ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೇರಳ ಮಹಿಳಾ ಪೊಲೀಸ್‌ ಕೊಲೆ ಪ್ರಕರಣ| ಮದುವೆ ಕೋರಿಕೆ ನಿರಾಕರಿಸಿದ್ದೇ ಕೊಲೆಗೆ ಕಾರಣ

Last Updated 17 ಜೂನ್ 2019, 10:37 IST
ಅಕ್ಷರ ಗಾತ್ರ

ತಿರುವನಂತಪುರಂ: ಕೇರಳದಲ್ಲಿ ಪೊಲೀಸ್‌ ಅಧಿಕಾರಿಯೊಬ್ಬರು ಮಹಿಳಾ ಪೇದೆಯನ್ನು ಹರಿತವಾದ ಆಯುಧಗಳಿಂದ ಕೊಚ್ಚಿ, ಬೆಂಕಿ ಹಚ್ಚಿ ಕೊಂದ ಪ್ರಕರಣಕ್ಕೆ ಹೊಸ ತಿರುವು ಸಿಕ್ಕಿದೆ. ಏಕಮುಖ ಪ್ರೇಮ ಪ್ರಕರಣವೊಂದು ತನಿಖೆ ವೇಳೆ ಬಯಲಾಗಿದೆ.

ಕೆಲಸ ಮುಗಿಸಿ ಮನೆಗೆ ತೆರಳುತ್ತಿದ್ದ ಅಲಪ್ಪುವಾದ ವಲ್ಲಿಕುನ್ನಮ್‌ ಪೊಲೀಸ್‌ ಠಾಣೆಯ 34 ವರ್ಷದ ಮಹಿಳಾ ಪೇದೆ ಸೌಮ್ಯಾ ಪುಷ್ಪಕರಣ್‌ ಅವರ ಮೇಲೆ ಎರ್ನಾಕುಲಂ ಜಿಲ್ಲೆಯ ಆಲುವಾದ ಸಂಚಾರ ಪೊಲೀಸ್‌ ಠಾಣಾಯ ಅಧಿಕಾರಿ 33 ವರ್ಷದ ಅಜಾಜ್‌ ಅವರು ದಾಳಿ ನಡೆಸಿದ್ದರು. ಸೌಮ್ಯಾ ಅವರ ಸ್ಕೂಟಿಗೆ ಹಿಂದಿನಿಂದ ಡಿಕ್ಕಿ ಹೊಡೆದು, ನಂತರ ಕೆಳಗೆ ಬಿದ್ದ ಅವರ ಮೇಲೆ ಹರಿತವಾದ ಆಯುಧಗಳಿಂದ ದಾಳಿ ಮಾಡಿ, ಪೆಟ್ರೋಲ್‌ ಸುರಿದು, ಬೆಂಕಿ ಹಚ್ಚಿ ಹತ್ಯೆಗೈದಿದ್ದರು. ಘಟನೆಯಲ್ಲಿ ಅಜಾಜ್‌ಗೂ ಶೇ.40ರಷ್ಟು ಸುಟ್ಟು ಗಾಯಗಳಾಗಿದ್ದವು.

ಈ ಪ್ರಕರಣದ ಬೆನ್ನು ಹತ್ತಿದ ಪೊಲೀಸರಿಗೆ ಪೊಲೀಸ್‌ ಅಧಿಕಾರಿ ಅಜಾಜ್‌ ಅವರ ಏಕಮುಖ ಪ್ರೇಮ ಪ್ರಸಂಗ ಗೊತ್ತಾಗಿದೆ.

ಅಜಾಜ್‌ ಮತ್ತು ಸೌಮ್ಯಾ ಅವರು ಮೂರು ವರ್ಷಗಳಿಂದಲೂ ಸ್ನೇಹಿತರಾಗಿದ್ದರು. ಆದರೆ, ಈ ಸ್ನೇಹವು ಕುಟುಂಬದಲ್ಲಿ ಸಮಸ್ಯೆ ತಂದೊಡ್ಡುತ್ತಿದೆ ಎಂಬುದನ್ನು ಮನಗಂಡ ಸೌಮ್ಯಾ, ಅಜಾಜ್‌ರಿಂದ ಅಂತರ ಕಾಯ್ದುಕೊಳ್ಳಲಾರಂಭಿಸಿದ್ದರು. ಸೌಮ್ಯಾ ಅದಾಗಲೇ ಮೂರು ಮಕ್ಕಳ ತಾಯಿಯೂ ಹೌದು. ಪತಿ ಮತ್ತು ಮಕ್ಕಳನ್ನು ತೊರೆದು ತನ್ನನ್ನು ಮದುವೆಯಾಗುವಂತೆ ಅಜಾಜ್‌ ಸೌಮ್ಯಾ ಅವರಿಗೆ ಪೀಡಿಸುತ್ತಿದ್ದರು ಎನ್ನಲಾಗಿದೆ. ಆದರೆ, ಸೌಮ್ಯಾ ಇದನ್ನು ನಿರಾಕರಿಸಿದ್ದರು. ಅಜಾಜ್‌ರ ಕರೆಗಳನ್ನು ನಿರ್ಲಕ್ಷಿಸುತ್ತಿದ್ದರು, ವಾಟ್ಸಾಪ್‌ನಲ್ಲಿ ಬ್ಲಾಕ್‌ ಮಾಡಿದ್ದರು. ಇದು ಅಜಾಜ್‌ರನ್ನು ಕೆರಳಿಸಿತ್ತು. ಅಜಾಜ್‌ ಮತ್ತು ಸೌಮ್ಯಾ ಅವರ ನಡುವಿನ ಸ್ನೇಹದ ಬಗ್ಗೆ ಸೌಮ್ಯಾ ಅವರ ತಾಯಿ ಇಂದಿರಾ ಅವರಿಗೆ ತಿಳಿದಿತ್ತು. ಸೌಮ್ಯಾ ಎಲ್ಲ ವಿಚಾರಗಳನ್ನೂ ತಾಯಿಯೊಂದಿಗೆ ಹಂಚಿಕೊಳ್ಳುತ್ತಿದ್ದರು ಎಂದು ಪ್ರಕರಣದ ತನಿಖೆ ನಡೆಸುತ್ತಿರುವ ವಲ್ಲಿಕುನ್ನಮ್‌ ಪೊಲೀಸ್‌ ಠಾಣೆಯ ಇನ್ಸ್‌ಪೆಕ್ಟರ್‌ ಶೈಜು ಇಬ್ರಾಹಿಂ ಅವರು ತಿಳಿಸಿದ್ದಾರೆ.

ಸೌಮ್ಯಾ ಅವರು ಪೊಲೀಸ್‌ ಇಲಾಖೆಗೆ ನೇಮಕವಾದಾಗ ತರಬೇತಿಗೆಂದು ತ್ರಿಶೂರಿನ ಪೊಲೀಸ್‌ ಅಕಾಡೆಮಿಗೆ ತೆರಳಿದ್ದಾಗ ಅಜಾಜ್‌ ಪರಿಚಯವಾಗಿದ್ದರು. ನಂತರ ಅವರು ಫೇಸ್‌ಬುಕ್‌ನ ಮೂಲಕ ಮತ್ತಷ್ಟು ಆಪ್ತರಾಗಿದ್ದರು. ಇಬ್ಬರ ನಡುವೆ ಹಣಕಾಸಿನ ವ್ಯವಹಾರಗಳೂ ನಡೆದಿತ್ತು. ಇದು ಸೌಮ್ಯಾ ತಾಯಿಗೂ ಗೊತ್ತಿತ್ತು.

ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಸೌಮ್ಯಾ ಅವರ ತಾಯಿ ಸಂಬಂಧಿಗಳು ಮತ್ತು ನೆರೆಹೊರೆಯರ ಹೇಳಿಕೆಗಳನ್ನು ದಾಖಲಿಸಿಕೊಂಡಿದ್ದಾರೆ.

ತಾನೂ ಸಾಯಲು ನಿರ್ಧರಿಸಿದ್ದ ಅಜಾಜ್‌

ಸೌಮ್ಯಾ ಅವರ ಕೊಲೆಯು ಪೂರ್ವ ನಿರ್ಧರಿತ ಎಂದು ಪೊಲೀಸರು ಅಭಿಪ್ರಾಯಪಟ್ಟಿದ್ದಾರೆ. ಸೌಮ್ಯಾರನ್ನು ಕೊಂದು ತಾವೂ ಸಾಯಲು ಅಜಾಜ್‌ ನಿರ್ಧರಿಸಿದ್ದರು. ಹಾಗಾಗಿಯೇ ಅಜಾಜ್‌ ಮೊದಲು ತಾವೇ ಪೆಟ್ರೋಲ್‌ ಸುರಿದುಕೊಂಡಿದ್ದರು. ನಂತರ ಸೌಮ್ಯಾ ಅವರ ಮೇಲೆ ಸುರಿದು ಬೆಂಕಿ ಹಚ್ಚಿದ್ದರು. ಆದರೆ, ಘಟನೆಯಲ್ಲಿ ಅಜಾಜ್‌ ಪಾರಾಗಿದ್ದಾರೆ.

ಹಿಂದೊಮ್ಮೆ ಹತ್ಯೆಗೆ ಪ್ರಯತ್ನಿಸಿದ್ದ ಅಜಾಜ್‌

ಮಾಧ್ಯಮಗಳೊಂದಿಗೆ ಮಾತನಾಡಿರುವ ಸೌಮ್ಯಾ ಅವರ ತಾಯಿ ಇಂದಿರಾ, ‘ ಅಜಾಜ್‌ ಈ ಮೊದಲೂ ಸೌಮ್ಯಾಳ ಹತ್ಯೆಗೆ ಪ್ರಯತ್ನಿಸಿದ್ದ. ಪೆಟ್ರೋಲ್‌ ಸುರಿದು, ಬೂಟಿನಿಂದ ಹೊಡೆದಿದ್ದ. ಈ ಬಗ್ಗೆ ನಾನು ಆತನೊಂದಿಗೆ ಮಾತನಾಡಿ ಎಲ್ಲವನ್ನೂ ಬಗೆಹರಿಸಲು ಮುಂದಾದೆ. ಆದರೆ, ತಮ್ಮಿಬ್ಬರ ನಡುವೆ ಬೇರೊಬ್ಬರು ಪ್ರವೇಶಿಸಿದರೆ ಸಮಸ್ಯೆ ಮತ್ತಷ್ಟು ಉಲ್ಭಣವಾಗುತ್ತದೆ ಎಂದು ಹೇಳಿದ್ದ ಸೌಮ್ಯಾ ಭಯದಿಂದ ಸುಮ್ಮನಾಗಿದ್ದಳು. ನಂತರ ಎಲ್ಲವೂ ತಹಬದಿಗೆ ಬಂದಿತ್ತು,’ ಎಂದು ಹೇಳಿದ್ದಾರೆ.

ಸೌಮ್ಯಾ ಕೇರಳದ ಕೊಲ್ಲಂನ ಕಲಪ್ಪಾನ ಮೂಲದವರು. ಸೌಮ್ಯಾ ತಂದೆ ಪುಷ್ಪಕರಣ್‌ ಅನಾರೋಗ್ಯಕ್ಕೀಡಾಗಿದ್ದು, ಹಲವು ವರ್ಷಗಳಿಂದ ಹಾಸಿಗೆ ಹಿಡಿದಿದ್ದಾರೆ. ಸೌಮ್ಯಾ ತಾಯಿ ಇಂದಿರಾ ಟೈಲರಿಂಗ್‌ ವೃತ್ತಿ ನಡೆಸುತ್ತಿದ್ದು, ಅದರ ಮೂಲಕವೇ ಮನೆ ನಡೆಸುತ್ತಿದ್ದರು. ಸೌಮ್ಯಾ ವಿವಾಹವಾಗಿದ್ದು, ಆಕೆಯ ಪತಿ ವಿದೇಶದಲ್ಲಿ ವೃತ್ತಿಯಲ್ಲಿದ್ದಾರೆ. ಅವರಿಗೆ ಮೂವರು ಮಕ್ಕಳಿದ್ದು, ಇತ್ತೀಚೆಗಷ್ಟೇ ವಲ್ಲಿಕುನ್ನು ಎಂಬಲ್ಲಿಗೆ ಬಂದು ನೆಲೆಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT