ಅಖಿಲೇಶ್‌ ಸುತ್ತ ಗಣಿ ಗುತ್ತಿಗೆ ಕುಣಿಕೆ

7
ಒಂದೇ ದಿನದಲ್ಲಿ 13 ಗುತ್ತಿಗೆ ನೀಡಿಕೆ ಶಂಕಾಸ್ಪದ ಎಂದ ಸಿಬಿಐ

ಅಖಿಲೇಶ್‌ ಸುತ್ತ ಗಣಿ ಗುತ್ತಿಗೆ ಕುಣಿಕೆ

Published:
Updated:

ನವದೆಹಲಿ: ಉತ್ತರ ಪ್ರದೇಶದಲ್ಲಿ ನಡೆದಿದೆ ಎನ್ನಲಾದ ಗಣಿ ಗುತ್ತಿಗೆ ಅಕ್ರಮ ಕುರಿತ ತನಿಖೆಯನ್ನು ಸಿಬಿಐ ತೀವ್ರಗೊಳಿಸಿದೆ. ಸಮಾಜವಾದಿ ಪಾರ್ಟಿ (ಎಸ್‌ಪಿ) ಅಧ್ಯಕ್ಷ ಅಖಿಲೇಶ್‌ ಯಾದವ್‌ ಅವರು ಮುಖ್ಯಮಂತ್ರಿಯಾಗಿದ್ದ ಸಮಯದಲ್ಲಿ ಅವರ ಕಚೇರಿಯು ಒಂದೇ ದಿನ 13 ಗಣಿಗಾರಿಕೆ ಯೋಜನೆಗಳಿಗೆ ಒಪ್ಪಿಗೆ ನೀಡಿದೆ ಎಂದು ಸೋಮವಾರ ಹೇಳಿದೆ.

2012ರಿಂದ 2013ರ ಜೂನ್‌ವರೆಗೆ ಉತ್ತರ ಪ್ರದೇಶ ಗಣಿ ಇಲಾಖೆಯು ಆಗ ಮುಖ್ಯಮಂತ್ರಿಯಾಗಿದ್ದ ಅಖಿಲೇಶ್‌ ಅವರ ಬಳಿಯಲ್ಲಿಯೇ ಇತ್ತು. ಇ–ಟೆಂಡರ್‌ ಪ್ರಕ್ರಿಯೆ ಉಲ್ಲಂಘಿಸಿ 14 ಗಣಿ ಗುತ್ತಿಗೆ ನೀಡಿದ್ದರು. ಇವುಗಳ ಪೈಕಿ 2013ರ ಫೆಬ್ರುವರಿ 17ರಂದು 13 ಗಣಿ ಗುತ್ತಿಗೆಗೆ ಒಪ್ಪಿಗೆ ನೀಡಿದ್ದರು ಎಂದು ಸಿಬಿಐ ಹೇಳಿದೆ.

ಹಮೀರ್‌ಪುರ್‌ ಜಿಲ್ಲೆಯ ಆಗಿನ ಜಿಲ್ಲಾಧಿಕಾರಿ ಬಿ.ಚಂದ್ರಕಲಾ ಅವರು ಮುಖ್ಯಮಂತ್ರಿ ಕಚೇರಿಯ ಅನುಮತಿ ದೊರೆತ ನಂತರ ಫೆಬ್ರುವರಿ 17ರಂದು ಗಣಿ ಗುತ್ತಿಗೆ ನೀಡುವ ಮೂಲಕ 2012ರ ಇ–ಟೆಂಡರ್‌ ನೀತಿಯನ್ನು ಉಲ್ಲಂಘಿಸಿದ್ದರು. ಉಲ್ಲಂಘನೆ ಆಗಿದೆ ಎಂಬ ಆರೋಪವನ್ನು ಅಲಹಾಬಾದ್‌ ಹೈಕೋರ್ಟ್‌ 2013ರ ಜನವರಿ 29ರಂದು ಎತ್ತಿ ಹಿಡಿದಿತ್ತು.

ರಾಜಕೀಯ ಲಾಭಕ್ಕಾಗಿ ಬಿಜೆಪಿ ಸರ್ಕಾರವು ತನಿಖಾ ಸಂಸ್ಥೆಯನ್ನು ದುರ್ಬಳಕೆ ಮಾಡಿಕೊಂಡಿದೆ ಎಂದು ಅಖಿಲೇಶ್‌ ಯಾದವ್‌ ಹಾಗೂ ವಿರೋಧ ಪಕ್ಷಗಳ ನಾಯಕರು ಆರೋಪ ಮಾಡಿದ್ದರು. ಇದಕ್ಕುತ್ತರವಾಗಿ ಸಿಬಿಐ ಗಣಿ ಹಗರಣದಲ್ಲಿ ಅಖಿಲೇಶ್‌ ಅವರ ಪಾತ್ರದ ಆರೋಪದ ಬಗ್ಗೆ ವಿವರವಾದ ಮಾಹಿತಿ ನೀಡಿದೆ. 

ಹಮೀರ್‌ಪುರ್‌ ಜಿಲ್ಲೆಯಲ್ಲಿ 2012ರಿಂದ 2016ರ ಅವಧಿಯಲ್ಲಿ ನಡೆದ ಅಕ್ರಮವಾಗಿ ಗಣಿ ಗುತ್ತಿಗೆ ನೀಡಿರುವ ಕುರಿತು ಐಎಎಸ್‌ ಅಧಿಕಾರಿ ಬಿ.ಚಂದ್ರಕಲಾ, ಎಸ್‌ಪಿ ಶಾಸಕ ರಮೇಶ್‌ ಕುಮಾರ್‌ ಮಿಶ್ರಾ, ಸಂಜಯ ದೀಕ್ಷಿತ್‌ ಸೇರಿದಂತೆ 11 ಮಂದಿ ವಿರುದ್ಧ ಸಿಬಿಐ ಎಫ್‌ಐಆರ್‌ ದಾಖಲಿಸಿದ್ದು, ಶನಿವಾರ 14 ಕಡೆಗಳಲ್ಲಿ ಶೋಧ ನಡೆಸಿತ್ತು.

ಅಕ್ರಮ ಗಣಿಗಾರಿಕೆ ಕುರಿತು ಅಲಹಾಬಾದ್‌ ಹೈಕೋರ್ಟ್‌ ನಿರ್ದೇಶನದಂತೆ ತನಿಖೆ ನಡೆಸುತ್ತಿರುವ ಸಿಬಿಐ 2019ರ ಜನವರಿ 2ರಂದು ಮೂರನೇ ಎಫ್‌ಐಆರ್‌ ದಾಖಲಿಸಿದೆ.

ಮಾಯಾವರಿ ಬೆಂಬಲ
ಲಖನೌ: ‘ಗಣಿ ಗುತ್ತಿಗೆ ಹಗರಣಕ್ಕೆ ಸಂಬಂಧಿಸಿದಂತೆ ಸಿಬಿಐ ವಿಚಾರಣೆಗೆ ಒಳಪಡಿಸಬಹುದು. ಆದರೆ ಎದೆಗುಂದಬೇಡಿ, ನಿಮಗೆ ನಮ್ಮ ಬೆಂಬಲವಿದೆ’ ಎಂದು ಬಹುಜನ ಸಮಾಜ ಪಾರ್ಟಿ (ಬಿಎಸ್‌ಪಿ) ಅಧ್ಯಕ್ಷೆ ಮಾಯಾವತಿ ಅವರು ಸಮಾಜವಾದಿ ಪಾರ್ಟಿ (ಎಸ್‌ಪಿ) ಅಧ್ಯಕ್ಷ ಅಖಿಲೇಶ್‌ ಯಾದವ್‌ ಅವರಿಗೆ ಕರೆ ಮಾಡಿ ಧೈರ್ಯ ತುಂಬಿದ್ದಾರೆ.

ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಎಸ್‌ಪಿ ಮತ್ತು ಬಿಎಸ್‌ಪಿ ಮೈತ್ರಿಗೆ ತಾತ್ವಿಕವಾಗಿ ಒಪ್ಪಿದ್ದು, ಅಧಿಕೃತ ಘೋಷಣೆ ಆಗಬೇಕಿದೆ. ಅಖಿಲೇಶ್ ಅವರನ್ನು ಸಿಬಿಐ ವಿಚಾರಣೆ ನಡೆಸುವ ಬಗ್ಗೆ ವರದಿಗಳು ಬಂದ ಬಳಿಕ ಮಾಯಾವತಿ ಕರೆ ಮಾಡಿದ್ದಾರೆ.

‘ಬಿಜೆಪಿ ರಾಜಕೀಯ ದ್ವೇಷ ಸಾಧನೆಗೆ ಮುಂದಾಗಿದೆ. ಅಧಿಕಾರದಲ್ಲಿರುವ ಬಿಜೆಪಿ, ಕಾಂಗ್ರೆಸ್ ರೀತಿಯೇ ಆಡಳಿತ ಯಂತ್ರ ದುರ್ಬಳಕೆ ಮಾಡಿಕೊಂಡು ವಿರೋಧ ಪಕ್ಷಗಳ ನಾಯಕರ ವಿರುದ್ಧ ಸುಳ್ಳು ಪ್ರಕರಣ ದಾಖಲಿಸಿ ಬಲೆಗೆ ಹಾಕಲು ಯತ್ನಿಸುತ್ತಿದೆ. ಹೆದರಬೇಡಿ’ ಎಂದು ಅಖಿಲೇಶ್‌ಗೆ ದೂರವಾಣಿ ಕರೆ ಮಾಡಿ ಹೇಳಿರುವುದಾಗಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 1

  Happy
 • 1

  Amused
 • 0

  Sad
 • 0

  Frustrated
 • 1

  Angry

Comments:

0 comments

Write the first review for this !