ಬೀದಿಗೆ ಬಂದ ಡಿಎಂಕೆ ಉತ್ತರಾಧಿಕಾರ ಸಮರ

7
ಎಂ.ಕೆ.ಸ್ಟಾಲಿನ್‌ ವಿರುದ್ಧ ಎಂ.ಕೆ.ಅಳಗಿರಿ ವಾಗ್ದಾಳಿ

ಬೀದಿಗೆ ಬಂದ ಡಿಎಂಕೆ ಉತ್ತರಾಧಿಕಾರ ಸಮರ

Published:
Updated:
Deccan Herald

ಚೆನ್ನೈ: ಡಿಎಂಕೆ ಅಧ್ಯಕ್ಷ ಕರುಣಾನಿಧಿ ನಿಧನಾನಂತರ ಉತ್ತರಾಧಿಕಾರಕ್ಕಾಗಿ ಇಬ್ಬರು ಸಹೋದರರ ನಡುವಿನ ಸಂಘರ್ಷ ಈಗ ಬೀದಿಗೆ ಬಂದಿದೆ.

ಉಚ್ಚಾಟಿತ ನಾಯಕ ಹಾಗೂ ಕರುಣಾನಿಧಿಯವರ ಹಿರಿಯ ಮಗ ಎಂ.ಕೆ.ಅಳಗಿರಿ ಅವರು ಈಗ ಪಕ್ಷದ ಕಾರ್ಯಾಧ್ಯಕ್ಷ ಹಾಗೂ ತಮ್ಮ ಕಿರಿಯ ಸಹೋದರ ಎಂ.ಕೆ.ಸ್ಟಾಲಿನ್ ವಿರುದ್ಧ ಬಹಿರಂಗ ಸಮರ ಸಾರಿದ್ದಾರೆ.

ಪಕ್ಷದ ಕಾರ್ಯಕಾರಿ ಸಮಿತಿ ಸಭೆಗೂ ಒಂದು ದಿನ ಮುಂಚಿತವಾಗಿ ನಡೆದಿರುವ ಈ ಬೆಳವಣಿಗೆ ತಮಿಳುನಾಡು ರಾಜಕೀಯದಲ್ಲಿ ಅತ್ಯಂತ ಮಹತ್ವ ಪಡೆದುಕೊಂಡಿದೆ. ಭಾರಿ ಕುತೂಹಲವನ್ನೂ ಮೂಡಿಸಿದೆ.

ಸೋಮವಾರ ಕುಟುಂಬ ಸಮೇತ ಮರೀನಾ ಬೀಚ್‌ಗೆ ತೆರಳಿ ಕರುಣಾನಿಧಿಯವರ ಸಮಾಧಿಗೆ ಪೂಜೆ ಸಲ್ಲಿಸಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅಳಗಿರಿ, ‘ನನ್ನನ್ನು ಪಕ್ಷಕ್ಕೆ ಮರಳಿ ಸೇರಿಸಿಕೊಳ್ಳದಿದ್ದರೆ ಡಿಎಂಕೆ ತನ್ನ ಗೋರಿಯನ್ನು ತಾನೇ ತೋಡಿಕೊಳ್ಳಬೇಕಾಗುತ್ತದೆ’ ಎಂದು ಎಚ್ಚರಿಕೆ ನೀಡಿದ್ದಾರೆ.

‘ನಾನೇನೊ ಪಕ್ಷಕ್ಕೆ ಮರು ಸೇರ್ಪಡೆಯಾಗಲು ಸಿದ್ಧನಿದ್ದೇನೆ. ಆದರೆ, ನನ್ನನ್ನು ಪಕ್ಷಕ್ಕೆ ಸೇರಿಸಿಕೊಳ್ಳುವ ಮನಸ್ಥಿತಿಯಲ್ಲಿ ಅವರು (ಸ್ಟಾಲಿನ್‌ ಮತ್ತು ಅವರ ಬೆಂಬಲಿಗರು) ಇಲ್ಲ. ಲೋಕಸಭೆ ಚುನಾವಣೆಯಲ್ಲಿ ಸ್ಥಾನ ಕಳೆದುಕೊಂಡರೆ ಪಕ್ಷ ಅಸ್ತಿತ್ವವನ್ನೇ ಕಳೆದುಕೊಳ್ಳಬೇಕಾಗುತ್ತದೆ’ ಎಂದು ಅವರು ಎಚ್ಚರಿಕೆ ನೀಡಿದ್ದಾರೆ.

‘ಕಾರ್ಯಕರ್ತರಲ್ಲಿ ನನ್ನ ಬಗ್ಗೆ ಒಳ್ಳೆಯ ಅಭಿಪ್ರಾಯ ಇದೆ. ನನ್ನನ್ನು ಪಕ್ಷಕ್ಕೆ ಮರಳಿ ಸೇರಿಸಿಕೊಂಡರೆ ಎಲ್ಲಿ ಪಕ್ಷದ ಅಧ್ಯಕ್ಷನಾಗುತ್ತಾನೋ ಎನ್ನುವ ಹೆದರಿಕೆ ಸ್ಟಾಲಿನ್‌ ಮತ್ತು ಅವರ ಹಿಂಬಾಲಕರನ್ನು ಕಾಡುತ್ತಿದೆ. ಹಾಗಾಗಿ ನನ್ನ ಸೇರ್ಪಡೆಗೆ ತಡೆಯೊಡ್ಡುತ್ತಿದ್ದಾರೆ’ ಎಂದು ಅವರು ದೂರಿದ್ದಾರೆ.

‘ನನ್ನ ನಾಯಕರಾದ ನಮ್ಮ ತಂದೆಯ ನಿಜವಾದ ಮತ್ತು ನಿಷ್ಠಾವಂತ ಬೆಂಬಲಿಗರು ಹಾಗೂ ತಮಿಳುನಾಡಿನಾದ್ಯಂತ ಇರುವ ಪಕ್ಷದ ಬೆಂಬಲಿಗರು ನನ್ನ ಜತೆಗೆ ಇದ್ದಾರೆ. ಅವರೆಲ್ಲರೂ ನನ್ನನ್ನು ಬೆಂಬಲಿಸಲಿದ್ದಾರೆ. ಎಲ್ಲ ಪ್ರಶ್ನೆಗಳಿಗೂ ಕಾಲವೇ ಉತ್ತರ ನೀಡಲಿದೆ’ ಎಂದು ಪಕ್ಷದ ದಕ್ಷಿಣ ವಲಯದ ಸಂಘಟನಾ ಸಂಚಾಲಕರಾಗಿದ್ದ ಅಳಗಿರಿ ತಿಳಿಸಿದ್ದಾರೆ.

ಡಿಎಂಕೆ ಅಧ್ಯಕ್ಷ ಎಂ.ಕರುಣಾನಿಧಿ ವಿಧಿವಶವಾದ ನಂತರ ಉತ್ತರಾಧಿಕಾರಕ್ಕಾಗಿ ಕುಟುಂಬದಲ್ಲಿ ರಾಜಕೀಯ ಸಂಘರ್ಷ ಭುಗಿಲೇಳಲಿದೆ ಎನ್ನುವ ಮಾತು ರಾಜಕೀಯ ವಲಯದಲ್ಲಿ ಕೇಳಿಬಂದಿತ್ತು.

ವಿರೋಧ ಪಕ್ಷದಲ್ಲಿ ಅಧಿಕಾರ ಸ್ಥಾನಕ್ಕಾಗಿ ಸಹೋದರ ಎಂ.ಕೆ.ಸ್ಟಾಲಿನ್‌ ವಿರುದ್ಧ ತಿರುಗಿಬಿದ್ದ ಕಾರಣಕ್ಕೆ ಅಳಗಿರಿ ಮತ್ತು ಅವರ ಬೆಂಬಲಿಗರನ್ನು ಎಂ.ಕರುಣಾನಿಧಿಯವರೇ 2014ರಲ್ಲಿ ಉಚ್ಚಾಟಿಸಿದ್ದರು. ಆಗಿನಿಂದಲೂ ಅಳಗಿರಿ, ಮದುರೈನಲ್ಲಿ ರಾಜಕೀಯ ವನವಾಸದಂತೆ ನೆಲೆಸಿದ್ದಾರೆ.

*
ಪಕ್ಷದ ಪ್ರಮುಖ ಹುದ್ದೆಗಳನ್ನು ಮಾರಾಟ ಮಾಡಿದ್ದಾರೆ. ಇದನ್ನು ತಂದೆಯವರ ಆತ್ಮ ಸಹಿಸುವುದಿಲ್ಲ. ತಲೈವರ್‌ (ಕರುಣಾನಿಧಿ) ಖಂಡಿತಾ ಅವರನ್ನು ಶಿಕ್ಷಿಸುತ್ತಾರೆ.
-ಎಂ.ಕೆ.ಅಳಗಿರಿ, ಡಿಎಂಕೆ ಉಚ್ಚಾಟಿತ ನಾಯಕ

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !