ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವೃದ್ಧರ ಆಸೆ ಈಡೇರಿಕೆಗೆ ಮೈತ್ರಿ

ಬಿಜೆಪಿ ವಿರೋಧಿ ಪಕ್ಷಗಳ ಸಮಾವೇಶವನ್ನು ಹಂಗಿಸಿದ ಕೇಂದ್ರ ಸಚಿವ ಜೇಟ್ಲಿ
Last Updated 21 ಜನವರಿ 2019, 20:24 IST
ಅಕ್ಷರ ಗಾತ್ರ

ನವದೆಹಲಿ: 2019ರ ಲೋಕಸಭಾ ಚುನಾವಣೆಯ ನಂತರ ವಿರೋಧ ಪ‍ಕ್ಷಗಳ ಕಿಚಡಿ ಮೈತ್ರಿಕೂಟ ಅಧಿಕಾರಕ್ಕೆ ಬಂದರೆ ದೇಶದಲ್ಲಿ ಅಸ್ಥಿರತೆ ಖಚಿತ ಎಂಬ ವಾದವನ್ನು ಕೇಂದ್ರ ಸಚಿವ ಅರುಣ್‌ ಜೇಟ್ಲಿ ಪುನರುಚ್ಚರಿಸಿದ್ದಾರೆ.

ಮುಂಬರುವ ಲೋಕಸಭಾ ಚುನಾವಣೆ ‘ಮೋದಿ ವಿರುದ್ಧ ಅವ್ಯವಸ್ಥೆ’ ಎಂಬಂತೆ ನಡೆಯಲಿದೆ ಎಂದು ಅವರು ಹೇಳಿದ್ದಾರೆ. ‘ಎಂಬತ್ತು ದಾಟಿದ ಕೆಲವು ವೃದ್ಧರು ತಮ್ಮ ಕೊನೆಗಾಲದ ಆಕಾಂಕ್ಷೆ ಈಡೇರಿಸಿಕೊಳ್ಳುವುದಕ್ಕಾಗಿ ಸಮಾವೇಶ ಮಾಡಿದ್ದಾರೆ ಎಂದು ಕೋಲ್ಕತ್ತದಲ್ಲಿ ನಡೆದ ಬಿಜೆಪಿ ವಿರೋಧಿ ಪಕ್ಷಗಳ ರ‍್ಯಾಲಿಯನ್ನು ಅವರು ಹಂಗಿಸಿದ್ದಾರೆ.

ಕೋಲ್ಕತ್ತದ ಸಮಾವೇಶದಲ್ಲಿ ಹಿರಿಯ ಮುಖಂಡರಾದ ಎಚ್‌.ಡಿ. ದೇವೇಗೌಡ (85), ಶರದ್ ಪವಾರ್‌ (78), ಯಶವಂತ ಸಿನ್ಹಾ (81), ಶರದ್‌ ಯಾದವ್‌ (73) ಮುಂತಾದವರು ಭಾಗವಹಿಸಿದ್ದರು.

ವಿರೋಧ ಪಕ್ಷಗಳ ನಾಯಕತ್ವದ ಕೊರತೆಯೇ 2019ರ ಲೋಕಸಭಾ ಚುನಾವಣೆಯ ಮುಖ್ಯ ವಿಷಯ ಆಗು
ವಂತೆ ನೋಡಿಕೊಳ್ಳಬೇಕು ಎಂದು ವಾರದ ಹಿಂದೆ ನಡೆದ ಬಿಜೆಪಿ ಕಾರ್ಯಕರ್ತರ ಸಮಾವೇಶದಲ್ಲಿ ಜೇಟ್ಲಿ ಹೇಳಿದ್ದರು.

‘ಕೋಲ್ಕತ್ತದಲ್ಲಿ ನಡೆದ ಮೋದಿ ವಿರೋಧಿ ರ‍್ಯಾಲಿಯು ರಾಹುಲ್‌ ಇಲ್ಲದ ರ‍್ಯಾಲಿ ಕೂಡ ಆಗಿದೆ’ ಎಂದು ಜೇಟ್ಲಿ ಇತ್ತೀಚೆಗೆ ಟ್ವೀಟ್‌ ಮಾಡಿದ್ದರು. ಪ್ರಧಾನಿ ಹುದ್ದೆಯ ಆಕಾಂಕ್ಷಿಗಳಾದ ನಾಲ್ವರಲ್ಲಿ ಮೂವರು– ರಾಹುಲ್‌, ಮಾಯಾವತಿ ಮತ್ತು ಕೆ. ಚಂದ್ರಶೇಖರ ರಾವ್‌ ಅವರು ಸಮಾವೇಶಕ್ಕೆ ಗೈರುಹಾಜರಾಗಿದ್ದರು ಎಂದೂ ಅವರು ಹೇಳಿದ್ದರು.

ಎನ್‌ಡಿಎಗೆ ನರೇಂದ್ರ ಮೋದಿ ಅವರ ಪ್ರಬಲ ಮತ್ತು ಖಚಿತ ನಾಯಕತ್ವ ಇದೆ. ಆದರೆ, ವಿರೋಧ ಪಕ್ಷಗಳಲ್ಲಿ ನಾಯಕತ್ವದ ಬಗ್ಗೆ ಗೊಂದಲ ಇದೆ ಎಂದು ಹೇಳುವ ಮೂಲಕ ಬಿಜೆಪಿಯ ಕಾರ್ಯತಂತ್ರಕ್ಕೆ ಜೇಟ್ಲಿ ಇನ್ನಷ್ಟು ಒತ್ತು ಕೊಟ್ಟಿದ್ದಾರೆ.

‘ಎರಡನೇ ಅವಧಿಗೆ ಮೋದಿ ಪ್ರಧಾನಿ ಎಂಬ ವಿಚಾರ ಮುನ್ನೆಲೆಗೆ ಬಂದರೆ ಅದರಿಂದ ಬಿಜೆಪಿಗೆ ಅನು
ಕೂಲ. ಚುನಾವಣೆಯು ಅಧ್ಯಕ್ಷೀಯ ಮಾದರಿಯಲ್ಲಿ ನಡೆಯುತ್ತದೆ. ಈಗಾಗಲೇ ಪ್ರಯೋಗ ಮಾಡಿ ವಿಫಲವಾದ ಯೋಚನೆಗಳು ಮತದಾರರಿಗೆ ಭೀತಿ ಹುಟ್ಟಿಸುತ್ತವೆ. ಅವು ಜನರನ್ನು ಆಕರ್ಷಿಸುವುದೇ ಇಲ್ಲ. ಜನರಿಗೆ ಐದು ವರ್ಷಗಳ ಸರ್ಕಾರ ಬೇಕೇ ಹೊರತು ಆರು ತಿಂಗಳದ್ದಲ್ಲ’ ಎಂದು ಜೇಟ್ಲಿ ಹೇಳಿದ್ದಾರೆ.

ಎನ್‌ಡಿಎಯ ಮೊದಲ ಪ್ರಧಾನಿ ವಾಜಪೇಯಿ ನೇತೃತ್ವದ ಮೈತ್ರಿಕೂಟ ರಾಜಕಾರಣದ ಯಶಸ್ಸನ್ನು ಬಿಜೆಪಿ ಇತ್ತೀಚೆಗೆ ಮತ್ತೆ ಮತ್ತೆ ಪ್ರಸ್ತಾಪಿಸುತ್ತಿದೆ. ಜೇಟ್ಲಿ ಅವರೂ ಅದನ್ನು ಮುಂದುವರಿಸಿದ್ದಾರೆ. ಕೋಲ್ಕತ್ತದ ಸಮಾವೇಶದಲ್ಲಿ ಭಾಗಿಯಾಗಿದ್ದ ಮೂರನೇ ಎರಡರಷ್ಟು ಪಕ್ಷಗಳು ಹಿಂದೆ ಬಿಜೆಪಿ ಜತೆಗೆ ಇದ್ದವು ಎಂದು ಅವರು ಹೇಳಿದ್ದಾರೆ. ಈ ಪಕ್ಷಗಳು ಮುಂದೆಯೂ ಬಿಜೆಪಿ ಜತೆಗೆ ಸೇರಿಕೊಳ್ಳಬಹುದು ಎಂದು ಪರೋಕ್ಷವಾಗಿ ಅವರು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT