ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಉಗ್ರರಿಗೆ ತಿರುಗೇಟು: ಎಲ್ಲ ಆಯ್ಕೆ ಮುಕ್ತ’

Last Updated 5 ಮಾರ್ಚ್ 2019, 19:00 IST
ಅಕ್ಷರ ಗಾತ್ರ

ನವದೆಹಲಿ:‘ನಮ್ಮ ಮೇಲೆ ಮತ್ತೊಮ್ಮೆ ಭಯೋತ್ಪಾದಕ ದಾಳಿ ನಡೆದರೆ, ಅದಕ್ಕೆ ಪ್ರತಿಯಾಗಿ ಎಲ್ಲಾ ಸ್ವರೂಪದ ಆಯ್ಕೆಗಳ ಬಳಕೆಗೆ ಭಾರತ ಸಿದ್ಧವಾಗಿದೆ’ ಎಂದು ಸರ್ಕಾರದ ಉನ್ನತ ಮೂಲಗಳು ಹೇಳಿವೆ.

‘ಪಾಕ್‌ ನೆಲದಲ್ಲಿದ್ದ ಉಗ್ರರ ನೆಲೆಗಳ ಮೇಲೆ ವೈಮಾನಿಕ ದಾಳಿ ನಡೆಸಿದ ನಂತರ ನಾವು ಕಟ್ಟೆಚ್ಚರ ವಹಿಸಿದ್ದೇವೆ. ದೇಶದ ಪಶ್ಚಿಮ ಭಾಗದಲ್ಲಿರುವ ಎಲ್ಲಾ ವಾಯುನೆಲೆಗಳು ಮತ್ತು ಸೇನಾನೆಲೆಗಳು ಸನ್ನಧ ಸ್ಥಿತಿಯಲ್ಲಿವೆ. ಮತ್ತೊಮ್ಮೆ ಭಯೋತ್ಪಾದಕರು ದಾಳಿ ನಡೆಸಿದರೆ, ಅದಕ್ಕೆ ಪ್ರತಿಯಾಗಿ ಎಲ್ಲಾ ಆಯ್ಕೆಗಳ ಬಳಕೆಗೆ ನಾವು ಸಿದ್ಧರಿದ್ದೇವೆ’ ಎಂದು ಮೂಲಗಳು ಮಾಹಿತಿ ನೀಡಿವೆ.

‘ರಾಜತಾಂತ್ರಿಕವಾಗಿಯೂ ನಾವು ಪಾಕಿಸ್ತಾನದ ಮೇಲೆ ಒತ್ತಡ ಹೇರುತ್ತಲೇ ಇದ್ದೇವೆ. ಮಸೂದ್ ಅಜರ್‌ನನ್ನು ಜಾಗತಿಕ ಉಗ್ರನ ಪಟ್ಟಿಗೆ ಸೇರಿಸಲು ಎಲ್ಲಾ ಪ್ರಯತ್ನ ನಡೆಸಿದ್ದೇವೆ. ಆತನನ್ನು ಆ ಪಟ್ಟಿಗೆ ಸೇರಿಸಿದರೆ ಪಾಕಿಸ್ತಾನ ಇಕ್ಕಟ್ಟಿಗೆ ಸಿಲುಕಲಿದೆ. ಆತ ಪಾಕ್ ನೆಲದಲ್ಲೇ ಇದ್ದಾನೆ ಎಂದು ಅಲ್ಲಿನ ಸಚಿವರೇ ಹೇಳಿಕೊಂಡಿದ್ದಾರೆ. ಇದರಿಂದ ಪಾಕಿಸ್ತಾನದ ಮೇಲೆ ಒತ್ತಡ ಹೆಚ್ಚಲಿದೆ’ ಎಂದು ಮೂಲಗಳು ವಿವರಿಸಿವೆ.

‘ಭಾರತದ ಸೇನಾನೆಲೆಗಳ ಮೇಲೆ ದಾಳಿ ನಡೆಸಲು ಪಾಕಿಸ್ತಾನವು ಅಮೆರಿಕ ನಿರ್ಮಿತ ಎಫ್‌–16 ಯುದ್ಧವಿಮಾನಗಳನ್ನು ಬಳಸಿದೆ ಎಂಬುದರ ಸಾಕ್ಷ್ಯಗಳನ್ನು ಅಮೆರಿಕಕ್ಕೆ ಹಸ್ತಾಂತರಿಸಿದ್ದೇವೆ. ಈ ಬಗ್ಗೆ ಅಮೆರಿಕವು ತನಿಖೆ ನಡೆಸಿ ಕ್ರಮ ತೆಗದುಕೊಳ್ಳುತ್ತದೆ ಎಂದು ಆಶಿಸಿದ್ದೇವೆ’ ಎಂದು ಮೂಲಗಳು ಹೇಳಿವೆ.

ಜಲಾಂತರ್ಗಾಮಿಯನ್ನು ಓಡಿಸಿದ್ದೇವೆ: ಪಾಕ್

ಕರಾಚಿ: ‘ಭಾರತದ ಜಲಾಂತರ್ಗಾಮಿ ನೌಕೆಯೊಂದು ನಮ್ಮ ಜಲಗಡಿಯೊಳಗೆ ನುಗ್ಗಲು ಪ್ರಯತ್ನಿಸಿತ್ತು. ಅದನ್ನು ತಡೆದಿದ್ದೇವೆ’ ಎಂದು ಪಾಕಿಸ್ತಾನದ ನೌಕಾಪಡೆ ಹೇಳಿದೆ.

ಈ ಸಂಬಂಧ ಪಾಕಿಸ್ತಾನವು ಒಂದು ವಿಡಿಯೊವನ್ನು ಬಿಡುಗಡೆ ಮಾಡಿದೆ. ವಿಡಿಯೊದಲ್ಲಿ ಜಲಾಂತರ್ಗಾಮಿಯೊಂದರ ಎರಡು ಚಿತ್ರಗಳು ಇವೆ. ಜತೆಗೆ ಜಲಾಂತರ್ಗಾಮಿಯ ಪೆರಿಸ್ಕೋಪ್ ಸಮುದ್ರದಲ್ಲಿ ಗೋಚರಿಸುತ್ತಿರುವ ಮತ್ತು ಅದು ಚಲಿಸುತ್ತಿರುವ ದೃಶ್ಯವು ಆ ವಿಡಿಯೊದಲ್ಲಿದೆ. ಈ ಘಟನೆ ಮಾರ್ಚ್‌ 4ರ ರಾತ್ರಿ 8.35ರ ಸಮಯದ್ದು ಎಂಬ ವಿವರ ಆ ವಿಡಿಯೊದಲ್ಲಿ ಇದೆ.

‘ಇಂತಹ ನುಸುಳುವಿಕೆಯನ್ನು ತಡೆಯಲೆಂದೇ ನಮ್ಮ ನೌಕಾಪಡೆಯ ಸಿಬ್ಬಂದಿ ವಿಶೇಷ ತರಬೇತಿ ಪಡೆದಿದ್ದಾರೆ. ಹೀಗಾಗಿಯೇ ಭಾರತದ ಜಲಾಂತರ್ಗಾಮಿಯು ನಮ್ಮ ಜಲಗಡಿ ಪ್ರವೇಶಿಸದಂತೆ ತಡೆಯಲು ಸಾಧ್ಯವಾಯಿತು. ಅಲ್ಲದೆ ಇಂತಹ ಚಟುವಟಿಕೆಗಳನ್ನು ತಡೆಯಲು ನಮ್ಮ ನೌಕಾಪಡೆ ಸದಾ ಸಿದ್ಧವಾಗಿರುತ್ತದೆ’ ಎಂದು ಪಾಕಿಸ್ತಾನ ಹೇಳಿದೆ.

‘2016ರ ನವೆಂಬರ್‌ನಲ್ಲಿ ಭಾರತವು ಇಂಥದ್ದೇ ಪ್ರಯತ್ನ ನಡೆಸಿತ್ತು. ಅದನ್ನೂ ವಿಫಲಗೊಳಿಸಿದ್ದೆವು. ಈಗ ಮತ್ತೆ ಅದನ್ನೇ ಪುನರಾವರ್ತಿಸಿದೆ’ ಎಂದು ಪಾಕ್ ಹೇಳಿದೆ.

ಪಾಕ್‌ ಸುಳ್ಳು ಹೇಳುತ್ತಿದೆ: ಭಾರತ

ಪಾಕಿಸ್ತಾನದ ಆರೋಪವನ್ನು ಭಾರತ ನಿರಾಕರಿಸಿದೆ.

‘ಕೆಲವು ದಿನಗಳಿಂದ ಪಾಕಿಸ್ತಾನವು ಇಂತಹ ಸುಳ್ಳುಗಳನ್ನು ಹೇಳುತ್ತಲೇ ಇದೆ. ಭಾರತದ ಜಲಾಂತರ್ಗಾಮಿ ಪಾಕ್‌ ಗಡಿಯತ್ತ ಹೋಗಿದ್ದು ನಿಜವೇ ಆಗಿದ್ದರೆ, ಅದು ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ಶಾಶ್ವತ ಸದಸ್ಯ ರಾಷ್ಟ್ರಗಳ ಗಮನಕ್ಕೆ ಬರುತ್ತಿತ್ತು’ ಎಂದು ಭಾರತೀಯ ನೌಕಾಪಡೆಯ ಮೂಲಗಳು ಹೇಳಿವೆ.

‘ದೇಶದ ಭದ್ರತೆಯ ಕಾರಣ ನಮ್ಮ ಜಲಾಂತರ್ಗಾಮಿಗಳು ಸಮುದ್ರದಲ್ಲಿ ಸನ್ನದ್ಧವಾಗಿವೆ ಎಂದು ಫೆಬ್ರುವರಿ 28ರಂದೇ ಮಾಹಿತಿ ನೀಡಿದ್ದೇವೆ’ ಎಂದು ನೌಕಾಪಡೆ ಮೂಲಗಳು ಹೇಳಿವೆ.

***

ನಾವು ಭಾರತದ ಜಲಾಂತರ್ಗಾಮಿಯನ್ನು ಸುಲಭವಾಗಿ ಧ್ವಂಸ ಮಾಡಬಹುದಿತ್ತು. ಆದರೆ ನಮ್ಮ ಶಾಂತಿ ನೀತಿಯನ್ನು ಪಾಲಿಸುವ ಉದ್ದೇಶದಿಂದ ಆ ನೌಕೆಯನ್ನು ಹಾಗೇ ಕಳುಹಿಸಿದ್ದೇವೆ

–ಪಾಕಿಸ್ತಾನದ ನೌಕಾಪಡೆ

ಪಾಕಿಸ್ತಾನವನ್ನು ಭಾರತ ಬೆದರಿಸುತ್ತಲೇ ಇದೆ ಎಂದು ಜಗತ್ತಿನ ಎದುರು ಪಾಕ್ ಇಂತಹ ಸುಳ್ಳುಗಳನ್ನು ಹೇಳುತ್ತಲೇ ಇದೆ. ಅದು ಈಗ ಬಿಡುಗಡೆ ಮಾಡಿರುವ ವಿಡಿಯೊ 2016ರದ್ದು

–ಭಾರತೀಯ ನೌಕಾಪಡೆಯ ಮೂಲಗಳು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT