ವಾಯುಪಡೆ ವಿಮಾನ ದುರಂತದಲ್ಲಿ ಯಾರೊಬ್ಬರು ಬದುಕುಳಿದಿಲ್ಲ: ಸೇನೆ

ಬುಧವಾರ, ಜೂನ್ 26, 2019
23 °C
ಅರುಣಾಚಲ ಪ್ರದೇಶದಲ್ಲಿ ನಿಲ್ಲದ ವಿಮಾನ ಅಪಘಾತ ಸರಣಿ, ಎಎನ್‌32 ವಾಯುಪಡೆ ವಿಮಾನ ಅವಶೇಷ ಪತ್ತೆ

ವಾಯುಪಡೆ ವಿಮಾನ ದುರಂತದಲ್ಲಿ ಯಾರೊಬ್ಬರು ಬದುಕುಳಿದಿಲ್ಲ: ಸೇನೆ

Published:
Updated:

ಗುವಾಹಟಿ: ಜೂನ್ 3ರಂದು ಪತನವಾಗಿದ್ದ ಭಾರತೀಯ ವಾಯುಪಡೆಯ ಎಎನ್‌–32 ವಿಮಾನದಲ್ಲಿದ್ದ ಎಲ್ಲ 13 ಸಿಬ್ಬಂದಿ ಮೃತಪಟ್ಟಿದ್ದಾರೆ ಎಂದು ವಾಯುಪಡೆ ಗುರುವಾರ ಖಚಿತಪಡಿಸಿದೆ. 

ಚೀನಾ ಗಡಿಗೆ ಹೊಂದಿಕೊಂಡ ಅರುಣಾಚಲ ಪ್ರದೇಶದ ದುರ್ಗಮ ಕಾಡಿನಲ್ಲಿ ವಿಮಾನ ಹಾಗೂ ಮೃತರ ಅವಶೇಷ ಪತ್ತೆಯಾಗಿವೆ ಎಂದು ವಾಯುಪಡೆ ಪ್ರಕಟಿಸಿದೆ. 

‘ಎಂಟು ಮಂದಿಯ ರಕ್ಷಣಾ ತಂಡ ಗುರುವಾರ ಬೆಳಿಗ್ಗೆ ಘಟನಾ ಸ್ಥಳಕ್ಕೆ ತಲುಪಿತು. ಆದರೆ ವಿಮಾನದಲ್ಲಿದ್ದ ಯಾರೊಬ್ಬರೂ ಬದುಕುಳಿದಿಲ್ಲ ಎಂದು ತಿಳಿಸಲು ವಿಷಾದಿಸುತ್ತೇವೆ’ ಎಂದು ಐಎಎಫ್ ಟ್ವೀಟ್ ಮಾಡಿದೆ. 

ರಷ್ಯಾ ನಿರ್ಮಿತ ಎಎನ್‌–32 ವಿಮಾನವು ಅಸ್ಸಾಂನ ಜೋರ್ಹತ್‌ನಿಂದ ಮೆಚುಕಾ ಎಂಬಲ್ಲಿಗೆ ತೆರಳುತ್ತಿತ್ತು. ಆದರೆ ಟೇಕ್‌ಆಫ್ ಆದ ಅರ್ಧ ಗಂಟೆಯ ಹೊತ್ತಿಗೆ ವಿಮಾನವು ನಿಯಂತ್ರಣ ಕೇಂದ್ರದ ಸಂಪರ್ಕ ಕಳೆದುಕೊಂಡಿತ್ತು. 

ವಾಯುಪಡೆಯ ಹೆಲಿಕಾಪ್ಟರ್ ಹಾಗೂ ಸೇನಾ ಸಿಬ್ಬಂದಿ ಸತತ ಎಂಟು ದಿನಗಳಿಂದ ಹುಡುಕಾಟ ನಡೆಸುತ್ತಿದ್ದರು. ಅರುಣಾಚಲ ಪ್ರದೇಶದ ಗಡಿ ಭಾಗ ಸಿಯಾಂಗ್ ಜಿಲ್ಲೆಯಲ್ಲಿ ಸಮುದ್ರ ಮಟ್ಟದಿಂದ ಸುಮಾರು 12 ಸಾವಿರ ಅಡಿ ಎತ್ತರದ ಗಟ್ಟೆ ಎಂಬ ಗ್ರಾಮದಲ್ಲಿ ವಿಮಾನದ ಅವಶೇಷಗಳನ್ನು ಮಂಗಳವಾರ ಪತ್ತೆಹಚ್ಚಲಾಗಿತ್ತು. ಆದರೆ ದುರ್ಗಮವಾದ ಈ ಸ್ಥಳಕ್ಕೆ ತೆರಳಲು ಸಾಧ್ಯವಾಗಿದ್ದು ಗುರುವಾರ ಬೆಳಿಗ್ಗೆ. 

ಎತ್ತರದ ಈ ಜಾಗಕ್ಕೆ ತಲುಪಲು 15 ಮಂದಿ ಪರ್ವತಾರೋಹಿಗಳ ನೆರವನ್ನು ಪಡೆಯಲಾಗಿತ್ತು. ದಟ್ಟವಾದ ಅರಣ್ಯ ಹಾಗೂ ಹವಾಮಾನ ವೈಪರೀತ್ಯದಿಂದಾಗಿ ಸ್ಥಳವನ್ನು ಪತ್ತೆಹಚ್ಚಲು ಆವರಿಗೂ ಸಾಧ್ಯವಾಗಿರಲಿಲ್ಲ. ಪ್ರಯಾಣಿಸುವುದೇ ಕಷ್ಟವಾಗಿರುವ ಈ ಪ್ರದೇಶದಿಂದ ಮೃತದೇಹಗಳನ್ನು ಹೊರತರಲು ಇನ್ನಷ್ಟು ಸಮಯ ಹಿಡಿಯಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಘಟನಾ ಸ್ಥಳದಿಂದ ಬ್ಲ್ಯಾಕ್ ಬಾಕ್ಸ್ ವಶಕ್ಕೆ ಪಡೆಯಲಾಗಿದ್ದು ಮಾಹಿತಿ ಕಲೆ ಹಾಕಲಾಗುತ್ತಿದೆ.

* ದುರ್ಗಮ ಕಾಡಿನಲ್ಲಿ 8 ದಿನಗಳ ಕಾರ್ಯಾಚರಣೆ

* 12 ಸಾವಿರ ಅಡಿ ಎತ್ತರದ ಜಾಗದಲ್ಲಿ ಅವಶೇಷ ಪತ್ತೆ

* ಬ್ಲ್ಯಾಕ್ ಬಾಕ್ಸ್ ಪತ್ತೆಹಚ್ಚಿದ ರಕ್ಷಣಾ ತಂಡ

ವೀರಯೋಧರಿಗೆ ವಾಯುಪಡೆ ನಮನ 

ವಿಂಗ್ ಕಮಾಂಡರ್ ಜಿ.ಎಂ. ಚಾರ್ಲ್ಸ್, ಸ್ಕ್ವಾಡ್ರನ್ ಲೀಡರ್ ಎಚ್.ವಿನೋದ್, ಫ್ಲೈಟ್ ಲೆಫ್ಟಿನೆಂಟ್‌ಗಳಾದ ಎಲ್.ಆರ್. ಥಾಪಾ, ಎಂ.ಕೆ. ಗರ್ಗ್, ಆಶಿಶ್ ತನ್ವಾರ್, ಸುಮಿತ್ ಮೊಹಂತಿ, ವಾರಂಟ್ ಅಧಿಕಾರಿ ಕೆ.ಕೆ. ಮಿಶ್ರಾ, ಸರ್ಜೆಂಟ್ ಅನೂಪ್ ಕುಮಾರ್, ಕಾರ್ಪೊರಲ್ ಶೆರಿನ್, ಲೀಡಿಂಗ್ ಏರ್‌ಕ್ರಾಫ್ಟ್ ಮ್ಯಾನ್ (ಎಲ್‌ಎಸಿ) ಎಸ್.ಕೆ. ಸಿಂಗ್, ಎಲ್‌ಎಸಿ ಪಂಕಜ್, ಹಾಗೂ ರಾಜೇಶ್ ಕುಮಾರ್, ಪುಟಾಲಿ ಎಂಬುವರು ಮೃತಪಟ್ಟಿದ್ದು, ವಾಯುಪಡೆ ಇವರಿಗೆ ಗೌರವ ಸಲ್ಲಿಸಿದೆ. ‘ಮೃತರ ಆತ್ಮಕ್ಕೆ ಶಾಂತಿ ಸಿಗಲಿ, ಕರ್ತವ್ಯದ ವೇಳೆ ವಿಮಾನ ಅಪಘಾತದಲ್ಲಿ ಮೃತರಾದ ವೀರಯೋಧರ ಕುಟುಂಬದ ಜೊತೆ ವಾಯುಪಡೆ ಇರಲಿದೆ’ ಎಂದು ವಕ್ತಾರರು ತಿಳಿಸಿದ್ದಾರೆ.

ದುರ್ಗಮ ಕಾಡು, ಹವಾಮಾನ ವೈಪರೀತ್ಯವೇ ಕಾರಣ?

ಮುಂಗಾರು ಅವಧಿಯಲ್ಲಿ ಅರುಣಾಚಲ ಪ್ರದೇಶದಂತಹ ಗುಡ್ಡಗಾಡು ಪ್ರದೇಶಗಳಲ್ಲಿ ವಿಮಾನ ಚಲಾಯಿಸುವುದು ಪೈಲಟ್‌ಗಳಿಗೆ ಒಂದು ದುಃಸ್ವಪ್ನದಂತೆಯೇ ಕಾಡುತ್ತದೆ. ಕ್ಷಣ ಕ್ಷಣಕ್ಕೂ ಬದಲಾಗುವ ವಾತಾವರಣ, ಕ್ಷೀಣ ರೇಡಾರ್ ಸಂಪರ್ಕ ಇಲ್ಲಿನ ಈ ಭಾಗದಲ್ಲಿ ಓಡಾಡುವ ವಿಮಾನಗಳಿಗೆ ತೊಡಕಾಗುತ್ತವೆ.  

‘ಮೋಟಾರ್ ರಸ್ತೆ ಇಲ್ಲದ ಕಾರಣ ಜೋರ್ಹತ್‌ನಿಂದ ಮೆಚುಕು ಅಥವಾ ವಿಜಯನಗರ ಸೇರಿದಂತೆ ಹಲವು ಪ್ರದೇಶಗಳಿಗೆ ಆಹಾರ ಸಾಮಗ್ರಿಗಳನ್ನು ನಾವು ಹೊತ್ತೊಯ್ಯುತ್ತೇವೆ. ಚಳಿಗಾಲದಲ್ಲಿ ವಿಜಯನಗರದ ಮಿಯಾವೊ ಪಟ್ಟಣ ತಲುಪಲು ಆರರಿಂದ ಏಳು ಚಾರಣದ ದಿನಗಳು ಬೇಕು. ಮುಂಗಾರು ಹಂಗಾಮಿನಲ್ಲಿ ಮಳೆ ಹಾಗೂ ಭೂಕುಸಿತದ ಕಾರಣ ಚಾರಣ ಮಾಡುವುದು ಸಾಧ್ಯವೇ ಇಲ್ಲ. ಆದರೆ ಮಳೆಗಾಲದಲ್ಲಿಯೂ ನಾವು ರಕ್ಷಣಾ ಕಾರ್ಯಾಚರಣೆಯನ್ನು ನಡೆಸಬೇಕು’ ಎಂದು ಅಸ್ಸಾಂನ ಜೋರ್ಹತ್ ವಾಯುನೆಲೆಯಲ್ಲಿ ಕೆಲಸ ಮಾಡುವ ಅಧಿಕಾರಿಯೊಬ್ಬರು ಹೇಳುತ್ತಾರೆ. 

ಭೌಗೋಳಿಕವಾಗಿ ಪ್ರತಿಕೂಲ ಎನಿಸಿರುವ ಈ ಪ್ರದೇಶದಲ್ಲಿ 2010ರಿಂದ 50ಕ್ಕೂ ಹೆಚ್ಚು ವಾಯುಪಡೆ ಪೈಲಟ್‌ಗಳು ಮೃತಪಟ್ಟಿದ್ದಾರೆ. ಎರಡನೇ ಜಾಗತಿಕ ಯುದ್ಧದ ಸಮಯದಲ್ಲೂ ಮಿತ್ರಪಡೆಗೆ ಸೇರಿದ ಹಲವು ವಿಮಾನಗಳು ಈ ಜಾಗದಲ್ಲಿ ದುರಂತಕ್ಕೀಡಾಗಿದ್ದವು. 

ಚೀನಾಕ್ಕೆ ತಿರುಗೇಟು ನೀಡುವ ಉದ್ದೇಶದಿಂದ ಪಶ್ಚಿಮ ಭಾಗದಲ್ಲಿ ರಕ್ಷಣಾ ಸವಲತ್ತುಗಳನ್ನು ಭಾರತ ಹೆಚ್ಚಿಸುತ್ತಿದೆ. ಆದರೆ ಪೈಲಟ್‌ಗಳಿಗೆ ಬೇರೆ ವಿಧಿಯಿಲ್ಲದೆ ಇಂತಹ ದುರ್ಗಮವಾದ ವಾತಾವರಣದಲ್ಲಿ ಕೆಲಸ ಮಾಡಬೇಕಾದ ಸ್ಥಿತಿ ಇದೆ. ದಟ್ಟ ಕಾಡಿನಲ್ಲಿ ತುರ್ತು ಲ್ಯಾಂಡಿಂಗ್ ಮಾಡಲೂ ಕೆಲವೊಮ್ಮೆ ಜಾಗ ಸಿಗುವುದಿಲ್ಲ.  ಟೇಕ್‌ಆಫ್ ಹಾಗೂ ಲ್ಯಾಂಡಿಂಗ್ ವೇಳೆ ಸ್ಥಳೀಯ ಹವಾಮಾನ ತೀವ್ರಗತಿಯಲ್ಲಿ ಬದಲಾಗುತ್ತದೆ. ಇಂತಹ ಜಾಗಗಳಲ್ಲಿ ಹೆಲಿಕಾಪ್ಟರ್‌ಗಳು ಹಾರಾಡಬಲ್ಲವು. ಗಾಳಿಯ ಸಾಂದ್ರತೆ ಕಡಿಮೆ ಇರುವ ಕಾರಣ ವಿಮಾನಗಳ ಸಂಚಾರ ಕಷ್ಟ. ಚಿಕ್ಕ ತಪ್ಪು ಎಸಗಿದರೂ, ಎತ್ತರದಲ್ಲಿ ಹಾರಾಟ ನಡೆಸಿ ಸರಿಪಡಿಸಿಕೊಳ್ಳಲು ಸಾಧ್ಯವಿರುವುದಿಲ್ಲ ಎನ್ನುತ್ತಾರೆ ನಿವೃತ್ತ ಗ್ರೂಪ್ ಕ್ಯಾಪ್ಟನ್ ತರುಣ್ ಕುಮಾರ್ ಸಿಂಘಾ.

ಬೆಟ್ಟಕ್ಕೆ ಡಿಕ್ಕಿ ಹೊಡೆಯಿತೇ ವಿಮಾನ?

ಜೋರ್ಹತ್‌ನಿಂದ ಹೊರಟ ವಿಮಾನ ಮೆಚುಕಾಗೆ ಹಿಂದಿರುಗುವಾಗ ಪಾಯಮ್‌ ನಿಯಂತ್ರಣ ಕೇಂದ್ರದ ಸಂಪರ್ಕ ಕಳೆದುಕೊಂಡಿತು. ಘಟನಾ ಸ್ಥಳದ ಚಿತ್ರಗಳನ್ನು ಪರಿಶೀಲಿಸಿದಾಗ, ಮೆಚುಕಾದಲ್ಲಿ ಲ್ಯಾಂಡಿಂಗ್ ಮಾಡುವ ವೇಳೆ ವಿಮಾನವು ಬೆಟ್ಟಕ್ಕೆ ಡಿಕ್ಕಿ ಹೊಡೆದಿರುವಂತೆ ತೋರುತ್ತದೆ. 

‘ಕ್ಷಣಮಾತ್ರದಲ್ಲಿ ಮೋಡಗಳು ಬೆಟ್ಟವನ್ನು ಆವರಿಸಿದವು. ಹೀಗಾಗಿ ಲ್ಯಾಂಡಿಂಗ್ ಮಾಡಲು ಮುಂದಾಗುತ್ತಿದ್ದ ಪೈಲಟ್‌ಗೆ ಬೆಟ್ಟ ಕಾಣಿಸದಂತಾಗಿ ಡಿಕ್ಕಿ ಹೊಡೆದಿರಬಹುದು. ಬ್ಲ್ಯಾಕ್‌ಬಾಕ್ಸ್ ಹಾಗೂ ಧ್ವನಿ ಪೆಟ್ಟಿಗೆಗಳು ಸ್ಪಷ್ಟ ಉತ್ತರ ನೀಡಲಿವೆ’ ಎಂದು ವಾಯುಪಡೆ ಮೂಲಗಳು ತಿಳಿಸಿವೆ.

ಅರುಣಾಚಲ ಪ್ರದೇಶದಲ್ಲಿ ವಿಮಾನ ದುರಂತ (2010ರ ಬಳಿಕ)

* 19 ಏಪ್ರಿಲ್, 2010: ವಾಯುಪಡೆಯ ಎಂಐ–17 ಹೆಲಿಕಾಪ್ಟರ್ ಪತನ; 19 ಸಿಬ್ಬಂದಿ ಸಾವು  

* 19 ಏಪ್ರಿಲ್, 2011: ತವಾಂಗ್ ಬಳಿ ಪವನ್‌ಹನ್ಸ್ ಕಂಪನಿಯ ಕಾಪ್ಟರ್ ಪತನ; 17 ಸಿಬ್ಬಂದಿ ಸಾವು

* 30 ಏಪ್ರಿಲ್, 2011: ಅರುಣಾಚಲ ಪ್ರದೇಶದ ಮುಖ್ಯಮಂತ್ರಿ ದೋರ್ಜಿ ಖಂಡು ಕಾಪ್ಟರ್ ತವಾಂಗ್‌ ಬಳಿ ಪತನ; ಐದು ದಿನಗಳ ಬಳಿಕ ಮೃತದೇಹ ಪತ್ತೆ 

* 12 ಆಗಸ್ಟ್, 2015: ತಿರಾಪ್ ಜಿಲ್ಲೆಯಲ್ಲಿ ಪವನ್‌ಹನ್ಸ್ ಹೆಲಿಕಾಪ್ಟರ್ ಅಪಘಾತ; ಇಬ್ಬರು ಪೈಲಟ್, ಒಬ್ಬ ಪ್ರಯಾಣಿಕ ಸಾವು

* 23 ಮೇ, 2017: ಅಸ್ಸಾಂನ ತೇಜ್‌ಪುರ ವಾಯುನೆಲೆಯಿಂದ ಹೊರಟಿದ್ದ ತರಬೇತಿ ನಿರತ ಸುಖೋಯ್–30 ಯುದ್ಧವಿಮಾನ ಅಪಘಾತ; ಪೈಲಟ್‌ಗಳಿಬ್ಬರ ಸಾವು

* 4 ಜೂನ್, 2017: ಪಾಪುಮ್ ಪಾರೆ ಜಿಲ್ಲೆಯಲ್ಲಿ ಐಎಎಫ್‌ ಹೆಲಿಕಾಪ್ಟರ್ ಪತನ; 3 ಸಿಬ್ಬಂದಿ ಸಾವು

* 6 ಅಕ್ಟೋಬರ್, 2017: ತವಾಂಗ್ ಬಳಿ ಎಂಐ–17 ಹೆಲಿಕಾಪ್ಟರ್ ಅಪಘಾತ; ವಾಯುಪಡೆಯ 5 ಸಿಬ್ಬಂದಿ, ಇಬ್ಬರು ಸೇನಾ ಸಿಬ್ಬಂದಿ ಸಾವು

11 ಅಕ್ಟೋಬರ್, 2018: ಹವಾಮಾನ ವೈಪರೀತ್ಯದಿಂದಾಗಿ, ಚೀನಾ ಗಡಿಯ ಟೂಟಿಂಗ್ ಎಂಬಲ್ಲಿ ಎಂಐ–17 ಹೆಲಿಕಾಪ್ಟರ್ ಲ್ಯಾಂಡಿಂಗ್; 16 ಪ್ರಯಾಣಿಕರು ಅಪಾಯದಿಂದ ಪಾರು

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 13

  Sad
 • 0

  Frustrated
 • 1

  Angry

Comments:

0 comments

Write the first review for this !