ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎನ್‌ಸಿಪಿ–ಕಾಂಗ್ರೆಸ್‌ಗೆ ತೊಡಕಾದ ವಿಬಿಎ

ಮಹಾರಾಷ್ಟ್ರ; ಪ್ರಕಾಶ್ ಅಂಬೇಡ್ಕರ್ ನೇತೃತ್ವದ ವಂಚಿತ ಬಹುಜನ ಆಘಾಡೀ
Last Updated 24 ಮೇ 2019, 19:57 IST
ಅಕ್ಷರ ಗಾತ್ರ

ಮುಂಬೈ:ಮಹಾರಾಷ್ಟ್ರದಲ್ಲಿ ಕಾಂಗ್ರೆಸ್‌ ಸಾಂಪ್ರದಾಯಿಕ ಮತಬ್ಯಾಂಕ್‌ ಆಗಿದ್ದ ದಲಿತರು ಮತ್ತು ಮುಸ್ಲಿಮರ ಮತಗಳಿಗೆ ಪ್ರಕಾಶ್ ಅಂಬೇಡ್ಕರ್ ಅವರ ವಂಚಿತ ಬಹುಜನ ಆಘಾಡೀ (ವಿಬಿಎ) ಪಕ್ಷವು ಲಗ್ಗೆ ಹಾಕಿದೆ.

2019ರ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ನ ಭದ್ರಕೋಟೆಗಳಾಗಿದ್ದ ಹಲವು ಕ್ಷೇತ್ರಗಳಲ್ಲಿ ಬಿಜೆಪಿ ಜಯಗಳಿಸಿದೆ. ಆದರೆ ಬಿಜೆಪಿ ಅಭ್ಯರ್ಥಿಯ ಗೆಲುವಿನ ಅಂತರಕ್ಕಿಂತ ಹೆಚ್ಚು ಮತಗಳನ್ನು ವಿಬಿಎ ಅಭ್ಯರ್ಥಿಗಳು ಪಡೆದಿದ್ದಾರೆ. ಈ ಕ್ಷೇತ್ರಗಳಲ್ಲಿ ಕಾಂಗ್ರೆಸ್‌ ಅಭ್ಯರ್ಥಿಗಳ ಸೋಲಿಗೆ ವಿಬಿಎ ಪಕ್ಷದ ಸ್ವತಂತ್ರ ಸ್ಪರ್ಧೆಯೇ ಕಾರಣ ಎಂದು ವಿಶ್ಲೇಷಿಸಲಾಗುತ್ತಿದೆ.

ಕಾಂಗ್ರೆಸ್‌ನ ಇಬ್ಬರು ಮಾಜಿ ಮುಖ್ಯಮಂತ್ರಿಗಳಾದ ಅಶೋಕ್‌ ಚವಾಣ್ ಮತ್ತು ಸುಶೀಲ್‌ಕುಮಾರ್ ಶಿಂಧೆ ಅವರು ವಿಬಿಎ ಸ್ಪರ್ಧೆಯ ಕಾರಣಕ್ಕೇ ಸೋತಿದ್ದಾರೆ ಎಂದು ಕಾಂಗ್ರೆಸ್‌ ನಾಯಕರು ಅಭಿಪ್ರಾಯಪಟ್ಟಿದ್ದಾರೆ.

‘ವಿಬಿಎ ಜತೆ ಮೈತ್ರಿ ಮಾಡಿಕೊಳ್ಳುವ ಮಾತುಕತೆ ನಡೆದಿತ್ತು. ಆದರೆಪ್ರಕಾಶ್ ಅಂಬೇಡ್ಕರ್‌ ಅವರ ಬೇಡಿಕೆಗೂ, ಅವರ ಸಾಮರ್ಥ್ಯಕ್ಕೂ ತಾಳೆಯಾಗುತ್ತಿರಲಿಲ್ಲ. ನಮಗೆ ಆರು ಕ್ಷೇತ್ರಗಳು ಬೇಕು ಎಂದು ಅವರು ಆರಂಭದಲ್ಲಿ ಕೇಳಿದ್ದರು. ಆಮೇಲೆ ಆ ಬೇಡಿಕೆಯನ್ನು 12ಕ್ಕೆ ಏರಿಸಿದರು. ಅಂತಿಮವಾಗಿ ಅವರು ಎಲ್ಲಾ ಕ್ಷೇತ್ರಗಳಲ್ಲಿ ತಮ್ಮ ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸಿದರು. ಅವರಿಗೆ ಮೈತ್ರಿಯಲ್ಲಿ ಆಸಕ್ತಿಯೇ ಇರಲಿಲ್ಲ’ ಎಂದು ಮಹಾರಾಷ್ಟ್ರ ಕಾಂಗ್ರೆಸ್‌ನ ಹಿರಿಯ ನಾಯಕರೊಬ್ಬರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

47 ಕ್ಷೇತ್ರಗಳಲ್ಲಿ ವಿಬಿಎ ತನ್ನ ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸಿತ್ತು. ಒಂದರಲ್ಲೂ ಗೆಲುವು ದಾಖಲಿಸಿಲ್ಲ. ಆದರೆ ಬಿಜೆಪಿ, ಶಿವಸೇನಾ ಮತ್ತು ಎನ್‌ಸಿಪಿ ಅಭ್ಯರ್ಥಿಗಳು ಗೆದ್ದಿರುವ ಹಲವು ಕ್ಷೇತ್ರಗಳಲ್ಲೂ ವಿಬಿಎ ಲಕ್ಷಕ್ಕೂ ಹೆಚ್ಚು ಮತ ಪಡೆದಿದೆ.

ಈ ವರ್ಷದಲ್ಲೇ ಮಹಾರಾಷ್ಟ್ರದಲ್ಲಿ ವಿಧಾನಸಭೆ ಚುನಾವಣೆ ನಡೆಯಲಿದೆ. ಆ ಚುನಾವಣೆಯಲ್ಲೂ ಕಾಂಗ್ರೆಸ್‌ಗೆ ವಿಬಿಎ ಪ್ರಬಲ ಸವಾಲು ಒಡ್ಡುವ ಸಾಧ್ಯತೆ ಇದೆ. ಬಿಜೆಪಿ, ಶಿವಸೇನಾ ಮತ್ತು ಎನ್‌ಸಿಪಿಗೂ ವಿಬಿಎ ಪೈಪೋಟಿ ಒಡ್ಡಲಿದೆ ಎಂದು ನಿರೀಕ್ಷಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT