ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಯೋತ್ಪಾದನೆ ಅವರ ಪಾಲಿಗೆ ಒಂದು ಅಸ್ತ್ರ: ಉಗ್ರ ನಿಗ್ರಹದ ತಂತ್ರ ವಿವರಿಸಿದ ದೊಭಾಲ್

Last Updated 14 ಅಕ್ಟೋಬರ್ 2019, 10:39 IST
ಅಕ್ಷರ ಗಾತ್ರ

ನವದೆಹಲಿ: ಕಾಶ್ಮೀರ ಕಣಿವೆಯಲ್ಲಿರಾಷ್ಟ್ರೀಯ ತನಿಖಾ ದಳ ನಡೆಸಿದ ತನಿಖೆಯು ವಿದೇಶದಲ್ಲಿ ಭಯೋತ್ಪಾದನೆಗೆ ಕುಮ್ಮಕ್ಕು ನೀಡುತ್ತಿದ್ದ ಶಕ್ತಿಗಳ ವಿರುದ್ಧ ನಿರ್ಣಾಯಕ ಸಾಕ್ಷ್ಯಗಳನ್ನು ಸಂಗ್ರಹಿಸಿ, ‘ಸೂಕ್ತ ಸ್ಥಳಗಳಲ್ಲಿ’ ಒತ್ತಡ ಹೇರಲು ನೆರವಾಯಿತು ಎಂದು ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ಡೊಭಾಲ್ ಹೇಳಿದರು.

ಪೊಲೀಸ್ ಅಧಿಕಾರಿಗಳ ಸಮಾವೇಶದಲ್ಲಿ ಮಾತನಾಡಿದ ಅವರು, ಭಯೋತ್ಪಾದನೆ ನಿಗ್ರಹಕ್ಕೆ ಸಮಷ್ಟಿ ಪ್ರಯತ್ನ ಅಗತ್ಯ. ಉಗ್ರಗಾಮಿ ಚಟುವಟಿಕೆಗಳಿಗೆ ಹಣ ಬರುವ ಮೂಲವನ್ನು ಗುರುತಿಸಿ ಚಿವುಟಿ ಹಾಕಲು ಹೆಚ್ಚು ಗಮನ ನೀಡಬೇಕು. ವಿಸ್ತೃತ ತನಿಖೆಯಿಂದ ಮಾತ್ರ ಇದು ಸಾಧ್ಯ ಎಂದು ಕಿವಿಮಾತು ಹೇಳಿದರು.

ರಾಷ್ಟ್ರೀಯ ಭದ್ರತಾ ದಳವು ಕಾಶ್ಮೀರದಲ್ಲಿ ಉಗ್ರಗಾಮಿ ಚಟುವಟಿಕೆಗಳಿಗೆ ಹಣ ಒದಗಿಸುತ್ತಿದ್ದವರ ಕಣ್ಣಿಟ್ಟುಕಾರ್ಯಾಚರಣೆ ನಡೆಸಿ, ಸಾಕ್ಷ್ಯಗಳನ್ನು ಕಲೆ ಹಾಕಿದ ಕಾರಣದಿಂದಲೇಜಾಗತಿಕ ಹಣಕಾಸು ಕ್ರಿಯಾ ಕಾರ್ಯಪಡೆ (Financial Action Task Force – FATF) ಪಾಕಿಸ್ತಾನದ ವಿರುದ್ಧ ಕ್ರಮ ಜರುಗಿಸುವಂತೆ ಮಾಡಲು ಸಾಧ್ಯವಾಯಿತು ಎಂದರು.

ಈ ಕೊಠಡಿಯಲ್ಲಿರುವ ನೀವು ಕೇವಲ ತನಿಖಾಧಿಕಾರಿಗಳಷ್ಟೇ ಅಲ್ಲ, ಭಯೋತ್ಪಾದನೆ ವಿರುದ್ಧ ನಡೆಯುತ್ತಿರುವ ಹೋರಾಟದಲ್ಲಿ ಯೋಧರು. ಕೇವಲ ತನಿಖೆಗಷ್ಟೇ ನಿಮ್ಮ ಪಾತ್ರ ಸೀಮಿತವಾಗಿಲ್ಲ. ಕೇವಲ ಗುಪ್ತಚರ ಸಂಸ್ಥೆಗಳಿಂದ ಭಯೋತ್ಪಾದನೆ ನಿಗ್ರಹ ಸಾಧ್ಯವಿಲ್ಲ. ನೀವೆಲ್ಲರೂ ಎಫ್‌ಐಆರ್‌ ಅಥವಾ ದೋಷಾರೋಪ ಪಟ್ಟಿ ಸಲ್ಲಿಸುವುದರ ಆಚೆಗೂ ಯೋಚಿಸಿ ಕೆಲಸ ಮಾಡಬೇಕು ಎಂದು ಕಿವಿಮಾತು ಹೇಳಿದರು.

ಪಾಕಿಸ್ತಾನವು ಭಯೋತ್ಪಾದನೆಯನ್ನು ಏಕೆ ಬೆಂಬಲಿಸುತ್ತಿದೆ ಎಂದು ತಮ್ಮದೇ ಆದ ರೀತಿಯಲ್ಲಿ ವ್ಯಾಖ್ಯಾನಿಸಿದ ಅವರು, ‘ಈಗಂತೂ ಯಾರಿಗೂ ಯುದ್ಧವನ್ನು ತಡೆದುಕೊಳ್ಳುವ ಶಕ್ತಿಯಿಲ್ಲ. ಹೀಗಾಗಿ ಶತ್ರುವನ್ನು ಮಣಿಸಲು ಭಯೋತ್ಪಾದನೆಯನ್ನು ಒಂದು ಅಸ್ತ್ರವಾಗಿ ಬಳಸುತ್ತಾರೆ’ ಎಂದರು.

ಸರ್ಕಾರಗಳು ಪ್ರಾಯೋಜಿಸುವ ಭಯೋತ್ಪಾದನೆಯು ಉಗ್ರಗಾಮಿಗಳಿಗೆಶಸ್ತ್ರಗಳನ್ನು ಅಥವಾ ಹಣವನ್ನು ಕೊಡುವುದರ ಆಚೆಗೂ ವ್ಯಾಪಿಸಿದೆ. ನಮ್ಮ ವಿಚಾರದಲ್ಲಿ ಹೇಳುವುದಾದರೆ ಪಾಕಿಸ್ತಾನವು ಭಯೋತ್ಪಾದನೆ ಬೆಂಬಲಿಸುವ ಕಲೆಯಲ್ಲಿ ಪಾರಂಗತವಾಗಿದೆ ಎಂದು ನುಡಿದರು.

ಭಯೋತ್ಪಾದನೆಯನ್ನು ಮಟ್ಟ ಹಾಕಬೇಕು ಎಂದರೆ ಅವರಿಗೆ ಶಸ್ತ್ರಾಸ್ತ್ರಗಳು ಸಿಗದಂತೆ, ಹಣಕಾಸು ತಲುಪದಂತೆ ನೋಡಿಕೊಳ್ಳಬೇಕು. ಅವರ ಸಾಮರ್ಥ್ಯ ಕುಂದಿಸಬೇಕು ಎಂದು ವಿಶ್ಲೇಷಿಸಿದರು.

ನಿಮಗೆ ಬೇಕಾದ ಮಾರ್ಗದರ್ಶಿ ಸೂತ್ರಗಳ ಕರಡು ರೂಪಿಸಿಕೊಳ್ಳಿ. ಭಯೋತ್ಪಾದನೆ ವಿರುದ್ಧದ ಹೋರಾಟದಲ್ಲಿ ಹೆಚ್ಚಿನ ಸಮನ್ವಯ ಸಾಧ್ಯವಾಗಬೇಕಿದೆ. ದೇಶದಲ್ಲಿ ಒಂದೇ ಭಯೋತ್ಪಾದನಾ ನಿಗ್ರಹ ದಳ ಇರಬೇಕು ಎಂದು ನಾನು ಬಯಸುತ್ತೇನೆ. ಆದರೆ ಸದ್ಯದ ಸ್ಥಿತಿಯಲ್ಲಿ ಅದು ಸಾಧ್ಯವಿಲ್ಲ. ವಿವಿಧ ರಾಜ್ಯಗಳಲ್ಲಿ ಕೆಲಸ ಮಾಡುತ್ತಿರುವ ಭಯೋತ್ಪಾದನಾ ನಿಗ್ರಹ ದಳದ ಅಧಿಕಾರಿಗಳು ಮುಂಚೂಣಿಯಲ್ಲಿ ನಿಂತು ಪ್ರಧಾನ ಪಾತ್ರ ನಿರ್ವಹಿಸಬೇಕು ಎಂದು ಹೇಳಿದರು.

ಭಯೋತ್ಪಾದನಾ ನಿಗ್ರಹ ಕಾರ್ಯಾಚರಣೆಯಲ್ಲಿ ಮಾಹಿತಿ ನಿರ್ವಹಣೆಯೂ ಬಹುಮುಖ್ಯ. ನಾವು ಏನು ಮಾಡುತ್ತಿದ್ದೇವೆ ಎನ್ನುವುದನ್ನು ಮಾಧ್ಯಮಗಳಿಗೆ ನಾವೇ ತಿಳಿಸಿ ಹೇಳಬೇಕು. ಇಲ್ಲದಿದ್ದರೆ ಮಾಧ್ಯಮಗಳು ಊಹೆಯ ಮೇಲೆ ಸುದ್ದಿ ಪ್ರಸಾರ ಮಾಡುತ್ತವೆ ಎಂದು ಸಲಹೆ ಮಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT