ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉಗ್ರ ಮಸೂದ್‌ನನ್ನು ನೀವೇ ಕರೆತರುತ್ತೀರೋ, ನಾವು ಕರೆತರಬೇಕೋ?: ಅಮರಿಂದರ್ ಸಿಂಗ್

Last Updated 19 ಫೆಬ್ರುವರಿ 2019, 17:55 IST
ಅಕ್ಷರ ಗಾತ್ರ

ಪಟಿಯಾಲ:‘ಪ್ರಿಯ ಇಮ್ರಾನ್ ಅವರೇ, ಜೈಷ್‌ ಮುಖ್ಯಸ್ಥ ಮಸೂದ್ ಅಜರ್ ಐಎಸ್‌ಐ ನೆರವಿನಿಂದ ಬಾಗವಲ್ಪುರದಲ್ಲಿ ಕುಳಿತು ಪುಲ್ವಾಮಾ ದಾಳಿ ನಿರ್ದೇಶಿಸಿದ್ದಾನೆ. ಅವನನ್ನು ಅಲ್ಲಿಂದ ನೀವೇ ಕರೆತರುತ್ತೀರೋ ಅಥವಾ ನಾವೇ ಆ ಕೆಲಸ ಮಾಡಬೇಕೋ?

ಸಾಕ್ಷ್ಯಾಧಾರ ಕೇಳಿರುವ ಇಮ್ರಾನ್ ಖಾನ್‌ಗೆ ಪಂಜಾಬ್ ಮುಖ್ಯಮಂತ್ರಿ ಕ್ಯಾ‌ಪ್ಟನ್ ಅಮರೀಂದರ್ ಸಿಂಗ್ತಿರುಗೇಟು ನೀಡಿರುವ ಪರಿ ಇದು.

ಜೆಇಎಂ ಮುಖ್ಯಸ್ಥ ಅಜರ್‌ ಮಸೂದ್ ಬಾಗವಲ್ಪುರದಲ್ಲಿ ಕುಳಿತುದಾಳಿಯ ಸಂಚು ನಡೆಸಿದ್ದಾನೆ. 26/11 ಮುಂಬೈ ದಾಳಿಯ ಸಾಕ್ಷ್ಯಗಳನ್ನು ಭಾರತ ಒದಗಿಸಿದ್ದರೂ ಪಾಕಿಸ್ತಾನ ಏನಾದರೂ ಕ್ರಮ ತೆಗೆದುಕೊಂಡಿದೆಯೇ ಎಂದು ಟ್ವಿಟರ್‌ನಲ್ಲಿ ಪ್ರಶ್ನಿಸಿದ್ದಾರೆ.

‘ದಾಳಿಯಲ್ಲಿ ಹುತಾತ್ಮರಾದ 40 ಸಿಆರ್‌ಪಿಎಫ್ ಯೋಧರ ಮೃತದೇಹಗಳನ್ನು ಪಾಕಿಸ್ತಾನಕ್ಕೆ ಸಾಕ್ಷ್ಯಗಳಾಗಿ ಕಳುಹಿಸಬೇಕು ಎಂದು ನೀವು ಬಯಸುತ್ತೀದ್ದೀರಾ’ ಎಂದೂ ಅಮರೀಂದರ್ ಸಿಂಗ್ ಖಾರವಾಗಿ ಪ್ರಶ್ನಿಸಿದ್ದಾರೆ.

ಇಸ್ಲಾಮಾಬಾದ್‌: ‘ಯುದ್ಧ ಆರಂಭಿಸುವುದು ನಮ್ಮ ಕೈಯಲ್ಲಿದೆ. ಅದು ಸುಲಭವೂ ಹೌದು. ಆದರೆ, ಮುಗಿಸುವುದು ಮಾತ್ರ ನಮ್ಮ ಕೈಯಲ್ಲಿಲ್ಲ. ಏನಾಗಬಹುದು ಎಂಬುದು ಯಾರಿಗೂ ಗೊತ್ತಿಲ್ಲ’ ಎಂದು ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್‌ ಹೇಳಿದ್ದಾರೆ.

‘ಪುಲ್ವಾಮಾ ದಾಳಿಗೆ ಪಾಕಿಸ್ತಾನದ ಮೇಲೆ ಪ್ರತೀಕಾರ ತೀರಿಸಿಕೊಳ್ಳಬೇಕು ಎಂದು ಭಾರತದ ರಾಜಕಾರಣಿಗಳು ಆಗ್ರಹಪಡಿಸುತ್ತಿರುವುದನ್ನು ಮಾಧ್ಯಮಗಳಲ್ಲಿ ನೋಡಿದ್ದೇನೆ. ಒಂದು ವೇಳೆ ಭಾರತ ಆಕ್ರಮಣಕ್ಕೆ ಮುಂದಾದರೆ, ನಾವು ಪ್ರತಿದಾಳಿ ಬಗ್ಗೆ ಯೋಚಿಸುವುದಷ್ಟೇ ಅಲ್ಲ, ಅದನ್ನು ಮಾಡಿ ತೋರಿಸುತ್ತೇವೆ’ ಎಂದು ಎಚ್ಚರಿಸಿದ್ದಾರೆ.

‘ಆಫ್ಗಾನಿಸ್ತಾನದಂತೆ ಕಾಶ್ಮೀರ ಸಮಸ್ಯೆಗೂ ಮಾತುಕತೆಯೊಂದೇ ಪರಿಹಾರ’ ಎಂದು ಇಮ್ರಾನ್‌ ಅಭಿಪ್ರಾಯಪಟ್ಟಿದ್ದಾರೆ.

ಮಿಲಿಟರಿ ಪ್ರಯೋಗವೊಂದೇ ಉತ್ತರವೇ?

‘ಕಾಶ್ಮೀರ ಸಮಸ್ಯೆಯನ್ನು ಸೇನಾಶಕ್ತಿ ಪ್ರಯೋಗಿಸಿ ಗೆಲ್ಲಲು ಭಾರತ ಯತ್ನಿಸಿದರೆ ಅದು ಎಂದಿಗೂ ಯಶಸ್ವಿಯಾಗುವುದಿಲ್ಲ’ ಎಂದು ಇಮ್ರಾನ್ ಖಾನ್ ಹೇಳಿದ್ದಾರೆ.

ಸೌದಿ ದೊರೆ ಮೊಹಮ್ಮದ್ ಬಿನ್ ಸಲ್ಮಾನ್ ಅವರು ಪಾಕಿಸ್ತಾನಕ್ಕೆ ಭೇಟಿ ನೀಡಿದ ಕಾರಣ ಭಾರತದ ಆರೋಪಗಳಿಗೆ ತಕ್ಷಣ ಪ್ರತಿಕ್ರಿಯಿಸಲು ಆಗಲಿಲ್ಲ ಎಂದು ಅವರು ಹೇಳಿದ್ದಾರೆ.

‘ಯಾವುದೇ ಸಾಕ್ಷ್ಯಾಧಾರಗಳು ಇಲ್ಲದೇ ಭಾರತ ಸುಮ್ಮನೆ ಆರೋಪಿಸುತ್ತಿದೆ. ಕಳೆದ 15 ವರ್ಷಗಳಿಂದ ಪಾಕಿಸ್ತಾನವು ಭಯೋತ್ಪಾದನೆ ವಿರುದ್ಧ ಹೋರಾಡುತ್ತಿದೆ. ಹೀಗಿರುವಾಗ ಪುಲ್ವಾಮಾದಂತಹ ದಾಳಿಯಿಂದ ನಮಗೆ ಹೇಗೆ ಲಾಭವಾಗುತ್ತದೆ’ ಎಂದು ಅವರು ಪ್ರಶ್ನಿಸಿದ್ದಾರೆ.

**

ಈಗ ಇರುವುದು ಹೊಸ ಮನಸ್ಥಿತಿಯ ನಯಾ ಪಾಕಿಸ್ತಾನ. ಮಾತುಕತೆಗೆ ನಾವು ಸಿದ್ಧರಿದ್ದೇವೆ.
-ಇಮ್ರಾನ್ ಖಾನ್, ಪಾಕಿಸ್ತಾನದ ಪ್ರಧಾನಿ

**

ನವಜೋತ್ ಸಿಂಗ್ ಸಿಧು ಅವರೇ, ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಲು ನಿಮ್ಮ ಸ್ನೇಹಿತ ಇಮ್ರಾನ್ ಖಾನ್ ಮನವೊಲಿಸಿ.
-ದಿಗ್ವಿಜಯ ಸಿಂಗ್, ಕಾಂಗ್ರೆಸ್ ಮುಖಂಡ

**

ಪುಲ್ವಾಮಾ ದಾಳಿಯಲ್ಲಿ ಪಾಕಿಸ್ತಾನದ ಕೈವಾಡವಿರುವ ಬಗ್ಗೆ ಭದ್ರತಾ ಪಡೆಗಳಲ್ಲಿ ಪ್ರಬಲ ಸಾಕ್ಷ್ಯಗಳಿವೆ.
-ರಾಜ್ಯವರ್ಧನ್ ಸಿಂಗ್ ರಾಥೋಡ್, ಕೇಂದ್ರ ಸಚಿವ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT