ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಾರತದ ಬಹುಪಕ್ಷ ವ್ಯವಸ್ಥೆ ಪ್ರಶ್ನಿಸಿದ ಅಮಿತ್‌ ಶಾ

ಸಂಸದೀಯ ಪ್ರಜಾಪ್ರಭುತ್ವ: ಬದಲಾವಣೆ ಪ್ರಸ್ತಾವ ಮುಂದಿಟ್ಟ ಗೃಹ ಸಚಿವ
Last Updated 17 ಸೆಪ್ಟೆಂಬರ್ 2019, 20:17 IST
ಅಕ್ಷರ ಗಾತ್ರ

ನವದೆಹಲಿ: ದೇಶದಲ್ಲಿ ಈಗ ಇರುವ ಬಹುಪಕ್ಷೀಯ ಸಂಸದೀಯ ಪ್ರಜಾಪ್ರಭುತ್ವ ವ್ಯವಸ್ಥೆ ಬಗ್ಗೆ ಕೇಂದ್ರ ಗೃಹ ಸಚಿವ ಅಮಿತ್‌ ಶಾ ಪ್ರಶ್ನೆಗಳನ್ನು ಎತ್ತಿದ್ದಾರೆ. ಈ ವ್ಯವಸ್ಥೆಯು ಪರಿಣಾಮಕಾರಿಯೇ ಎಂಬುದರ ಬಗ್ಗೆ ದೇಶದ ಜನರಲ್ಲಿ ಅನುಮಾನ ಮೂಡಿದೆ ಎಂದು ಹೇಳಿದ್ದಾರೆ.

ಈಗಿನ ವ್ಯವಸ್ಥೆಯನ್ನು ಬದಲಾಯಿಸಲು ಬಿಜೆಪಿ ಯತ್ನಿಸುತ್ತಿದೆ. ಎರಡೇ ಪಕ್ಷಗಳ ವ್ಯವಸ್ಥೆ ಜಾರಿಗೆ ತರಲು ಬಯಸಿದೆ ಎಂದು ವಿರೋಧ‍ಪಕ್ಷಗಳು ಹಿಂದೆಯೇ ಆರೋಪಿಸಿದ್ದವು.

ಈ ದೇಶದ ಸ್ಥಾಪಕರು ಕನಸು ಕಂಡಿದ್ದ ರೀತಿಯ ದೇಶವನ್ನು ಕಟ್ಟುವಲ್ಲಿ ಬಹುಪಕ್ಷೀಯ ಸಂಸದೀಯ ಪ್ರಜಾಪ್ರಭುತ್ವ ವ್ಯವಸ್ಥೆ ಯಶಸ್ವಿಯಾಗಿದೆಯೇ, ಆಗ ಹಾಕಿಕೊಂಡಿದ್ದ ಎಲ್ಲರ ಅಭಿವೃದ್ಧಿಯ ಗುರಿ ಈಡೇರಿದೆಯೇ ಎಂಬ ಪ್ರಶ್ನೆಗಳುಸ್ವಾತಂತ್ರ್ಯ ಬಂದ 70 ವರ್ಷದ ಬಳಿಕ ಜನರ ಮನದಲ್ಲಿ ಮೂಡಿವೆ ಎಂದು ಶಾ ಹೇಳಿದ್ದಾರೆ.

ಸರ್ವರ ಅಭಿವೃದ್ಧಿಗಾಗಿ ಈ ವ್ಯವಸ್ಥೆಯನ್ನು ಜಾರಿಗೆ ತರಲಾಗಿತ್ತು. ಎಲ್ಲರೂ ಸಮಾನ ಮತ್ತು ಎಲ್ಲರಿಗೂ ಸಮಾನ ಅವಕಾಶಗಳು ದೊರೆಯಬೇಕು ಎಂಬುದು ಇದರ ದೃಷ್ಟಿಕೋನವಾಗಿತ್ತು. ಆದರೆ,ಈ ವಿಚಾರದಲ್ಲಿ ನಮ್ಮ ಮುಂದೆ ಇರುವುದು ದೊಡ್ಡ ನಿರಾಶೆ ಮಾತ್ರ ಎಂದುಅಭಿಪ್ರಾಯಪಟ್ಟಿದ್ದಾರೆ.

ಹಿಂದಿಯನ್ನು ರಾಷ್ಟ್ರಭಾಷೆಯಾಗಿಸಬೇಕು ಎಂಬ ಅರ್ಥದಹೇಳಿಕೆಯನ್ನು ಶಾ ಶನಿವಾರ ನೀಡಿದ್ದರು. ‘ಒಂದು ದೇಶ, ಒಂದು ಭಾಷೆ’ ಪ್ರಸ್ತಾವಕ್ಕೆ ದೇಶದ ದಕ್ಷಿಣ ಮತ್ತು ಈಶಾನ್ಯ ಭಾಗಗಳಿಂದ ಆಕ್ರೋಶ ವ್ಯಕ್ತವಾಗಿತ್ತು.

ಪ್ರಾದೇಶಿಕ ನಾಯಕತ್ವ ಕೊಲ್ಲುವ ಉದ್ದೇಶ

ಪ್ರಾದೇಶಿಕ ಪಕ್ಷ ಹಾಗೂ ನಾಯಕತ್ವ ಕೊಲ್ಲಲು ಈ ರೀತಿಯ ಚಿಂತನೆಗಳು ನಡೆದಿವೆ. ಇಂಥ ಘೋಷಣೆಗಳ ಮೂಲಕ ಮುಂದಿನ 25 ವರ್ಷ ಆಡಳಿತ ನಡೆಸುವ ಆಲೋಚನೆ ಇದ್ದಂತೆ ಕಾಣುತ್ತದೆ. ಇದು ಪ್ರಜಾಪ್ರಭುತ್ವಕ್ಕೆ ದೊಡ್ಡ ಧಕ್ಕೆ. ಇಷ್ಟು ದೊಡ್ಡ ದೇಶದಲ್ಲಿ ಏಕ ವ್ಯಕ್ತಿ ನಾಯಕತ್ವ ಅಪಾಯ ತಂದುಕೊಂಡಂತೆ.

ಎಚ್.ಡಿ.ದೇವೇಗೌಡ, ಜೆಡಿಎಸ್ ವರಿಷ್ಠ

**

ಹಿಂದುಳಿದವರಿಗೆ ಅಧಿಕಾರ ತಪ್ಪಿಸುವುದು

ಇದು ಆರ್‌ಎಸ್‌ಎಸ್ ಅಜೆಂಡಾ. ಹಿಂದುಳಿದ ವರ್ಗಗಳಿಗೆ ಅಧಿಕಾರ ಹೋಗದಂತೆ ತಡೆಯುವ ಉದ್ದೇಶ ಹೊಂದಿದೆ. ಹೆಚ್ಚಿನ ಸಂಖ್ಯೆಯ ಪಕ್ಷಗಳು ಇದ್ದರೆ ಶೂದ್ರ, ಹಿಂದುಳಿದ, ಅಲ್ಪಸಂಖ್ಯಾತರ ನಾಯಕತ್ವ ಬೆಳೆಯುತ್ತದೆ. ಸ್ಥಳೀಯ ನಾಯಕತ್ವ ಬಗ್ಗು ಬಡಿಯಲು ಬಿಜೆಪಿ ಇಂಥ ಹುನ್ನಾರ ನಡೆಸಿದೆ.

- ಎಂ.ಕೃಷ್ಣಮೂರ್ತಿ, ಬಿಎಸ್‌ಪಿ ರಾಜ್ಯ ಘಟಕದ ಅಧ್ಯಕ್ಷ

**

ಏಕತ್ವದ ವ್ಯಸನ

ಅಮಿತ್ ಶಾ ಏಕತ್ವದ ವ್ಯಸನಗ್ರಸ್ತರಾಗಿದ್ದು, ಇದು ಸರ್ವಾಧಿಕಾರದ ಸಂದೇಶ. ಬಹುಪಕ್ಷೀಯ ವ್ಯವಸ್ಥೆಯನ್ನು ಎಲ್ಲ ಅನಿಷ್ಟಗಳಿಗೆ ಹೊಣೆ ಮಾಡಿದ್ದಾರೆ. ಅವರಿಗೆ ರಾಜಕೀಯ, ಸಾಮಾಜಿಕ, ಸಾಂಸ್ಕೃತಿಕ ಇತಿಹಾಸದ ಪಾಠ ಮಾಡಬೇಕಿದೆ. ಬಹುಪಕ್ಷೀಯ ವ್ಯವಸ್ಥೆ ವಿರೋಧಿಸುವ ಮೂಲಕ ಬಿಹಾರ, ಗೋವಾ, ಮಹಾರಾಷ್ಟ್ರ, ಈಶಾನ್ಯ ರಾಜ್ಯಗಳ ಮಿತ್ರ ಪಕ್ಷಗಳಿಗೆ ವಿಚ್ಛೇದನದ ಸಂದೇಶ ಕಳುಹಿಸುತ್ತಿದ್ದಾರೆಯೆ?

ಭ್ರಷ್ಟಾಚಾರ, ಅಸುರಕ್ಷಿತ ಗಡಿ, ಮಹಿಳೆಯರ ಸುರಕ್ಷತೆ... ಎಲ್ಲದಕ್ಕೂ ಬಹುಪಕ್ಷೀಯ ವ್ಯವಸ್ಥೆ ಹೊಣೆ ಮಾಡುತ್ತಿದ್ದಾರೆ. 1998ರಿಂದ 2004ರ ವರೆಗೆ ಅಧಿಕಾರದಲ್ಲಿದ್ದ ವಾಜಪೇಯಿ ನೇತೃತ್ವದ ಎನ್‌ಡಿಎ ಆಡಳಿತ ದೂರಲು ಹೊರಟಿದ್ದಾರೆಯೆ?

- ಸಿದ್ದರಾಮಯ್ಯ, ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ

**

‘ಬಿಜೆಪಿ ಬಿಟ್ಟು ಬೇರೆ ಯಾರೂ ಇರಬಾರದು’

ಈಗ ದೇಶದಲ್ಲಿ ಎಷ್ಟು ಪಕ್ಷಗಳು ಇವೆ? ನನಗೆ ಕಾಣುತ್ತಿರುವುದು ಒಂದೇ ಪಕ್ಷ. ಬಿಜೆಪಿಯವರ ಉದ್ದೇಶವೂ ಒಂದು ರಾಷ್ಟ್ರ, ಒಂದು ಪಕ್ಷವೇ ಆಗಿದೆ. ಅವರನ್ನು ಬಿಟ್ಟು ಬೇರೆ ಯಾರೂ ಇರಬಾರದು. ಎಲ್ಲ ಕ್ಷೇತ್ರಗಳಲ್ಲೂ ‘ಒಂದೇ’ ಎಂಬ ನಿಲುವು ಕಾಣುತ್ತಿದೆ.

ಇದು ಸರ್ವಾಧಿಕಾರಿ ಧೋರಣೆ ತೋರಿಸುತ್ತದೆ. ಬಹು ಆಶೋತ್ತರಗಳನ್ನು ಹೊಂದಿರುವ ದೇಶದಲ್ಲಿ ಅಭಿಪ್ರಾಯ ವ್ಯಕ್ತಪಡಿಸಲು ಎಲ್ಲರಿಗೂ ಅವಕಾಶ ಇರಬೇಕು. ಆರ್ಥಿಕ ಪರಿಸ್ಥಿತಿ ಕುಸಿದಿದ್ದರೂ ಜನರು ಆ ವಿಚಾರ ಚರ್ಚಿಸದಂತೆ ಮಾಡಲು ಬೇರೆ ವಿಷಯ ಪ್ರಸ್ತಾಪಿಸುತ್ತಾರೆ. ನಿರುದ್ಯೋಗ ಸಮಸ್ಯೆ ಬಂದಾಗ ಭಾಷಾ ವಿವಾದ ಹುಟ್ಟು ಹಾಕುತ್ತಾರೆ, ಗುಂಪು ಹಲ್ಲೆ ನಡೆಸಿ ಜನರ ಮನಸ್ಸು ಬೇರೆಡೆಗೆ ಕೇಂದ್ರೀಕರಿಸುವಂತೆ ಮಾಡುತ್ತಾರೆ. ಬಿಜೆಪಿಯವರಿಗೆ ತಾಕತ್ತು, ಸಾಮರ್ಥ್ಯ ಇದ್ದರೆ ಮೊದಲು ಜನರ ಸಮಸ್ಯೆಗಳಿಗೆ ಮುಖಾಮುಖಿಯಾಗಲಿ.

- ದೇವನೂರ ಮಹಾದೇವ, ಸ್ವರಾಜ್ ಇಂಡಿಯಾ

**

ಇದು ಸರ್ವಾಧಿಕಾರಿ ಧೋರಣೆ. ಈಗ ಎರಡು ಪಕ್ಷ, ಇಬ್ಬರ ನಾಯಕತ್ವ ಬೇಕು ಎನ್ನುತ್ತಾರೆ. ಮುಂದೆ ಒಂದೇ ಪಕ್ಷ, ಒಬ್ಬನೇ ನಾಯಕ ಎಂಬ ನಿಲುವಿಗೆ ಬರುತ್ತಾರೆ. ಇಂತಹ ನಿಲುವನ್ನು ಖಂಡಿಸುತ್ತೇನೆ
- ಯು.ಬಸವರಾಜ್, ಸಿಪಿಎಂ, ರಾಜ್ಯ ಕಾರ್ಯದರ್ಶಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT