ಬಜೆಟ್‌ ಅಧಿವೇಶನಕ್ಕೆ ಪದೇ ಪದೇ ಅಡ್ಡಿ| ಆತ್ಮವಿಮರ್ಶೆ ಮಾಡಿಕೊಳ್ಳಿ ಎಂದ ಮೋದಿ

ಬುಧವಾರ, ಜೂಲೈ 17, 2019
29 °C
ಇಂದಿನಿಂದ ಬಜೆಟ್‌ ಅಧಿವೇಶನ

ಬಜೆಟ್‌ ಅಧಿವೇಶನಕ್ಕೆ ಪದೇ ಪದೇ ಅಡ್ಡಿ| ಆತ್ಮವಿಮರ್ಶೆ ಮಾಡಿಕೊಳ್ಳಿ ಎಂದ ಮೋದಿ

Published:
Updated:
Prajavani

ನವದೆಹಲಿ: ಬಜೆಟ್‌ ಅಧಿವೇಶನಕ್ಕೆ ಪೂರ್ವಭಾವಿಯಾಗಿ ಭಾನುವಾರ ಸರ್ವಪಕ್ಷಗಳ ಪ್ರತಿನಿಧಿಗಳ ಸಭೆ ನಡೆಸಿದ ಪ್ರಧಾನಿ ನರೇಂದ್ರ ಮೋದಿ ಅವರು, ‘ಕಳೆದ ಎರಡು ವರ್ಷಗಳಲ್ಲಿ ಅಧಿವೇಶನಕ್ಕೆ ಪದೇ ಪದೇ ಅಡ್ಡಿ ಉಂಟುಮಾಡಿರುವ ಪಕ್ಷಗಳು ಆತ್ಮವಿಮರ್ಶೆ ಮಾಡಿಕೊಳ್ಳಬೇಕು’ ಎಂದು ಮನವಿ ಮಾಡಿದರು.

‘ನಾವು ಜನರಿಗಾಗಿ ಕೆಲಸ ಮಾಡಬೇಕು. ಸಂಸತ್ತಿನ ಕಾರ್ಯ ಚಟುವಟಿಕೆಗಳಿಗೆ ಅಡ್ಡಿ ಉಂಟುಮಾಡುವ ಮೂಲಕ ಜನರ ಪ್ರೀತಿಯನ್ನು ಗಳಿಸಲು ಸಾಧ್ಯವಿಲ್ಲ. ಎಲ್ಲಾ ಪಕ್ಷಗಳೂ ತಮ್ಮ ರಾಜಕೀಯ ಭಿನ್ನಾಭಿಪ್ರಾಯಗಳನ್ನು ಬದಿಗಿಟ್ಟು, ದೇಶದ ಅಭಿವೃದ್ಧಿಗಾಗಿ ದಣಿವರಿಯದೆ ಶ್ರಮಿಸಲು ಪಣ ತೊಡಬೇಕು’ ಎಂದು ಹೇಳಿದರು.

ಸುಮಾರು ಎರಡೂವರೆ ಗಂಟೆಗಳ ಕಾಲ ನಡೆದ ಸಭೆಯಲ್ಲಿ ಕಾಂಗ್ರೆಸ್‌ ನಾಯಕರಾದ ಗುಲಾಂನಬಿ ಆಜಾದ್‌, ಆನಂದ್‌ ಶರ್ಮಾ, ಟಿಎಂಸಿಯ ಡೆರೆಕ್‌ ಒ’ಬ್ರಯಾನ್‌, ಸುದೀಪ್‌ ಬಂಡೊಪಾಧ್ಯಾಯ, ಎಸ್‌ಪಿ ನಾಯಕ ರಾಮ್‌ಗೋಪಾಲ್‌ ಯಾದವ್‌, ನ್ಯಾಷನಲ್‌ ಕಾನ್ಫರೆನ್ಸ್‌ನ ಫಾರೂಕ್‌ ಅಬ್ದುಲ್ಲಾ, ಮುಂತಾದವರು ಪಾಲ್ಗೊಂಡಿದ್ದರು.

ಈ ಸರ್ಕಾರದ ಮೊದಲ ಅಧಿವೇಶನಕ್ಕೆ ಅನೇಕ ಮಹತ್ವದ ಕಾರ್ಯಸೂಚಿಗಳನ್ನು ರೂಪಿಸಲಾಗಿದೆ. ತ್ರಿವಳಿ ತಲಾಖ್‌ ಹೇಳುವುದನ್ನು ಶಿಕ್ಷಾರ್ಹ ಅಪರಾಧವಾಗಿಸುವುದೂ ಸೇರಿದಂತೆ ಹತ್ತು ಸುಗ್ರೀವಾಜ್ಞೆಗಳಿಗೆ ಸಂಸತ್ತಿನಲ್ಲಿ ಕಾನೂನು ರೂಪಿಸಲು ಮುಂದಾಗಿದೆ.

ರಾಜ್ಯಸಭೆಯಲ್ಲಿ ಸರ್ಕಾರಕ್ಕೆ ಅಗತ್ಯ ಸಂಖ್ಯಾಬಲ ಇಲ್ಲದ ಕಾರಣ, ಕಾನೂನು ರೂಪಿಸಲು ವಿರೋಧಪಕ್ಷಗಳ ಸಹಕಾರ ಅಗತ್ಯವಾಗಿದೆ. 245 ಸಂಖ್ಯಾಬಲದ ರಾಜ್ಯ ಸಭೆಯಲ್ಲಿ ಎನ್‌ಡಿಎ 102 ಸ್ಥಾನಗಳನ್ನು ಮಾತ್ರ ಹೊಂದಿದೆ.

‘ವನ್‌ ನೇಷನ್‌, ವನ್‌ ಪೋಲ್‌’ 19ರಂದು ವಿಶೇಷ ಸಭೆ
ಚುನಾವಣಾ ಸುಧಾರಣೆ ಮತ್ತು ಏಕಕಾಲಕ್ಕೆ ಲೋಕಸಭೆ ಮತ್ತು ವಿಧಾನಸಭೆಗಳಿಗೆ ಚುನಾವಣೆ ನಡೆಸುವ ‘ವನ್‌ ನೇಷನ್‌, ವನ್‌ ಪೋಲ್‌’ ವಿಷಯ ಕುರಿತು ಚರ್ಚಿಸಲು ಸರ್ವಪಕ್ಷಗಳ ಸಭೆಯನ್ನು ಆಯೋಜಿಸುವ ಮೂಲಕ ಪ್ರಧಾನಿ ಮೋದಿ ತಮ್ಮ ಚಿಂತನೆಯನ್ನು ಕಾರ್ಯರೂಪಕ್ಕೆ ತರುವ ನಿಟ್ಟಿನಲ್ಲಿ ಹೆಜ್ಜೆ ಇಟ್ಟಿದ್ದಾರೆ.

ಈ ವಿಷಯಗಳ ಕುರಿತು ಚರ್ಚಿಸಲು ಮೋದಿ ಅವರು ಜೂನ್‌ 19ರಂದು ವಿವಿಧ ಪಕ್ಷಗಳ ಮುಖ್ಯಸ್ಥರ ಸಭೆಯನ್ನು ಕರೆದಿದ್ದಾರೆ.

ಸಭೆಯ ಬಗ್ಗೆ ಮಾಧ್ಯಮ ಪ್ರತಿನಿಧಿಗಳಿಗೆ ಮಾಹಿತಿ ನೀಡಿದ ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ ಜೋಶಿ, ‘ಜೂನ್‌ 19ರಂದು ನಡೆಯಲಿರುವ ಸಭೆಯಲ್ಲಿ ಚುನಾವಣಾ ಸುಧಾರಣೆ ಹಾಗೂ ವನ್‌ ನೇಷನ್‌, ವನ್‌ ಪೋಲ್‌ ವಿಷಯ ಪ್ರಮುಖವಾಗಿ ಚರ್ಚೆಯಾಗಲಿದೆ’ ಎಂದು ಹೇಳಿದ್ದಾರೆ.

ಇದಲ್ಲದೆ, ‘2022ರಲ್ಲಿ ದೇಶದ 75ನೇ ಸ್ವಾತಂತ್ರ್ಯೋತ್ಸವ ಆಚರಿಸುವುದು ಮತ್ತು ಪ್ರಸಕ್ತ ಸಾಲಿನಲ್ಲಿ ಗಾಂಧೀಜಿ ಅವರ 150ನೇ ಜನ್ಮದಿನೋತ್ಸವ ಆಚರಣೆ ವಿಚಾರಗಳನ್ನು ಚರ್ಚಿಸಲು ಜೂನ್‌ 20ರಂದು ಪ್ರಧಾನಿ ಸಂಸದರ ಜೊತೆ ಸಭೆ ನಡೆಸುವರು’ ಎಂದು ಜೋಶಿ ತಿಳಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 13

  Happy
 • 4

  Amused
 • 0

  Sad
 • 0

  Frustrated
 • 2

  Angry

Comments:

0 comments

Write the first review for this !