ಸೋಮವಾರ, ಜೂನ್ 21, 2021
27 °C
ಮೊದಲ ತಂಡಕ್ಕೆ ಹಸಿರು ನಿಶಾನೆ

ಅಮರನಾಥ ಯಾತ್ರೆ ಆರಂಭ: 1.5 ಲಕ್ಷ ಮಂದಿ ನೋಂದಣಿ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ಜಮ್ಮು: ‘ಬಂ, ಬಂ, ಭೋಲೆ’ ಘೋಷಣೆಗಳನ್ನು ಕೂಗುತ್ತಾ ಅಮರನಾಥ ಯಾತ್ರೆ ಕೈಗೊಳ್ಳಲು ಮೊದಲ ತಂಡ ಭಾನುವಾರ ಇಲ್ಲಿಂದ ತೆರಳಿತು.

17 ಮಕ್ಕಳು ಸೇರಿದಂತೆ 2,234 ಯಾತ್ರಾರ್ಥಿಗಳು ಮೊದಲ ತಂಡದಲ್ಲಿದ್ದಾರೆ. ದಕ್ಷಿಣ ಕಾಶ್ಮೀರದ ಹಿಮಾಲಯದಲ್ಲಿ 3,880 ಮೀಟರ್‌ ಎತ್ತರದಲ್ಲಿರುವ ನೈಸರ್ಗಿಕ ಮಂಜಿನ ಶಿವಲಿಂಗ ದರ್ಶನ ಪಡೆಯಲು ಭಕ್ತಾದಿಗಳು ಉತ್ಸಾಹದಿಂದ ತೆರಳಿದರು.

ದೇಶದ ವಿವಿಧೆಡೆಯ ಸುಮಾರು 1.5 ಲಕ್ಷ ಯಾತ್ರಾರ್ಥಿಗಳು 46 ದಿನಗಳ ಯಾತ್ರೆಗೆ ನೋಂದಣಿ ಮಾಡಿಸಿಕೊಂಡಿದ್ದಾರೆ.  ಯಾತ್ರೆಗೆ ಎರಡು ಮಾರ್ಗಗಳಿವೆ. ಅನಂತನಾಗ ಜಿಲ್ಲೆಯ ಪಹಲ್ಗಾಮ್‌ ಮಾರ್ಗದ ಮೂಲಕ 36 ಕಿಲೋ ಮೀಟರ್‌ ಮತ್ತು ಗಂದೇರ್ಬಾಲ್‌ ಜಿಲ್ಲೆಯ ಬಲ್ತಾಲ್‌ ಮಾರ್ಗದಲ್ಲಿ 14 ಕಿಲೋ ಮೀಟರ್‌ ಯಾತ್ರೆ ನಡೆಯಲಿದೆ. ಸೋಮವಾರದಿಂದ ಅಧಿಕೃತವಾಗಿ ಈ ಎರಡು ಮಾರ್ಗಗಳಲ್ಲಿ ಯಾತ್ರೆ ಆರಂಭವಾಗಲಿದೆ.

130 ಮಹಿಳೆಯರು, ಏಳು ಮಕ್ಕಳು ಮತ್ತು 45 ಸ್ವಾಮೀಜಿಗಳು ಸೇರಿದಂತೆ 1,228 ಯಾತ್ರಾರ್ಥಿಗಳು ಸಾಂಪ್ರದಾ ಯಿಕವಾದ ಪಹಲ್ಗಾಮ್‌ ಮಾರ್ಗವನ್ನು ಆಯ್ಕೆ ಮಾಡಿಕೊಂಡರು. ಉಳಿದಂತೆ 203 ಮಹಿಳೆಯರು ಮತ್ತು 10 ಮಕ್ಕಳು ಸೇರಿದಂತೆ 1006 ಭಕ್ತಾದಿಗಳು ಬಲ್ತಾಲ್‌ ಮಾರ್ಗದ ಮೂಲಕ ಯಾತ್ರೆಗೆ ತೆರಳಿದರು.

ಭಾನುವಾರ ಬೆಳಿಗ್ಗೆ ಭಗವತಿ ನಗರದಲ್ಲಿ ಸ್ಥಾಪಿಸಲಾಗಿರುವ ಶಿಬಿರದ ಪ್ರದೇಶದಲ್ಲಿ ಯಾತ್ರಾರ್ಥಿಗಳಿದ್ದ 93 ವಾಹನಗಳಿಗೆ ರಾಜ್ಯಪಾಲರ ಸಲಹೆಗಾರ ಕೆ.ಕೆ. ಶರ್ಮಾ ಹಸಿರು ನಿಶಾನೆ ತೋರಿದರು.

‘ಯಾತ್ರೆಯು ಸುಗಮವಾಗಿ ನಡೆಯಲು ಎಲ್ಲ ರೀತಿಯ ಸಿದ್ಧತೆಗಳನ್ನು ಕೈಗೊಳ್ಳಲಾಗಿದೆ. ಮಾರ್ಗ ಮಧ್ಯೆ ಭಕ್ತಾದಿಗಳಿಗೆ ಯಾವುದೇ ರೀತಿ ತೊಂದರೆಯಾಗದಂತೆ ಕ್ರಮಗಳನ್ನು ಕೈಗೊಳ್ಳಲಾಗಿದೆ’ ಎಂದು ಶರ್ಮಾ ತಿಳಿಸಿದರು.

‘ಯಾತ್ರಾರ್ಥಿಗಳಿಗೆ ಬಿಗಿ ಭದ್ರತೆ ಕಲ್ಪಿಸಲಾಗಿದೆ. ಸುರಕ್ಷತೆಗೆ ಮೊದಲ ಆದ್ಯತೆ ನೀಡಲಾಗಿದೆ’ ಎಂದು ಸಿಆರ್‌ಪಿಎಫ್‌ ಇನ್‌ಸ್ಪೆಕ್ಟರ್‌ ಜನರಲ್‌ ಎ.ವಿ. ಚೌಹಾಣ್‌ ತಿಳಿಸಿದರು.

ಯಾತ್ರಾರ್ಥಿಗಳು ಸಹ ಸರ್ಕಾರ ಕೈಗೊಂಡಿರುವ ವ್ಯವಸ್ಥೆಗಳ ಬಗ್ಗೆ ತೃಪ್ತಿ ವ್ಯಕ್ತಪಡಿಸಿದ್ದಾರೆ. ಆಗಸ್ಟ್‌ 15ರಂದು ಈ ಯಾತ್ರೆ ಅಂತ್ಯಗೊಳ್ಳಲಿದೆ.

*
ನಾನು 13ನೇ ಬಾರಿ ಯಾತ್ರೆ ಕೈಗೊಂಡಿದ್ದೇನೆ. ಯಾವುದೇ ಆತಂಕವಿಲ್ಲ. ನಾವು ಸುರಕ್ಷಿತವಾಗಿದ್ದೇವೆ. ಎಲ್ಲ ವ್ಯವಸ್ಥೆಗಳು ತೃಪ್ತಿದಾಯಕವಾಗಿವೆ.
-ಸೋನಿಕಾ, ಚಂಡೀಗಡ ನಿವಾಸಿ

*
ಮಹಾರಾಷ್ಟ್ರದಲ್ಲಿ ಬರಗಾಲವಿದೆ. ಉತ್ತಮ ಮಳೆಯಾಗುವಂತೆ ಮತ್ತು ದೇಶದಲ್ಲಿ ಶಾಂತಿ ನೆಲೆಸುವಂತೆ ಪ್ರಾರ್ಥಿಸಲು ಯಾತ್ರೆ ಕೈಗೊಂಡಿದ್ದೇನೆ.
-ನರಸಿಂಘ ಗಿರಿ, ಮಹಾರಾಷ್ಟ್ರ

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು