಜಕೀಯ ವಿಶ್ಲೇಷಕರು ಹೇಳುವ ಮಾತು.

‘ಉಭಯ ಬಣಗಳ ವಿಲೀನಕ್ಕೆ ಮಾತುಕತೆ ನಡೆಸಲು ಈ ಮುಖಂಡರು ಹಾತೊರೆಯುತ್ತಿದ್ದಾರೆ’ ಎಂದೂ ಹೇಳುತ್ತಾರೆ.

‘ಶಾಸಕರ ಅನರ್ಹತೆಯನ್ನು ಹೈಕೋರ್ಟ್‌ ಎತ್ತಿ ಹಿಡಿದ ನಂತರ ಮುಖ್ಯಮಂತ್ರಿ ಇ.ಕೆ.ಪಳನಿಸ್ವಾಮಿ ಅವರು ಪಕ್ಷದಲ್ಲಿ ಭದ್ರವಾಗಿ ಕಾಲೂರಿದ್ದರೂ, 20 ವಿಧಾನಸಭಾ ಕ್ಷೇತ್ರಗಳಲ್ಲಿ ನಡೆಯಲಿರುವ ಉಪಚುನಾವಣೆಗೆ ಸಂಬಂಧಿಸಿದಂತೆ ಪಕ್ಷಕ್ಕೆ ಪೂರಕ ವಾತಾವರಣ ಇಲ್ಲ ಎಂಬ ಅಳಕು ಸಹ ಅವರಲ್ಲಿದೆ’ ಎಂದುವಿಶ್ಲೇಷಿಸಲಾಗುತ್ತಿದೆ.

‘ಹೈಕೋರ್ಟ್‌ ತೀರ್ಪಿನಿಂದಾಗಿ ದಿನಕರನ್‌ ಅವರಿಗೆ ತೀವ್ರ ಹಿನ್ನಡೆಯಾಗಿದೆ. ಹೀಗಾಗಿ ತಕ್ಷಣವೇ ನಡೆಯಲಿರುವ ಚುನಾವಣೆಗಳಲ್ಲಿ ಸ್ಪರ್ಧಿಸಲು ಅವರು ಮುಂದಾಗುವುದಿಲ್ಲ. ಬದಲಿಗೆ, ಎರಡೂ ಬಣಗಳನ್ನು ಒಂದುಗೂಡಿಸಲು ಯತ್ನಿಸಬಹುದು’ ಎಂದೂ ರಾಜಕೀಯ ವಿಶ್ಲೇಷಕರು ಹೇಳುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT