ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಹಿಳಾ ಸುರಕ್ಷತೆಗೆ ಪ್ರತ್ಯೇಕ ಪೊಲೀಸ್ ಅಧಿಕಾರಿ

ಹೊಸ ಹುದ್ದೆ ಸೃಷ್ಟಿಸಲು ರಾಜಸ್ಥಾನ ಸರ್ಕಾರ ತೀರ್ಮಾನ
Last Updated 13 ಮೇ 2019, 18:40 IST
ಅಕ್ಷರ ಗಾತ್ರ

ಜೈಪುರ: ಮಹಿಳೆಯರ ಮೇಲಿನ ಹಲ್ಲೆ,ದೌರ್ಜನ್ಯ ತಡೆಯುವ ಉದ್ದೇಶದಿಂದ ಹಾಗೂ ಈಗಾಗಲೇ ದಾಖಲಾಗಿರುವ ಪ್ರಕರಣಗಳ ಮೇಲ್ವಿಚಾರಣೆ ನಡೆಸಲು ಪ್ರತಿ ಜಿಲ್ಲೆಯಲ್ಲೂ ಉಪ ಪೊಲೀಸ್ ವರಿಷ್ಠಾಧಿಕಾರಿ(ಮಹಿಳಾ ರಕ್ಷಣೆ)ಹುದ್ದೆ ಸೃಷ್ಟಿಸಲಾಗುವುದು ಎಂದು ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ತಿಳಿಸಿದ್ದಾರೆ.

ಪತಿಯ ಎದುರೇ ಪತ್ನಿಯನ್ನು ದುಷ್ಕರ್ಮಿಗಳು ಅತ್ಯಾಚಾರ ಎಸಗಿ ಪರಾರಿಯಾದ ಅಲ್ವಾರ್‌ ಗ್ಯಾಂಗ್‌ ರೇಪ್‌ ಪ್ರಕರಣದ ನಂತರ ಸರ್ಕಾರದ ವಿರುದ್ಧ ಟೀಕೆಗಳು ಬರುತ್ತಿರುವ ಹಿನ್ನೆಲೆಯಲ್ಲಿ ಪೊಲೀಸ್ ವ್ಯವಸ್ಥೆಯಲ್ಲಿ ಬದಲಾವಣೆ ತರಲು ಗೆಹ್ಲೋಟ್ ನಿರ್ಧರಿಸಿದ್ದಾರೆ.

ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಗೆಹ್ಲೋಟ್, ಪೊಲೀಸ್ ವ್ಯವಸ್ಥೆಯ ಕಾರ್ಯವೈಖರಿ ಹಾಗೂ ದಕ್ಷತೆ ಹೆಚ್ಚಿಸಲು ಸರ್ಕಾರ ಕ್ರಮ ಕೈಗೊಳ್ಳುತ್ತಿದೆ. ಮಹಿಳೆಯೊಬ್ಬಳು ತನ್ನ ಮೇಲಾದ ಹಲ್ಲೆ, ದೌರ್ಜನ್ಯದ ಕುರಿತು ದೂರು ನೀಡಲು ಬಂದ ಸಂದರ್ಭದಲ್ಲಿ ಆಕೆಯ ದೂರನ್ನುಸೂಕ್ತವಾಗಿ ಸ್ವೀಕರಿಸುವ ಮತ್ತು ಆಕೆಗೆ ರಕ್ಷಣೆ ನೀಡುವ ಅಗತ್ಯ ಇದೆ. ಪೊಲೀಸ್ ಠಾಣೆಯಲ್ಲಿ ಆಕೆಯ ದೂರು ಸ್ವೀಕರಿಸಿಲ್ಲ ಎಂದಾದರೆ ನೇರವಾಗಿ ಪೊಲೀಸ್ ವರಿಷ್ಠಾಧಿಕಾರಿಗೆ ದೂರು ಸಲ್ಲಿಸಬಹುದು ಎಂದರು. ಪೊಲೀಸ್ ವರಿಷ್ಠಾಧಿಕಾರಿಗಳು ಹಾಗೂ ಪೊಲೀಸ್ ಮಹಾನಿರ್ದೇಶಕರು ಇಲಾಖೆಯಲ್ಲಿನ ಅಧಿಕಾರಿಗಳ ಕಾರ್ಯವೈಖರಿ ಕುರಿತು ಗುಪ್ತ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಲಿದ್ದಾರೆ. ಜತೆಗೆ ಪ್ರತಿ ನಾಲ್ಕು ತಿಂಗಳಿಗೊಮ್ಮೆ ಖುದ್ಧಾಗಿ ಪ್ರಗತಿಪರಿಶೀಲನಾ ಸಭೆ ನಡೆಸಲಿದ್ದಾರೆ. ಪ್ರಕರಣವೊಂದನ್ನು ದಾಖಲಿಸಲು ಪೊಲೀಸರು ವಿಫಲರಾದಲ್ಲಿ ಸಂಬಂಧಿಸಿದಸ್ಟೇಷನ್ ಹೌಸ್ ಅಧಿಕಾರಿ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಗೆಹ್ಲೋಟ್‌ ಎಚ್ಚರಿಸಿದ್ದಾರೆ.

ಬಿಜೆಪಿ ವಿರುದ್ಧ ವಾಗ್ದಾಳಿ:ಕಡ್ಡಾಯವಾಗಿ ಎಲ್ಲ ಪ್ರಕರಣಗಳಲ್ಲಿ ಪ್ರಾಥಮಿಕ ಮಾಹಿತಿ ವರದಿ(ಎಫ್ಐಆರ್)ದಾಖಲಿಸ
ಲೇಬೇಕು ಎಂದು ಸೂಚಿಸಿರುವ ಹಿನ್ನೆಲೆಯಲ್ಲಿ ಪ್ರಕರಣಗಳ ಸಂಖ್ಯೆ ಏರಿಕೆಯಾಗಲಿದೆ. ಈ ವಿಷಯವಿಟ್ಟುಕೊಂಡೇಕಾಂಗ್ರೆಸ್ ಅವಧಿಯಲ್ಲಿ ಅಪರಾಧ ಸಂಖ್ಯೆ ಹೆಚ್ಚಾಗಿದೆ ಎಂದು ಬಿಜೆಪಿ ಆರೋಪಿಸಬಹುದು. ಬಿಜೆಪಿ ಆಡಳಿತಾವಧಿಯಲ್ಲೇ ರಾಜ್ಯದಲ್ಲಿ ಅತ್ಯಾಚಾರ ಪ್ರಕರಣ ಏರಿಕೆಯಾಗಿದ್ದು, ಅಪರಾಧ ಕೃತ್ಯಗಳಿಗೆ ಕಡಿವಾಣ ಹಾಕಲು ಅಂದಿನ ಸರ್ಕಾರ ಗಂಭೀರ ಕ್ರಮ ಕೈಗೊಂಡಿರಲಿಲ್ಲ ಎಂದು ಅಶೋಕ್ ಗೆಹ್ಲೋಟ್‌ ಟೀಕಿಸಿದರು.

ದಿನಕ್ಕೆ 12 ಅತ್ಯಾಚಾರ ಪ್ರಕರಣ

2017ರಲ್ಲಿ 3,305 ಹಾಗೂ 2018ರಲ್ಲಿ 4,335ಅತ್ಯಾಚಾರ ಪ್ರಕರಣಗಳು ದಾಖಲಾಗಿದ್ದವು. ಪ್ರತಿನಿತ್ಯ ದಾಖಲಾಗುವ ಅತ್ಯಾಚಾರ ಪ್ರಕರಣ ಸಂಖ್ಯೆ ಒಂಬತ್ತರಿಂದ 12ಕ್ಕೆ ಏರಿಕೆಯಾಗಿದೆ ಎಂದು ಅಶೋಕ್ ಗೆಹ್ಲೋಟ್ ತಿಳಿಸಿದರು. ಬಿಜೆಪಿ ಆಡಳಿತಾವಧಿಯಲ್ಲಿಚಿತ್ರಕೂಟ್ ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ಮಹಿಳೆಯೋರ್ವಳನ್ನು ಪತಿ ಹಾಗೂ ಮಾವನ ಮುಂದೆಯೇ ದುಷ್ಕರ್ಮಿಗಳು ಅತ್ಯಾಚಾರ ಮಾಡಿದ್ದರು. ಆದರೆ ಈ ಕುರಿತು ಅಂದಿನ ಸರ್ಕಾರ ಯಾವುದೇ ಕ್ರಮ ಕೈಗೊಂಡಿರಲಿಲ್ಲ. ಚುನಾವಣೆ ಸಂದರ್ಭದಲ್ಲಿ ಅತ್ಯಾಚಾರ ವಿಚಾರವನ್ನು ಬಿಜೆಪಿ ರಾಜಕೀಯಕ್ಕೆ ಬಳಸಿಕೊಳ್ಳುತ್ತಿದೆ ಎಂದು ಆರೋಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT