ಅಲ್ಜೈಮರ್‌ಗೆ ಕೇಸರಿಯಲ್ಲಿದೆ ಔಷಧಿ

7
ಮಿದುಳಿನ ನರಕೋಶಗಳ ಹಾನಿಯನ್ನು ತಡೆಗಟ್ಟುವ ಸಾಮರ್ಥ್ಯ

ಅಲ್ಜೈಮರ್‌ಗೆ ಕೇಸರಿಯಲ್ಲಿದೆ ಔಷಧಿ

Published:
Updated:
Deccan Herald

ನವದೆಹಲಿ: ನೆನಪಿನ ಶಕ್ತಿ ಮತ್ತು ಯೋಚನಾ ಸಾಮರ್ಥ್ಯ ಕುಂದಿಸುವ ‘ಅಲ್ಜೈಮರ್‌’ ಕಾಯಿಲೆಯನ್ನು ತಡೆಯುವ ಔಷಧಿಯ ಗುಣ  ‘ಕೇಸರಿ’ಯಲ್ಲಿ ಕಂಡು ಬಂದಿದೆ.

ಜಮ್ಮುವಿನ ಭಾರತೀಯ ಸಂಯೋಜಿತ ಔಷಧ ಸಂಸ್ಥೆಯ ವಿಜ್ಞಾನಿಗಳು ಸತತ ಐದು ವರ್ಷ ನಡೆಸಿದ ಸಂಶೋಧನೆಯ ಫಲವಾಗಿ ಕೇಸರಿ ಔಷಧಿಯ ಗುಣವನ್ನು ಕಂಡುಕೊಂಡಿದ್ದಾರೆ. ಕೇಸರಿಯಲ್ಲಿರುವ ಸಂಯುಕ್ತ ರಾಸಾಯನಿಕ ವಸ್ತು ಮಿದುಳಿನ ನರಕೋಶಗಳ ಹಾನಿಯನ್ನು ತಡೆಗಟ್ಟುವ ಸಾಮರ್ಥ್ಯ ಹೊಂದಿದೆ ಎಂದು ವಿಜ್ಞಾನಿಗಳು ಹೇಳಿದ್ದಾರೆ.

ವಯಸ್ಸಾದಂತೆ ಮನುಷ್ಯನನ್ನು ಆವರಿಸಿಕೊಳ್ಳುವ ನರರೋಗ ಸಂಬಂಧಿ ಕಾಯಿಲೆಗಳಾದ ಅಲ್ಜೈಮರ್‌, ಮರೆಗುಳಿ ಕಾಯಿಲೆಯ (ಡಿಮ್ನೇಶಿಯಾ) ಚಿಕಿತ್ಸೆಯು ವೈದ್ಯಕೀಯ ಮತ್ತು ವಿಜ್ಞಾನ ಲೋಕಕ್ಕೆ ಇನ್ನೂ ಸವಾಲಾಗಿಯೇ ಉಳಿದಿದೆ.

ಗುಜರಾತ್‌ನ ಫಾರ್ಮಾಂಜಾ ಹರ್ಬಲ್‌ ಖಾಸಗಿ ಕಂಪನಿಗೆ ಜುಲೈನಲ್ಲಿ ಕೇಸರಿಯಿಂದ ಔಷಧಿ ತಯಾರಿಸುವ ಪರವಾನಗಿ ನೀಡಲಾಗಿದೆ. ಈ ಕಂಪನಿಯು ಅಮೆರಿಕ ಮತ್ತು ಭಾರತದಲ್ಲಿ ಈ ಔಷಧವನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಲಿದೆ.

ಇದೇ ಅಕ್ಟೋಬರ್‌–ನವೆಂಬರ್‌ನಲ್ಲಿ ಕೇಸರಿಯನ್ನು ಮಾತ್ರೆಗಳ (ಕ್ಯಾಪ್ಸೂಲ್‌) ರೂಪದಲ್ಲಿ ಅಮೆರಿಕ ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡಲಾಗುವುದು. ಅದಾದ ಆರು ತಿಂಗಳ ನಂತರ ಈ ಮಾತ್ರೆಗಳು ಭಾರತದ ಮಾರುಕಟ್ಟೆ ಪ್ರವೇಶಿಸಲಿವೆ ಎಂದು ಭಾರತೀಯ ಸಂಯೋಜಿತ ಔಷಧ ಸಂಸ್ಥೆಯ ರಾಮ್‌ ವಿಶ್ವಕರ್ಮ ಅವರು ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.

40 ವರ್ಷ ದಾಟಿದ ವ್ಯಕ್ತಿಗಳು ದಿನಕ್ಕೆ ಎರಡು ಬಾರಿ ಕೇಸರಿ ಕ್ಯಾಪ್ಸೂಲ್‌ ಸೇವಿಸಿದರೆ ನರ ಸಂಬಂಧಿ ಕಾಯಿಲೆಗಳನ್ನು ತಡೆಯಬಹುದು.

ಹೂವಿನ ಕೇಸರ

ಆಹಾರಕ್ಕೆ ಬಣ್ಣ, ರುಚಿ ಮತ್ತು ಸುವಾಸನೆ ನೀಡುವ ಕೇಸರಿ ವಿಶ್ವದ ಅತ್ಯಂತ ದುಬಾರಿ ಮಸಾಲೆ ಪದಾರ್ಥವಾಗಿದೆ. ಗಾಢ ಬಂಗಾರ-ಹಳದಿ ಬಣ್ಣದ ಕೇಸರಿಯನ್ನು ಅಡುಗೆ ಮತ್ತು ಜವಳಿ ಉದ್ಯಮದಲ್ಲಿ ಬಳಸಲಾಗುತ್ತದೆ.

ಭಾರತದಲ್ಲಿ ಜಮ್ಮು ಮತ್ತು ಕಾಶ್ಮೀರದದಲ್ಲಿ ಹೆಚ್ಚಾಗಿ ಕಂಡುಬರುವ ಸ್ಯಾಫ್ರನ್ ಕ್ರೋಕಸ್ (ಕ್ರೋಕಸ್ ಸ್ಯಾಟಿವಸ್) ಎಂಬ ಸಸ್ಯದ ಹೂವಿನ ಶಲಾಕೆಯ ತುದಿಯಲ್ಲಿರುವ ಮೂರು ಕೇಸರಗಳನ್ನು ಒಣಗಿಸಿದಾಗ ‘ಕೇಸರಿ’ ಸಿದ್ಧವಾಗುತ್ತದೆ.

Tags: 

ಬರಹ ಇಷ್ಟವಾಯಿತೆ?

 • 13

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !