ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೀನುಗಾರನ ಸಂಪತ್ತು

Last Updated 10 ಮಾರ್ಚ್ 2018, 19:30 IST
ಅಕ್ಷರ ಗಾತ್ರ

ಕಡಲ ತೀರದಲ್ಲಿ ಮೀನುಗಾರನೊಬ್ಬ ವಾಸವಾಗಿದ್ದ. ಅವನಿಗೆ ಮದುವೆಯಾಗಿ ಹೆಂಡತಿ ಗರ್ಭಿಣಿಯಾದಳು. ಆದರೆ ಅಪ್ಪಣ್ಣ ಎಂಬ ಮುದ್ದಾದ ಗಂಡು ಮಗುವಿಗೆ ಜನ್ಮ ನೀಡಿ ಅವಳು ತೀರಿಕೊಂಡಳು. ಮೀನುಗಾರನಿಗೆ ಹೆಂಡತಿಯ ಅಗಲಿಕೆಯಿಂದ ಸಹಿಸಲಾಗದಷ್ಟು ದುಃಖವಾಯಿತು. ಆಗ ಗೆಳೆಯರು, ‘ಹೀಗೆ ಅಳುತ್ತ ಕುಳಿತರೆ ಸತ್ತವರು ಮರಳಿ ಬರುವುದಿಲ್ಲ. ಒಳ್ಳೆಯ ಗುಣದ ಹುಡುಗಿಯನ್ನು ನೋಡಿ ಮತ್ತೊಂದು ಮದುವೆಯಾಗು. ಮಗುವನ್ನು ಪ್ರೀತಿಯಿಂದ ನೋಡಿಕೊಳ್ಳಲು ತಕ್ಕವಳನ್ನೇ ಹುಡುಕು’ ಎಂದು ಸಲಹೆ ನೀಡಿದರು.

ಮೀನುಗಾರ ಮೋಹಿನಿ ಎಂಬುವವಳನ್ನು ಮದುವೆಯಾದ. ಅವಳು ತಾಯಿಯಿಲ್ಲದ ತಬ್ಬಲಿ ಅಪ್ಪಣ್ಣನಿಗೆ ಒಳ್ಳೆಯ ತಾಯಿಯಾಗಿ ಪ್ರೀತಿಯಿಂದ ಸಲಹಿದಳು. ಅವಳಿಗೂ ಇಬ್ಬರು ಗಂಡು ಮಕ್ಕಳು ಜನಿಸಿ ದೊಡ್ಡವರಾದರು. ಒಂದು ದಿನ ಮೀನುಗಾರ ತೀರಿಕೊಂಡ. ಮೋಹಿನಿ ಹಿರಿಯ ಮಗ ಅಪ್ಪಣ್ಣನಿಗೆ ವಿದ್ಯೆ, ಬುದ್ಧಿ ಕಲಿಸಿ ಸಮರ್ಥನನ್ನಾಗಿ ಮಾಡಿದ್ದಳು. ತಂದೆಯ ಸಾವಿನ ಬಳಿಕ ಅವನೇ ಮನೆಯ ಜವಾಬ್ದಾರಿ ನೋಡಿಕೊಂಡ. ಹತ್ತಾರು ದೋಣಿಗಳನ್ನು ತಂದು ಮೀನುಗಾರಿಕೆ ವೃತ್ತಿಯನ್ನು ಬೆಳೆಸಿದ. ಕೈತುಂಬ ಹಣ ಸಂಪಾದಿಸಿದ. ಒಳ್ಳೆಯ ಮನೆ ಕಟ್ಟಿಸಿದ. ಸುಖ, ಸೌಕರ್ಯಗಳು ಮನೆಯಲ್ಲಿ ಇರುವಂತೆ ವ್ಯವಸ್ಥೆ ಮಾಡಿದ. ತಾಯಿಗೂ ಅವನಲ್ಲಿ ಪ್ರೀತಿ, ಅಭಿಮಾನಗಳು ಹೆಚ್ಚಿದವು.

ಆದರೆ ಮೋಹಿನಿಯ ಮಕ್ಕಳ ತಲೆಯನ್ನು ಕೆಲವು ಮಂದಿ ಗೆಳೆಯರು ಕೆಡಿಸಿದರು. ಮನದಲ್ಲಿ ಚಾಡಿ ಮಾತುಗಳನ್ನು ತುಂಬಿದರು. ‘ಈ ಸಂಪತ್ತೆಲ್ಲವೂ ನಿಮ್ಮ ತಂದೆ ಸಂಪಾದಿಸಿಟ್ಟದ್ದು. ಅಪ್ಪಣ್ಣ ನಿಮ್ಮ ತಾಯಿಯ ಮಗನಲ್ಲ. ಆದ್ದರಿಂದ ಎಲ್ಲ ಆಸ್ತಿಯನ್ನೂ ಅವನೇ ಕಬಳಿಸಿ ನಿಮಗೆ ಚಿಪ್ಪು ಕೊಟ್ಟು ಕಳುಹಿಸುತ್ತಾನೆ’ ಎಂದು ದ್ವೇಷದ ಬೀಜ ಬಿತ್ತಿದರು. ಸಹೋದರರು ಅವರ ಮಾತಿಗೆ ಮರುಳಾಗಿ, ‘ನಾವು ಏನು ಮಾಡಬೇಕೆನ್ನುತ್ತೀರಿ?’ ಎಂದು ಕೇಳಿದರು. ‘ಮಾಡುವುದೇನು, ಅವನನ್ನು ಬದುಕಲು ಬಿಟ್ಟರೆ ನಿಮ್ಮ ಸುಖದ ದಾರಿಗೆ ಮುಳ್ಳಾಗುತ್ತಾನೆ. ಅವನನ್ನು ಕೊಂದುಹಾಕಿ’ ಎಂದು ಗೆಳೆಯರು ಹುರಿದುಂಬಿಸಿದರು.

ಸಹೋದರರು ಮನೆಗೆ ಬಂದು ಕತ್ತಿ ಮಸೆಯಲು ಆರಂಭಿಸಿದರು. ಮೋಹಿನಿಗೆ ಅನುಮಾನ ಬಂತು. ‘ಯಾಕೆ ಕತ್ತಿ ಮಸೆಯುತ್ತಿದ್ದೀರಾ?’ ಎಂದು ಕೇಳಿದಳು. ಅವರು ರೋಷದಿಂದ, ‘ನಮ್ಮ ಪಾಲಿಗೆ ಬರಬೇಕಾದ ಆಸ್ತಿಯನ್ನು ಯಜಮಾನನಾಗಿ ಆಳುತ್ತಿರುವ ಮಲಅಣ್ಣನನ್ನು ಕೊಂದುಹಾಕುತ್ತೇವೆ’ ಎಂದರು. ಇವರಿಗೆ ಯಾರ ಪ್ರೇರಣೆಯಿಂದಲೋ ಬುದ್ಧಿ ಕೆಟ್ಟಿದೆ, ನೀತಿಯ ಮಾತು ಹೇಳಿದರೆ ಕೇಳುವವರಲ್ಲ. ನಿಧಾನವಾಗಿ ಅವರಾಗಿಯೇ ಬುದ್ಧಿ ಕಲಿಯುವ ಕಾಲ ಬರಬೇಕೆಂದುಕೊಂಡಳು ಅಮ್ಮ. ‘ಛೇ ಛೇ, ಆ ಪಾಪಿಯನ್ನು ಕೊಂದು ಕೈಗಳಿಗೆ ಯಾಕೆ ರಕ್ತ ಮೆತ್ತಿಕೊಳ್ಳುತ್ತೀರಿ? ಅವನು ನೋವು ಅನುಭವಿಸಿ ನಿಧಾನವಾಗಿ ಸಾಯಬೇಕು. ಹಾಗೆ ನಾನು ಮಾಡುತ್ತೇನೆ, ನೀವು ಸುಮ್ಮನಿರಿ’ ಎಂದು ಹೇಳಿ ತನಗೂ ಅವನಲ್ಲಿ ದ್ವೇಷವಿರುವಂತೆ ನಟಿಸಿದಳು.

ಅಂದು ರಾತ್ರಿ ಎಲ್ಲರೂ ಮಲಗಿ ನಿದ್ರಿಸುತ್ತಿರುವಾಗ ಮೋಹಿನಿ ಗಾಬರಿಯಾಗಿ, ‘ಹಾವು, ಹಾವು! ಎಲ್ಲರೂ ಎದ್ದೇಳಿ’ ಎಂದು ಕೂಗಿಕೊಂಡಳು. ಎಲ್ಲರೂ ಭಯಭೀತರಾಗಿ ಎದ್ದು ಕುಳಿತರು. ‘ಹಾವೇ? ಎಲ್ಲಿ ಹೋಯಿತು?’ ಎಂದು ಕೇಳಿದರು. ‘ಕೈಯಷ್ಟು ಉದ್ದವಿದ್ದ ಭಯಂಕರ ವಿಷದ ಹಾವು. ಗೊರಕೆ ಹೊಡೆಯುತ್ತ ಬಾಯ್ತೆರೆದು ಅಪ್ಪಣ್ಣ ಮಲಗಿದ್ದನಲ್ಲ, ಅವನ ಬಾಯಿಯೊಳಗೆ ನುಸುಳಿ ಹೊಟ್ಟೆಗೆ ಹೋಗುವುದನ್ನು ನೋಡಿದೆ. ಆ ಕರಿಯ ನಾಗ ಅವನ ಹೊಟ್ಟೆಯೊಳಗೆ ಬೆಚ್ಚಗೆ ಮಲಗಿದೆ. ಏನು ಮಾಡುವುದಪ್ಪಾ!’ ಎಂದು ದುಃಖದಿಂದ ಹೇಳಿದಳು ಮೋಹಿನಿ.

ಹಾವೊಂದು ತನ್ನ ಹೊಟ್ಟೆಯೊಳಗೆ ಸೇರಿಕೊಂಡಿದೆಯೆಂಬ ವ್ಯಥೆಯಿಂದ ಅಣ್ಣಪ್ಪನಿಗೆ ಅನ್ನಾಹಾರಗಳು ಸೇರದಾದವು. ರಾತ್ರಿ ನಿದ್ರೆ ಬರುತ್ತಿರಲಿಲ್ಲ. ಸೊರಗಿ ಕಡ್ಡಿಯಂತಾಗಿ ಹಾಸಿಗೆ ಹಿಡಿದ. ಈ ಸಂದರ್ಭ ನೋಡಿ ಮೋಹಿನಿಯ ಇಬ್ಬರೂ ಮಕ್ಕಳು ಆಸ್ತಿಯನ್ನು ಸಮಭಾಗ ಮಾಡಿಕೊಂಡರು. ಗೆಳೆಯರೆಲ್ಲ ಅವರ ಜೊತೆಗೂಡಿದರು. ಮೋಜಿನಿಂದ ತಿಂದು ಕುಡಿದು ಆಸ್ತಿಯನ್ನೆಲ್ಲ ಕರ್ಪೂರದಂತೆ ಕರಗಿಸಿದರು. ದುಡಿಯುವ ವಿಧಾನ ಅವರಿಗೆ ಗೊತ್ತಿರಲಿಲ್ಲ. ತಾಯಿಯ ಬಳಿಗೆ ಬಂದು, ‘ಅಮ್ಮ ಆಸ್ತಿಯೆಲ್ಲ ಮುಗಿಯಿತು. ಗೆಳೆಯರೆಲ್ಲ ನಮ್ಮನ್ನು ಬಿಟ್ಟುಹೋದರು. ಅಣ್ಣ ದಿನವೂ ಹತ್ತಾರು ದೋಣಿಗಳಲ್ಲಿ ಮೀನು ಹಿಡಿದು ತಂದು ಸಂಪತ್ತನ್ನು ರಾಶಿ ಹಾಕುತ್ತಿದ್ದ. ಆದರೆ ಅವನು ಹಾಸಿಗೆ ಹಿಡಿದ ಮೇಲೆ ಹಣ ಬರುವುದು ನಿಂತುಹೋಗಿದೆ. ಸಂಪಾದನೆಯ ಮಾರ್ಗ ನಮಗೆ ಗೊತ್ತಿಲ್ಲ. ಮುಂದಿನ ಜೀವನಕ್ಕೆ ಏನು ಮಾಡುವುದು?’ ಎಂದು ಪಶ್ಚಾತ್ತಾಪದಿಂದ ಕೇಳಿದರು.

ಮೋಹಿನಿಯು, ‘ಈಗ ನಿಮಗೆ ಬುದ್ಧಿ ಬಂತೇ? ಈ ಆಸ್ತಿ ನಿಮ್ಮ ತಂದೆಯ ಸಂಪಾದನೆಯಲ್ಲ, ಅಣ್ಣನ ಪರಿಶ್ರಮದಿಂದ ಆದುದೆಂದು ತಿಳಿಯಿತಲ್ಲವೇ? ಮುಂದೆ ಕೆಟ್ಟ ಗೆಳೆಯರ ಸಹವಾಸ ಮಾಡಿ ಅಣ್ಣನನ್ನು ದ್ವೇಷಿಸುವುದಿಲ್ಲ, ಅವನ ನೆರಳಿನಲ್ಲಿ ನಾವೂ ಅವನೊಂದಿಗೆ ದುಡಿಯುತ್ತೇವೆ, ಒಗ್ಗಟ್ಟಿನಿಂದ ಜೀವಿಸುತ್ತೇವೆ ಎಂದು ನನಗೆ ಮಾತು ಕೊಡುತ್ತೀರಾ? ಹಾಗಿದ್ದರೆ ಅವನನ್ನು ಮೊದಲಿನ ಹಾಗೆ ನಾನು ಮಾಡುತ್ತೇನೆ’ ಎಂದು ಹೇಳಿದಳು. ಸಹೋದರರು ಹಾಗೆಯೇ ಮಾಡುವುದಾಗಿ ಮಾತು ಕೊಟ್ಟರು.

ಅಂದು ರಾತ್ರಿ ಮನೆಯವರು ಮಲಗಿ ನಿದ್ರಿಸುತ್ತಿರುವಾಗ ಮೋಹಿನಿ, ‘ಹಾವು, ಹಾವು!’ ಎಂದು ಗಾಬರಿಯಿಂದ ಕೂಗಿಕೊಂಡಳು. ಎಲ್ಲರೂ ಎಚ್ಚರವಾಗಿ, ‘ಹಾವು ಎಲ್ಲಿದೆ?’ ಎಂದು ಕೇಳಿದರು. ‘ಅಣ್ಣಪ್ಪನ ತೆರೆದ ಬಾಯಿಯೊಳಗಿಂದ ಒಂದು ಕರಿಯ ನಾಗರ ಹಾವು ಹೊರಗೆ ಬಂದಿತು. ಅದನ್ನು ಹಿಡಿದು ಈ ಶೀಶೆಯೊಳಗೆ ಹಾಕಿದ್ದೇನೆ’ ಎಂದು ಅವಳು ಶೀಶೆಯೊಳಗೆ ಮೊದಲೇ ಹಾಕಿಟ್ಟ ಹಾವನ್ನು ತೋರಿಸಿದಳು. ಬಳಿಕ ಅದನ್ನು ಹೊರಗೆ ಬಿಟ್ಟುಬಂದಳು.

ತನ್ನ ಹೊಟ್ಟೆಯಲ್ಲಿದ್ದ ಹಾವು ಹೊರಟು ಹೋಯಿತೆಂದು ಅಣ್ಣಪ್ಪನಿಗೆ ಹರ್ಷವಾಯಿತು. ಮರುದಿನದಿಂದಲೇ ಹೊಟ್ಟೆ ತುಂಬ ಊಟ ಮಾಡಲಾರಂಭಿಸಿದ. ನಿದ್ರೆಯೂ ಬರತೊಡಗಿತು. ಮೊದಲಿನಂತೆ ಆರೋಗ್ಯಶಾಲಿಯಾಗಿ ಅವನು ದುಡಿಯಲು ಹೊರಟಾಗ ತಮ್ಮಂದಿರೂ ಅವನಿಗೆ ನೆರವಾಗಲು ಬಂದರು. ಮೂವರೂ ಒಗ್ಗಟ್ಟಿನಿಂದ ದುಡಿದು ಕಳೆದುಕೊಂಡ ಸಂಪತ್ತಿನ ದುಪ್ಪಟ್ಟನ್ನು ಗಳಿಸಿ ಸುಖವಾಗಿದ್ದರು. ಮತ್ತೆಂದೂ ಸಹೋದರರು ದುಷ್ಟ ಗೆಳೆಯರ ಸಂಗ ಮಾಡಲಿಲ್ಲ. ಅಣ್ಣನನ್ನು ಪ್ರೀತಿಸುತ್ತ, ಅವನೊಂದಿಗೆ ತಾವೂ ದುಡಿಯುತ್ತ ನೆಮ್ಮದಿಯಿಂದ ಜೀವಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT