ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಾಲಾಕೋಟ್ ವಾಯುದಾಳಿಯಲ್ಲಿ ಸತ್ತ ಉಗ್ರರ ಮೃತದೇಹ ತೋರಿಸಿ: ಯೋಧರ ಕುಟುಂಬ ಒತ್ತಾಯ

Last Updated 8 ಮಾರ್ಚ್ 2019, 4:01 IST
ಅಕ್ಷರ ಗಾತ್ರ

ಶಾಮ್ಲಿ/ ಮೈನ್‌ಪುರಿ(ಉತ್ತರ ಪ್ರದೇಶ): ಬಾಲಾಕೋಟ್‍ನಲ್ಲಿ ಭಾರತೀಯ ವಾಯುಪಡೆ ನಡೆಸಿದ ವಾಯುದಾಳಿಯಲ್ಲಿ ಎಷ್ಟು ಜನ ಸತ್ತಿದ್ದಾರೆ ಎಂಬುದರ ಬಗ್ಗೆ ಅಧಿಕೃತ ಮಾಹಿತಿ ಇನ್ನೂ ದೊರೆತಿಲ್ಲ. ವಾಯುದಾಳಿಯಲ್ಲಿ ಸತ್ತವರ ಸಂಖ್ಯೆ ಎಣಿಸುವುದು ನಮ್ಮ ಕೆಲಸವಲ್ಲ. ಅದು ಸರ್ಕಾರದ ಕೆಲಸ ಎಂದು ವಾಯುಪಡೆ ಹೇಳಿತ್ತು.

ಆದರೆ ಬಾಲಾಕೋಟ್ ವಾಯುದಾಳಿಯಲ್ಲಿ ಸತ್ತವರ ಮೃತದೇಹತೋರಿಸಿ ಎಂದು ಪುಲ್ವಾಮ ದಾಳಿಯಲ್ಲಿ ಮಡಿದಹುತಾತ್ಮ ಯೋಧರ ಕುಟುಂಬಒತ್ತಾಯಿಸಿದೆ.

ಪುಲ್ವಾಮ ದಾಳಿಯಲ್ಲಿ ಹುತಾತ್ಮರಾದ ಯೋಧರ ಕೈ ಕಾಲು, ದೇಹದ ಇತರಭಾಗಗಳು ಸಿಕ್ಕಿದ್ದವು. ಬಾಂಬ್ ದಾಳಿಯ ಹೊಣೆಯನ್ನೂ ಉಗ್ರ ಸಂಘಟನೆಯೊಂದು ಹೊತ್ತುಕೊಂಡಿತ್ತು. ವಾಯುದಾಳಿ ಆಗಿದೆ ಎಂಬುದು ನಿಜ ಆದರೆ ಎಲ್ಲಿ? ಹೇಗೆ ನಡೆಯಿತು? ಅದಕ್ಕೊಂದು ಪುರಾವೆ ಬೇಕಲ್ಲವೇ? ದಾಖಲೆ ಸಿಗದೆ ನಾವು ಅದನ್ನು ನಂಬುವುದಾದರೂ ಹೇಗೆ? ಅಲ್ಲಿ ಯಾವುದೇ ಹಾನಿ ಸಂಭವಿಸಿಲ್ಲ ಎಂದು ಪಾಕಿಸ್ತಾನ ಹೇಳುತ್ತಿದೆ ಹೀಗಿರುವಾಗ ಸಾಕ್ಷ್ಯ ಇಲ್ಲದೆ ಅದನ್ನು ನಂಬುವುದು ಹೇಗೆ? ಎಂದು ಪುಲ್ವಾಮ ಹುತಾತ್ಮ ಯೋಧ ರಾಮ್ ವಕೀಲ್ ಅವರ ಸಹೋದರಿ ರಾಮ್ ರಕ್ಷಾ ಪ್ರಶ್ನಿಸಿದ್ದಾರೆ. ಸಾಕ್ಷ್ಯ ತೋರಿಸಿ, ಹಾಗಾದರೆ ಮಾತ್ರ ನನ್ನ ಸಹೋದರನ ಸಾವಿಗೆ ಪ್ರತೀಕಾರವಾಗಿದೆ ಎಂಬ ನೆಮ್ಮದಿ ಸಿಗುತ್ತದೆ ಎಂದಿದ್ದಾರೆ ಈಕೆ.

ಪ್ರದೀಪ್ ಕುಮಾರ್ ಎಂಬ ಹುತಾತ್ಮ ಯೋಧನ ತಾಯಿ 80ರರ ಹರೆಯದ ಸುಲೇಲತಾ ಕೂಡಾ ಇದೇ ರೀತಿ ಸಾಕ್ಷ್ಯ ಕೇಳಿದ್ದಾರೆ. ನಾವು ತೃಪ್ತರಾಗಿಲ್ಲ.ನಮ್ಮ ಹಲವಾರು ಮಕ್ಕಳು ಸತ್ತಿದ್ದಾರೆ ಆದರೆ ಆ ಕಡೆಯಲ್ಲಿ ಸತ್ತವರ ಮೃತದೇಹ ನೋಡಿಲ್ಲ.ಅಲ್ಲಿಂದ ಅಧಿಕೃತ ಸುದ್ದಿಗಳೂ ಬಂದಿಲ್ಲ.ಅವರ ಮೃತದೇಹಗಳನ್ನು ನಾವು ಟಿವಿಯಲ್ಲಿ ನೋಡಬೇಕು. ಉಗ್ರರ ಮೃತದೇಹವನ್ನು ನಾವು ನೋಡಬೇಕು ಎಂದು ಹೇಳಿರುವುದಾಗಿ ಎನ್‍ಡಿಟಿವಿ ವರದಿ ಮಾಡಿದೆ.

ಶಾಮ್ಲಿ ಮೂಲದ ಪ್ರದೀಪ್ ಕುಮಾರ್ ಮತ್ತು ಮೈನ್‌ಪುರಿಯ ರಾಮ್ ವಕೀಲ್ ಫೆಬ್ರುವರಿ 14ರಂದು ಪುಲ್ವಾಮದಲ್ಲಿ ನಡೆದ ಆತ್ಮಾಹುತಿ ದಾಳಿಯಲ್ಲಿಹುತಾತ್ಮರಾಗಿದ್ದಾರೆ. ಪುಲ್ವಾಮ ದಾಳಿಯ ಪ್ರತೀಕಾರವಾಗಿ ಭಾರತ ಫೆ.26ರಂದು ಬಾಲಾಕೋಟ್‍ನಲ್ಲಿರುವ ಜೈಷ್-ಎ- ಮೊಹಮ್ಮದ್ ಉಗ್ರರ ಶಿಬಿರಗಳ ಮೇಲೆ ವಾಯುದಾಳಿ ನಡೆಸಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT