ಏಕಕಾಲಕ್ಕೆ ಚುನಾವಣೆ ಕುರಿತ ಚರ್ಚೆl ಸರ್ವಪಕ್ಷ ಸಭೆಗೆ ವಿರೋಧ ಪಕ್ಷಗಳ ಗೈರು

ಗುರುವಾರ , ಜೂಲೈ 18, 2019
22 °C
ಹಾದಿ ತಪ್ಪಿಸುವ ನಾಟಕ– ಮಾಯಾವತಿ

ಏಕಕಾಲಕ್ಕೆ ಚುನಾವಣೆ ಕುರಿತ ಚರ್ಚೆl ಸರ್ವಪಕ್ಷ ಸಭೆಗೆ ವಿರೋಧ ಪಕ್ಷಗಳ ಗೈರು

Published:
Updated:
Prajavani

ನವದೆಹಲಿ: ಲೋಕಸಭೆ ಹಾಗೂ ವಿಧಾನಸಭೆಗಳಿಗೆ ಏಕಕಾಲಕ್ಕೆ ಚುನಾವಣೆ ನಡೆಸುವ ‘ಒಂದು ದೇಶ ಒಂದು ಚುನಾವಣೆ’ ಪ್ರಸ್ತಾವವನ್ನು ವಿರೋಧಿಸಿರುವ ಪ್ರತಿಪಕ್ಷಗಳು ಪ್ರಧಾನಿ ನರೇಂದ್ರ ಮೋದಿ ಅವರು ಕರೆದಿದ್ದ ಸರ್ವಪಕ್ಷಗಳ ಪ್ರಮುಖರ ಸಭೆಯಿಂದ ಬುಧವಾರ ದೂರ ಉಳಿದವು.

ಎನ್‌ಡಿಎ ಮಿತ್ರಪಕ್ಷ ಶಿವಸೇನಾ ಸೇರಿದಂತೆ ಕಾಂಗ್ರೆಸ್, ಎಸ್‌ಪಿ, ಬಿಎಸ್‌ಪಿ, ಡಿಎಂಕೆ, ಟಿಡಿಪಿ ಹಾಗೂ ತೃಣಮೂಲ ಕಾಂಗ್ರೆಸ್ ಪಕ್ಷಗಳು ಸಭೆಗೆ ಗೈರಾಗಿದ್ದವು. ಸಿಪಿಎಂ ಪ್ರಧಾನ ಕಾರ್ಯದರ್ಶಿ ಸೀತಾರಾಮ್ ಯೆಚೂರಿ ಹಾಗೂ ಸಿಪಿಐನಿಂದ ಡಿ. ರಾಜಾ ಹಾಜರಾಗಿ, ಸರ್ಕಾರದ ಚಿಂತನೆ ವಿರೋಧಿಸಿದರು. ಸಭೆಗೆ 40 ಪಕ್ಷಗಳಿಗೆ ಆಹ್ವಾನ ನೀಡಲಾಗಿತ್ತು. 19 ಪಕ್ಷಗಳ ಪ್ರತಿನಿಧಿಗಳು ಪಾಲ್ಗೊಂಡಿರಲಿಲ್ಲ.

ಸಭೆಯಿಂದ ದೂರ ಉಳಿದ ಬಿಎಸ್‌ಪಿ ನಾಯಕಿ ಮಾಯಾವತಿ ಅವರು ‘ವಿದ್ಯುನ್ಮಾನ ಮತಯಂತ್ರಗಳನ್ನು (ಇವಿಎಂ) ಕುರಿತ ಸಭೆಯಾಗಿದ್ದರೆ ನಾನು ಭಾಗವಹಿಸುತ್ತಿದ್ದೆ’ ಎಂದು ಟ್ವೀಟ್ ಮಾಡಿದ್ದಾರೆ.

‘ಭಾರತದಂತಹ ದೊಡ್ಡ ದೇಶಕ್ಕೆ ಈ ಪ್ರಸ್ತಾವ ಸರಿಹೊಂದುವುದಿಲ್ಲ. ಇವಿಎಂ ಕಾರ್ಯನಿರ್ವಹಣೆ ಮೊದಲಾದ ದೇಶದ ಜ್ವಲಂತ ಸಮಸ್ಯೆಗಳಿಂದ ಗಮನ ಬೇರೆಡೆ ಸೆಳೆಯಲು ಬಿಜೆಪಿ ಮಾಡುತ್ತಿರುವ ಹೊಸ ನಾಟಕವಿದು’ ಎಂದು ಅವರು ಆರೋಪಿಸಿದ್ದಾರೆ.

ತೆಲಂಗಾಣ ರಾಷ್ಟ್ರ ಸಮಿತಿ (ಟಿಆರ್‌ಎಸ್) ಪರವಾಗಿ ಪಕ್ಷದ ಕಾರ್ಯಾಧ್ಯಕ್ಷ ಟಿ.ಕೆ. ರಾಮರಾವ್ ಅವರು ಹಾಜರಾಗಿದ್ದರು. ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಬಂದಿರಲಿಲ್ಲ. ಸಭೆಗೆ ಬರುವಂತೆ ಕೇಂದ್ರ ಸರ್ಕಾರ ನೀಡಿದ್ದ ಆಹ್ವಾನವನ್ನು ಟಿಎಂಸಿ ನಾಯಕಿ ಹಾಗೂ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ತಿರಸ್ಕರಿಸಿದ್ದರು.

ಪ್ರಜಾಪ್ರಭುತ್ವ ವಿರೋಧಿ: ಯೆಚೂರಿ
‘ಏಕಕಾಲಕ್ಕೆ ಚುನಾವಣೆ ನಡೆಸುವುದು ಒಕ್ಕೂಟ ವ್ಯವಸ್ಥೆ ಮತ್ತು ಪ್ರಜಾಪ್ರಭುತ್ವದ ವಿರೋಧಿ, ಹಾಗೆಯೇ ಸಂವಿಧಾನ ವಿರೋಧಿಯೂ ಹೌದು’ ಎಂದು ಸಿಪಿಎಂ ಪ್ರಧಾನ ಕಾರ್ಯದರ್ಶಿ ಸೀತಾರಾಮ್ ಯೆಚೂರಿ ಹೇಳಿದರು.

‘ವಿಶ್ವಾಸಮತ ಯಾಚನೆ ಅಥವಾ ಹಣಕಾಸು ಮಸೂದೆ ವಿಚಾರದಲ್ಲಿ ಒಂದು ಸರ್ಕಾರಕ್ಕೆ ಸೋಲಾದರೆ ಸಂವಿಧಾನದ ಪ್ರಕಾರ ಅಂಥ ಸರ್ಕಾರ ರಾಜೀನಾಮೆ ನೀಡಬೇಕು. ಹೀಗಾದಾಗ ಪರ್ಯಾಯ ಸರ್ಕಾರ ರಚನೆ ಸಾಧ್ಯವಾಗದಿದ್ದಲ್ಲಿ, ಸಂಸತ್ ವಿಸರ್ಜನೆ ಮಾಡಿ ಮಧ್ಯಂತರ ಚುನಾವಣೆ ನಡೆಸಬೇಕಾಗುತ್ತದೆ. ಲೋಕಸಭೆ ಅಥವಾ ಯಾವುದೇ ವಿಧಾನಸಭೆಯ ಅವಧಿಯನ್ನು ದೀರ್ಘಕಾಲ ವಿಸ್ತರಿಸುವುದು ಸಂವಿಧಾನ ವಿರೋಧಿ’ ಎಂದು ಯೆಚೂರಿ ಹೇಳಿದರು.

ತಿದ್ದುಪಡಿಗೆ ಶಿಫಾರಸು ಮಾಡಿದ್ದ ಕಾನೂನು ಆಯೋಗ
ಸಾರ್ವಜನಿಕ ಹಣವನ್ನು ಉಳಿತಾಯ ಮಾಡಲು ಏಕಕಾಲಕ್ಕೆ ಚುನಾವಣೆ ನಡೆಸುವ ಬಗ್ಗೆ ಕಾನೂನು ಆಯೋಗವು ಕಳೆದ ಆಗಸ್ಟ್‌ನಲ್ಲಿ ಸರ್ಕಾರಕ್ಕೆ ಶಿಫಾರಸು ಮಾಡಿತ್ತು. 

‘ಈಗಿರುವ ಸಾಂವಿಧಾನಿಕ ಚೌಕಟ್ಟಿನಲ್ಲಿ ಏಕಕಾಲಕ್ಕೆ ಚುನಾವಣೆ ನಡೆಸುವುದು ಕಷ್ಟ. ಇದು ಸಾಧ್ಯವಾಗಬೇಕಾದರೆ ಸಂವಿಧಾನ ಹಾಗೂ ಪ್ರಜಾಪ್ರತಿನಿಧಿ ಕಾಯ್ದೆಗೆ ತಿದ್ದುಪಡಿ ತರಬೇಕಾಗುತ್ತದೆ’ ಎಂದು ಆಯೋಗ ಅಭಿಪ್ರಾಯಪಟ್ಟಿತ್ತು. 

ಹಣದ ಉಳಿತಾಯ, ಸಂಪನ್ಮೂಲಗಳ ಸಮರ್ಪಕ ಬಳಕೆಯಂತಹ ಹಲವು ಉದ್ದೇಶಗಳಿಗಾಗಿ ಏಕಕಾಲಕ್ಕೆ ಚುನಾವಣೆ ನಡೆಸುವ ಬಗ್ಗೆ ವಿಸ್ತೃತ ಚರ್ಚೆ ನಡೆಸಬೇಕಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ನೀತಿ ಆಯೋಗದ ಸಭೆಯಲ್ಲಿ ಇತ್ತೀಚೆಗೆ ಕರೆಕೊಟ್ಟಿದ್ದರು.

ಭಾಗಿಯಾಗಿದ್ದವರು
* ಶರದ್ ಪವಾರ್, ಎನ್‌ಸಿಪಿ
* ಸೀತಾರಾಮ್ ಯೆಚೂರಿ, ಸಿಪಿಎಂ
* ಡಿ.ರಾಜಾ, ಸಿಪಿಐ
* ನಿತೀಶ್ ಕುಮಾರ್, ಬಿಹಾರ ಸಿ.ಎಂ
* ಸುಖಬೀರ್ ಸಿಂಗ್ ಬಾದಲ್, ಶಿರೋಮಣಿ ಅಕಾಲಿದಳ
* ನವೀನ್ ಪಟ್ನಾಯಕ್, ಒಡಿಶಾ ಮುಖ್ಯಮಂತ್ರಿ
* ಕಾನ್ರಾಡ್ ಸಂಗ್ಮಾ, ನ್ಯಾಷನಲ್ ಪೀಪಲ್ಸ್ ಪಾರ್ಟಿ
* ಮೆಹಬೂಬಾ ಮುಫ್ತಿ, ಪಿಡಿಪಿ
* ಫಾರೂಕ್ ಅಬ್ದುಲ್ಲಾ, ನ್ಯಾಷನಲ್ ಕಾನ್ಫರೆನ್ಸ್

ಗೈರಾದ ಪ್ರಮುಖರು
* ರಾಹುಲ್ ಗಾಂಧಿ, ಕಾಂಗ್ರೆಸ್ ಅಧ್ಯಕ್ಷ
* ಮಮತಾ ಬ್ಯಾನರ್ಜಿ, ಪಶ್ಚಿಮ ಬಂಗಾಳ ಮುಖ್ಯಮಂತ್ರಿ
* ಮಾಯಾವತಿ, ಬಿಎಸ್‌ಪಿ ನಾಯಕಿ
* ಅಖಿಲೇಶ್ ಯಾದವ್, ಎಸ್‌ಪಿ ನಾಯಕ
* ಎಂ.ಕೆ. ಸ್ಟಾಲಿನ್, ಡಿಎಂಕೆ ಅಧ್ಯಕ್ಷ
* ಕೆ. ಚಂದ್ರಶೇಖರ ರಾವ್, ತೆಲಂಗಾಣ ಮುಖ್ಯಮಂತ್ರಿ
* ಉದ್ಧವ್ ಠಾಕ್ರೆ, ಶಿವಸೇನಾ ಅಧ್ಯಕ್ಷ
* ಅರವಿಂದ ಕೇಜ್ರಿವಾಲ್, ದೆಹಲಿ ಮುಖ್ಯಮಂತ್ರಿ 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 1

  Angry

Comments:

0 comments

Write the first review for this !