ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

370ನೇ ವಿಧಿ ರದ್ದು ಮಾಡಲು ಸಾಧ್ಯವಾಗಿದ್ದು 56 ಇಂಚು ಎದೆಯ ವ್ಯಕ್ತಿಗೆ ಮಾತ್ರ: ಶಾ

Last Updated 13 ಅಕ್ಟೋಬರ್ 2019, 16:02 IST
ಅಕ್ಷರ ಗಾತ್ರ

ಕೊಲ್ಹಾಪುರ್: ಹಲವಾರು ಸರ್ಕಾರಗಳು ಅಧಿಕಾರ ನಡೆಸಿ ಹೋದವು. ಹಲವಾರು ಪ್ರಧಾನಿಗಳು ಅಧಿಕಾರಕ್ಕೇರಿ ಹೋದರು. ಸಂವಿಧಾನದ 370ನೇ ವಿಧಿ ರದ್ದು ಮಾಡುವ ಧೈರ್ಯ ಯಾರಿಗೂ ಇರಲಿಲ್ಲ. ಆದರೆ 56 ಇಂಚು ಎದೆಯ ವ್ಯಕ್ತಿ ಅದನ್ನು ಮಾಡಿದರು ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿದ್ದಾರೆ.

ಮಹಾರಾಷ್ಟ್ರದ ಕೊಲ್ಹಾಪುರ ಜಿಲ್ಲೆಯಲ್ಲಿ ಭಾನುವಾರ ಚುನಾವಣಾ ಪ್ರಚಾರ ನಡೆಸಿದ ಅಮಿತ್ ಶಾ, ಜಮ್ಮು ಮತ್ತು ಕಾಶ್ಮೀರವನ್ನು ಮುಖ್ಯವಾಹಿನಿಗೆ ತಂದು ಏಕೀಕರಿಸುವ ಧೈರ್ಯ ಇದ್ದದ್ದು56 ಇಂಚಿನ ಎದೆಯ ವ್ಯಕ್ತಿಗೆ ಮಾತ್ರ. ಈ ಹಿಂದಿನ ಸರ್ಕಾರಗಳಿಗೆ ಆ ರೀತಿಯ ಧೈರ್ಯ ಇರಲಿಲ್ಲ ಎಂದಿದ್ದಾರೆ.

ಕಾಂಗ್ರೆಸ್ ಮತ್ತು ಎನ್‌ಸಿಪಿ ಪಕ್ಷ ಮತಯಾಚಿಸುವಾಗ ನೀವು ಮತದಾರರು, ಜಮ್ಮು ಮತ್ತು ಕಾಶ್ಮೀರದ ವಿಶೇಷಾಧಿಕಾರವನ್ನು ರದ್ದು ಮಾಡಿದ ಎನ್‌ಡಿಎ ಸರ್ಕಾರದ ನಿರ್ಧಾರವನ್ನು ನೀವು ಬೆಂಬಲಿಸುತ್ತಿದ್ದೀರಾ ಎಂದು ಅವರಲ್ಲಿ ಕೇಳಬೇಕು.

ದೇಶದ ಜನತೆ ಮತ್ತು ಮಹಾರಾಷ್ಟ್ರ ಮೋದಿಯವರಿಗೆ ಮತ ನೀಡಿ ಎರಡನೇ ಬಾರಿ ಅಧಿಕಾರಕ್ಕೇರಿಸಿದಾಗ, ಇಡೀ ದೇಶ 70 ವರ್ಷಗಳಿಂದ ಕಾಯುತ್ತಿದ್ದ ಕಾರ್ಯವೊಂದನ್ನು ಮೋದಿ ಜೀ ಮಾಡಿದರು. ಆಗಸ್ಟ್ 5ರಂದು ಅವರು ಸಂವಿಧಾನದ 370ನೇ ವಿಧಿ ರದ್ದು ಮಾಡುವ ಮೂಲಕ ಜಮ್ಮು ಮತ್ತು ಕಾಶ್ಮೀರವನ್ನು ಮುಖ್ಯವಾಹಿನಿಗೆ ತಂದರು. ಜಮ್ಮು ಮತ್ತು ಕಾಶ್ಮೀರವನ್ನು ಏಕೀಕರಿಸುವ ಪ್ರಕ್ರಿಯೆ ವಿಳಂಬ ಮಾಡಿದ್ದೇ ಕಾಂಗ್ರೆಸ್ ಎಂದು ಶಾ ದೂರಿದ್ದಾರೆ.

ಯುಪಿಎ ಅಧಿಕಾರದಲ್ಲಿದ್ದಾಗ ಪಾಕಿಸ್ತಾನದಿಂದ ಉಗ್ರರು ಭಾರತದ ಗಡಿಗೆ ನುಸುಳಿ ಭಾರತೀಯ ಯೋಧರನ್ನು ಹತ್ಯೆ ಮಾಡುತ್ತಿದ್ದರು.ಪಾಕ್ ಉಗ್ರರು ನಮ್ಮ ಯೋಧರನ್ನು ಹತ್ಯೆ ಮಾಡುತ್ತಿದ್ದರು. ಆಗ ನಮ್ಮ ಪ್ರಧಾನಿಯಾಗಿದ್ದ ಮೌನಿ ಬಾಬಾ ಮನಮೋಹನ್ ಸಿಂಗ್ ಒಂದು ಮಾತು ಕೂಡಾ ಆಡುತ್ತಿರಲಿಲ್ಲ. ಉರಿ ಮತ್ತು ಪುಲ್ವಾಮ ದಾಳಿ ನಂತರ ನಿರ್ದಿಷ್ಟದಾಳಿ ಮತ್ತು ವೈಮಾನಿಕ ದಾಳಿ ನಡೆಸುವ ಮೂಲಕ ಮೋದಿಯವರು ಉಗ್ರರ ಹತ್ಯೆ ನಡೆಸುವ ಧೈರ್ಯ ತೋರಿದರು.

ನಾವು ತ್ರಿವಳಿ ತಲಾಖ್ ನಿಷೇಧಿಸಿದಾಗಲೂ ವಿಪಕ್ಷ ಅದನ್ನು ವಿರೋಧಿಸಿತ್ತು.

ಕೊಲ್ಹಾಪರ್ ಮತ್ತು ಸಾಂಗ್ಲಿಯಲ್ಲಿ ಆಗಸ್ಟ್‌ ತಿಂಗಳಲ್ಲುಂಟಾದ ಪ್ರವಾಹದ ಬಗ್ಗೆ ಮಾತನಾಡಿದ ಶಾ ಕೇಂದ್ರ ಮತ್ತು ರಾಜ್ಯ ಸರ್ಕಾರ ಈ ಎರಡು ಜಿಲ್ಲೆಗಳ ಜನರ ಪರಿಸ್ಥಿತಿ ಸುಧಾರಿಸಿ, ಅವರ ಜೀವನವನ್ನು ಸುಂದರವಾಗಿಸುತ್ತದೆ ಎಂದಿದ್ದಾರೆ.

ಈ ಹಿಂದೆ ಅಧಿಕಾರದಲ್ಲಿದ್ದ ಕಾಂಗ್ರೆಸ್- ಎನ್‌ಸಿಪಿ ಸರ್ಕಾರ ನೀರಾವರಿಗಾಗಿ ₹70,000 ಕೋಟಿ ಖರ್ಚು ಮಾಡಿತ್ತು. ಆದರೆ ಯಾವುದೇ ಗ್ರಾಮಕ್ಕೆ ಒಂದುಹನಿ ನೀರು ಪೂರೈಕೆಯಾಗಿಲ್ಲ.

ದೇವೇಂದ್ರ ಫಡಣವೀಸ್ ನೇತೃತ್ವದ ಬಿಜೆಪಿ ಸರ್ಕಾರ ಅಧಿಕಾರಕ್ಕೇರಿದಾಗ ಜಲಯುಕ್ತ ಶಿವಾರ್ ಯೋಜನೆಯ ಸಹಾಯದಿಂದ ಬರೀ ₹9,000 ಕೋಟಿ ಖರ್ಚು ಮಾಡಿತ್ತು. 11,000 ಗ್ರಾಮಗಳಿಗೆ ಇದರಿಂದ ನೀರು ಪೂರೈಕೆಯಾಯಿತು ಎಂದು ಅಮಿತ್ ಶಾ ಹೇಳಿದ್ದಾರೆ.

ಕಾಂಗ್ರೆಸ್- ಎನ್‌ಸಿಪಿ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬರುವ ಮುನ್ನ ಕೃಷಿ, ಹಾಲು ಉತ್ಪಾದನೆ, ಕಾರ್ಖಾನೆ ಮತ್ತು ಶಿಕ್ಷಣಗಲ್ಲಿ ಮಹಾರಾಷ್ಟ್ರ ಅಗ್ರ ಸ್ಥಾನದಲ್ಲಿತ್ತು. 15 ವರ್ಷ ಕಾಂಗ್ರೆಸ್- ಎನ್‌ಸಿಪಿ ಸರ್ಕಾರದ ಅಧಿಕಾರವಧಿಯಲ್ಲಿ ರಾಜ್ಯದ ರ‍್ಯಾಂಕಿಂಗ್ 15 ಕ್ಕಿಂತ ಕೆಳಗಿಳಿಯಿತು. ಫಡಣವೀಸ್ ಸರ್ಕಾರ ಮತ್ತೆ ಈ ಎಲ್ಲ ಕ್ಷೇತ್ರಗಳಲ್ಲಿ ಸುಧಾರಿಸಿಕೊಂಡಿದ್ದು ಈಗ ರಾಜ್ಯ ಮೊದಲ ಐದು ಸ್ಥಾನದಲ್ಲಿದೆ. ಮತ್ತೊಮ್ಮೆ ಫಡಣವೀಸ್ ಸರ್ಕಾರವನ್ನು ಚುನಾಯಿಸುವ ಮೂಲಕ ರಾಜ್ಯ ಎಲ್ಲ ಕ್ಷೇತ್ರಗಳಲ್ಲಿಯೂ ಮೊದಲ ಸ್ಥಾನಕ್ಕೇರುವಂತೆ ಮಾಡಿ ಎಂದು ಅಮಿತ್ ಶಾಮತದಾರರಗೆ ಮನವಿ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT