ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಿಲ್ಲೆಯಲ್ಲಿ 15 ಪಿಂಕ್‌ ಮತಗಟ್ಟೆಗಳು

ಸಂಪೂರ್ಣ ಮಹಿಳೆಯರೇ ನಿರ್ವಹಿಸುವ ಬೂತ್‌, ಎಲ್ಲದಕ್ಕೂ ಗುಲಾಬಿ ಬಣ್ಣ
Last Updated 26 ಏಪ್ರಿಲ್ 2018, 10:19 IST
ಅಕ್ಷರ ಗಾತ್ರ

ದಾವಣಗೆರೆ: ಮತಗಟ್ಟೆ ಅಧಿಕಾರಿಯಿಂದ ಹಿಡಿದು ರಕ್ಷಣಾ ಸಿಬ್ಬಂದಿಯವರೆಗೆ ಎಲ್ಲರೂ ಮಹಿಳೆಯರು. ಇವರೆಲ್ಲರ ಧಿರಿಸು ಗುಲಾಬಿ ಬಣ್ಣದ್ದು. ಇದೇ ಬಣ್ಣದ ಕಾಗದ, ಹೂವು ಹಾಗೂ ಬಲೂನ್‌ ಅಲಂಕೃತಗೊಂಡ ಮತಗಟ್ಟೆ. ಇವೆಲ್ಲವೂ ಮತದಾನದ ದಿನವಾದ ಮೇ 12ರಂದು ಪ್ರತಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಕನಿಷ್ಠ ಒಂದೊಂದು ಮತಗಟ್ಟೆಯಲ್ಲಿ ಕಾಣಿಸುತ್ತದೆ.

ಮಹಿಳಾ ಸ್ನೇಹಿ ಮತಗಟ್ಟೆ ರೂಪಿಸಿ, ಮತದಾನಕ್ಕೆ ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಬರುವಂತೆ ಮಾಡಲು ಕೇಂದ್ರ ಚುನಾವಣಾ ಆಯೋಗ ರೂಪಿಸಿದ ಹೊಸ ಚಿಂತನೆ ಇದು. ಈಗಾಗಲೇ ನಡೆದ ವಿವಿಧ ರಾಜ್ಯಗಳ ವಿಧಾನಸಭಾ ಚುನಾವಣೆಯಲ್ಲಿ ಈ ಪ್ರಯೋಗ ಯಶಸ್ವಿಯಾಗಿತ್ತು. ಈ ಹಿನ್ನೆಲೆಯಲ್ಲಿ ರಾಜ್ಯದಲ್ಲೂ ಆಯೋಗ ಇದರ ಅನುಷ್ಠಾನಕ್ಕೆ ಸಿದ್ಧತೆಗಳನ್ನು ನಡೆಸಿದೆ.

ಜಿಲ್ಲೆಯಲ್ಲಿ 15 ಪಿಂಕ್‌ ಮತಗಟ್ಟೆಗಳನ್ನು ಗುರುತಿಸಲಾಗಿದೆ. ಈ ಮತಗಟ್ಟೆಗಳಿಗೆ ‘ಸಖಿ’ ಎಂಬ ಹೆಸರಿಡಲಾಗಿದೆ. ಜಿಲ್ಲೆಯ ಎಂಟು ವಿಧಾನಸಭಾ ಕ್ಷೇತ್ರಗಳಲ್ಲಿ ಜಗಳೂರಿನಲ್ಲಿ 2, ದಾವಣಗೆರೆ ದಕ್ಷಿಣ, ಉತ್ತರ ವಿಧಾನಸಭಾ ಕ್ಷೇತ್ರಗಳಲ್ಲಿ ತಲಾ 4 ಹಾಗೂ ಉಳಿದ ಕ್ಷೇತ್ರಗಳಲ್ಲಿ ತಲಾ 1 ಮತಗಟ್ಟೆಗಳು ಪಿಂಕ್‌ ಆಗಿ ಪರಿವರ್ತನೆಯಾಗಲಿವೆ.

ಪ್ರತಿ ಮತಗಟ್ಟೆಗೆ ಅಧಿಕಾರಿ ಹಾಗೂ ಸಿಬ್ಬಂದಿ ಸೇರಿ ಒಟ್ಟು ಐವರನ್ನು ನಿಯೋಜಿಸಲಾಗುತ್ತದೆ. ಮತಗಟ್ಟೆ ಅಧಿಕಾರಿ, ಚುನಾವಣೆ ಹಾಗೂ ರಕ್ಷಣಾ ಸಿಬ್ಬಂದಿ ಎಲ್ಲರೂ ಮಹಿಳೆಯರು. ಈ ಮತಗಟ್ಟೆಗಳಲ್ಲಿ ವಿಶೇಷ ಶೌಚಗೃಹ, ಕೆಲ ಕಾಲ ವಿಶ್ರಾಂತಿ ಪಡೆಯಲು ವ್ಯವಸ್ಥೆ ಮಾಡಲಾಗುತ್ತದೆ. ಮತದಾರರಿಗೆ ವ್ಯವಸ್ಥಿತ ಶಿಕ್ಷಣ ಹಾಗೂ ಸಹಭಾಗಿತ್ವ (ಸ್ವೀಪ್‌) ಕಾರ್ಯಕ್ರಮದಡಿ ಪಿಂಕ್‌ ಮತಗಟ್ಟೆ ರೂಪಿಸಲಾಗುತ್ತಿದೆ ಎಂದು ಜಿಲ್ಲಾ ಸ್ವೀಪ್‌ ಮುಖ್ಯಸ್ಥರೂ ಆದ ಜಿಲ್ಲಾ ಪಂಚಾಯ್ತಿ ಸಿಇಒ ಎಸ್. ಅಶ್ವತಿ.

ಪಿಂಕ್‌ ಬೂತ್‌ ಮಾದರಿ ಪರಿಕಲ್ಪನೆ ನಿಜ. ಕೇವಲ ಮತಗಟ್ಟೆಯಲ್ಲಿ ಮಹಿಳಾ ಸ್ನೇಹಿ ವಾತಾವರಣ ನಿರ್ಮಿಸಿದರೆ ಎಲ್ಲವೂ ಸರಿ ಹೋಗುವುದಿಲ್ಲ. ವಾಸ್ತವ ಜಗತ್ತಿನಲ್ಲಿ ಮಹಿಳೆಯರು ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ರಾಜಕೀಯ ಪಕ್ಷಗಳು ಕಿವಿಗೊಡಬೇಕು ಎನ್ನುತ್ತಾರೆ ಅಖಿಲ ಭಾರತ ಮಹಿಳಾ ಸಾಂಸ್ಕೃತಿಕ ಸಂಘಟನೆ ಜಿಲ್ಲಾ ಸಂಚಾಲಕಿ ಜ್ಯೋತಿ ಕುಕ್ಕುವಾಡ.

**
ಮಹಿಳಾ ಮತದಾರರೇ ಅತ್ಯಧಿಕ ಸಂಖ್ಯೆಯಲ್ಲಿರುವ ಹಾಗೂ ಮಹಿಳೆಯರಿಗೆ ವಿಶೇಷ ಸೌಲಭ್ಯ ಕಲ್ಪಿಸಲು ಅನುಕೂಲ ಇರುವ ಮತಗಟ್ಟೆಗಳನ್ನೇ ಹುಡುಕಿ ಪಿಂಕ್‌ ಬೂತ್‌ ಮಾಡಲಾಗಿದೆ
– ಎಸ್‌. ಅಶ್ವತಿ, ಜಿಲ್ಲಾ ಸ್ವೀಪ್‌ ಮುಖ್ಯಸ್ಥೆ
**

ಉತ್ತಮ ಬೆಳವಣಿಗೆ. ಮಹಿಳೆಯರ ಸುರಕ್ಷತೆ ಹಾಗೂ ಸಶಕ್ತೀಕರಣದ ದೃಷ್ಟಿಯಿಂದ ಆಯೋಗದ ಕ್ರಮ ಶ್ಲಾಘನೀಯ
– ಕೆ.ಭಾರತಿ ಕಾರ್ಯದರ್ಶಿ, ಅಖಿಲ ಭಾರತ ಮಹಿಳಾ ಸಾಂಸ್ಕೃತಿಕ ಸಂಘಟನೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT