ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಒಂದು ಉಗ್ರ ಸಂಘಟನೆ ನಿರ್ಮೂಲನೆ: ಜಮ್ಮು–ಕಾಶ್ಮೀರ ಡಿಜಿಪಿ ದಿಲ್‌ಬಾಗ್‌ ಸಿಂಗ್‌

ಕಾಶ್ಮೀರದಲ್ಲಿ ಸಕ್ರಿಯವಾಗಿದ್ದ ಎಜಿಎಚ್‌ ಸಂಘಟನೆಯ ಕಮಾಂಡರ್‌ ಸೇರಿ ಮೂವರು ಉಗ್ರರ ಹತ್ಯೆ: ಡಿಜಿಪಿ
Last Updated 23 ಅಕ್ಟೋಬರ್ 2019, 19:31 IST
ಅಕ್ಷರ ಗಾತ್ರ

ಶ್ರೀನಗರ: ‘ಪುಲ್ವಾಮಾದಲ್ಲಿ ಮಂಗಳ ವಾರ ಸಂಜೆ ಮೂವರು ಉಗ್ರರನ್ನು ಹತ್ಯೆ ಮಾಡಲಾಗಿದೆ. ಆ ಮೂಲಕ ಅಲ್‌ ಕೈದಾ ಸಂಘಟನೆಯ ಜೊತೆ ಸಂಪರ್ಕ ಹೊಂದಿದ್ದ ‘ಅನ್ಸಾರ್‌ ಗಜಾವತ್‌– ಉಲ್‌ ಹಿಂದ್‌’ (ಎಜಿಎಚ್‌) ಸಂಘಟನೆಯನ್ನು ರಾಜ್ಯದಿಂದ ಮೂಲೋತ್ಪಾಟನೆ ಮಾಡಿದಂತಾಗಿದೆ’ ಎಂದು ಜಮ್ಮು ಕಾಶ್ಮೀರದ ಪೊಲೀಸ್‌ ಮಹಾ ನಿರ್ದೇಶಕ ದಿಲ್‌ಬಾಗ್‌ ಸಿಂಗ್‌ ಬುಧವಾರ ತಿಳಿಸಿದರು.

‘ಈ ಸಂಘಟನೆಯ ಕಮಾಂಡರ್‌ ಹಮೀದ್‌ ಲಲ್ಹಾರಿ ಸೇರಿದಂತೆ ಮೂವರನ್ನು ಮಂಗಳವಾರ ಹತ್ಯೆ ಮಾಡ ಲಾಗಿದೆ. ತಪ್ಪು ಹಾದಿ ಹಿಡಿದಿರುವ ಯುವ ಸಮುದಾಯವು ಹಿಂಸಾಚಾರ ತ್ಯಜಿಸಿ, ಸಹಜ ಜೀವನಕ್ಕೆ ಮರಳಬೇಕು ಎಂದು ನಾವು ಮನವಿ ಮಾಡುತ್ತೇವೆ’ ಎಂದು ಅವರು ಮಾಧ್ಯಮ ಗೋಷ್ಠಿಯಲ್ಲಿ ಹೇಳಿದರು.

‘ಎಜಿಎಚ್‌ ಮುಖ್ಯಸ್ಥನಾಗಿದ್ದ ಝಾಕಿರ್‌ ಮೂಸಾ, ಈ ವರ್ಷದ ಆರಂಭದಲ್ಲಿ ಹತನಾಗಿದ್ದ. ಅದಾದ ಬಳಿಕ ಲಲ್ಹಾರಿ ಈ ಸಂಘಟನೆಯ ನೇತೃತ್ವ ವಹಿಸಿದ್ದ. ಈ ಸಂಘಟನೆಯು ಜೈಷ್‌–ಎ ಮೊಹಮ್ಮದ್‌ ಹಾಗೂ ಅಲ್‌ ಕೈದಾ ಸಂಘಟನೆಗಳ ಜೊತೆ ನಿಕಟ ಸಂಪರ್ಕ ಹೊಂದಿತ್ತು ಎಂದು ಸಿಂಗ್‌ ತಿಳಿಸಿದರು.

‘ಆಗಸ್ಟ್‌ 5ರ ನಂತರ ಕಾಶ್ಮೀರ ದೊಳಗೆ ಗಮನಾರ್ಹ ಸಂಖ್ಯೆಯಲ್ಲಿ ಭಯೋತ್ಪಾದಕರು ನುಸುಳಿದ್ದಾರೆ. ಇಂಥ ಹಲವು ಪ್ರಯತ್ನಗಳನ್ನು ವಿಫಲಗೊಳಿ ಸಲಾಗಿದೆ. ಆದರೆ ಭಯೋತ್ಪಾದಕ ಸಂಘಟನೆಗಳಿಗೆ ಸೇರ್ಪಡೆಗೊಳ್ಳುವ ಸ್ಥಳೀಯ ಯುವಕರ ಸಂಖ್ಯೆಯು ಆ.5ರ ನಂತರ ಗಮನಾರ್ಹವಾಗಿ ಕಡಿಮೆಯಾಗಿದೆ’ ಎಂದರು.

ಯುವಕರು ಹಾಗೂ ಸ್ಥಳೀಯರನ್ನು ಪೊಲೀಸರು ವಶಪಡಿಸಿಕೊಳ್ಳುತ್ತಿರುವ ಬಗ್ಗೆ ಕೇಳಿದ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದ ಸಿಂಗ್‌, ‘ವಿನಾಕಾರಣ ಜನರನ್ನು ಬಂಧಿಸಲು ನಾವು ಬಯಸುವುದಿಲ್ಲ. ಬಲವಾದ ಸಾಕ್ಷ್ಯಗಳ ಆಧಾರದಲ್ಲೇ ಕೆಲವರನ್ನು ವಶಕ್ಕೆ ಪಡೆಯಲಾಗಿದೆ. ಬಂಧಿತರಲ್ಲಿ ಹೆಚ್ಚಿನವರನ್ನು ಈಗಾಗಲೇ ಬಿಡುಗಡೆ ಮಾಡಲಾಗಿದೆ’ ಎಂದರು.

ಗಡಿ ಬಂದೋಬಸ್ತ್

ನವದೆಹಲಿ: ‘ಭಾರತ– ಟಿಬೆಟ್‌ ಗಡಿ ಪೊಲೀಸ್‌ (ಐಟಿಬಿಪಿ) ಕಳೆದ ಐದು ವರ್ಷಗಳಲ್ಲಿ ಅತಿ ದೂರದ ಗಡಿಭಾಗದಲ್ಲೂ ತನ್ನ ಸಾಮರ್ಥ್ಯವನ್ನು ಹೆಚ್ಚಿಸಿಕೊಂಡಿದೆ. ಈ ಭಾಗದಲ್ಲಿ 25 ಗಡಿ ಠಾಣೆಗಳನ್ನು ನಿರ್ಮಿಸಿದೆ’ ಎಂದು ಹಿರಿಯ ಅಧಿಕಾರಿ ಎಸ್‌.ಎಸ್‌. ದೇಸ್ವಾಲ್‌ ತಿಳಿಸಿದರು.

ಐಟಿಬಿಪಿಯ 58ನೇ ಸಂಸ್ಥಾಪನಾದಿನದ ಸಂದರ್ಭದಲ್ಲಿ ಅವರು ಮಾಧ್ಯಮದವರ ಜೊತೆ ಮಾತನಾಡುತ್ತಾ ಈ ವಿವರ ನೀಡಿದರು.

‘ಭಾರತ– ಚೀನಾದ 3,488 ಕಿ.ಮೀ. ವಾಸ್ತವ ಗಡಿರೇಖೆಯಲ್ಲಿ ಯಥಾಸ್ಥಿತಿಯನ್ನು ಕಾಯ್ದುಕೊಳ್ಳ ಲಾಗಿದೆ. ಇಲ್ಲಿ ಅರೆಸೇನಾ ಪಡೆಯ ಶಕ್ತಿಯನ್ನು ನೆರೆರಾಷ್ಟ್ರದ ಸಾಮರ್ಥ್ಯಕ್ಕಿಂತಲೂ ಬಲಿಷ್ಠಗೊಳಿಸುವ ಕೆಲಸ ನಡೆಯುತ್ತಿದೆ’ ಎಂದರು.

ಚೀನಾ ಸೇನೆಯು ನಡೆಸಿದ ಗಡಿ ಉಲ್ಲಂಘನೆ ಮತ್ತು ದಾಳಿ ಪ್ರಕರಣಗಳ ನಿಖರ ಸಂಖ್ಯೆಯನ್ನು ನೀಡಲು ಅವರು ನಿರಾಕರಿಸಿದರು. ಆದರೆ, ‘ಭಾರತೀಯ ಪಡೆಯೂ ಚೀನಾ ಪಡೆಯಷ್ಟೇ ಆಕ್ರಮಣಕಾರಿಯಾಗಿದೆ. ಗಡಿಯಲ್ಲಿ ನಾವು ಸತತವಾಗಿ ನಮ್ಮ ಶಕ್ತಿಯನ್ನು ಹೆಚ್ಚಿಸುತ್ತಲೇ ಇದ್ದೇವೆ’ ಎಂದರು.

‘ಪಾಕ್ ಭಯೋತ್ಪಾದನೆಗೆ ಜಾಗತಿಕ ಮಾಧ್ಯಮ ಕುರುಡು’

ವಾಷಿಂಗ್ಟನ್‌: ‘ಜಮ್ಮು–ಕಾಶ್ಮೀರದಲ್ಲಿ 30 ವರ್ಷಗಳಿಂದ ನಡೆಯುತ್ತಿರುವ ಪಾಕಿಸ್ತಾನ ಪ್ರಾಯೋಜಿತ ಭಯೋತ್ಪಾದನೆಯನ್ನು ಜಾಗತಿಕ ಮಾಧ್ಯಮಗಳು ಸಂಪೂರ್ಣವಾಗಿ ಕಡೆಗಣಿಸಿವೆ’ ಎಂದು ಭಾರತೀಯ ಪತ್ರಕರ್ತೆ ಆರತಿ ಟಿಕೂ ಸಿಂಗ್‌ ಅವರು ಬುಧವಾರ ಅಮೆರಿಕದ ಸಂಸತ್ತಿನ ಸಮಿತಿಯ ಮುಂದೆ ಆರೋಪಿಸಿದರು.

ಜಮ್ಮು–ಕಾಶ್ಮೀರದಲ್ಲಿ ಮಾನವ ಹಕ್ಕುಗಳ ಉಲ್ಲಂಘನೆಯ ಕುರಿತು ಚರ್ಚೆ ನಡೆಸುತ್ತಿರುವ ಅಮೆರಿಕದ ಸಂಸತ್ತಿನ ಸಮಿತಿಯ ಮುಂದೆ ಆರತಿ ಅವರು ಸಾಕ್ಷ್ಯ ನುಡಿಯುತ್ತಾ ಈ ಆರೋಪ ಮಾಡಿದರು. ಸಮಿತಿಯೇ ಆರತಿ ಅವರನ್ನು ಈ ಬಗ್ಗೆ ಸಾಕ್ಷ್ಯ ನುಡಿಯಲು ಆಹ್ವಾನಿಸಿತ್ತು.

ಜಮ್ಮು ಕಾಶ್ಮೀರದಲ್ಲಿ ಮಾನವ ಹಕ್ಕುಗಳ ಉಲ್ಲಂಘನೆಯಾಗುತ್ತಿದೆ ಎಂದು ಅಲ್ಲಿನ ಸಂಸದ ಇಲ್ಹಾನ್‌ ಒಮರ್‌ ಇತ್ತೀಚೆಗೆ ಹೇಳಿದ್ದರು.
ಅಲ್ಲದೆ, ‘ಮಾಧ್ಯಮಗಳು ಸಹ ಸರ್ಕಾರದ ಮುಖವಾಣಿಗಳಾಗಿವೆಯೇ ವಿನಾ ವಾಸ್ತವ ವರದಿಗಳನ್ನು ಪ್ರಕಟಿಸುತ್ತಿಲ್ಲ’ ಎಂದು ಅವರು ಆರೋಪಿಸಿದ್ದರು. ಇದನ್ನು ಖಂಡಿಸಿದ ಆರತಿ, ‘ಸಮಿತಿಯ ವಿಚಾರಣೆಯು ಪೂರ್ವಗ್ರಹಪೀಡಿತ, ಪಕ್ಷಪಾತದಿಂದ ಕೂಡಿದ್ದು ಮಾತ್ರವಲ್ಲದೆ ಭಾರತದ ವಿರುದ್ಧ ಮತ್ತು ಪಾಕಿಸ್ತಾನದ ಪರವಾದುದು’ ಎಂದು ಆರೋಪಿಸಿದರು.

‘ಪಾಕಿಸ್ತಾನದ ಭಯೋತ್ಪಾದನಾ ಕೃತ್ಯಗಳಿಗೆ ಬಲಿಪಶುಗಳಾದ ಕಾಶ್ಮೀರಿಗಳ ಹಕ್ಕುಗಳ ಬಗ್ಗೆ ಜಗತ್ತಿನ ಯಾವುದೇ ಮಾನವ ಹಕ್ಕುಗಳ ಸಂಘಟನೆಯಾಗಲಿ, ಮಾಧ್ಯಮವಾಗಲಿ ಧ್ವನಿ ಎತ್ತಲಿಲ್ಲ. ಕಾಶ್ಮೀರದಲ್ಲಿ ಹತರಾಗಿರುವ ಮುಸ್ಲಿಮರ ಸಂಖ್ಯೆ ತುಂಬಾ ದೊಡ್ಡದಿದೆ. ಅವರೆಲ್ಲರನ್ನೂ ಕೊಂದಿರುವುದು ಪಾಕಿಸ್ತಾನ ಬೆಂಬಲಿತ ಭಯೋತ್ಪಾದಕರೇ’ ಎಂದು ಆರತಿ ವಾದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT