ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎನ್‌ಆರ್‌ಸಿ | ದೇಶದಾದ್ಯಂತ ವಿಸ್ತರಿಸುವ ಸುಳಿವು ಕೊಟ್ಟ ಅಮಿತ್‌ ಶಾ

ಪೌರತ್ವ ನೋಂದಣಿ ಪ್ರಕ್ರಿಯೆ
Last Updated 9 ಸೆಪ್ಟೆಂಬರ್ 2019, 20:15 IST
ಅಕ್ಷರ ಗಾತ್ರ

ಗುವಾಹಟಿ:ದೇಶದಾದ್ಯಂತ ರಾಷ್ಟ್ರೀಯ ಪೌರತ್ವ ನೋಂದಣಿ (ಎನ್‌ಆರ್‌ಸಿ) ಪ್ರಕ್ರಿಯೆ ಕೈಗೊಳ್ಳಲು ಸರ್ಕಾರ ಸಜ್ಜಾಗಿದೆ ಎಂಬ ಸುಳಿವನ್ನು ಕೇಂದ್ರ ಗೃಹ ಸಚಿವ ಅಮಿತ್‌ ಶಾ ನೀಡಿದ್ದಾರೆ.ಅಸ್ಸಾಂನಲ್ಲಿನ ಎನ್‌ಆರ್‌ಸಿ ಅಂತಿಮ ಪಟ್ಟಿ ಈಗಾಗಲೇ ಪ್ರಕಟವಾಗಿದೆ. ಅದರ ಬಗ್ಗೆ ಭಾರಿ ಅಸಮಾಧಾನವೂ ಉಂಟಾಗಿದೆ. ಅದರ ಬೆನ್ನಲ್ಲೇ ಶಾ ಅವರು ಈ ಸುಳಿವು ನೀಡಿದ್ದಾರೆ.

ದೇಶದಾದ್ಯಂತ ಇರುವ ಅಕ್ರಮ ವಲಸಿಗರನ್ನು ಗುರುತಿಸಿ ಅವರನ್ನು ಹೊರಗೆ ಅಟ್ಟಲಾಗುವುದು ಎಂದು ಅವರು ಹೇಳಿದ್ದಾರೆ. ಅಸ್ಸಾಂನ ಎನ್ಆರ್‌ಸಿ ಅಂತಿಮಪಟ್ಟಿ ಆ. 31ರಂದು ಪ್ರಕಟವಾಗಿದೆ. ಒಟ್ಟು 19 ಲಕ್ಷ ಮಂದಿಯನ್ನು ಪಟ್ಟಿಯಿಂದ ಹೊರಗೆ ಇರಿಸಲಾಗಿದೆ.

ಅಕ್ರಮ ವಲಸಿಗರು ದೇಶದ ಯಾವುದೇ ಮೂಲೆಯಲ್ಲಿದ್ದರೂ ಗುರುತಿಸಿ ಹೊರದಬ್ಬಲಾಗುವುದು ಎಂದುಈಶಾನ್ಯ ಮಂಡಳಿಯ ಸಭೆಯಲ್ಲಿ ಭಾಗವಹಿಸಿದ್ದ ಅವರು ಭಾನುವಾರ ಹೇಳಿದ್ದರು. ಬಿಜೆಪಿ ನೇತೃತ್ವದ ಈಶಾನ್ಯ ಪ್ರಜಾಸತ್ತಾತ್ಮಕ ಮೈತ್ರಿಕೂಟದ (ಎನ್‌ಇಡಿಎ) ಸಭೆಯಲ್ಲಿ ಸೋಮವಾರ ಮಾತನಾಡಿದ ಅವರು ಇದೇ ಮಾತನ್ನು ಪುನರುಚ್ಚರಿಸಿದ್ದಾರೆ.

ಅಸ್ಸಾಂನ ಎನ್‌ಆರ್‌ಸಿ ಬಗ್ಗೆ ಬಿಜೆಪಿಯ ಕೆಲ ಮುಖಂಡರೇ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಅಸ್ಸಾಂನ ಜನಸಂಖ್ಯೆಯಲ್ಲಿ ಶೇ 18ರಷ್ಟು ಮಂದಿ ಬಂಗಾಳಿ ಹಿಂದೂಗಳಿದ್ದಾರೆ. ಅವರಲ್ಲಿ ಒಂದು ದೊಡ್ಡ ವರ್ಗವನ್ನು ಎನ್‌ಆರ್‌ಸಿಯಿಂದ ಕೈಬಿಟ್ಟಿರುವುದು ಬಿಜೆಪಿ ಮುಖಂಡರ ಅತೃಪ್ತಿಗೆ ಕಾರಣವಾಗಿದೆ. ‘ಹಿಂದೂಗಳನ್ನು ಹೊರಗಿರಿಸಿ ಮುಸ್ಲಿಮರಿಗೆ ನೆರವಾಗುವುದೇ ಎನ್‌ಆರ್‌ಸಿಯ ಹಿಂದೆ ಇರುವ ಪಿತೂರಿ’ ಎಂದು ಬಿಜೆಪಿ ಶಾಸಕ ಸಿಲ್‌ದಿತ್ಯ ದೇವ್‌ ಇತ್ತೀಚೆಗೆ ಆರೋಪಿಸಿದ್ದರು.

‘ಬಹಳಷ್ಟು ಮಂದಿಯ ಹೆಸರು ಎನ್‌ಆರ್‌ಸಿಯಿಂದ ಬಿಟ್ಟುಹೋಗಿದೆ ಎಂಬ ಭಾವನೆ ಇದೆ. ಅಕ್ರಮ ವಲಸಿಗರು ಅಸ್ಸಾಂನಲ್ಲಿ ನೆಲೆಸಲು ಬಿಡುವುದಿಲ್ಲ, ಅವರು ಬೇರೆ ರಾಜ್ಯಕ್ಕೆ ನುಸುಳಲೂ ಅವಕಾಶ ಕೊಡುವುದಿಲ್ಲ. ದೇಶದಲ್ಲಿ ಅಕ್ರಮ ವಲಸಿಗರು ಇರಬಾರದು’ ಎಂದು ಶಾ ಹೇಳಿದ್ದಾರೆ. ಅಸ್ಸಾಂನಲ್ಲಿರುವ ಅಕ್ರಮ ವಲಸಿಗರು ಮೇಘಾಲಯಕ್ಕೆ ನುಸುಳಬಹುದು ಎಂದು ಅಲ್ಲಿನ ಮುಖ್ಯಮಂತ್ರಿ ವ್ಯಕ್ತಪಡಿಸಿದ ಆತಂಕಕ್ಕೆ ಶಾ ಹೀಗೆ ಹೇಳಿದ್ದಾರೆ.

‘ಪೌರತ್ವ ಮಸೂದೆ ಕೈಬಿಟ್ಟಿಲ್ಲ’

ಪೌರತ್ವ (ತಿದ್ದುಪಡಿ) ಮಸೂದೆಯನ್ನು ಕೈಬಿಡಲಾಗಿಲ್ಲ, ಅದನ್ನು ಮತ್ತೆ ಮಂಡಿಸಲಾಗುವುದು ಎಂದು ಶಾ ತಿಳಿಸಿದ್ದಾರೆ.

‘ಈ ಮಸೂದೆಯು ಅಂಗೀಕಾರವಾದ ಬಳಿಕವೂ ಈಶಾನ್ಯ ಪ್ರದೇಶದ ರಾಜ್ಯಗಳಲ್ಲಿ ಈಗ ಇರುವ ಯಾವುದೇ ಕಾನೂನು ರದ್ದು ಆಗದಂತೆ ನೋಡಿಕೊಳ್ಳುತ್ತೇವೆ. ಈ ಪ್ರದೇಶದ ವಿವಿಧ ರಾಜ್ಯಗಳ ಯಾವುದೇ ಕಾನೂನನ್ನು ಬದಲಾಯಿಸುವ ಇರಾದೆ ಕೇಂದ್ರಕ್ಕೆ ಇಲ್ಲ’ ಎಂದು ಅವರು ಹೇಳಿದರು.

ಪೌರತ್ವ (ತಿದ್ದುಪಡಿ) ಮಸೂದೆಯನ್ನು ಲೋಕಸಭೆಯು ಜನವರಿ 8ರಂದು ಅಂಗೀಕರಿಸಿತ್ತು. ಆದರೆ, ವಿವಿಧ ಪಕ್ಷಗಳು ಭಾರಿ ಆಕ್ರೋಶ ವ್ಯಕ್ತಪಡಿಸಿದ ಕಾರಣ ಅದನ್ನು ರಾಜ್ಯಸಭೆಯಲ್ಲಿ ಮಂಡಿಸಲು ಸಾಧ್ಯವಾಗಿರಲಿಲ್ಲ. ಬಿಜೆಪಿ ನೇತೃತ್ವದ ಎನ್‌ಡಿಎಯ ಮುಖಂಡರು ಕೂಡ ಮಸೂದೆಗೆ ವಿರೋಧ ವ್ಯಕ್ತಪಡಿಸಿದ್ದರು.

ಬಾಂಗ್ಲಾದೇಶ, ಪಾಕಿಸ್ತಾನ ಮತ್ತು ಅಪ್ಗಾನಿಸ್ತಾನ ಮೂಲದ ಹಿಂದೂ, ಜೈನ, ಕ್ರೈಸ್ತ, ಸಿಖ್‌, ಬೌದ್ಧ ಮತ್ತು ಪಾರ್ಸಿಗಳು ಏಳು ವರ್ಷಗಳಿಂದ ಭಾರತದಲ್ಲಿ ನೆಲೆಸಿದ್ದರೆ ಅವರಿಗೆ ಭಾರತದ ಪೌರತ್ವ ನೀಡುವುದು ಈ ಮಸೂದೆಯ ಉದ್ದೇಶ. ಈಗ, 12 ವರ್ಷ ನೆಲೆಸಿದ್ದವರಿಗೆ ಮಾತ್ರ ಪೌರತ್ವ ಪಡೆಯಲು ಅವಕಾಶ ಇದೆ.

ಮಸೂದೆಯನ್ನು ಮತ್ತೆ ಮಂಡಿಸಲು ಕಾಲಮಿತಿ ಹಾಕಿಕೊಂಡಿಲ್ಲ ಎಂದೂ ಅಮಿತ್‌ ಶಾ ಹೇಳಿದ್ದಾರೆ.

ಆರ್‌ಎಸ್‌ಎಸ್‌ ಮೀಸಲಾತಿ ಪರ

ನಮ್ಮ ಸಮಾಜದಲ್ಲಿ ಆರ್ಥಿಕ ಮತ್ತು ಸಾಮಾಜಿಕ ಅಸಮಾನತೆ ಇರುವುದರಿಂದ ಮೀಸಲಾತಿಯ ಅಗತ್ಯವಿದೆ. ಮೀಸಲಾತಿ ಎಲ್ಲಿಯವರೆಗೆ ಬೇಕು ಎಂದು ಫಲಾನುಭವಿಗಳು ಬಯಸುತ್ತಾರೆಯೋ, ಅಲ್ಲಿಯವರೆಗೆ ಅದು ಮುಂದುವರಿಯಬೇಕು ಎಂದು ಆರ್‌ಎಸ್‌ಎಸ್‌ ಹೇಳಿದೆ.

ಮೀಸಲಾತಿಯ ಪ್ರಯೋಜನ ಪಡೆದವರು ಮತ್ತು ಮೀಸಲಾತಿ ಸೌಲಭ್ಯ ಇಲ್ಲದವರ ನಡುವೆ ಸೌಹಾರ್ದ ವಾತಾವರಣದಲ್ಲಿ ಸಂವಾದ ನಡೆಯಬೇಕು ಎಂದು ಭಾಗವತ್‌ ಅವರು ಇತ್ತೀಚೆಗೆ ಹೇಳಿದ್ದರು.

ಇದಕ್ಕೆ ತೀವ್ರ ಟೀಕೆ ವ್ಯಕ್ತವಾಗಿತ್ತು. ಬಳಿಕ, ಮೀಸಲಾತಿ ನೀತಿಯಲ್ಲಿ ಯಾವುದೇ ಬದಲಾವಣೆ ತರುವ ಪ್ರಸ್ತಾವ ಇಲ್ಲ ಎಂದು ಕೇಂದ್ರ ಸರ್ಕಾರ ಸ್ಪಷ್ಟಪಡಿಸಿತ್ತು.

ಮಣಿಪುರದಲ್ಲಿ ಎನ್‌ಆರ್‌ಸಿ ಪರ ನಿರ್ಣಯ

‘ಮಣಿಪುರದಲ್ಲೂ ರಾಷ್ಟ್ರೀಯ ಪೌರತ್ವ ನೋಂದಣಿಯನ್ನು (ಎನ್‌ಆರ್‌ಸಿ) ಜಾರಿಗೆ ತರಬೇಕು ಎಂದು ಮಣಿಪುರ ಸರ್ಕಾರವು ನಿರ್ಣಯವನ್ನು ಅಂಗೀಕರಿಸಿದೆ’ ಎಂದು ಮುಖ್ಯಮಂತ್ರಿ ಎನ್‌. ಬೀರೇನ್‌ ಸಿಂಗ್‌ ತಿಳಿಸಿದರು.

ಈಶಾನ್ಯ ರಾಜ್ಯಗಳ ಮುಖ್ಯಮಂತ್ರಿಗಳ ಸಮ್ಮೇಳನದಲ್ಲಿ ಪಾಲ್ಗೊಳ್ಳಲು ಬಂದಿರುವ ಅವರು, ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡುತ್ತಾ ಈ ವಿಷಯ ತಿಳಿಸಿದರು.

‘ನಾವು ಎನ್‌ಆರ್‌ಸಿ ಪರ ಇದ್ದೇವೆ. ಮಣಿಪುರ ಮಾತ್ರವಲ್ಲ ಈಶಾನ್ಯದ ಇತರ ಕೆಲವು ರಾಜ್ಯಗಳಲ್ಲೂ ಎನ್‌ಆರ್‌ಸಿ ಜಾರಿ ಮಾಡಬೇಕಾದ ಅಗತ್ಯವಿದೆ. ಶೀಘ್ರದಲ್ಲೇ ಕೇಂದ್ರ ಸರ್ಕಾರಕ್ಕೆ ಆ ಕುರಿತು ಮನವಿ ಸಲ್ಲಿಸಲಾಗುವುದು’ ಎಂದರು.

‘ಈ ವಿಚಾರದಲ್ಲಿ ಕೇಂದ್ರದ ನಿಲುವು ಸ್ಪಷ್ಟವಾಗಿದೆ. ಅಕ್ರಮವಾಗಿ ವಲಸೆ ಬಂದಿರುವ ಯಾರೊಬ್ಬರೂ ದೇಶದೊಳಗೆ ಇರಬಾರದು ಎಂಬುದು ಸರ್ಕಾರದ ಸ್ಪಷ್ಟ ಸಂದೇಶವಾಗಿದೆ’ ಎಂದು ಬೀರೇನ್‌ ಹೇಳಿದರು.

* ಅಸ್ಸಾಂ ಮಾತ್ರವಲ್ಲ, ಇಡೀ ದೇಶವನ್ನು ಅಕ್ರಮ ವಲಸಿಗರಿಂದ ಮುಕ್ತಗೊಳಿಸುತ್ತೇವೆ. ಅದಕ್ಕಾಗಿ ಯೋಜನೆ ಸಿದ್ಧವಾಗಿದೆ. ಎಲ್ಲ ರಾಜ್ಯಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು ಇದನ್ನು ಜಾರಿಗೆ ತರತ್ತೇವೆ

–ಅಮಿತ್‌ ಶಾ, ಕೇಂದ್ರ ಗೃಹ ಸಚಿವ

* ಅಸ್ಸಾಂ ಮಾತ್ರವಲ್ಲ, ಇಡೀ ದೇಶವನ್ನು ಅಕ್ರಮ ವಲಸಿಗರಿಂದ ಮುಕ್ತಗೊಳಿಸುತ್ತೇವೆ. ಅದಕ್ಕಾಗಿ ಯೋಜನೆ ಸಿದ್ಧವಾಗಿದೆ

ಅಮಿತ್‌ ಶಾ,ಕೇಂದ್ರ ಗೃಹ ಸಚಿವ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT